ವಾರ್ಷಿಕ ವಿಶೇಷ-2021
ಕನ್ನಡ ಸಾಹಿತ್ಯ ಮತ್ತು ಧರ್ಮ
ಶಾಂತಲಾ ಮಧು
ಕನ್ನಡದ ಮೊದಲ ಗ್ರಂಥವೆಂದು ಒಪ್ಪಿಕೊಳ್ಳಲಾದ `ಕವಿರಾಜಮಾರ್ಗ’ದಲ್ಲಿ `ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಚಿನ್ನದಂತಹ ಮಾತೊಂದಿದೆ. ಈ ಮಾತಿನ ಅರ್ಥ `ನಿಜವಾದ ಐಶ್ವರ್ಯ (ಕಸವರ) ಪರವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ಆಗಿದೆ’ ಎನ್ನುವುದು.
`ಅನ್ಯರ ವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು’ ಎನ್ನುವ ಈ ಸೂಕ್ತಿ ಕನ್ನಡನಾಡು ಧರ್ಮಗಳ ವಿಚಾರಗಳಲ್ಲಿ ಉದ್ದಕ್ಕೂ ತಾಳಿದ ನಿಲುವಿಗೆ ಬರೆದ ಒಂದು ವ್ಯಾಖ್ಯಾನದಂತಿದೆ, ಕರ್ನಾಟಕದ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದರ ಧರ್ಮ ಸಹಿಷ್ಣುತೆ. ಕನ್ನಡ ನಾಡು ಅನೇಕ ಧರ್ಮಗಳಿಗೆ ನೆಲೆಯಾದದ್ದಲ್ಲದೆ ಎಲ್ಲ ಧರ್ಮಗಳು ಜೊತೆಗೂಡಿ ವರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತಾ ಬಂದಿರುವುದೇ. ಕರ್ನಾಟಕದಲ್ಲಿ ಪ್ರವರ್ಧಮಾನವಾದ ಮುಖ್ಯ ಧರ್ಮಗಳು ಜೈನ, ವೀರಶೈವ ಮತ್ತು ವೈಷ್ಣವ.
ಕವಿ ಮತ್ತು ಕಾಲ ಪರಸ್ಪರ ಪೋಷಿತ ಮತ್ತು ಪೂರಕ, ಕಾಲದಿಂದ ತಾನೇನು ಪಡೆಯುತ್ತಾನೋ ಅದನ್ನು ಪರಿಷ್ಕರಿಸಿ, ವಿಸ್ತರಿಸಿ ಮಾರ್ಪಡಿಸಿ ಅಲಂಕರಿಸಿ ಕಾಲಕ್ಕೆ ಹಿಂದಿರುಗಿಸುತ್ತಾನೆ ಕವಿ, ಮಹಾಕವಿ ಕಾಲಕ್ಕೆ ಕೊಡುವುದೇ ಹೆಚ್ಚಾಗಿರುತ್ತದೆ. ಅಂತಹ ಕವಿಯ ಮೂಲಕ ಋತು ಶಕ್ತಿ ಕವಿ ಕೃತು ಶಕ್ತಿಯಾಗಿ ಸಮಾಜಕ್ಕೆ ಸಂಜೀವಿನಿಯಾಗುತ್ತದೆ.
ಕವಿಗಳ ಕಾವ್ಯ ರಚನೆಯಲ್ಲಿ ಹಲವು ಮೂಲ ಪ್ರೇರಣೆಯನ್ನು ಗಮನಿಸಬಹುದು.
೧. ಕವಿ ಹುಟ್ಟಿ ಬೆಳೆದ ಪರಿಸರ. ಕವಿ ಶ್ರದ್ಧೆಯಿಂದ ಒಪ್ಪಿಕೊಂಡ ಪ್ರಮುಖವಾದ ಮತ-ಧರ್ಮ ನಂಬಿಕೆಗಳು.
೨. ಕವಿಗಳಿಗೆ ಜೀವನದುದ್ದಕ್ಕೂ ಆಶ್ರಿತ ಹಾಗೂ ಪ್ರೋತ್ಸಾಹ ಒದಗಿಸಿದ ರಾಜನ ಆಸ್ಥಾನಗಳು ಮತ್ತು ಕೃತಿಯ ವಸ್ತು ಹಾಗೂ ಭಾಷೆ ಮೇಲೆ ಪ್ರಬಲ ಪ್ರಭಾವವನ್ನು ಬೀರುತ್ತಾ ಬಂದ ಸಂಸ್ಕೃತ ಸಾಹಿತ್ಯ ಪರಂಪರೆ. ಇವು ಒಂದು ರೀತಿಯಲ್ಲಿ ಪ್ರೇರಣೆ ಮತ್ತೊಂದು ರೀತಿಯಲ್ಲಿ ಕವಿಗೆ ಆತಂಕ, ಸವಾಲು ಆಗಿರುವುದು ಮರೆಯುವಂತಿಲ್ಲ.
ಧರ್ಮವೇ ಜೀವದ ಉಸಿರೆಂದು ಹೇಳಿಸಿಕೊಂಡು ಬಂದ ಭಾರತದಲ್ಲಿ ಎಲ್ಲಾ ಕಾವ್ಯ-ಕಲೆಗಳ ಮೂಲ ಸ್ಫೂರ್ತಿಯೇ ಧರ್ಮವಾಗಿದೆ. ಇದು ಕನ್ನಡ ಸಾಹಿತ್ಯಕ್ಕೂ ಯಥಾವತ್ತಾಗಿ ಅನ್ವಯಿಸುತ್ತದೆ. ಇಲ್ಲಿ ಧರ್ಮ ಎಂಬ ಮಾತು `ಮತ ಧರ್ಮ’ ಎನ್ನುವ ಅರ್ಥದಲ್ಲಿ ಇದೆ. ಹಾಗೆ ಮುಂಬರುವ ಕಾಲದಲ್ಲಿ ಮಾನವೀಯ ಧರ್ಮದ ಹೆಚ್ಚುಗಾರಿಕೆಯೂ ಕಾಣುತ್ತದೆ. ಮುಂಬರುವ ಸಾಹಿತ್ಯದ ಪ್ರಕಾರಗಳಲ್ಲಿ ಈ ಮಾನವೀಯ ಧರ್ಮದ ಹುಡುಕಾಟ ಬರಹದಲ್ಲಿ ಹೆಚ್ಚು ಸ್ವಾತಂತ್ರ ಮನೋಭಾವ ಅಂದರೆ ಮನಬಿಚ್ಚಿ ಹೇಳುವಿಕೆ ಕಾಣುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೦ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಇಲ್ಲಿ ಮಹಾಕವಿಗಳಾದ ಪಂಪ, ಪೊನ್ನ, ರನ್ನರನ್ನು ನೆನಪಿಸಿಕೊಳ್ಳಬಹುದು. ಇವರುಗಳು ಕ್ರಮವಾಗಿ
(ಪಂಪ) ಆದಿಪುರಾಣ, (ಪೊನ್ನ) – ಶಾಂತಿಪುರಾಣ, ರನ್ನ – ಅಜಿತನಾಥ ಪುರಾಣ ಎಂಬ ಧಾರ್ಮಿಕ ಕಾವ್ಯ ಹಾಗೆ (ಪಂಪ) ವಿಕ್ರಮಾರ್ಜುನ ವಿಜಯ, (ಪೊನ್ನ) ಭುವನೈಕ ರಾಮಾಭ್ಯುದಯ (ದೊರೆತಿಲ್ಲ) ಸಾಹಸಭೀಮವಿಜಯ (ರನ್ನ) ಎಂಬ ಲೌಕಿಕ ಕಾವ್ಯಗಳನ್ನು ಬರೆದರು.
ಈ ಎಲ್ಲಾ ಕವಿಗಳು ಧಾರ್ಮಿಕ ಮತ್ತು ಲೌಕಿಕ ಕಾವ್ಯ ಬರೆದರೂ ಅಂದಿನ ಓದುಗರು ತೋರಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಧರ್ಮದ ಪ್ರಭಾವವೇ ಎತ್ತಿ ಹಿಡಿಯುತ್ತದೆ. ಲೌಕಿಕ ಕಾವ್ಯ ಪ್ರತಿಯನ್ನು ಉಳಿಸಿಕೊಳ್ಳುವಲ್ಲಿ ಉದಾಸೀನರಾಗಿದ್ದರು ಅನ್ನಿಸುತ್ತದೆ. ಈಗ ದೊರಕಿರುವ ಪ್ರತಿಗಳನ್ನು ನೋಡಿದರೆ ಉದಾ: ಪಂಪರ ವಿಕ್ರಮಾರ್ಜುನ ವಿಜಯ ಪ್ರತಿ ಸಿಕ್ಕಿರುವುದು ಮೂರು ರನ್ನನ ಗದಾಯುದ್ಧದ ಪ್ರತಿ ಕೇವಲ ಒಂದು ಒಂದೂವರೆ ಅದರೆ ಆದಿಪುರಾಣ, ಅಜಿತಪುರಾಣಗಳು ಸಾಕಷ್ಟು ದೊರಕಿದೆ.
ಕವಿಯಾದವನು ಮೊಟ್ಟ ಮೊದಲಿಗೆ ತನ್ನ ಧರ್ಮಕ್ಕೆ ಕಾವ್ಯಮುಖೇನ ಅಭಿವ್ಯಕ್ತಿ ಕೊಡದೆ ಇದ್ದಾಗ ಆತನ ಕಾವ್ಯ ತಿರಸ್ಕೃತವಾದುದು ಇದೆ. ಇದಕ್ಕೆ ಉತ್ತಮ ಕಥೆಯ ಉದಾ: ಹರಿಹರ, ತನ್ನ ಸೋದರಳಿಯನಾದ ರಾಘವಾಂಕನನ್ನು ಶಿಕ್ಷಿಸಿದ ಪರಿ.
ಹನ್ನೆರಡನೆಯ ಶತಮಾನ ವೀರಶೈವ ಧರ್ಮದ ಉತ್ಕೃಷ್ಟ ಕಾಲ ವಾಚನಕಾರರ ಧಾರ್ಮಿಕ ಕ್ರಾಂತಿಯ ನಂತರ ಬಂದ ಕವಿ ಹರಿಹರ-ರಾಘವಾಂಕ, ಶಿವ ಕವಿಯಾದ ಹರಿಹರ ಶಿವನನ್ನು ಶಿವಶರಣರನ್ನು ಕುರಿತು ಕಾವ್ಯ ಬರೆಯಬೇಕೇ ಹೊರತು ಮನುಜರ ಮೇಲೆ, ಕನಿಷ್ಟರ ಮೇಲೆ ಕಾವ್ಯ ಬರೆಯಬಾರದು ಎಂಬ ಧೋರಣೆಯನ್ನು ಎತ್ತಿ ಹಿಡಿದವನು.
ರಾಘವಾಂಕ ಮೊದಲ ಕಾವ್ಯ ಬರೆದದ್ದು ‘ಹರಿಶ್ಚಂದ್ರ ಕಾವ್ಯ’ ಹೊನ್ನ ಹರಿವಾಣದಲ್ಲಿ ಇಟ್ಟು ಗುರುವೂ-ಸೋದರಮಾವನೂ ಆದ ಹರಿಹರನಲ್ಲಿ ಹೋದಾಗ, ಶಿವಶರಣರ ಕಥೆ ಅಲ್ಲ ಎಂಬ ಕಾರಣದಿಂದ ಅದನ್ನು ತಿರಸ್ಕರಿಸಿ ಎಡಗಾಲಿಂದ ಒದ್ದು ಕಳಿಸಿದನೆಂದು ರಾಘವಾಂಕ ನೊಂದು ಮುಂದೆ `ಶೈವ ಕೃತಿ ಪಂಚಕ’, ಸಿದ್ದರಾಮಚರಿತೆ, ಸೋಮನಾಥ ಚರಿತೆ, ಶರಭ ಚರಿತ್ರೆ, ವೀರೇಶ ಚರಿತ್ರೆ, ಹರಿಹರ ಮಹತ್ವ’ ಎಂಬ ಐದು ಕಾವ್ಯ ರಚಿಸಿದ ಎಂಬುದು ಒಂದು ಉಲ್ಲೇಖ. ಇಷ್ಟರಮಟ್ಟಿಗೆ ಧರ್ಮದ ಮುಷ್ಟಿಯಲ್ಲಿ ಸಾಹಿತ್ಯ, ಸಿಕ್ಕಿಕೊಂಡಿತು. ಹಾಗೇ ಮುಂದುವರಿದು `ಭಾಗವತ ಸಂಪ್ರದಾಯದಲ್ಲೂ ಇದೆ ಕತೆಯಾಯಿತು ಧಾರ್ಮಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ಅನುಭಾವ ಸಾಹಿತ್ಯ’ ಎಂದು ಈ ಸಾಹಿತ್ಯವನ್ನು ಸ್ಥೂಲವಾಗಿ ಗುರುತಿಸಲಾಯಿತು.
ಭಕ್ತಿ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯ ಬರೆದವರಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲ ಒಂದು ಬಗೆಯ ಆಧ್ಯಾತ್ಮಿಕ ಶ್ರದ್ಧೆ- ವೈಯಕ್ತಿಕ ಸಾಧನೆಯು ಮುಖ್ಯವಾಗಿತ್ತು. ಇಲ್ಲಿ ಕವಿ ಒಬ್ಬ ಸಾಧಕ ಕೂಡ, ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಹಾಗೇ ದಾಸಪರಂಪರೆಯ ಪುರಂದರ ದಾಸರು ಹಾಗು ಕನಕದಾಸರುಗಳನ್ನು ನೆನಪಿಸಿಕೊಳ್ಳಬಹುದು.
ಶತಮಾನದ ಉದ್ದಕ್ಕೂ ಧರ್ಮದ ನಿಯಂತ್ರಣಕ್ಕೆ ಒಳಪಟ್ಟ ಕನ್ನಡ ಸಾಹಿತ್ಯ. ಅದರಿಂದ ಲಾಭ ಪಡೆಯಿತೊ ಅಥವ ನಷ್ಟ ಪಡೆಯಿತೊ ಎನ್ನುವುದು ಒಂದು ದೊಡ್ಡ ಪ್ರಬಂಧದ ವಸ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಓದುವುದು ಕೇವಲ ಪುಣ್ಯ ಸಂಪಾದನೆಗೆ ಎಂಬ ನಂಬಿಕೆಯಿಂದ ವೈಚಾರಿಕತೆಯ ಬೆಳವಣಿಗೆಗೆ ಅವಕಾಶ ಕಡಿಮೆಯೇ ಆಯಿತು. ಅಭಿವ್ಯಕ್ತಿಗೆ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಸುದೈವದಿಂದ ಆಧುನಿಕ ಸಾಹಿತ್ಯ ರಚನೆಯಲ್ಲಿ ಇಂದಿನ ಕವಿಗಳಿಗೆ ಹಿಂದಿನ ಕವಿಗಳಂತೆ ಮತ ಧರ್ಮ ನಿರ್ಬಂಧನೆ ಇಲ್ಲ. ಅಷ್ಟರಮಟ್ಟಿಗೆ ಇಂದಿನ ಸಾಹಿತ್ಯ ಸಾರ್ವತ್ರಿಕವಾಯಿತು ಎನ್ನಬಹುದು.
ಮತ ಧರ್ಮದ ಸ್ಥಾನವನ್ನು ಇಂದು ವಿಜ್ಞಾನ ವೈಚಾರಿಕತೆ ಆಕ್ರಮಿಸಿತು. ಅಲ್ಲದೆ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಗಾಂಧಿ, ಅರವಿಂದರಂಥ ಮಹಾವ್ಯಕ್ತಿಗಳ ವಿಚಾರಧಾರೆಯಿಂದ ಹೊಸ ಮಾನವೀಯ ಧರ್ಮವೊಂದು ರೂಪುಗೊಂಡು ಸೌಂದರ್ಯಪ್ರಿಯತೆ ಜೀವನಪ್ರೀತಿ, ವಿಶ್ವಪ್ರಜ್ಞೆ ಇವುಗಳು. ಕವಿಯ ಧರ್ಮಶ್ರದ್ಧೆಯಾಗುತ್ತಿರುವುದು ಸಾಹಿತ್ಯ ವೈವಿಧ್ಯತೆಗೂ ಮತ್ತು ವಿನೂತನತೆಗೂ ಕಾರಣವಾಗಿರುವುದು ಸಂತೋಷದಾಯಕ ಸಂಗತಿ.