ಕಾವ್ಯಯಾನ

Image result for photos of indian womanwith nose ornament

ಇವಳು_ಅವಳೇ !

ಹರ್ಷಿತಾ ಕೆ.ಟಿ.

ಅಲಂಕಾರದ ಮೇಜಿಗೆ
ಹಿಡಿದಿದ್ದ ಧೂಳು ಹೊಡೆಯುತ್ತಿದ್ದ
ನನ್ನ ಶೂನ್ಯ ದೃಷ್ಟಿಗೆ
ಅಚಾನಕ್ಕಾಗಿ ಕಂಡಳಿವಳು

ನೀಳ್ಗನ್ನಡಿಯ ಚೌಕಟ್ಟಿನೊಳಗೆ
ಒತ್ತಿ ತುಂಬಿಸಿದಂತೆ
ಉಸಿರು ಕಟ್ಟಿಕೊಂಡು ನಿಂತಿದ್ದವಳು

ಬೆಚ್ಚಿ ಹಿಂಜಗಿದು
ಕ್ಷಣಗಳೆರೆಡು ಗುರುತು ಸಿಗದೆ
ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ
ಅವಳೂ ಚಿಕ್ಕದಾಗಿಸಿದಳು
ಗುಳಿ ಬಿದ್ದ ಎರಡು ಗೋಲಿಗಳನು

ಅರೇ.. ನಾನೇ ಅದು!
ಎಷ್ಟು ಬದಲಾಗಿದ್ದೇನೆ?
ನಂಬಲಾಗದಿದ್ದರೂ
ಕನ್ನಡಿಯ ಮೇಲೆ
ಬೆರಳಾಡಿಸಿ ಅವಲೋಕಿಸಿದೆ

ಗುಳಿಬಿದ್ದ ಕೆನ್ನೆಗಳಲಿ
ಈಗ ನಕ್ಷತ್ರಗಳಿಲ್ಲ
ಬರೇ ಕಪ್ಪುಚುಕ್ಕೆಗಳು,
ಮೊಡವೆಯ ತೂತುಗಳು

ಅವರು ದೀಪಕ್ಕೆ ಹೋಲಿಸುತಿದ್ದ
ಬೆರೆಗು ಕಂಗಳಲಿ
ಈಗ ಎಣ್ಣೆ ಬತ್ತಿದಂತಿದೆ
ಕಾಡಿಗೆ ಮೆತ್ತಿ
ವರುಷಗಳೇ ಕಳೆದಿರಬೇಕು
ಅಡಿಗೆ ಕೋಣೆಯ
ಗೋಡೆಗಂಟಿದ ಮಸಿ ಒರೆಸುತ್ತಾ
ಮರೆತೇ ಬಿಟ್ಟಿದ್ದೆ

ನೋಟ ಕೆಳಗಿಳಿಯಿತು
ಸಡಿಲ ಅಂಗಿಯ ಮರೆಯಲ್ಲಿ
ತೆಳ್ಳಗಿನ ದೇಹ
ಇಷ್ಟು ಬಾತುಕೊಂಡಿದ್ದಾದರೂ ಯಾವಾಗ?ಅರಿವಾಗಲೇ ಇಲ್ಲ
ನಡುವೆಲ್ಲಿ? ತಡಕಾಡಿದೆ
ಮಗಳು ನನ್ನನ್ನು ಅಪ್ಪಿ
ಟೆಡ್ಡಿ ಎಂದುದರ ಅರ್ಥ ಈಗ ತಿಳಿಯಿತು

ಉಡುಗೆ ತೊಡುಗೆ ನಡಿಗೆ
ಎಲ್ಲವೂ ಬದಲು
ಜೋತುಬಿದ್ದ ತನುವಿನಲಿ
ಇನ್ನೆಲ್ಲಿ ನಾಜೂಕು
ಬಿಂಕ ಬಿನ್ನಾಣಗಳನು
ಯಾವ ಧಾನ್ಯದ ಡಬ್ಬಿಯಲ್ಲಿಟ್ಟು
ಮರೆತೆನೋ ನೆನಪಿಲ್ಲ

ಕಣ್ಣೆದುರಿನ ಇವಳು
ಕಣ್ಣೊಳಗಿದ್ದ ಆ ಅವಳ
ನುಂಗಲಾರಂಭಿಸಿದಳು
ಕಣ್ಣಂಚು ಕರಗತೊಡಗಿತು

ಆದರೂ ನನ್ನ ಮೂಗು ಬದಲಾಗಿಲ್ಲವೆನಿಸಿ ಸಂತೈಸಿಕೊಂಡು ಮುತ್ತಿಕ್ಕುವಷ್ಟರಲ್ಲಿ
ನನಗಿದು ಬೇಡವೆಂದು
ರಚ್ಚೆ ಹಿಡಿದ ಮಗಳ ದನಿಗೆ
ಮೊದಲಿದ್ದ ಮೂಗಿನ ತುದಿಯ ಕೋಪ
ಎಂದೋ ಕರಗಿ ಹರಳಾಗಿ
ಮೂಗುತಿ ಸೇರಿದ್ದು ನೆನಪಾಯಿತು

ಇವಳು ನಕ್ಕಂತಾಯಿತು
=======

Leave a Reply

Back To Top