ಕಥೆ

ಶಾರದ

ಭಾಗ-3

ಅನಸೂಯ ಎಂ.ಆರ್

Flower Woman Paintings - Buy Flower Woman Paintings Online – pisarto.com

ವಾಣಿ ಕೆಲಸಕ್ಕೆ ಸೇರಿ ವರ್ಷವಾದ ಮೇಲೆ ಶಾರದ ತಮ್ಮ
ಮಂಜುನಾಥನಿಗೆ ವಾಣಿಗೆ ಮದುವೆ ಮಾಡಲು ಗಂಡು
ಹುಡುಕುವಂತೆ ಹೇಳಿದ್ದನ್ನು ಕೇಳಿಸಿಕೊಂಡ ವಾಣಿ “ಅತ್ತೆ
ಒಂದೆರಡು ವರ್ಷ ನಾನು ಆರಾಮಾಗಿ ಕೆಲಸ ಮಾಡ್ಬೇಕು
ಅಂತ ಆಸೆ. ಆಮೇಲೆ ಮದ್ವೆ ಆಗೋದು ಇದ್ದೆ ಇದೆಯಲ್ಲ’
ಎಂದು ಎಲ್ಲರ ಬಾಯಿ ಮುಚ್ಚಿಸಿದಳು.” ಇವತ್ತು ನಾವು
ಶುರು ಮಾಡಿದ ತಕ್ಷಣ ಸಿಗಲ್ಲ. ಒಳ್ಳೆ ಹುಡುಗ ಸಿಗೋದು
ಅಷ್ಟು ಸುಲಭ ಅಲ್ಲ.ನಾವು ಹುಡುಕಿ ಮಾಡೊ ಹೊತ್ತಿಗೆ
ಒಂದು ವರ್ಷವಾದ್ರು ಆಗ್ಬಹುದು, ಎರಡು ವರ್ಷ ಆದ್ರು
ಆಗ್ಬಹುದು.ನಿಧಾನವಾಗಿ ಹುಡುಕುತ್ತಿರಬೇಕು” ಎಂದನು

ಮಂಗಳನ ತಾಯಿಯ ದೂರದ ಸಂಬಂಧಿಕರಿಂದ ಒಂದು
ಗಂಡಿನ ಪ್ರಸ್ತಾಪ ಬಂದಿತು.ಎಲ್ಲವು ಅನುಕೂಲವಾಗಿಯೆ
ಕಂಡು ಬಂದಿದ್ದರಿಂದ ಗಂಡಿನವರು ಹೆಣ್ಣನ್ನು ನೋಡಲು
ಬಂದರು. ಗಂಡಿನ ದೊಡ್ಡಪ್ಪ ದೊಡ್ಡಮ್ಮ, ಅವರ ಮಗಳು
ಮತ್ತು ಗಂಡು ಬಂದರು. ವಾಣಿಯನ್ನು ನೋಡಿ ಒಪ್ಪಿದ ಗಂಡಿನ ಕಡೆಯವರು ತಮ್ಮ ಒಪ್ಪಿಗೆಯನ್ನು ತಿಳಿಸಿದರು “ನಮ್ಮ ಮೋಹನ 8 ನೇ ತರಗತಿ ಓದುವಾಗ ಅವನಪ್ಪ
ಅಮ್ಮಇಬ್ಬರೂ ಬಸ್ ಅಪಘಾತದಲ್ಲಿ ತೀರಿಕೊಂಡರು. ನಂತರ ನಮ್ಮಆಶ್ರಯದಲ್ಲೇ ಬೆಳೆದು ವಿದ್ಯಾವಂತನಾಗಿ ಉಪನ್ಯಾಸಕನಾಗಿರುವುದು ನಮಗೆಲ್ಲ ನೆಮ್ಮದಿಯನ್ನು ತಂದಿದೆ. ಅವರಪ್ಪನ ಆಸ್ತಿಯಿಂದ ಬಂದ ಹಣದಿಂದಲೇ
ಅವನ ವಿದ್ಯಾಭ್ಯಾಸವೂ ಮುಗಿಯಿತು. ನಾವೂ ಅವನ ಕಡೆಯಿಂದ ಏನನ್ನು ನಿರೀಕ್ಷಣೆ ಮಾಡಲ್ಲ. ಅವನ ಸುಖ ಮತ್ತು ನೆಮ್ಮದಿಯಷ್ಟೆ ನಮಗೆ ಮುಖ್ಯ. ನಮ್ಮಿಂದ್ಯಾವುದೆ ಬೇಡಿಕೆಗಳಿಲ್ಲ. ಅವರಮ್ಮನ ಒಡವೆಗಳನ್ನೇ ಹುಡುಗಿಗೆ ಕೊಡುತ್ತೇವೆ.ನಿಮ್ಮಅನುಕೂಲವಿದ್ದಂತೆ ಮದುವೆ ಮಾಡಿ ಕೊಡಿರಿ” ಎಂದು ನೇರವಾಗಿಯೆ ಹೇಳಿದರು.ಅವರ ನೇರ ಮಾತುಗಳು ಎಲ್ಲರಿಗೂ ಇಷ್ಟವಾಯ್ತು. ಎರಡು ಕಡೆಯ ಹಿರಿಯರಿಗೂ ಒಪ್ಪಿಗೆಯಾದ್ದರಿಂದ ವಿವಾಹದ ಮಾತು ಕತೆಗಳು ಹೂವೆತ್ತಿದಷ್ಟು ಸಲೀಸಾಗಿ ಯಶಸ್ವಿಯಾಯಿತು ವಾಣಿಯೊಡನೆ ಮಾತಾಡಬೇಕೆಂದು ಮೋಹನ ತನ್ನಕ್ಕನ ಮೂಲಕ ಹೇಳಿಸಿದಾಗ ಎಲ್ಲರೂ ಒಪ್ಪಿದರು. ಮನೆಯ ಮುಂದಿನ ಕೈ ತೋಟಕ್ಕೆ ಬಂದಾಗ ಮೋಹನ್ “ನಿಮ್ಮ ಸರಳತೆ ನನಗೆ ಇಷ್ಟವಾಯ್ತು. ಮದ್ವೆ ಆದ ಮೇಲೆ ನಾನು ದಾವಣಗೆರೆಯಲ್ಲಿ ಮನೆ ಮಾಡುವೆ. ನಮ್ಮಮ್ಮನ ಒಡವೆ ಹಳೆಕಾಲದ್ದೆಂದು ಕರಗಿಸಿ ಹೊಸ ರೀತಿ ಮಾಡಿಸುವುದು ನನಗಿಷ್ಟವಿಲ್ಲ. ನಮ್ಮಮ್ಮನ ನೆನಪಾಗಿ ಹಾಗೇ ಇರಲೆಂದು ನನ್ನಾಸೆ.ಇದಕ್ಕೆನಿನ್ನ ಒಪ್ಪಿಗೆ ಇದೆಯೇ”ಎಂದಾಗ ವಾಣಿ “ಹಳೆ ವಿನ್ಯಾಸದ ಒಡವೆಗಳು ನನಗೂ ಇಷ್ಟ’ ಎಂದಳು “ನೀವೇನಾದರು ಕೇಳುವುದಿದ್ದರೆ ಕೇಳಿರಿ” ಮೋಹನ್ ಕೇಳಿದಾಗ ‘ನಮ್ಮಿಬ್ಬರ ವೃತ್ತಿ ಒಂದೇ ಆಗಿರುವುದರಿಂದ ಸಮಾನ ಮನಸ್ಕರಾಗಿ ನಮ್ಮ ಜೀವನ ನೆಮ್ಮದಿಯಿಂದ ಕೂಡಿರುತ್ತದೆಂದು ತಿಳಿದಿದ್ದೇನೆ”ಎಂದು ಹೇಳಿದಾಗ “ನನ್ನ
ಆಸೆಯೂ ಅದೇ” ಎಂದು “ಬನ್ನಿ ಒಳಗೆ ಹೋಗೋಣ” ಎನ್ನುತ್ತ ಒಳನಡೆದ ಅವನನ್ನು ವಾಣಿ ಅನುಸರಿಸಿದಳು.
ಮದುವೆ ದಿನಾಂಕ ಹಾಗೂ ಛತ್ರದ ಹೊಂದಾಣಿಕೆಯನ್ನು
ನೋಡಿಕೊಂಡು ಮದುವೆ ದಿನಾಂಕ ನಿರ್ಧಾರ ಮಾಡಲು
ಮಂಜುನಾಥನಿಗೆ ಹೇಳಿ ಹೊರಟರು. ವರುಣ್ ಮೂಲಕ
ಮೋಹನ್ ವಾಣಿಯ ಮೊ. ನಂ.ಅನ್ನು ಪಡೆದನು.ಎಲ್ಲಾ
ಹೊಂದಾಣಿಕೆಯಾಗುವ ದಿನ ಎರಡು ತಿಂಗಳಾದ ಮೇಲೆ
ಇದ್ದಿದ್ದರಿಂದ ಮದುವೆ ಸಿದ್ಧತೆಗಳು ಚುರುಕಾಗಿ ನಡೆಯ
ತೊಡಗಿದವು. ವಾಣಿ ಮತ್ತು ಮೋಹನ್ ಮೊಬೈಲ್ ನಲ್ಲಿ
ಮಾತಾಡಿಕೊಂಡು ಭವಿಷ್ಯದ ಹೊಂಗನಸು ಕಾಣುತ್ತಲೇ
ಹೊಸ ಸಂಸಾರಕ್ಕೆ ಅಚ್ಚುಕಟ್ಟಾದ ಬಾಡಿಗೆ ಮನೆಯನ್ನು
ವ್ಯವಸ್ಥೆ ಮಾಡಿದರು. ವಾಣಿ ಕೆಲಸ ಮಾಡುತ್ತಿದ್ದ ಜಿಲ್ಲಾ
ಕೇಂದ್ರಕ್ಕೆ ದಾವಣಗೆರೆ ಹತ್ತಿರವಿರುವುದರಿಂದ ಮೋಹನ್
ದಾವಣಗೆರೆಗೆ ಹೋಗಿ ಬರಬಹುದೆಂದು ತೀರ್ಮಾನಿಸಿ
ವಾಣಿ ಕೆಲಸ ಮಾಡುತ್ತಿದ್ದ ಊರಿನಲ್ಲೆ ಮನೆ ಮಾಡಿದರು.
ಮುಂದೆ ಮೋಹನ್ ವಾಣಿ ಕೆಲಸ ಮಾಡುತ್ತಿರುವ ಸ್ಥಳಕ್ಕೆ
ವರ್ಗಾವಣೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಮೋಹನನ ಇಷ್ಟದಂತೆ ಮದುವೆಯು ಸರಳವಾಗಿ ಮತ್ತು
ಸಾಂಗವಾಗಿ ನೆರವೇರಿತು.

ಗಂಡನ ಮನೆಗೆ ಹೋಗುವ ಹಿಂದಿನ ದಿನ “ಅತ್ತೆ. ನೀನು
ಯಾಕೆ ನಮ್ಮ ಮನೆಗೆ ಬರಬಾರದು. ನಿನ್ನ ಸರ್ವಿಸ್ ಎಲ್ಲ
ಇದೇ ಊರಲ್ಲಿ ಕಳೆದಿದೀಯಾ. ನಾವಿರೋ ಜಾಗದಲ್ಲೇ
ವರ್ಗಾವಣೆ ಮಾಡಿಸಿದರಾಯ್ತು”ಎಂದಳು. “ಏ ಹುಡುಗಿ ಸುಮ್ಮನಿರೆ. ಗಂಡನ ಜೊತೆ ಆರಾಮಾಗಿರು. ಎಲ್ಲದಕ್ಕು
ತಲೆ ಕೆಡಿಸಿಕೊಳ್ಳ ಬೇಡ” ” ಹೋಗತ್ತೆ ನೀನು ಯಾವಾಗ್ಲು ಹಿಂಗೆ ” ಅಲ್ಲಿಗೆ ಬಂದ ಮಂಗಳ ” ಅತ್ತೆ ಎಲ್ಲೂ ಹೋಗಲ್ಲ ಹೋಗ್ತಿರೋಳು ನೀನು ಗಂಡನ ಮನೆಗೆ “ಆಗ ಮೂವರು ನಕ್ಕರು.

ವಾಣಿ ಗಂಡನ ಮನೆಗೆ ಹೋದ ಮೇಲೆ ಇಡೀ ಮನೆಯೇ ಬಿಕೋ ಅನ್ನಿಸತೊಡಗಿತು.ಚುರುಕು ಮಾತುಗಳನ್ನಾಡುತ್ತ
ಪ್ರಶ್ನಿಸುತ್ತ ಸದಾ ಚಟುವಟಿಕೆಯಿಂದಿರುತ್ತಿದ್ದ ವಾಣಿಯು ಮನೆಯ ಕೇಂದ್ರ ಬಿಂದುವಾಗಿದ್ದಳು.ಮಲಗುವಾಗ ನಿದ್ದೆ
ಬರುವ ತನಕ ತನ್ನ ಗೆಳತಿಯರ, ವಿದ್ಯಾರ್ಥಿಗಳ ಹಾಗೂ
ಸಹೋದ್ಯೋಗಿಗಳ ಕುರಿತು ಮಾತನಾಡುತ್ತಿದ್ದ ವಾಣಿಯ ಒಡನಾಟವಿಲ್ಲದೆ ಶಾರದಳಿಗೆ ಬೇಸರವಾಗುತ್ತಿತ್ತು. ಈಗ ಶಾರದ ಹತ್ತನೆ ತರಗತಿಯಲ್ಲಿ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಶಾಲೆ ಮುಗಿದ ಮೇಲೆ ಒಂದು ಗಂಟೆ ಪಾಠ
ಮಾಡಿ ಮನೆಗೆ ಬರುತ್ತಿದ್ದಳು.ಮೊದಲಿಗಿಂತ ಹೆಚ್ಚಾಗಿಯೆ ಅವಳನ್ನು ಒಂಟಿತನ ಕಾಡತೊಡಗಿತ್ತು.ಅವಳು ನಿವೃತ್ತಿ
ಹೊಂದಲು ಇನ್ನು ಒಂದು ವರ್ಷವಷ್ಟೆ ಬಾಕಿ. ಈ ನಡುವೆ ವಾಣಿ ತಾನು ತಾಯಿಯಾಗಲಿರುವ ಶುಭ ಸಮಾಚಾರ
ತಿಳಿಸಿದಳು. ಒಂದು ವಾರ ರಜೆ ಹಾಕಿ ತವರಿಗೆ ಬಂದಳು.
ಬಂದ ದಿನವೆ ರಾತ್ರಿ ಮಲಗುವಾಗ “ಅತ್ತೆ, ನೀನು ರಿಟೈರ್
ಆದ ಮೇಲೆ ನಮ್ಮ ಮನೆಗೆ ಬಂದು ಬಿಡು. ನಮ್ಮ ಮನೆಗೆ
ಹಿರಿಯಳಾಗಿ ನೀನಿರುವುದು ನಮ್ಮಿಬ್ರುಗೂ’ಇಷ್ಟ’ ಎಂದು
ಹೇಳಿದಾಗ ಆ ಪ್ರಸ್ತಾಪ ಶಾರದಳಿಗೆ ಇಷ್ಟವಾದರೂ ಸಹ
ಅದನ್ನು ತೋರಗೊಡದೆ ನೋಡೋಣ”ಎಂದಳು.ವಾರದ
ನಂತರ ವಾಣಿ ಊರಿಗೆ ಹೊರಟಳು.
ಅಂದು ಶಾರದಾಳಿಗೆ ತುಂಬ ತಲೆನೋವಿದ್ದುದರ ಕಾರಣ
ಮಧ್ಯಾಹ್ನ ಶಾಲೆಗೆ ರಜೆ ಹಾಕಿ ಮನೆಗೆ ಬಂದವಳೇ ಕಾಫಿ
ಕುಡಿದು ಮಲಗಿದಳು. ವರುಣ್ ಅಂಗಡಿ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ.ಸಂಜೆಯ ವೇಳೆಗೆ ಜ್ವರ ಸಹಾ ಬಂದಿತು.ಮಂಜುನಾಥನಿಗೆ ಫೋನ್ ಮಾಡಿ ಬೇಕಾಗಿದ್ದ ಮಾತ್ರೆಗಳನ್ನು ತರಿಸಿಕೊಂಡಳು. ರಾತ್ರಿ ಹಾಲು ಕುಡಿದು
ಮಾತ್ರೆ ನುಂಗಿದ್ದಷ್ಟೆ ಗೊತ್ತು.ಚೆನ್ನಾಗಿ ಬೆವರು ಬಂದು ಜ್ವರ
ಬಿಟ್ಟಿತ್ತು. ಒಂದು ಹೊತ್ತಿನಲ್ಲಿ ಎಚ್ಚರವಾಗಿ ಟಾಯ್ಲೆಟ್ ಗೆ
ಹೋಗಲು ಎದ್ದು ನಿಂತಾಗ ರೂಮಿನಿಂದ ಮಂಜುನಾಥ
ಮಂಗಳ ಮಾತನಾಡುವ ಧ್ವನಿ ಕೇಳಿಸಿತು.
‘ಶಾರದಕ್ಕನ್ನ ವಾಣಿ ಕರ್ಕೊಂಡು ಹೋಗ್ತಾಳಂತೆ. ನೀನೂ
ಅತ್ತೆಯನ್ನು ಒಪ್ಪಿಸಮ್ಮ ಅಂತ ನನಗು ಹೇಳಿ ಹೋದಳು” ಎಂದಳು. ಆಗ ಮಂಜು ‘ ಅಕ್ಕ ಎಲ್ಲೂ ಹೋಗೋದಿಲ್ಲ ನಮ್ಮನೆಯಲ್ಲೆ ಇರಬೇಕು’
‘ನಮ್ಮ ವಾಣಿ ಮನೆ ಏನು ಬೇರೆಯವರ ಮನೆ ಅಲ್ಲವಲ್ಲ ಅದ್ಯಾಕೆ ಹಿಂಗೆ ಮಾತಾಡ್ತೀರಾ.ಅಕ್ಕನಿಗೆ ವಾಣಿ ಮಗಳಿದ್ದ
ಹಾಗೆ. ಅವಳನ್ನು ಕಂಡ್ರೆ ಜೀವಬಿಡ್ತಾರೆ’
“ಇಷ್ಟ ಇರೋದಕ್ಕೆ ಹೇಳ್ತೀರೋದು. ಅಕ್ಕ ಅವ್ರು ಮನೇಲಿ
ಇದ್ಕಂಡು ಈ ಮನೆ ಎಲ್ಲ ಅವಳ ಹೆಸರಿಗೆ ಬರೆದು ಬಿಟ್ರೆ
ಆಮೇಲೆ ಏನ್ಮಾಡ್ತೀಯ. ಅಕ್ಕ ನಮ್ಮ ಮನೆ ಬಿಟ್ಟು ಬೇರೆ
ಕಡೆ ಎಲ್ಲೂ ಹೋಗ್ಬಾರದು’
‘ನಂ ಶಾರದಕ್ಕ ಯಾವತ್ತೂ ಹಂಗ್ಮಾಡಕ್ಕೆ ಸಾಧ್ಯನೇ ಇಲ್ಲ ಅಕ್ಕನ ಬುದ್ಧಿ ನನಗೆ ಚೆನ್ನಾಗಿ ಗೊತ್ತು.ಸುಮ್ಮನೆ ಇಲ್ಲದ್ದೆಲ್ಲ ಹೇಳಬೇಡ್ರಿ.’
‘ನಮ್ಮಕ್ಕ ನಮ್ಮನೆಗಿರ್ತಾಳೆ ಅಷ್ಟೆ. ಮುಂದಕ್ಕೆ ಮಾತ್ಬೇಡ’
ಒಂದು ನಿಮಿಷ ನಿಂತ ನೆಲವೇ ಕುಸಿದ ಅನುಭವ.ಹಾಗೇ
ಕತ್ತಲಲ್ಲೇ ಹಾಸಿಗೆ ಮೇಲೆ ಕೂತಳು. ಸಾವರಿಸಿಕೊಳ್ಳುತ್ತಲೆ
ಎದ್ದು ಲೈಟ್ ಹಾಕಿದಳು. ಎದ್ದು ಬಂದ ಮಂಗಳ ” ಜ್ವರ
ಕಡಿಮೆಯಾಯ್ತೇನಕ್ಕ’
‘ಹೂಂ ಕಣೆ ಮಾತ್ರೆ ನುಂಗಿದ ಮಲಗಿದ್ದಷ್ಟೇಗೊತ್ತು. ಈಗ
ಎಚ್ಚರ ಆಯ್ತು. ನೀನ್ಯಾಕೆ ಎದ್ದು ಬಂದೆ.ಹೋಗಿ ಮಲಗು’
ಲೈಟ್ ಆಫ್ ಮಾಡಿ ಮಲಗಲು ಎಂದೂ ಇಲ್ಲದ ಅನಾಥ
ಭಾವ ಆವರಿಸಿ ವರ್ತುಲದಲ್ಲಿ ಒಂಟಿಯಾಗಿ ಸಿಲುಕಿದಂತೆ
ಹೊರಬರಲಾಗದ ಅನುಭವ. ಮಂಜುನಾಥನಿಗ್ಯಾಕೆ ಈ ಅನುಮಾನ ಬಂತು. ವಾಣಿ ಮೇಲೆ ನನಗೆ ಪ್ರೀತಿಯಿದ್ದರು
ಸಹ ಮಂಜುವನ್ನು ಬಿಟ್ಟು ಬಿಡುತ್ತೀನಾ? ಮಂಗಳನಿಗೇ
ಅರ್ಥವಾಗಿದ್ದು ತನ್ನ ತಮ್ಮನಿಗೇಕೆ ಅರ್ಥವಾಗಲಿಲ್ಲ.ಎಲ್ಲ
ಸಂಬಂಧಗಳು ಹಣ,ಆಸ್ತಿಯ ಮೇಲೆ ನಿಂತಿದ್ಯಾ? ನನಗೆ
ತಮ್ಮನನ್ನು ಬಿಟ್ಟರೆ ಇನ್ಯಾರಿದ್ದಾರೆ? ತನಗರಿವಿಲ್ಲದೆಯೇ
ಒಂದು ರೀತಿ ಬಿಡಿಸಿಕೊಳ್ಳಲಾರದ ವ್ಯೂಹದಲ್ಲಿ ಸಿಲುಕಿ
ಬಿಟ್ಟೆನಾ? ಇದನ್ನು ಬಿಟ್ಟರೆ ಗತ್ಯಂತರವಿಲ್ಲದಾಗಿದೆ.ತಾನು ಮಂಜುನಾಥನ ಜಾಗದಲ್ಲಿ ನಿಂತು ನೋಡಿದರೂ ಅವನ
ಮಾತುಗಳಿಗೆ ಸಮರ್ಥನೆ ದೊರಕುತ್ತಿಲ್ಲ.ಅವನಿಗಿರುವ ಕಡಿಮೆ ಆದಾಯ ಹೀಗೆ ಮಾತನಾಡಿಸಿತ? ಜೀವನವೆಲ್ಲಾ
ಒಡಹುಟ್ಟಿದ ತಮ್ಮನೊಂದಿಗೆ ಬದುಕಿ ಅವನನ್ನು ಬಿಟ್ಟು ಬೇರೆಯವರಿಗೇ ಮನೆಯನ್ನು ಕೊಡಲು ಹೇಗೆ ಸಾಧ್ಯ.
ವಾಣಿಯ ಮೇಲೆ ನನಗೆ ಹೆಚ್ಚು ಪ್ರೀತಿಯಿರುವುದರಿಂದ ಅವಳಿಗೂ ಸಹಾ ನನ್ನ ದುಡಿಮೆಯ ಪಾಲಲ್ಲಿ ಒಂದಿಷ್ಟು ಕೊಟ್ಟರೆ ಏನು ತಪ್ಪು? ಅವಳೂ ಅವನ ಮಗಳಲ್ಲವೇ ?
ಅಕ್ಕನದೆಲ್ಲಾ ತನ್ನ ಮಗನಿಗೆ ಮಾತ್ರ ಸೇರಬೇಕೆಂಬ ಆಸೆ
ಇರಬಹುದೇ? ಅವನ ಜಾಗದಲ್ಲಿ ನಿಂತು ನೋಡಿದಾಗ
ಅದು ಸರಿಯಿರಬಹುದು. ಒಂದು ದಿನವಾದರೂ ನನಗೆ
ಅಗೌರವ ತೋರದೆ ಮನೆಯ ಹಿರಿಯಳೆಂಬ ಸ್ಥಾನವನ್ನು
ಕೊಟ್ಟಿಲ್ಲವೇ ? ನನಗಾದರೂ ತಮ್ಮನ ಕುಟುಂಬ ಬಿಟ್ಟರೆ ಇನ್ಯಾರಿದ್ದಾರೆ ? ಈ ಸಮಸ್ಯೆಗೆ ಪರಿಹಾರವೇನು ಎಂದು
ಚಿಂತಿಸುತ್ತಲೇ ಶಾರದಳಿಗೆ ಯಾವ ಮಾಯದಲ್ಲಿ ನಿದ್ದೆ ಆವರಿಸಿತೆಂಬುದೆ ಅರಿವಾಗಿಲ್ಲ.
‘ಅಕ್ಕ,ಅಕ್ಕ”ಎನ್ನುತ್ತ ಮಂಗಳ ಮುಟ್ಟಿದಾಗಲೇ ಎಚ್ಚರ
‘ಯಾಕಕ್ಕ,ರಾತ್ರಿ ನಿದ್ದೆ ಬರಲಿಲ್ವೆ’
‘ಚೆನ್ನಾಗೇ ನಿದ್ದೆ ಬಂತು” ಎಂದು ಸುಳ್ಳು ಹೇಳಿದಳು.
‘ಶಾರದಕ್ಕ ಇವತ್ತು ರಜಾ ಹಾಕಿ ರೆಸ್ಟ್ ತಗೊಳ್ರಿ’
‘ರಜಾ ಹಾಕುವಂತದ್ದೇನೂ ಆಗಿಲ್ಲ. ಹೋಗಿ ಬರ್ತೀನಿ’. ಕಾಫಿ ಕುಡಿದು ಸ್ನಾನಕ್ಕೆ ಹೋದಳು. ತನಗೆ ಗಂಡ ಹೆಂಡತಿ
ಮಾತಾಡಿದ ಮಾತುಗಳು ಕೇಳಿಸಿವೆಯೆಂಬುದು ಅವರಿಗೆ
ಗೊತ್ತಾಗದಂತೆ ಎಚ್ಚರ ವಹಿಸಬೇಕೆಂದು ಕೊಂಡಳು.

ಎಂದಿನಂತೆ ಮಾಮೂಲಿಯಾಗಿದ್ದು ಶಾಲೆಗೆ ಹೊರಟಳು.
ಸ್ಟಾಫ್ ರೂಂಗೆ ಬಂದು ತನ್ನ ಜಾಗದಲ್ಲಿ ಕೂತಾಗ ಪಕ್ಕದ ಚೇರ್ ನಲ್ಲಿದ್ದ ಗೀತಾ ಮೇಡಂ ‘ ಶಾರದ, ಮಲ್ಲಪ್ಪ ಸರ್ ಗೆ
ಹಾರ್ಟ್ ಅಟ್ಯಾಕ್ ಆಗಿ ದಾವಣಗೆರೆಯ ಹಾಸ್ಪಿಟಲ್ ಗೆ
ಸೇರಿಸಿದ್ದಾರೆ. ಐಸಿಯು ನಲ್ಲಿದಾರಂತೆ ‘
” ಹೌದಾ,ಎಂಥಾ ಕೆಲ್ಸ ಆಯ್ತು.ಮಗಳಿಗೆ ಮದುವೆ ಮಾಡ
ಬೇಕೆಂದು ಗಂಡು ನೋಡುತ್ತಿದ್ದರು ಅಲ್ವಾ”.
ಎಲ್ಲರಲ್ಲೂ ಅದೇ ಮಾತು. ಸೆಕೆಂಡ್ ಪಿರಿಯಡ್ ಮುಗಿಸಿ
ಬಂದಾಗ ಸಾವಿನ ಸುದ್ದಿ ಕೇಳಿ ಬಂತು. ಶಾಲಾ ಮಕ್ಕಳನ್ನು ಸೇರಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ
ಶಾಲೆಗೆ ರಜೆ ಘೋಷಿಸಲಾಯಿತು. ಮನೆಗೆ ಬಂದು ಅದೇ
ಬೇಸರದಲ್ಲಿ ಏನನ್ನೋ ಯೋಚಿಸುತ್ತಾ ಸುಮ್ಮನೆ ಮಲಗಿ ಬಿಟ್ಟಳು. ಎದ್ದ ಮೇಲೆ ನಿರಾಳವಾಗಿ ಟಿ.ವಿ.ಯಲ್ಲಿ ಫಿಲಂ
ನೋಡುತ್ತಾ ಕುಳಿತಳು.ಊಟದ ನಂತರ ಮಂಜುನಾಥ
ಹಾಗೂ ಮಂಗಳ ಇಬ್ಬರನ್ನು ಕರೆದಳು.
‘ಮಂಜು,ನಾಳೆ ಸಂಜೆ ಲಾಯರ್ ನ ಮನೆಗೆ ಕರ್ಕೊಂಡು
ಬಾ. ನಾನು ವಿಲ್ ಬರೆಸಬೇಕು’
‘ಅದೇನಕ್ಕ ಇದ್ದಕ್ಕಿದ್ದಂತೆ’ ಎಂದು ಮಂಜು ಹೆಂಡತಿಯ ಮುಖ ನೋಡುತ್ತ. ರಾತ್ರಿ ಆಡಿದ ಮಾತುಗಳನ್ನು ಕೇಳಿಸಿ
ಕೊಂಡಳಾ ಎಂಬಂತೆ.
“ಇಲ್ಲ ಕಣೋ ನನಗ್ಯಾಕೋ ಮಧ್ಯಾಹ್ನದಿಂದ ಮನಸ್ಸಿಗೆ
ಬಂದಿದೆ. ನೋಡು ಮಲ್ಲಪ್ಪ ಮೇಷ್ಟ್ರುಗೆ ಹೆಂಗಾಯ್ತು. ಈ ಕೆಲಸ ಆಗ್ಲೇಬೇಕು”
‘ ನೋಡು ಮಂಜು, ನನ್ನ ಮನಸ್ನಲ್ಲಿರೋದನ್ನ ಹೇಳ್ತೀನಿ.
ನನ್ನ ನಂತರ ಈ ಮನೆ ನಿನಗೆ ಸೇರುತ್ತೆ. ಮಂಗಳ , ವಾಣಿ ಇಬ್ಬರೂ ನನ್ನ ಒಡವೆಗಳನ್ನು ಸಮನಾಗಿ ಹಂಚಿಕೊಳ್ಳಲಿ
ನನ್ನ ಹೆಸರಿನಲ್ಲಿರೋ ಹಣವನ್ನು ವಾಣಿ ಮತ್ತು ವರುಣ್ ಇಬ್ಬರೂ ಸಮನಾಗಿ ಹಂಚಿಕೊಳ್ಳಲಿ. ಏನಾದರೂ ನೀನು
ಹೇಳದಿದ್ದರೆ ಹೇಳು’ ಎಂದು ಹೇಳಿದಾಗ ಒಂದು ರೀತಿಯ
ಸಮಾಧಾನ ಭಾವದಿಂದ ‘ ನಿನ್ನಿಷ್ಟ. ನಿನಗೆ ತಿಳಿದ ಹಾಗೆ
ಮಾಡಕ್ಕ. ನನ್ನದೇನೂ ಇಲ್ಲ’
‘ಸರಿ, ನನಗೆ ನಿದ್ದೆ ಬರ್ತಿದೆ. ಮಲಗಬೇಕು ‘ಎನ್ನುತ್ತ ರೂಂ
ಕಡೆ ಹೊರಟಳು.


Leave a Reply

Back To Top