ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ

ಲೇಖನ

ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ

ಮತ್ತು ಚಾರಿತ್ರಿಕ ವಂಚನೆ

ಹಾರೊಹಳ್ಳಿ ರವೀಂದ್ರ

ಮೈಸೂರಿನಲ್ಲಿ ನಡೆಯುವ ದಸರಾದ ಅಂಬಾರಿಯ ಮೇಲೆ ರಾಜಪ್ರಭುತ್ವದ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಜನರಿಗೂ ನಾನು ತಿಳಿಯಬೇಕೆಂದು ಹಾಗೂ ಅವರು ಸಹ ನನ್ನನ್ನು ನೋಡಲಿ ಎಂದು ಕೂತು ಹೋಗುತ್ತಿದ್ದರು. ಆ ಕಾಲಘಟ್ಟಕ್ಕೆ ರಾಜನೇ ಸರ್ವನಾಗಿದ್ದರಿಂದ ರಾಜ ತನ್ನ ಆಳ್ವಿಕೆಯಲ್ಲಿ ಕೂತು ಹೋಗುತ್ತಿದ್ದ. ರಾಜಪ್ರಭುತ್ವದ ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಸರಾ ಅಂಬಾರಿಯ ಮೇಲೆ ಚಾಮುಂಡೇಶ್ವರಿ ವಿಗ್ರಹವನ್ನು ಕೂರಿಸುಕೊಂಡು ಹೋಗುವ ಮೂಲಕ ದಸರಾ ಆಚರಣೆ ಮಾಡಲಾಗುತ್ತಿದೆ. ರಾಜಮನೆತನದವರು ಚಾಮುಂಡೇಶ್ವರಿ ನಮ್ಮ ಆದಿ ದೇವತೆ ಎನ್ನುತ್ತಾರೆ, ವೈದಿಕರು ಮಹಿಷ ಎಂಬ ದುಷ್ಟನನ್ನು ಕೊಂದಿದ್ದು ನಮ್ಮ ಚಾಮುಂಡೇಶ್ವರಿ ಎನ್ನುತ್ತಾರೆ. ಇನ್ನು ಕೆಲವರು ಮಹಿಷಾ ಒಬ್ಬ ರಾಜ ಸಂಚು ಮಾಡಿ ಆತನನ್ನು ಕೊಲ್ಲಲಾಗಿದೆ ಎನ್ನುತ್ತಾರೆ. ಹೀಗೆ ಹಲವು ಕಾರಣಗಳಿಂದ ದಸರಾಗೆ ಪರ್ಯಾಯವಾಗಿ ಮಹಿಷಾ ದಸರಾ ಕೂಡ ಹಲವು ವರ್ಷಗಳಿಂದ ಆಚರಣೆಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಷಾ ದಸರಾ ನಿಷೇಧಿಸಲು ಜನಪ್ರತಿನಿಧಿಗಳು ಸಂಚು ಮಾಡುತ್ತಲೇ ಇದ್ದಾರೆ.

Mahisha Dasara to be restricted to floral tributes this year - The Hindu

ಮೈಸೂರು ಎಂಬ ಹೆಸರು ಬಂದಿರುವುದೇ ಇದು ಮಹಿಷಾ ಮಂಡಲವಾಗಿತ್ತು ಎಂಬ ಕಾರಣಕ್ಕೆ. ಇಲ್ಲೊಬ್ಬ ಆದಿದೊರೆ ಮಹಿಷಾಸುರ ಮಹಿಷಾ ಮಂಡಲವನ್ನು ಆಳ್ವಿಕೆ ಮಾಡಿದ ಪರಂಪರೆಯಿಂದಲೇ ಮೈಸೂರು ಖ್ಯಾತಿಗೊಳಗಾಗಿದೆ. ಆದರೆ ಇದೇ ಮಹಿಷಾಸುರನನ್ನು ಅವನೊಬ್ಬ ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದಳು. ಆಕೆ ಕೊಂದದ್ದು ಜನರಿಗಾಗಿ, ಜನಧರ್ಮಕ್ಕಾಗಿ ಎಂಬಂತೆ ಹೇಳಲಾಗಿದೆ. ಇದರಲ್ಲಿ ಯಾವುದು ಸುಳ್ಳು? ಯಾವುದು ಕಪೋಕಲ್ಪಿತವಾಗಿದೆ? ಎಂಬುದನ್ನು ಅರಿತು ನಿಜವಾದ ಮಹಿಷಾ ಮತ್ತು ಚಾಮುಂಡಿಯನ್ನು ಜನರ ಬಳಿ ಕರೆದೊಯ್ಯಬೇಕಿದೆ.

ಮಹಿಷಾ ಮಂಡಲವನ್ನು ಹಿಂದೆ ಎರಮೈನಾಡು ಎಂದು ಕರೆಯಲಾಗುತ್ತಿತ್ತು. ಎರಮೈನಾಡು ಎಂದರೆ ಎಮ್ಮೆಗಳ ನಾಡು ಎಂದರ್ಥ. ಈ ಭಾಗದಲ್ಲಿ ಇಲ್ಲಿನ ಮೂಲನಿವಾಸಿಗಳು ಎಮ್ಮೆ ಸಾಕಾಣಿಕೆಯಲ್ಲಿ ಮುಂದಿದ್ದರೂ ಜೊತೆಗೆ ಎಮ್ಮೆಯನ್ನೆ ತಮ್ಮ ಕುಲಚಿನ್ಹೆಯನ್ನಾಗಿ ಬಳಸುತ್ತಿದ್ದರು. ಇಂದಿಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಜನಸಮೂಹವು ಎಮ್ಮೆಯ ತಲೆಯ ಆಕಾರದ ಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ. ಆ ಮೂಲಕ ತಮ್ಮ ಮೂಲಪರಂಪರೆಯನ್ನು ಕಾಯ್ದುಕೊಂಡು ಬಂದಿದ್ದಾರೆ.

ಎರಮೈನಾಡು ನಂತರ ಈ ಭೂ ಪ್ರದೇಶ ಮಹಿಷಾ ಮಂಡಲವಾಗಿದೆ. ಬಹುಶಃ ಮಹಿಷಾಸುರನ ಆಳ್ವಿಕೆಯ ಪ್ರಾರಂಭದ ನಡುವೆ ಎರಮೈನಾಡು ಹೋಗಿ ಮಹಿಷಾ ಮಂಡಲ ಎಂದು ಮರುನಾಮಂಕಿತವಾಗಿರಬೇಕು. ಆ ನಂತರ ಮಹಿಷಾ ಮಂಡಲ ಹೆಸರು ಜಾರಿಗೆ ಬಂದಿರಬೇಕು. ಉತ್ತರದಲ್ಲಿ ಕುರು, ಪಾಂಚಾಲ, ಮಗಧ, ಕೋಸಲ, ನಾಗ ಎಂಬ ಜನಪದ ಆಳ್ವಿಕೆಯ ಕುಲಗಳಿದ್ದಂತೆ, ದಕ್ಷಿಣದಲ್ಲಿಯೂ ನಾಗ, ಚೇರ, ವೆಂಗಿ, ಮಹಿಷಾ ಮಂಡಲ ಆಳ್ವಿಕೆಯ ಕುಲಗಳಾಗಿದ್ದವು. ಮಹಿಷಾ ಮಂಡಲವು ನಾಗ ಜನರಿಂದಲೇ ಅನಂತರ ಕರೆಯಲ್ಪಟ್ಟದ್ದು. ಮಹಿಷಾ ಮಂಡಲದಲ್ಲಿ ಮಹಿಷಾಸುರ ಎಮ್ಮೆಯ ತಲೆಯ ಚಿನ್ಹೆಯನ್ನಿಟ್ಟುಕೊಂಡು ಆಳ್ವಿಕೆ ಮಾಡುತ್ತಿದ್ದ ರಾಜ. ಆತನ ಆಳ್ವಿಕೆಯಲ್ಲಿ ಎಲ್ಲರನ್ನೂ ಕಾಯ್ದುಕೊಳ್ಳುತ್ತಿದ್ದ. ಜನರನ್ನು ರಕ್ಷಿಸುವುದರ ಜೊತೆಗೆ ಮೂಲ ಸಂಸ್ಕೃತಿಯ ರಕ್ಷಕನೂ ಕೂಡ ಆಗಿದ್ದ.

erumai (@erumai) | Twitter

ಭಾರತದ ಅಸುರ ಮನೆತನಗಳನ್ನು ಸಂಸ್ಕೃತಿ ಇಲ್ಲದವರು, ಕೀಳು ಜನರು, ಯೋಗ್ಯರಲ್ಲದವರು ಎಂಬಂತೆ ಚರಿತ್ರಾಕಾರರು ಸೃಷ್ಟಿಸಿದ್ದಾರೆ. ಆದರೆ ವಾಸ್ತವವಾಗಿ ಹರಪ್ಪ-ಮಹೆಂಜೋದಾರೋ ಎಂಬ ಬೃಹತ್ ನಾಗರೀಕತೆಯನ್ನು ಕಟ್ಟಿದವರೇ ಅಸುರರು. 1922ರಲ್ಲಿ ಆರ್,ಬ್ಯಾನರ್ಜಿ ಅವರು ಬೌದ್ಧಸ್ಥೂಪಗಳ ಉತ್ಖಲನ ಮಾಡುವಾಗ ಈ ಭವ್ಯನಗರದ ಕುರುಹುಗಳು ಸಿಕ್ಕಿದವು. ಈಜಿಪ್ಟ್ ಮತ್ತು ಮೆಸಪೊಟೋಮಿಯ ನಾಗರೀಕತೆಯ ಸಮವಾಗಿ ಅಂದು ನಮ್ಮ ಹರಪ್ಪ – ಮಹೆಂಜೊದಾರೋ ನಗರಗಳು ಬೆಳೆದಿದ್ದವು. ಅಂದಿನ ಕಾಲಘಟ್ಟದಲ್ಲಿ ಜನರು ತಂತ್ರಜ್ಞಾನ, ವಿಜ್ಞಾನ ಹಾಗೂ ಮುಂತಾದ ವಿಷಯಗಳಲ್ಲಿ ಮುಂದಿದ್ದರೊಂದಿಗೆ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದರು. ಕ್ರಿ.ಪೂ.3000 ವರ್ಷಗಳ ಹಿಂದಿನ ಈ ಭವ್ಯ ನಾಗರೀಕತೆ ಪರಂಪರೆಯನ್ನು ಆರ್ಯರ ಆಗಮನದ ನಂತರ ನಾಶವಾದವು. ಕೆಲವರು ಪ್ರಕೃತಿ ವಿಕೋಪದಿಂದ ನಾಶವಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಮತ್ತೆ ಹಲವರು ಹೊರಗಿನ ಶಕ್ತಿಗಳು ಅಂದರೆ ದಾಳಿಕೋರ ಆರ್ಯರಿಂದ ನಾಶವಾದವು ಎಂದು ಅಭಿಪ್ರಾಯ ಪಡುತ್ತಾರೆ. ಭವ್ಯ ನಾಗರೀಕತೆಯನ್ನು ನಾಶಪಡಿಸಿದ ಆರ್ಯ ಜನಾಂಗವು, ಅನಂತರದಲ್ಲಿ ತಲೆ ಎತ್ತಿದ ಮೂಲಜನರ ಆಳ್ವಿಕೆ ಸಂಸ್ಥಾನಗಳನ್ನು ನಾಶಮಾಡುತ್ತಾ ಬಂದರು. ಅವರ ಅಸಮಾನತೆ ಹಾಗೂ ಮೌಢ್ಯ ಸಿದ್ಧಾಂತವನ್ನು ಯಾರು ಒಪ್ಪಿಕೊಳ್ಳುತ್ತಾರೋ ಅಂತಹ ಸಾಮ್ರಾಜ್ಯವನ್ನು ಬೆಳೆಯಲು ಬಿಟ್ಟು, ಯಾರು ಇವರ ಸಿದ್ಧಾಂತವನ್ನು ಒಪ್ಪುವುದಿಲ್ಲವೋ ಅಂತಹ ಆಳ್ವಿಕೆ ಪರಂಪರೆಯನ್ನು ನಾಶ ಮಾಡಿದ್ದಾರೆ. ಹೀಗೆ ಉತ್ತರದಲ್ಲಿ ತಮ್ಮ ಅಸಮಾನತೆಯನ್ನು ಭಿತ್ತಿ, ನಂತರ ಕಾಳಿರಿಸಿದ್ದು ದಕ್ಷಿಣದ ಮಹಿಷಾ ಮಂಡಲಕ್ಕೆ.

ಮಹಿಷಾ ಮಂಡಲವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಪ್ರದೇಶ. ಕೆಲವರು ಮಹಿಷನನ್ನು ಬುದ್ಧಪೂರ್ವ ಎಂದು ಹೇಳುತ್ತಾರೆ. ಹಲವರು ಅಶೋಕನ ನಂತರ ಎಂದು ಕರೆಯುತ್ತಾರೆ. ಆದರೆ ನನಗೆ ಧಕ್ಕಿರುವ ಪ್ರಕಾರ ಮಹಿಷಾ ಎಂಬ ರಾಜ ಅಶೋಕ ಸಾಮ್ರಾಟನ ಸಮಕಾಲೀನ. ಕ್ರಿ.ಪೂ.3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕ ಬೌದ್ಧ ಸಮ್ಮೇಳನವೊಂದನ್ನು ಆಯೋಜಿಸಿದ್ದರು. ಆ ಸಮ್ಮೇಳನದ ಅಧ್ಯಕ್ಷತೆಯನ್ನು ಮೊಗ್ಗಲಿತಿಸ್ಸ ಎಂಬುವವರು ವಹಿಸಿಕೊಂಡರು. ಅದೇ ಸಂದರ್ಭದಲ್ಲಿ ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ಬನವಾಸಿಗೆ ತೇರಾರಕ್ಕಿತರನ್ನು, ಮಹಿಷಾ ಮಂಡಲ(ಮೈಸೂರು)ಕ್ಕೆ ಹರಿಹಂತ್ ಮಹದೇವಾ ತೇರಾ ಎಂಬುವವರನ್ನು ಕಳುಹಿಸಿಕೊಟ್ಟಿದ್ದರೆಂದು ಅಶೋಕನ ಶಾಸನದಲ್ಲಿಯೇ ದಾಖಲಾಗಿದೆ. ಇದಲ್ಲದೆ ದೀಪವಂಸ ಹಾಗೂ ಮಹಾವಂಸ ಕೃತಿಯಲ್ಲಿಯೂ ಕೂಡ ಮಹಿಷಾ ಮಂಡಲದ ದಾಖಲೆ ಇದೆ. 1910ರಲ್ಲಿ ಜೆ.ಎಫ್ ಪ್ಲೀಟ್ ಎನ್ನುವ ವಿದ್ವಾಂಸರು ಇದರ ಕುರಿತು ಲೇಖನವನ್ನು ಪ್ರಕಟಿಸಿದ್ದರು. ಮಧ್ರಪ್ರದೇಶದ ಸಾಂಚಿ ಸ್ಥೂಪದ ಮೇಲಿರುವ ‘ಮಹಿಸತಿ’, ‘ಮಾಹಿಸ್ಮತಿ’ ಮಹಿಷಾ ಮಂಡಲವನ್ನು ಹೆಸರಿಸುತ್ತವೆ ಎಂಬುದನ್ನು ಕೂಡ ಸಂಶೋಧಕರಾದ ಷ. ಶೆಟ್ಟರ್ ಅಭಿಪ್ರಾಯಿಸುತ್ತಾರೆ.

Overview of the Life and Role of a Buddhist Bhikkhu

ಮಹಿಷಾ ಮಂಡಲವನ್ನು ಆಳ್ವಿಕೆ ಮಾಡಿದ್ದು ತೋಡ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಷಾಸುರ. ಈ ತೋಡ ಜನಾಂಗವೆ ಭಾರತದ ಮೂಲ ಬೌದ್ಧರು. ಆರ್ಯರು ಹಸುವಿನೊಂದಿಗೆ ಮಹಿಷಾ ಪ್ರಾಂತ್ಯವನ್ನು ಪ್ರವೇಶಿಸಿದರು. ಆರ್ಯರು ಹಸುವನ್ನು ಶ್ರೇಷ್ಠ ಎಂದು ಭಾವಿಸಿದರೆ ಮೈಸೂರು ಪ್ರಾಂತ್ಯವು ಎಮ್ಮೆಯನ್ನು ಶ್ರೇಷ್ಠ ಎಂದು ಕರೆಯುತಿದ್ದರು. ಸಂಪತ್ತು ಮತ್ತು ಶ್ರೇಷ್ಠತೆಯನ್ನು ಇವರು ಪ್ರಾಣಿಗಳ ಮೂಲಕವೆ ಅಳತೆ ಮಾಡಲಾಗುತಿತ್ತು. ಎಮ್ಮೆ ಮತ್ತು ಹಸುವಿನ ಕಾರಣಕ್ಕಾಗಿಯೇ ಇಲ್ಲಿ ಆರ್ಯರು ಮತ್ತು ತೋಡ ಜನಾಂಗಕ್ಕು ಯುದ್ಧ ಘಟಿಸಿದೆ. ಈ ಯುದ್ಧದಲ್ಲಿ ಮಹಿಷನನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಿಸಲಾಗುತ್ತಿದೆ.  ಆದರೆ ಯುದ್ಧದ ತರುವಾಯ ತೋಡ ಜನಾಂಗ ಮಹಿಷಾ ಮಂಡಲದಿಂದ ಉದಕ ಮಂಡಲ (ಇಂದಿನ ಊಟಿ)ಕ್ಕೆ ಜೀವ ಭಯ ಮತ್ತು ಅಭದ್ರತೆಯಿಂದ ಪಲಾಯನವಾಯಿತು. ಇಂದಿಗೂ ಕೂಡ ಪಲಾಯನಗೊಂಡ ಆ ಸಮುದಾಯ ಅಲ್ಲಿಯೇ ನೆಲೆಸಿದೆ. ಇಂದಿಗೂ ಕೂಡ ಅವರು ನಾವು ಮಹಿಷನ ವಂಶಸ್ಥರು ಎಂದೆ ಕರೆದುಕೊಳ್ಳುತ್ತಾರೆ. ಹಾಗಾಗಿ ಮಹಿಷಾ ಮಂಡಲ ಬೌದ್ಧರ ಕೇಂದ್ರವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ.

ಈಗಾಗಲೇ ಚಾಮುಂಡೇಶ್ವರಿಯೇ ಮಹಿಷಾಸುರನನ್ನು ಕೊಂದಿದ್ದು ಎಂದು ಜಗದ್ವಿಖ್ಯಾತಗೊಳಿಸಲಾಗಿದೆ. ಮಹಿಷಾ ಮಂಡಲದಲ್ಲಿ ಹಲವು ರೀತಿಯ ಚಾಮುಂಡಿಯರು ಜನಪದರಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಷಾ ಮಂಡಲದಲ್ಲಿ ಮಹಿಳೆಯರು ಯುದ್ಧದಲ್ಲಿ, ಗಿಡಮೂಲಿಕೆ ಔಷಧಿಯಲ್ಲಿ ಹೆಸರುವಾಸಿ ಪಡೆದಿದ್ದರು. ಗಂಡಸರು ಹೊರಗಿನಿಂದ ದುಡಿದು ಬಂದರೆ, ಮಹಿಳೆಯರು ಮನೆಯಲ್ಲಿ ಜಾನುವಾರು, ಮಕ್ಕಳನ್ನು ನೋಡಿಕೊಳ್ಳುತ್ತಿದ್ದವರು. ಹಾಗೆಯೇ ಸಮಯ ಸಂದರ್ಭದಲ್ಲಿ ಯುದ್ಧದಲ್ಲಿ ಪಾಲ್ಗೊಳ್ಳುವುದು, ಔಷದೋಪಚಾರ ಮಾಡುವುದು ಮುಂತಾದವುಗಳಲ್ಲಿಯೂ ಇವರ ಪಾಲ್ಗೊಳ್ಳುವಿಕೆ ಇತ್ತು. ಅಂತವರನ್ನು ಅಮ್ಮಂದಿರು ಎಂದು ಕರೆಯುತ್ತಿದ್ದರು. ಮಹಿಷಾ ಮಂಡಲದಲ್ಲಿ ಐದು ರೀತಿಯ ಅಮ್ಮಂದಿರು ಬರುತ್ತಾರೆ. ಶತ್ರು ಪಡೆಯ ವಿರುದ್ಧ ದಂಡೆತ್ತಿ ಹೋದವಳನ್ನು ದಂಡಿನ ಮಾರಿ, ಕೋಟೆ ಕಾಯುತ್ತಿದ್ದವಳನ್ನು ಕೋಟೆ ಮಾರಮ್ಮ, ಸಿಡುಬು ರೋಗಕ್ಕೆ ಗಿಡಮೂಲಿಕಿ ಔಷಧಿ ಕೊಡುತ್ತಿದ್ದವಳನ್ನು ಸಿಡುಬು ಮಾರಮ್ಮ, ಬಂಡಿ ಹೇರಿ ಯುದ್ಧಕ್ಕೆ ಹೋದವಳನ್ನು ಬಂಡಿಕಾಳಮ್ಮ, ಶತ್ರು ಪಡೆಯಿಂದ ಶೀಲ ರಕ್ಷಿಸಿಕೊಂಡವಳು ಹಾಗೂ ಕೆರೆ ಕಟ್ಟೆ ತುಂಬಿಸಲು ಪ್ರಾಣತ್ಯಾಗ ಮಾಡಿದವಳನ್ನು ಕಟ್ಟೆ ಮಾರಮ್ಮ ಈ ಐವರು ಪ್ರಸಿದ್ಧರು. ಇವರನ್ನು ಇಂದಿಗೂ ಅದರಲ್ಲಿ ಹೆಚ್ಚಾಗಿ  ಗ್ರಾಮೀಣ ಜನರು ಚೌಡಮ್ಮಂದಿರು, ಚಾಮುಂಡಂಮ್ಮಂದಿರು ಎಂದು ಕರೆಯುತ್ತಾರೆ. ಆ ಸಂದರ್ಭದ ಕಾಲಘಟ್ಟದಲ್ಲಿ ಅನ್ಯಾಯದ ವಿರುದ್ಧ ಬಂಡಾಯವೇಳುವ ಹೆಣ್ಣು ಮಕ್ಕಳನ್ನು ಚಾಮುಂಡಿ ಎಂದು ಕರೆಯುತ್ತಿದ್ದ ವಾಡಿಕೆಯು ಇದೆ. ಇದರ ನಡುವೆ ವಲಸೆ ಬಂದ ಚಾಮುಂಡಿಯೊಬ್ಬರು ಇದ್ದಾರೆ. ಅವರಾರು ಎಂದರೆ ನಂಜುಂಡೇಶ್ವರನೊಡನೆ ಪ್ರೇಮಾಂಕುರವಾಗಿ ಆತನನ್ನು ವರಿಸಿಕೊಳ್ಳಲು ಎಣಗಾಡುವ ಚಾಮುಂಡಿ. ಈಕೆಯು ಸಹ ಶೂದ್ರಳಾಗಿದ್ದು ಮಾಂಸ ತಿನ್ನುವ ವರ್ಗದವಳಾಗಿದ್ದಳು. ಈಗಾಗಲೇ ಎರಡು ಹೆಂಡತಿಯರನ್ನು ವಿವಾಹವಾಗಿದ್ದ ನಂಜುಂಡೇಶ್ವರನನ್ನು ಪ್ರೀತಿಸಿ ಆತನೊಡನೆ ಗುಟ್ಟಾಗಿ ಸೇರುವ ಹವ್ಯಾಸ ಬೆಳೆಸಿಕೊಂಡಿದ್ದಳು. ಆಕೆಯನ್ನು ಕೂಡ ಚಾಮುಂಡಿ ಎಂದೆ ಕರೆಯುತ್ತಿದ್ದರು. ಆದರೆ ಈಕೆಗೂ ಮಹಿಷಾಸುರನಿಗೂ ಯಾವುದೇ ಸಂಬಂಧವಿಲ್ಲ. ಇವಳೇ ಮಹಿಷಾಸುರನನ್ನು ಕೊಲ್ಲಲು ಅವತಾರವೆತ್ತಿ ಬಂದವಳು ಎಂದು ವೈದಿಕರಿಂದ ತಿರುಚಲ್ಪಟ್ಟಿದೆ. ಆದರೆ ಇಲ್ಲಿ ಗಮನಿಸಬೇಕಾದದ್ದು ಮಹಿಷನ ಕಾಲಘಟ್ಟವೆ ಬೇರೆ, ಚಾಮುಂಡಿಯ ಕಾಲಘಟ್ಟವೆ ಬೇರೆಯಾಗಿದೆ. ಹೀಗಿರುವಾಗ ಆಕೆ ಹೇಗೆ ಕೊಂದಿರಲು ಸಾಧ್ಯ.

ಮಹಿಷನನ್ನು ಇಂದಿಗೂ ಅಸುರ ಎಂದೇ ಕರೆಯುತ್ತಾರೆ. ಅಸುರ ಎಂದರೆ ವೈದಿಕರ ದೃಷ್ಟಿಯಲ್ಲಿ ದುಷ್ಟ ಎಂದರ್ಥ. ಆದರೆ ಅಸುರರು ಈ ದೇಶವನ್ನು ಪ್ರಜಾಪ್ರಭುತ್ವದಡಿಯಲ್ಲಿ ಹಾಗೂ ಭವ್ಯ ನಾಗರೀಕತೆಗಳನ್ನೆ ಕಟ್ಟಿಕೊಟ್ಟವರು. ಅಂತವರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ. ವೇದಗಳ ಕಾಲದಲ್ಲಿ ಅಸುರರಿಗೆ ಶ್ರೇಷ್ಠತೆಯ ಸ್ಥಾನಮಾನವಿತ್ತು. ಇಂದು ದೇವರುಗಳಿಗೆ ಎಂತಹ ವೈಭವಪೂರಿತ ಸ್ಥಾನಮಾನವಿದೆಯೊ? ಅಂತಹದೇ ಶ್ರೇಷ್ಠತೆಯ ಸ್ಥಾನಮಾನವನ್ನು ವೇದಗಳ ಕಾಲದಲ್ಲಿ ಅಸುರರಿಗೆ ಕಲ್ಪಿಸಲಾಗಿತ್ತು. ಆದರೆ ಅಸುರ ಅನ್ನುವ ಪದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಮರುಹುಟ್ಟು ಪಡೆದುಕೊಳ್ಳುವ ಸಂದರ್ಭದಲ್ಲಿ ಅಸುರ ಪದ ತನ್ನ ಮಾನ್ಯತೆಯನ್ನು ಕಳೆದುಕೊಂಡು ಅಸುರ ಎಂದರೆ ದುಷ್ಟ, ಕೆಟ್ಟವನು ಎಂಬಂತೆ ಆಯಿತು. ಅನಂತರ ಅಸುರ ಪದಕ್ಕೆ ಬದಲಾಗಿ ದೇವರು ಪದ ಶ್ರೇಷ್ಠತೆಯನ್ನು ಗಳಿಸಿಕೊಂಡಿತು. ವೈದಿಕರು ಮುಂದೆ ಅಸುರನ್ನು ಕೊಲ್ಲಲು ಇವರು ಪುರಾಣಗಳ ಮೂಲಕ ಅಸುರರ ಮೇಲೆ ಕೆಟ್ಟಾಭಿಪ್ರಾಯ ಮೂಡಿಸಿಕೊಂಡು ಬಂದ ಮಾದರಿಯೂ ಕೂಡ ಸಹಕಾರಿಯಾಗಿದೆ.

ಮಹಿಷನನ್ನು ಕೊಂದಿದ್ದು ಚಾಮುಂಡೇಶ್ವರಿ ಎನ್ನುವುದು ಒಂದು ಕಡೆಯ ವಾದವಾದರೆ, ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ಆದಿದೇವತೆ ಎಂಬುದು ಮತ್ತೊಂದು ವಾದ. ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ಆದಿದೇವತೆಯಾದದ್ದು ಹೇಗೆ? ಮೈಸೂರಿನ ರಾಜರಿಗೂ ಉಮ್ಮತ್ತೂರಿನ ಅರಸರಿಗೂ ಆಗಾಗ ಯುದ್ಧ ಸಂಭವಿಸುತ್ತಲೇ ಇತ್ತು. ಒಂದು ದಿನ ಮೈಸೂರಿನ ರಾಜರಿಗೂ ಉಮ್ಮತ್ತೂರಿನ ರಾಜನಿಗೂ ಯುದ್ಧ ಪ್ರಾರಂಭವಾದಾಗ, ಮೈಸೂರಿನ ಸೈನ್ಯದ ಪಕ್ಕದಲ್ಲಿ ಮಾಂಸ ಮಾರುವ ಹೆಂಗಸೊಬ್ಬಳು ಯುದ್ಧ ನೋಡಲು ಹೋಗಿ ಮೈಸೂರಿನ ಸೈನ್ಯದೊಡನೆ ಆಕೆಯು ಯುದ್ಧ ಮಾಡಿದಳು. ಆ ಹೆಂಗಸು ಯುದ್ಧಕ್ಕೆ ಪಾಲ್ಗೊಂಡ ಮೇಲೆ ಮೈಸೂರಿನ ಅರಸರು ಯುದ್ಧದಲ್ಲಿ ಜಯಗಳಿಸಿದ್ದರಿಂದ ಚಾಮುಂಡಿ ಎಂದು ಆಕೆಯನ್ನು ಕರೆದಿದ್ದಾರೆ. ಯಾಕೆಂದರೆ ಮೈಸೂರು ಭಾಗದಲ್ಲಿ ಯುದ್ಧಕ್ಕೆ ಹೋಗುವ ಹೆಣ್ಣು ಮಗಳನ್ನು ಚಾಮುಂಡಿ ಎಂದೆ ಕರೆಯುತಿದ್ದರು. ಈ ಕಾರಣಕ್ಕಾಗಿಯೇ ಮೈಸೂರು ಸಂಸ್ಥಾನದ ಪ್ರಮುಖ ದೇವತೆಯಾಗಿ ಚಾಮುಂಡಿ ಕಾಣಿಸಿಕೊಂಡಿದ್ದಾರೆ.

Battle of the Ego: Goddess Durga and Mahishasura | Hindu Human Rights  Worldwide

ಇಲ್ಲಿ ಮುಖ್ಯವಾಗಿ ನಾವು ಕಂಡುಕೊಳ್ಳಬೇಕಿರುವುದು ಚಾಮುಂಡಿ ಮತ್ತು ಮಹಿಷಾ ಇಬ್ಬರೂ ತಳಸಮುದಾಯಗಳಿಗೆ ಸೇರಲ್ಪಟ್ಟವರು. ಮಹಿಷನಿಗಾಗಲಿ ಅಥವಾ ಚಾಮುಂಡಿಯಾಗಲಿ ಇಲ್ಲಿ ಒಬ್ಬರೊಗೊಬ್ಬರಿಗೂ ಯಾವ ಸಂಬಂಧವೂ ಇಲ್ಲ. ಇಲ್ಲಿ ಸಂಬಂಧವನ್ನು ಕಲ್ಪಿಸಲಾಗಿದೆ. ಮಹಿಷಾ ತನ್ನ ಕಾಲಮಿತಿಯಲ್ಲಿ ಆಳ್ವಿಕೆ ಮಾಡಿದರೆ, ಚಾಮುಂಡಿಯು ತನ್ನ ಕಾಲಮಿತಿಯಲ್ಲಿ ಇಬ್ಬರೂ ಸಮಾಜದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇಬ್ಬರನ್ನು ಕಾಲ್ಪನಿಕವಾಗಿ ಮುಖಾಮುಖಿಯಾಗಿಸಿ ಒಬ್ಬರು ಸುರ, ಮತ್ತೊಬ್ಬರು ಅಸುರ ಎಂದು ಬಿಂಬಿಸಲಾಗಿದೆ. ಇಬ್ಬರೂ ಶೂದ್ರರನ್ನು ವಿರುದ್ಧ ಧಿಕ್ಕಿನಲ್ಲಿ ನಿಲ್ಲಿಸಿ, ಅವರಿಬ್ಬರಿಯಲ್ಲಿಯೇ ಸಾಂಸ್ಕೃತಿಕ ಧ್ವಂಧ್ವ ನಿಲುವನ್ನು ತರಲಾಗಿದೆ. ಬೌದ್ಧ ಪರಂಪರೆಯನ್ನು ನಾಶಮಾಡಿ ವೈದಿಕ ಸಂಸ್ಕೃತಿಯನ್ನು ಬೆಳೆಸಲು ಚಾಮುಂಡಿ ಎನ್ನುವ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಂಸ್ಕೃತಿಗೆ ಪ್ರತಿಸಂಸ್ಕೃತಿ ಹುಟ್ಟುಹಾಕಿ ಮೂಲ ಪರಂಪರೆಯನ್ನು ಕಣ್ಮರೆ ಮಾಡಿಸಲಾಗಿದೆ.

ಮೈಸೂರಿನಲ್ಲಿ ಪಿತೃಪಕ್ಷ ಆಚರಣೆಯ ಮೂಲಕ ಜನಪದೀಯ ನೆಲೆಗಳ ಮೂಲಕವೆ ಮಹಿಷನನ್ನು ಕಂಡುಕೊಳ್ಳುವ ಅಗತ್ಯವಿದೆ. ಮಹಾಲಯ ಅಮಾವಾಸ್ಯೆಯ ದಿನ ಈ ಹಬ್ಬ ಜರುಗುತ್ತದೆ. ಮಹಾಲಯ ಅಮಾವಾಸ್ಯೆ ಎಂದರೆ ದೊಡ್ಡಮಟ್ಟದ ಕಗತ್ತಲು ಆವರಿಸಿತು ಎಂದರ್ಥ. ಮಹಿಷ ಮಡಿದ ದಿನವನ್ನು ಕಗ್ಗತ್ತಲ ದಿನ ಎಂದು ಆಚರಿಸಲಾಗುತ್ತದೆ. ಪಿತೃಪಕ್ಷ ಎನ್ನುವುದು ಅಲ್ಲಿಂದಲೇ ಪ್ರಾರಂಭವಾಗಿದೆ ಎಂಬುದನ್ನು ಜನಪದ ಆಚರಣೆಗಳು ಅಂದಾಜಿಸುತ್ತವೆ. ಪಿತೃಪಕ್ಷ ಎಂದರೆ ಸತ್ತ ತಂದೆಗೆ ಸಾವಿನ ನೆನಪಿನಾರ್ಥಕವಾಗಿ ಎಡೆ ಹಿಡುವುದು. ಆ ದಿನ ಮಾಂಸದ ಅಡುಗೆ ಮಾಡಿ ಎಡೆ ಹಿಡುವ ಪದ್ಧತಿ ಇದೆ. ಮಹಿಷನನ್ನೆ ತಂದೆ ಎಂದುಕೊಂಡಿದ್ದ ಮಹಿಷಾ ಮಂಡಲದ ಜನರು ಶೋಖದ ಭಾಗವಾಗಿ ಅದನ್ನು ಮಾಡುತ್ತಾರೆ. ನಮ್ಮ ಆಚರಣೆಗಳಲ್ಲಿಯೇ ನಮ್ಮ ಚರಿತ್ರೆಗಳನ್ನು ಕಂಡುಕೊಳ್ಳಬೇಕಿದೆ. ಮಹಿಷಾ ಮಂಡಲದಲ್ಲಿ ಬೌದ್ಧರ ನಾಶದ ಹಿಂದೆ ಒಂದು ಚಾರಿತ್ರಿಕ ವಂಚನೆಯನ್ನು ಗ್ರಹಿಸಬೇಕಿದೆ.

******************








Leave a Reply

Back To Top