ಮಧು ಮಗಳು

ಕಾವ್ಯಯಾನ

ಮಧು ಮಗಳು

ಡಾ.ನಿರ್ಮಲಾ ಬಟ್ಟಲ

The Indian bride Painting by Charlette Aaron

ಹಸಿರು ಹಂದರದಿ
ಅರಿಶಿನ ಮೆತ್ತಿಕೊಂಡು
ಹಳದಿ ಸೀರೆಯುಟ್ಟು
ಹಸಿರುಬಳೆಗಳ ಸದ್ದು ಮಾಡುತ್ತಾ
ನಾಚಿಕೆಯಿಂದ
ಓಡಾಡುವ ಮಗಳಿಂದು
ತುಸು ಬೇರೆಯೇ ಎನಿಸುತ್ತಿದ್ದಾಳೆ…..!!

ಪತಿಯ ಕಿರುಬೆರಳು ಹಿಡಿದು
ಹಿಂದೆ ಹೆಜ್ಜೆ ಹಾಕವವಳ
ಕಣ್ಣುಗಳಲ್ಲಿ ನನ್ನ ಹುಡುಕಾಟ….!
ನನ್ನ ಕಿರುಬೆರಳು ಬಿಡಿಸಿಕೊಂಡಳೆ
ಜೋಪಾನ ಮಗಳೆ ಎನ್ನುವ
ಮೂಕ ಭಾವ ಅರಿತವಳು
ತುಸು ಬೆರೆಯೇ ಎನಿಸುತ್ತಿದ್ದಾಳೆ….!!

ರೇಷಿಮೆ ಸೀರೆ ಒಡವೆ ಒಡ್ಯಾಣದಿ
ಹೊಳೆವ ಕಂಗಳ ಚೆಲುವಿಗೆ
ದೃಷ್ಟಿ ತಾಗದಿರಲೆಂದು ದೃಷ್ಟಿ
ಬೊಟ್ಟಿಡಬೇಕೆಂದರೆ ಬೆರಳೆಕೊ
ಅವಳ ಕೆನ್ನೆಗೆ ತಾಗುತ್ತಿಲ್ಲ….!
ಮಗಳು ತುಸು ಬೇರೆಯೇ ಎನಿಸುತ್ತಿದ್ದಾಳೆ….!!

ಅಕ್ಷತೆ ಆರಕ್ಷತೆ ಹರಕೆ ಹಾರೈಕೆ
ಸಾವಿರ ಸಾವಿರ
ಹೊಸ ಕನಸುಗಳ ಹೊತ್ತು
ಹೊರಟಿದ್ದಾಳೆ ಹೊಸಬಾಳಗೆ
‘ಮನಸಿಲ್ಲ ಮಗಳೆ ಕಳಿಸಲು
ನಿನ್ನ ‘ಎನ್ನುವ ಮಾತು
ಗಂಟಲೋಳಗೆ ಸಿಕ್ಕಿಕೊಂಡಿದೆ….!
ಭಾರದ ಹೆಜ್ಜೆಯಲಿ ಹೋರಟವಳು
ತುಸು ಬೇರೆಯೇ ಎನಿಸುತ್ತಿದ್ದಾಳೆ…..!!

ಹೃದಯ ಭಾರವಾದರು
ನಗುಮುಖದಿ ಹೋಗಿ ಬಾ
ಮಗಳೆ ಎಂದು ಹಣೆಗೆ
ಮುತ್ತಿಟ್ಟೆ…!
ಅಪ್ಪಾ ಎಂದು ಬಿಗಿದಪ್ಪಿದಳು
ಕಣ್ಣಂಚಿನಲಿ ಉದುರುವ ಹನಿ ಒರೆಸಿ ಹಣೆಗೆ ಮುತ್ತಿಟ್ಟುಳು…!!
ದೀಪ ಹಿಡಿದು ನಿಂತವಳು
ತುಸು ಬೇರೆ ಎನಿಸುತ್ತಿದ್ದಾಳೆ….!!


5 thoughts on “ಮಧು ಮಗಳು

  1. ಡಾ. ನಿರ್ಮಲಾ ಬಟ್ಟಲ್ ಅವರ “ಮದುಮಗಳು ”
    ತುಂಬಾ ಸಂವೇದನಾತ್ಮಕವನ. ಹೆತ್ತು ಹೊತ್ತು ಸಾಕಿ ಸಲುಹಿದ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತಂದೆಗೆ ತುಸು ಬೇರೆಯೇ ಅನಿಸುವ ಸಂದರ್ಭ ಮನೋಜ್ಞ ವಾಗಿದೆ. ಸಹಜವಾಗಿದೆ. ಉತ್ತಮ ರಚನೆ.

    ನರಸಿಂಗರಾವ ಹೇಮನೂರ, ಕಲಬುರಗಿ

Leave a Reply

Back To Top