ಮೌನದ ಹಾಡು
ದೇವು ಮಾಕೊಂಡ, ಸಿಂದ್ಗಿ
ಇಳಿಸಂಜೆಯ ಒಬ್ಬಂಟಿತನದಲಿ
ಮೈನೆರೆದು ನಿಂತ ಮುಳ್ಳುಕಂಟಿಗಳ
ನಡುವೆ ಬೆಣ್ಣೆಯುಂಡೆಯಾಗಿದ್ದೇನೆ
ಹೆಪ್ಪುಗಟ್ಟಿವೆ ಕ್ರೀಯೆಗಳು ಬಂಡೆಗಲ್ಲಿನ ಹಾಗೆ
ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ
ನಿಷ್ಕ್ರೀಯಗೊಂಡಿದೆ ಚಲನೆ ಸೀಮೆಗಲ್ಲಿನಷ್ಟು
ಮಧು ಕುಡಿದು ಎದೆಚುಚ್ಚುವ
ರಣಹದ್ದುಗಳದ್ದೇ ಕಾರುಬಾರುವಿಲ್ಲಿ
ಅದಕ್ಕೆಂದೆ ಹೂವುಗಳು ರಾತ್ರಿಯೆದ್ದು
ಹಗಲು ಮಲಗುತ್ತವೆ ಕರಾಳ ಬೆಳಕಿಗಂಜಿ
ಹೆಪ್ಪುಗಟ್ಟಿದ ಬೆಳಕಿಗೆ ನೆರಳುಗಳಾಡಿಸುವ
ಹಗಲು ರಾತ್ರಿಗಳ ಪಂಜೆಗಳು ವಿಭೇದಿಸುವ
ಕಪ್ಪು ನೆಲವೇ ರೂಪರೇಖೆ
ನಮ್ಮೊಳಗಿನ ಮೌನದ ಹಾಡೆ ಸುಖದ ಹೆರಿಗೆ