ಕಾವ್ಯಯಾನ
ನೆನಪುಗಳೆಂದರೆ
ಕಾಂತರಾಜು ಕನಕಪುರ
ನೆನಪುಗಳೆಂದರೆ…
ಕಗ್ಗತ್ತಲೆಯ ಕೋಣೆಯಲಿ
ಹಚ್ಚಿದ ಹಣತೆಯಿಂದ
ಹರಡಿಕೊಂಡ ಬೆಳಕು…!
ನೆನಪುಗಳೆಂದರೆ…
ಮುಂಜಾನೆ ಮನೆಯ ಅಂಗಳದ
ರಂಗೋಲಿಯಲಿ ಸಿಕ್ಕಿಬಿದ್ದ
ರಾತ್ರಿ ಬೆಳಗಿದ ಚುಕ್ಕಿಗಳು…!
ನೆನಪುಗಳೆಂದರೆ…
ಹರಿದ ಮಾಡಿನ ಗುಡಿಸಲಿನ
ನೆಲ ಗೋಡೆಗಳಿಗೆ ತೂರಿಬಿಟ್ಟ
ಬೆಳಕಿನ ಕೋಲು…!
ನೆನಪುಗಳೆಂದರೆ…
ಉರಿವ ಸೂರ್ಯನೆದೆಗೆ ಒದ್ದು ನಿಂತ
ಅಂಗಳದ ಹೊಂಗೆ ಮರವು
ಹಾಸಿದ ನೆರಳ ಹಾಸಿಗೆಯು…!
ನೆನಪುಗಳೆಂದರೆ…
ಬೇಗೆಯಲಿ ಬೆಂದ ಮನದ
ಬಯಲಿಗೆ ಆಗಾಗ್ಗೆ
ಸುರಿವ ಮಳೆಹನಿಗಳು…!
******************