ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-18
ಹರಿವ ನದಿಯೊಂದು ಬಿಸಿಲಿರದೇ ಬತ್ತಿದರೆ ಸಹಜವಲ್ಲ
ನಗುವ ಒಲವು ಕಾರಣವಿರದೇ ಕನಲಿದರೆ ಸಹಜವಲ್ಲ
ನಡುವೆ ಏಳುವ ಮುನಿಸು ತೆಳು ಪರದೆಯಂತಿರಬೇಕು
ಪ್ರೀತಿ ಮಳೆ ಸುರಿದರೂ ಮನ ಕಲ್ಲಾಗಿದ್ದರೆ ಸಹಜವಲ್ಲ
ಯಾವ ಒಳಪೆಟ್ಟು ಆಂತರ್ಯವ ಬಾಧಿಸಿತೋ ಬಲ್ಲವರಾರು
ಅರಳಿದ ಹೂವೊಂದು ಧಗೆಯಿರದೇ ಬಾಡಿದರೆ ಸಹಜವಲ್ಲ
ಕನಸಿನ ಬತ್ತಿ ಹೊಸೆದು ಆಸೆಯ ತೈಲವರೆದು ಗೂಡಲ್ಲಿಟ್ಟ ದೀಪ
ಬೆಳಗುವ ಹಣತೆ ಬಿರುಗಾಳಿ ಮಳೆಯಿರದೆ ಆರಿದರೆ ಸಹಜವಲ್ಲ
ಅರ್ಥವಾಗಿದೆ ಬದುಕು ‘ರೇಖೆ’ಯ ಕಣ್ಣಿಗೆ ಕಂಡಿದ್ದಷ್ಟೇ ಅಲ್ಲವೆಂದು
ನಂಟು ಅಂಟಾಗಿ ಕಾಡದಿದ್ದರೂ ಉಸಿರ ನಿಲ್ಲಿಸಿದರೆ ಸಹಜವಲ್ಲ
ರೇಖಾಭಟ್
****
ಅಲೆಯಾಗಿ ಅಪ್ಪಳಿಸದೇ ಶರಧಿ ಶಾಂತವಾದರೆ ಸಹಜವಲ್ಲ
ದುಃಖು – ದುಮ್ಮಾನಗಳಿಗೆ ಬದುಕು ಹೆದರಿದರೆ ಸಹಜವಲ್ಲ
ಬಿರುಗಾಳಿಗೆ ಎದುರಾದ ಗುಡಿಸಲು ಉದುರುವುದು ಸಹಜ
ಬಾರದ ಭಾಗ್ಯವ ನೆನೆ – ನೆನೆದು ಮರುಗಿದರೆ ಸಹಜವಲ್ಲ
ಮುಖಕ್ಕೆ ಮುಖ ಕೊಡದೇ ಕನಸ ಹುಡುಕುವುದು ಹೇಗೆ.
ಚಂದ್ರಮನ ನಾಡಲ್ಲಿ ಚುಕ್ಕಿಗಳು ಮರೆಯಾದರೆ ಸಹಜವಲ್ಲ
ನದಿಯ ಮೇಲಿನ ದೋಣಿ ಹೆಜ್ಜೆಯ ಗುರುತು ಉಳಿಯದು
ಕಾಣುವ ತೀರವನು ತಲುಪಲಾಗದೆ ಕೊರಗಿದರೆ ಸಹಜವಲ್ಲ.
ಎಷ್ಟೇ ಪೋಣಿಸಿದರೂ ಗಂಟಿರದೆ ಏನೂ ಉಳಿಯುವುದಿಲ್ಲ.
ಮಾಧವ ಮಧುರ ನೆನಪುಗಳು ನೋವಾಗಿ ಕಾಡಿದರೆ ಸಹಜವಲ್ಲ
ಸ್ಮಿತಾಭಟ್