ಕಾವ್ಯಯಾನ
ಹಾಜರಿ
ಶಂಕರಾನಂದ ಹೆಬ್ಬಾಳ
ನಿನ್ನ ಹಾಜರಿಗಾಗಿ
ದಿನವೂ ಕಾದೆ
ಎದೆಯ ಕಡಲಿನಲ್ಲಿ ಉಳಿದು
ಏಕಾಂತ ಭಾವದ ಮುದ್ರೆ
ಬೊಬ್ಬೆ ಹೊಡೆಯುತ್ತಿದೆ…!
ಬಿಕ್ಕಳಿಸುವ ಬಿಗಿಕಂಠ
ಅವಳಪ್ಪುಗೆಯ ಬಯಸಿ
ಬೆಂಗಾಡಿನಲ್ಲಿ
ನರಳಿ ನರಳಿ ಸಾಯುತ್ತಿದೆ
ನೋಡು ಬಾ ಈ ಕಳೇಬರ…!
ವಾಕ್ಷಾರುಷ್ಯದ ನುಡಿಯಾಡಿಲ್ಲ
ಕೆಂಗಣ್ಣಿನ ಅಂಚಿನಲಿ
ಸುರಿವ ದೃಗುಜಲವು
ನಿನ್ನನೆ ಸ್ಮರಿಸುತಿದೆ….!
ಎದೆಯೊಳಗಿನ ಬೆಲ್ಲು
ಬಾರಿಸುತ್ತಿದೆ ಎಡಬಿಡದೆ
ಕಾದು ಕಾದು ಸುಸ್ತಾದ
ಮನವನೊಮ್ಮೆ ಆಲಿಂಗಿಸಿ
ಅಪ್ಪು ಬಾರೆ…!
ಜೀವಂತ ಶವವಾಗಿ ಬದುಕುವ
ಜೀವದೊಳು ಉಸಿರಾಗಿ,
ಹಸಿರಾಗಿ ಉಸಿರಾಗಿ,
ಹೆಸರನ್ನು ಮರೆವ ಮುಂಚೆ
ಬಿಟ್ಟ ಲೆಕ್ಕವನ್ನೆಲ್ಲ,
ಚುಕ್ತಾ ಮಾಡಿ
ಹೆಸರಿನೊಂದಿಗೆ,
ಹೃದಯದಲ್ಲಿ
ಹಾಜರಿ ಹಾಕಿಬಿಡು…!