ಕಥೆ
ಶಾರದ
ಭಾಗ-1
ಅನಸೂಯ ಎಂ.ಆರ್
“ವಾಣಿ ಪುಟ್ಟಿ” ಎಂದು ಕರೆಯುತ್ತಲೇ ಮನೆಯೊಳಗೆ ಬಂದಳು ಶಾರದ.”ಅಕ್ಕ, ವಾಣಿಗೆ ಇನ್ನೂ ಜ್ವರ ಬಿಟ್ಟಿಲ್ಲ. ನೀವು ಸ್ಕೂಲಿಗೆ ಹೋದ ಮೇಲೆ ಅವರಪ್ಪ ಡಾಕ್ಟರ್ ಹತ್ರ ಹೋಗಿ ತೋರಿಸ್ಕಂಡು ಬರೋಣ ಅಂತ ಎಷ್ಟು ಕರೆದ್ರೂ ಹೋಗಿಲ್ಲ ನಾನು ಅತ್ತೆ ಜೊತೆಗೆ ಹೋಗ್ತೀನಿ ಅಂತ ಹೇಳಿ ಹೋಗಲೇ ಇಲ್ಲ ಹಠ ಮಾಡ್ತಿದಾಳೆ ನೋಡಕ್ಕಾ” ಎಂದು ತಮ್ಮನ ಹೆಂಡತಿ ಮಂಗಳಾ ಹೇಳಿದಾಗ ” ಹೌದ” ಎನ್ನುತ್ತ ವಾಣಿಯ ಹತ್ತಿರ ಹೋಗಿ ಹಣೆ ಮುಟ್ಟಿದಾಗ ಸುಡುತ್ತಿತ್ತು. “ಯಾಕೋ ಪುಟ್ಟ ಹಠ ಮಾಡ್ತೀಯಾ? ಅಪ್ಪನ ಜೊತೆಗೇ ಹೋಗಿದ್ರೆ ಏನಾಗ್ತಿತ್ತು ಸರಿ ಬಾ ಹೋಗೋಣ “ಮಂಗಳಾ “ಇರಿ ಅಕ್ಕಾ ಕಾಫಿ ಮಾಡ್ತೀನಿ ಕುಡಿದು ಹೋಗ್ರಿ ಅತ್ತೇನೇ ಬೇಕು ಈ ಹುಡ್ಗಿಗೆ ಎಲ್ಲದಕ್ಕೂ” ಎನ್ನುತ್ತ ಕಾಫಿ ಮಾಡಲು ಹೋದಳು. ಮುಖ ತೊಳೆದು ಸಿದ್ಧಳಾದ ಶಾರದ ಕಾಫಿ ಕುಡಿದು ವಾಣಿಯನ್ನು ಕರೆದುಕೊಂಡು ಆಟೋದಲ್ಲಿಯೆ ಹೊರಟಳು.ಡಾಕ್ಟರ್ ಗೆ ತೋರಿಸಿ ಅವರು ಬರೆದು ಕೊಟ್ಟ ಔಷದಿ.ಬ್ರೆಡ್,ಹಣ್ಣನ್ನು ತೆಗೆದುಕೊಂಡು ಮನೆಗೆ ಬಂದರು ಅವಳನ್ನು ಮಲಗಿಸಿ ಶಾರದ ಟಿ.ವಿ.ನೋಡುತ್ತ ಕುಳಿತಳು ಆಗ “ಅತ್ತೈ ಅಕ್ಕ ಅಬ್ಬು” ಎಂದು ತೊದಲು ಮಾತಾಡುತ್ತ ಪುಟ್ಟ ವರುಣ್ ಬಂದಾಗ ಪಕ್ಕದಲ್ಲಿ ಕುಳ್ಳಿರಿಸುತ್ತ ಬ್ರೆಡ್ ಹಣ್ಣನ್ನು ತಿನ್ನಿಸಿ ಅವನನ್ನು ಕರೆದುಕೊಂಡು ರೂಂ ನಲ್ಲಿ ಆಟವಾಡಲು ಆಟಿಗೆಗಳನ್ನು ಹಾಕಿ,ಟೆಸ್ಟ್ ಪೇಪರಗಳನ್ನು ಮೌಲ್ಯಮಾಪನದಲ್ಲಿ ತೊಡಗಿದಳು.ಆಗ ರೂಂಗೆ ಬಂದ ಮಂಗಳ “ವಾಣಿ ಗಂಜಿ ಮಾಡ್ತೀನಿ ಕುಡಿದುಬಿಡು ಪುಟ್ಟ”
“ಬೇಡ ಕಣಮ್ಮ” ಹೋಗ್ಲಿ ಸ್ವಲ್ಪ ಬ್ರೆಡ್ ತಿಂದು ಹಾರ್ಲಿಕ್ಸ್ ಆದರೂ ಕುಡಿತೀಯ” ಶಾರದ ಕೇಳಿದಳು.”ಆಯ್ತು ಅತ್ತೆ” ಮಾತ್ರೆ ನುಂಗುತ್ತಿರುವಾಗ ಬಂದ ಮಂಜುನಾಥ “ಡಾಕ್ಟತ್ರ ಹೋಗ್ಬರೋಣ ಬಾರಮ್ಮ ಅಂತ ಎಷ್ಟು ಕರೆದ್ರು ಬರಲಿಲ್ಲ ಕಣಕ್ಕ. ಅತ್ತೆ ಒಬ್ಬಳಿದ್ರೆ ಸಾಕು ಇನ್ಯಾರು ಬೇಡ.”ಎನ್ನುತ್ತಾ ಮಗಳ ತಲೆ ಸವರಿದ. ಮಂಗಳ,ಮಂಜುನಾಥ, ಶಾರದ ಒಟ್ಟಿಗೆ ಕುಳಿತು ಊಟ ಮಾಡಿದರು ಬೆಳಿಗ್ಗೆ ತಿಂಡಿಗಾಗಿ ತರಕಾರಿಗಳನ್ನು ಹೆಚ್ಚಿಟ್ಟಳು. ರೂಂಗೆ ಬಂದು ಉಳಿದಿದ್ದ ಟೆಸ್ಟ್ ಪೇಪರ್ ಗಳ ಮೌಲ್ಯಮಾಪನ ಮಾಡುತ್ತಿರುವಾಗ ಮಂಗಳ “ಅಕ್ಕ ಸ್ಕೂಲಿನ ಕೆಲ್ಸ ಅಲ್ಲೇ ಮಾಡದೆ ಮನೆಗೆ ಬಂದು ಮೇಲೂ ಮಾಡ್ತೀರಾ.ಈಗ ಆರಾಮಾಗಿ ಮಲಗ್ರಿ” ಎಂದಳು.”ಈ ಕೆಲ್ಸ ಮುಗಿಸಿದರೇನೇ ನಿದ್ದೆ ಆರಾಮಾಗಿ ಬರುತ್ತೆ. ಅದೇನೋ ಗೊತ್ತಿಲ್ಲ ಕಣೆ ಸ್ಕೂಲಿಗೆ ಹೋಗ್ಬಿಟ್ರೆ ಅಲ್ಲಿರತನಕ ಮನೆಯ ಜ್ಞಾಪಕನೇ ಬರಲ್ಲ.ಆದ್ರೆ ಮನೆಗೆ ಬಂದ್ರೂ ಶಾಲೆಯ ಕೆಲಸ ಮಾತ್ರ ಮನಸ್ಸಿನಲ್ಲೇ ಇರುತ್ತೆ.” ಆಗ ಮಂಗಳ ” ನಿಮಗೆ ಎಲ್ಲಾ ಕೆಲ್ಸನೂ ಅಚ್ಚುಕಟ್ಟಾಗಿ ಮುಗಿಸಬೇಕು.”ಎಂದಳು.”ನೀನೇನೇ ಹೇಳು ಮಂಗಳ. ಈ ಮನೆ ಕೆಲ್ಸ, ಅಡುಗೆ ಎಲ್ಲಾನೂ ನೀನು ನಿಭಾಯಿಸ್ತಾ ಇದೀಯ ನೋಡು ಅದಕ್ಕೆನಾನುನಿರಾಳವಾಗಿರೋದು” ಶಾರದಾ ಹೇಳಿದಾಗ “ನೀವು ತಾನೇ ಇನ್ನೇನಕ್ಕ. ನೀವು ದುಡಿದಿದ್ದೆಲ್ಲನೂ ನಮಗೋಸ್ಕರ ಖರ್ಚು ಮಾಡ್ತಿಲ್ವಾ” ಎಂದು ಮನತುಂಬಿ ಹೇಳಲು” ನೀವು ಬೇರೆ ನಾನು ಬೇರೆ ಅಂತ ನನ್ನ ಮನಸ್ಸಿಗೆ ಯಾವತ್ತೂ ಬಂದಿಲ್ಲ ಮಂಗಳ” “ಅದನ್ನು ನೀನು ಬಾಯ್ಬಿಟ್ಟು ಹೇಳಬೇಕೇ ನಂಗೆ ಅರ್ಥ ಆಗಲ್ಪೇನಕ್ಕ ನೀವಿನ್ನು ಮಲಗ್ರಿ” ಎಂದವಳ ಮಾತನ್ನು ಕೇಳಿ ನೆಮ್ಮದಿಯೆನಿಸಿತು. ನಿದ್ದೆ ಮಾಡುತ್ತಿದ್ದ ವಾಣಿಯ ತಲೆಯನ್ನು ನೇವರಿಸುವಾಗ ಮಂಜುನಾಥ ಹೇಳಿದಂತೆ ವಾಣಿ ತನ್ನನ್ನು ಬಹಳ ಹಚ್ಚಿಕೊಂಡಿರುವುದು ನಿಜವೇ. ನನಗೂ ಆಷ್ಟೆ ವಾಣಿ ಅಂದ್ರೆ ಒಂದು ರೀತಿಯ ಮೋಹ ಮಮಕಾರ
ಅಪ್ಪ ಅಮ್ಮನ ಏಕಮಾತ್ರ ಪುತ್ರಿಯಾದ ಶಾರದಾ ಹುಟ್ಟು
ಅಂಗವಿಕಲೆ. ಕಾಲು ಊನವಾಗಿಯೇ ಹುಟ್ಟಿದ್ದ ಶಾರದ ನಡೆಯುವಾಗ ಕುಂಟುತ್ತಿದ್ದಳು ಮಗಳ ಅಂಗವೈಕಲ್ಯವು ಅವಳ ತಂದೆತಾಯಿಗಳನ್ನು ಚಿಂತೆಗೀಡು ಮಾಡಿದ್ದು ನಿಜ ಹೆಸರಿಗೆ ತಕ್ಕಂತೆ ಅವಳು ವಿದ್ಯೆಯಲ್ಲಿ ಶಾರದಾ ದೇವಿಯ ವರಪುತ್ರಿಯೇ ಆಗಿ ಓದಿನಲ್ಲಿ ಜಾಣೆಯಾಗಿದ್ದಳು.ಇದು ತಂದೆತಾಯಿಗಳಿಗೆ ಒಂದಿಷ್ಟು ನೆಮ್ಮದಿಗೆ ಕಾರಣವಾಗಿತ್ತು
ಮುಂದೆ B.sc.ಹಾಗೂ B.Ed. ನಲ್ಲಿ ಉನ್ನತ ಶ್ರೇಣಿಯಲ್ಲಿ
ಉತ್ತೀರ್ಣಳಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ
ನೇಮಕಗೊಂಡಿದ್ದಳು. ನೋಡಲು ಲಕ್ಷಣವಾಗಿದ್ದು ಶಿಕ್ಷಕ ವೃತ್ತಿಯಲ್ಲಿದ್ದರೂ ಅಂಗವಿಕಲತೆಯಿಂದ ಅವಳ ವಿವಾಹ ಪ್ರಸ್ತಾಪಗಳು ನಿಂತು ಹೋಗುತ್ತಿದ್ದವು. ಹಲವಾರು ಬಾರಿ
ಇದು ಪುನರಾವರ್ತನೆಯಾದಾಗ ಶಾರದ ಮನನೊಂದು
ಅಪ್ಪ ಅಮ್ಮನ ಹತ್ತಿರ ಗಟ್ಟಿ ನಿರ್ಧಾರ ಮಾಡಿ ಹೇಳಿದ್ದಳು
“ಇನ್ನು ಮುಂದೆ ನನ್ನ ಮದುವೆಯ ಪ್ರಯತ್ನ ಮಾಡಬೇಡ್ರಿ
ನಾನು ಯಾರ ಹಂಗೂ ಇಲ್ಲದೆ ಜೀವನ ಮಾಡಲು ನನಗೆ
ಉದ್ಯೋಗವಿದೆ. ನಾನು ನನ್ನ ತಮ್ಮಇಬ್ರು ಒಬ್ಬರಿಗೊಬ್ರು
ಆಸರೆಯಾಗಿ ಬದುಕುತ್ತೇವೆ. ನನ್ನ ಬಗ್ಗೆ ಚಿಂತೆ ಮಾಡದೆ ನೀವು ಧೈರ್ಯವಾಗಿರಿ” ಅಲ್ಲಿಗೆ ಅವಳ ಮದ್ವೆ ವಿಷಯಕ್ಕೆ ಪೂರ್ಣವಿರಾಮ ಬಿತ್ತು. ಅಮ್ಮ ತನ್ನ ತವರೂರಿನಲ್ಲಿ ತನ್ನ ಪಾಲಿನ ನಿವೇಶನವನ್ನು ಮಾರಿ ಆ ಹಣದಲ್ಲಿ ತಾವಿರುವ ಮನೆ ಪಕ್ಕದಲ್ಲೆ ಮಾರಾಟಕ್ಕಿದ್ದ ನಿವೇಶನವನ್ನು ಕೊಂಡು ಕೊಂಡು ಶಾರದೆಯ ಹೆಸರಿಗೆ ಬರೆದಿದ್ದರು. ಅದರ ಜೊತೆ ಅವಳ ಮದುವೆಗೆ ಕೂಡಿಟ್ಟ ಹಣವನ್ನು ಅವಳ ಹೆಸರಲ್ಲಿ
ಬ್ಯಾಂಕ್ ನಲ್ಲಿಟ್ಟರು.ತಮ್ಮಮಂಜುನಾಥ ಪಿ.ಯು.ಸಿ.ನಲ್ಲಿ ಫೇಲಾದ ಮೇಲೆ ಅಪ್ಪನ ಜೊತೆಯಲ್ಲಿ ಕಿರಾಣಿ ಅಂಗಡಿ ನೋಡಿಕೊಳ್ಳ ತೊಡಗಿದ. ಅಮ್ಮ ತನ್ನ ತಮ್ಮನ ಮಗಳು
ಮಂಗಳಳನ್ನು ಸೊಸೆಯನ್ನಾಗಿ ಮಾಡಿಕೊಂಡಳು.ಇದೆಲ್ಲ
ಆಗಿ ಎರಡು ವರ್ಷಗಳು ಆಗುವಷ್ಟರಲ್ಲಿ ಅಪ್ಪ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಅಸು ನೀಗಿದ್ದರು.
ಅಪ್ಪನ ಸಾವಿನಿಂದಾಗಿ ಮಂಕಾಗಿದ್ದ ಅಮ್ಮಮೊಮ್ಮಗಳು
ಹುಟ್ಟಿದ ಮೇಲೆ ಮಗುವಿನ ಪಾಲನೆಯಲ್ಲಿ ತೊಡಗುತ್ತಾ ದುಃಖದಿಂದ ಹೊರ ಬಂದಳು. ಮಂಗಳಾ ಎಲ್ಲರೊಂದಿಗೆ
ಹೊಂದಿಕೊಳ್ಳುವ ಸ್ವಭಾವದಿಂದಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಳು. ಆಗಲೇ ಶಾರದಾ ಅಮ್ಮನ ಒಪ್ಪಿಗೆಯೊಂದಿಗೆ
ತನ್ನ ಹೆಸರಿನಲ್ಲಿದ್ದ ನಿವೇಶನದಲ್ಲಿ ತನ್ನ ಮದುವೆಯ ಹಣ
ಮತ್ತು ಬ್ಯಾಂಕ್ ನಲ್ಲಿ ಸಾಲ ತೆಗೆದು ತಾವೆಲ್ಲರೂ ಇರಲು
ಕೆಳಗಿನ ಮನೆ ಹಾಗೂ ಬಾಡಿಗೆ ಕೊಡಲು ಮೇಲೊಂದು
ಮನೆಯನ್ನು ಕಟ್ಟಿಸಿದಳು. ಹಳೆಯ ಮನೆಯನ್ನು ಬಾಡಿಗೆ
ಕೊಟ್ಟು ಹೊಸ ಮನೆಯಲ್ಲಿದ್ದರು. ಎಲ್ಲವೂ ಸರಾಗವಾಗಿ
ನಡೆಯುತ್ತಿರುವಾಗಲೇ ಅಮ್ಮನು ಹೃದಯಾಘಾತದಿಂದ
ಎಲ್ಲರನ್ನು ಅಗಲಿದ್ದಳು. ಆಗ ವರುಣನಿಗೆ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. ಈಗ ಮಂಜುನಾಥ, ಮಂಗಳಾ ಇಬ್ಬರೂ ಅಕ್ಕನಾದ ಶಾರದಳಿಗೆ ಮನೆಯ ಹಿರಿಯಳೆಂಬ
ಗೌರವದೊಂದಿಗೆ ಪ್ರೀತಿಯಿಂದ ನೋಡುತ್ತಿದ್ದರು.ಅವಳ ಒಪ್ಪಿಗೆಯಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ
ಶಾರದ ಸಹ ತಮ್ಮನ ಸಂಸಾರವೇ ತನ್ನ ಸರ್ವಸ್ವವೆಂದು ತಿಳಿದಿದ್ದಳು. ಎರಡನೆ ಮಗು ವರುಣನ ಪಾಲನೆಯಲ್ಲೇ ಮಂಗಳಾಳ ಬಹುಪಾಲು ಸಮಯ ಕಳೆದುಹೋಗುತ್ತಿದ್ದ
ಕಾರಣ ಸಹಜವಾಗಿಯೇ ಶಾರದ ವಾಣಿಯ ಜವಾಬ್ದಾರಿ
ಹೊತ್ತುಕೊಂಡಳು. ವಾಣಿಯ ತುಂಟಾಟದ ಮಾತುಗಳು ಶಾರದಾಳ ಒಂಟಿತನದ ಬೇಸರವನ್ನು ಮರೆಸಿ ಬಿಟ್ಟಿದ್ದವು
ವಾಣಿಯಂತೂ ಊಟ ತಿಂಡಿಗೆ ಮಾತ್ರ ಅವಳಮ್ಮನನ್ನು ಕೇಳುತ್ತಿದ್ದಳು. ಉಳಿದ ಎಲ್ಲದಕ್ಕು ಅತ್ತೆಯ ಹಿಂದೆ ಸುತ್ತು
ಹೊಡೆಯುತ್ತಿದ್ದಳು. ವಾಣಿಯನ್ನು ಶಾಲೆಗೆ ಕಳಿಸುವುದು.
ಊಟದ ಬಾಕ್ಸ್ ರೆಡಿ ಮಾಡುವುದು, ಶಾಲೆಗೆ ಹೋಗಲು ತಾನೂ ರೆಡಿಯಾಗುವುದು, ಸಂಜೆಯ ವೇಳೆ ಅವಳನ್ನು ಓದಿಸುವುದು ಹಾಗೂ ಶಾಲೆಯ ಕೆಲಸಗಳಲ್ಲಿ ಸಮಯ ಕಳೆದುಹೋಗುತ್ತಿದ್ದುದೇ ಅರಿವಾಗುತ್ತಿರಲಿಲ್ಲ. ಆಗೆಲ್ಲಾ
ಮಂಗಳ “ಶಾರದಕ್ಕ, ವಾಣಿನ ನೀವು, ವರುಣನ ನಾನು
ಹಂಚಿಕೊಂಡಂಗಾಯ್ತು ಅಲ್ವಾ” ಎನ್ನುತ್ತಿರುತ್ತಾಳೆ. ತನ್ನೆಲ್ಲ
ಪ್ರೀತಿ ಮಮತೆಯನ್ನು ಹಂಚಲು ದೇವರು ಕೊಟ್ಟ ವರವೆ
ವಾಣಿಯ ರೂಪದಲ್ಲಿ ಬಂದಿದೆಯೇನೋ ಅನ್ನಿಸುತ್ತಿತ್ತು
ಶಾರದಳಿಗೆ. ವಾಣಿಯ ಮೇಲೊಂದು ರೀತಿ ವ್ಯಾಮೋಹ
ಆವರಿಸಿಬಿಟ್ಟಿತ್ತು. ಒಮ್ಮೊಮ್ಮೆ ಮಂಜು ” ಅಕ್ಕ, ವಾಣಿಗೆ ನೀನೊಬ್ಬಳಿದ್ರೆ ಸಾಕು. ನಾವ್ಯಾರೂ ಬೇಡ. ನಿನ್ನನ್ನು ಬಲು ಹಚ್ಕಂಡು ಬಿಟ್ಟಿದಾಳೆ” ಎಂದಾಗ ಶಾರದ “ಇರ್ಲಿ ಬಿಡು ನಿಮ್ಮನ್ನಲ್ಲದೆ ಇನ್ಯಾರನ್ನ ಹಚ್ಕೋಣಲಿ ಹೇಳು. ನಾವೆಲ್ಲ ಒಂದೇ ತಾನೆ” ಎಂದಾಗ ಓಡಿಬಂದ ವಾಣಿ “ಹೌದು ನಂಗೆ ಅತ್ತೇನೇ ಬೇಕು”ಎನ್ನುತ್ತಾ ಶಾರದಳನ್ನು ಅಪ್ಪಿಕೊಂಡರೆ ಶಾರದಳಿಗೆ ಖುಷಿ.ಎಲ್ಲದಕ್ಕಿಂತ ಹೆಚ್ಚಾಗಿ ಶಾರದಳಿಗಿಷ್ಟ ಆದದ್ದು ವಾಣಿಯ ದಿಟ್ಟತನ ಮತ್ತು ಪ್ರಶ್ನೆಯನ್ನು ಕೇಳದೆ ಸರಿಯಾಗಿ ತಿಳಿಯದೆ ಯಾವುದನ್ನೂ ಒಪ್ಪುವ ಪ್ರಶ್ನೆಯೇ ಇಲ್ಲ.ಹಬ್ಬದ ದಿನ ಮಂಜುನಾಥ ಮಾವಿನೆಲೆ ತೋರಣ ಕಟ್ಟುತ್ತಿರುವಾಗ “ಅಪ್ಪಾ ತೋರಣ ಕಟ್ಟಕ್ಕೆ ಈ ಮಾವಿನ
ಎಲೆಯೇ ಯಾಕೆ ಬೇಕು” ಅವರಪ್ಪ ನಿರುತ್ತರನಾಗಿ” ಬರೀ ಇಂಥ ತರ್ಲೆ ಪ್ರಶ್ನೆಗಳನ್ನೆ ಕೇಳೋದು ನೀನು”ಎನ್ನುತ್ತಲೇ ಗದರಿದಾಗ ಮುಖ ಉದಿಸಿ ಕೊಂಡು ಶಾರದೆಯ ಬಳಿ ಬಂದು “ನಿನಗೆ ಗೊತ್ತಾ ಅತ್ತೆ” “ಮಾವಿನ ಎಲೆಗಳು ಬೇರೆ ಗಿಡದ ಎಲೆಗಳಿಗಿಂತ ಹೆಚ್ಚು ಅಮ್ಲಜನಕ ಕೊಡುವುದೇ
ಇದಕ್ಕೆ ಕಾರಣ” ಎಂದು ಶಾರದ ಹೇಳಲು ಮತ್ತೇ ಅವಳ ಅಪ್ಪನ ಬಳಿ ಹೋಗಿ ಮಾವಿನಲೆಗಳ ತೋರಣ ಕಟ್ಟುವ ಕಾರಣವನ್ನು ತಿಳಿಸುತ್ತಿದ್ದಳು. ವಾಣಿಯಿನ್ನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವಳ ನೇರ ದಿಟ್ಟತನ ಎದ್ದು ಕಾಣುತ್ತಿತ್ತು. ಒಮ್ಮೆ”ನಮ್ಮಲ್ಲಿ ಮದುವೆ ಆಗುವಾಗ ಬರೀ ಹೆಣ್ಣಿಗೆ ಮಾತ್ರ ತಾಳಿ ಕಟ್ತಾರೆ ಗಂಡಿಗೆ ಮಾತ್ರ ಏನನ್ನೂ ಕಟ್ಟಲ್ಲ ಯಾಕೆ” ಎಂದು ಕೇಳಿದಳು.ಮಂಗಳ”ಹಿಂದಿನಿಂದ ಬಂದಿರುವ ಸಂಪ್ರದಾಯ ಕಣೆ”ಎಂದರೆ ತಕ್ಷಣ” ಅದನ್ನೇ ಯಾಕೆ” ಅಂತ ಕೇಳಿದರೆ ಏನೇನೋ ಹೇಳ್ತೀಯ ಕಣಮ್ಮ” “ಅತ್ತೆ ನೀನಾದ್ರು ಹೇಳು. ಹೆಣ್ಣಿಗಿದ್ದ ಹಾಗೆಯೆ ಗಂಡಿಗೂ ಮದುವೆ ಆಗಿರೊ ಗುರುತು ಇರಬೇಕಿತ್ತು ಅಲ್ಲವೇನತ್ತೆ” ಎನ್ನುವಳು. ಆಗ ಶಾರದ “ಹೌದು ನೀನು ಕೇಳ್ತಿರೋದು ಸರಿ ಆದ್ರೆ ನಮ್ಮ ಸಮಾಜದಲ್ಲಿ ಎಲ್ಲಾ ನಿಯಮಗಳು ಕೇವಲ ಹೆಣ್ಣಿಗೆ ಮಾತ್ರ ಇದಾವೆ ಹೊರತು ಗಂಡಿಗಂತು ಇಲ್ಲಮ್ಮ”ಎಂದಳು “ಹೌದತ್ತೆ ನೀನು ಹೇಳಿದ್ದನ್ನು ಒಪ್ಕಳ್ಳ ಬಹುದು “.ಓದಿನಲ್ಲಿ ತನ್ನಂತೆಯೆ ಕಡುಜಾಣೆಯಾಗಿರುವ ವಾಣಿಯು ಶಾರದಳ ಹೆಮ್ಮೆಯ ಸೊಸೆ. ಅವಳ ಊಟ ತಿಂಡಿ, ಬಟ್ಟೆಗಳಿಂದ ಹಿಡಿದು ಓದಿಸುವವರೆಗೂ ಎಲ್ಲಾ
ಕೆಲಸಗಳಲ್ಲು ಮುತುವರ್ಜಿ ಮತ್ತು ಕಾಳಜಿ ಮಾಡದಿದ್ದರೆ ಶಾರದಳಿಗೆ ನೆಮ್ಮದಿಯಿರುತ್ತಿರಲಿಲ್ಲ.ವಾಣಿ ನೋಡಲು ತನ್ನ ತಾಯಿಯನ್ನೆ ಹೋಲುತ್ತಿದ್ದುದು ಶಾರದಳಿಗೊಂದು
ವಿಶೇಷವಾಗಿತ್ತು. ವಾಣಿಗಂತೂ ಅತ್ತೆ ಎಲ್ಲದಕ್ಕೂ ಬೇಕು. ಅತ್ತೆಯಿದ್ದರೆ ಸಾಕು ಅಮ್ಮನೂ ಬೇಡ ವರುಣ ಹುಟ್ಟಿದ ಮೇಲೆ ಅತ್ತೆಯ ಜೊತೆಯೆ ಮಲಗುವುದು ರೂಢಿಯಾಗಿ ಈಗಲೂ ಮುಂದುವರಿದಿದೆ. ಅತ್ತೆಯ ರೂಂನಲ್ಲೇ ಅವಳ ಕಾರುಬಾರು. ಮನೆ ಕಟ್ಟಿಸುವಾಗ ಬ್ಯಾಂಕ್ ನಲ್ಲಿ ತೆಗೆದ ಸಾಲವೆಲ್ಲ ತೀರಿದ ಮೇಲೆ ಮಹಡಿ ಮನೆ ಬಾಡಿಗೆಯನ್ನು ಸಹ ಶಾರದ ಮಂಗಳನ ಕೈಗೆ ಮನೆ ಖರ್ಚಿಗೆಂದು ಕೊಟ್ಟು ಬಿಡುತ್ತಿದ್ದಳು.ತಮ್ಮನ ವ್ಯಾಪಾರದ ಸ್ಥಿತಿಯು ಆರಕ್ಕೇರದ ಮೂರಕ್ಕಿಳಿಯದ ರೀತಿಯಲ್ಲಿತ್ತು ತಮ್ಮನ ಮಕ್ಕಳಿಬ್ಬರ ವಿದ್ಯಾಭ್ಯಾಸದ ಜವಾಬ್ಧಾರಿಯನ್ನೆಲ್ಲ ಶಾರದಳೇ ವಹಿಸಿ ಕೊಂಡಿದ್ದಳು. ಅಪ್ಪಿತಪ್ಪಿ ಒಂದು ದಿನವಾದರೂ ಮಂಗಳ ಶಾರದಳ ಮನ ನೋಯುವಂಥ ಮಾತನ್ನಾಡಿಲ್ಲ. ಒಂದು ರೀತಿಯಲ್ಲಿ ಶಾರದ ತಮ್ಮನ ಸಂಸಾರಕ್ಕೆ ಆಧಾರ ಸ್ತಂಭ.
(ಮುಂದಿನ ಭಾಗ ಶನಿವಾರದಂದು)
ಒಳ್ಳೆಯ ಆರಂಭ