ಕಾವ್ಯಯಾನ
ಆ ರಕ್ಕಸ ರಾತ್ರಿಗಳು.
ಇತ್ತೀಚೆಗೆ ಛತ್ತೀಸಘಡದ ಬುಡಕಟ್ಟಿನ ಜಶ್ಪುರ್ ಎಂಬಲ್ಲಿ ಸರಕಾರ ನಡೆಸುವ ಕಿವುಡು-ಮೂಕ ವಸತಿಯಲ್ಲಿ ಜರುಗಿದ ಘೋರ ಘಟನೆಯ ನೋವಿಂದ ಈ ಪದ್ಯ.
ಡಾ. ಅರಕಲಗೂಡು ನೀಲಕಂಠ ಮೂರ್ತಿ
.
.
ಹಸಿ ಹಸಿ ಹಸುಳೆಗಳಲ್ಲ
ಪ್ರೌಢ ಹೊಸಿಲು ತುಳಿದ
ತರುಣಿಯರೂ ಅಲ್ಲ
ಎಳೆ ಗಿಡದ ಬೀಜದಲ್ಲಿ
ಗಿಣಿಹಸಿರ ಚಿಗುರು ಬುದ್ಧಿ
ಆಗಷ್ಟೇ ಇಣುಕುತಿದ್ದ
ಹದಿಮೂರು ಹದಿನಾಲ್ಕರ
ಆಸುಪಾಸಿನ ಬಾಲೆಯರು
ಇಬ್ಬರೂ ಹುಟ್ಟಿನಿಂದಲೆ
ಅದೆಂಥ ಶಾಪಗ್ರಸ್ತರೋ ಏನೋ
ಮಾತು ಬರದವರು
ಕಿವಿ ಕಲ್ಲಾದವರು
ಅದೊಂದು ಕಿವುಡು ಮೂಕ ಮಕ್ಕಳ
ಆಶ್ರಯ ತಾಣ
ಅಲ್ಲಿಯ ರಕ್ಷಕ ಸಿಬ್ಬಂದಿ
ನರರುಡುಗೆ ಉಟ್ಟ
ಹುಚ್ಚು ಅಮರಿದ ನಾಯಿ ನರಿ!
ಆ ಎರಡು ಕಪ್ಪು ಕರಾಳ ರಾತ್ರಿ
ಆ ಇಬ್ಬರು ವಸತಿ ರಕ್ಷಕ ರಕ್ಕಸರು
ಒಬ್ಬಳೇ ಒಬ್ಬ ಅಸಹಾಯಕ ರಕ್ಷಕಿ
ಹಾಗೂ ವಸತಿಯ ಉಳಿದೆಲ್ಲ
ಬಾಲಬಾಲೆಯರ ಭಯಗ್ರಸ್ತ
ಕಣ್ಣುಗಳೆದುರಿಗೆ
ನಡೆದುಹೋದ ನರಕದ ನಕಲು!
ಹೆಣ್ಣಾಗಿ ಹುಟ್ಟಿದ್ದೆ ಮೊದಲ ತಪ್ಪು
ದನಿಯೂ ಇಲ್ಲ
ಕೇಳುಕಿವಿ ಕೂಡ ಇಲ್ಲ
ತಪ್ಪಿನ ಮೇಲೆಗರಿ ಕೂತ ತಪ್ಪುಗಳು
ಆ ಅಬಲೆಯರ ಹಣೆಯ ಕಪ್ಪುಮಸಿ
ಅರಿವೆ ಹರಿಯುವ ಬಲವಂತ
ತಾಳಲಾರದೆ
ಇಡೀ ಕಾರಿಡಾರಿನ ಸುತ್ತ
ಓಡಿಯೇ ಓಡಿದರು
ಮಾತು ಬರದವರು
ಕಿವಿ ಕೇಳದವರು
ಕಿರುಚಿ ಓಡಿದರು
ಕೇವಲ ಕಿರುಚಬಲ್ಲವರು
ಅಟ್ಟಿಸಿ ಅಟ್ಟಿಸಿ ಬೆನ್ನಟ್ಟಿದರು
ಕಾಮಪಿಪಾಸಿಗಳು
ಅಮಾಯಕ ಚಿಗುರು ಮೈಗಳ
ಮೃಗಬಾಹುಗಳಲಿ ಭದ್ರ ಹಿಡಿದರು
ಮೇಲೆರಗಿದರು
‘ಜಜ್ಜಿಕೊಂಡ ಮುಖಗಳ’
ಅಮಲೇರಿದ ಹಿಂಸ್ರಗಳು
ಆ ಎರಡೂ ರಾತ್ರಿಗಳೂ
ಆ ಕೇವಲ ಶಬ್ದರಹಿತ ಕಿರುಚು
ಹೊರಗೆ
ನೆಮ್ಮದಿಯಲಿ ಮಲಗಿದ್ದ ನಗರದ
ಯಾವ ಕಿವಿಗೂ ತಟ್ಟಲೇ ಇಲ್ಲ…
ಕವನ ಚೆನ್ನಾಗಿದೆ. ಅಭಿನಂದನೆಗಳು ನೀಲಣ್ಣ