ಗಜಲ್
ಡಾ.ಯ.ಮಾ.ಯಾಕೊಳ್ಳಿ
ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆ
ಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ
ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆ
ಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ
ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವ
ಗಾಳಿಗೆ ತೂರಿವೆ
ತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ
ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆ
ಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ
ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆ
ಯಯಾ ನಿನ್ನ ಲಾಲಿಹಾಡು ನೊಂದ ಎದೆಗೆ ಸಾಂತ್ವನ ನೀಡ ದುದಕ್ಕೆ ವಿಷಾದವಿದೆ