ಪುಸ್ತಕ ಸಂಗಾತಿ
ಕಾಲ ಮತ್ತು ನದಿಯ ಪ್ರವಹಿಸುವಿಕೆಗೆ ಸಾಕ್ಷಿಯಾದ ದಡಗಳ ಕಥನ ಕನ್ನಡಿ-
ಕಾವೇರಿ ತೀರದ ಪಯಣ
ಮಲೆಯಾಳಂ ಮೂಲ: ಒ.ಕೆ.ಜೋಣಿ
ಕನ್ನಡಕ್ಕೆ: ವಿಕ್ರಂ ಕಾಂತಿಕೆರೆ
.
ಕಾಸರಗೋಡಿನ ಬೇರೊಂದು ಅಲ್ಲೆಲ್ಲೋ ಚಿಗುರೊಡೆದು ಅನುವಾದ ಸಾಹಿತ್ಯದ ಹೂಬನದಲ್ಲಿ ನಳನಳಿಸಿ ವಿನೂತನ ಬಗೆಯ ಹೂಬಿಟ್ಟು ಎಲ್ಲರ ಕಣ್ಮನ ಸೆಳೆದು ಅರಳಿ ನಿಂತಾಗ ಊರಿನವರಿಗೊಂದು ಅಭಿಮಾನದ ಕೋಡು. ವಿಕ್ರಂ ಕಾಂತಿಕೆರೆಯವರು ಮೂಲತಃ ಕಾಸರಗೋಡು ಜಿಲ್ಲೆಯ ಕೂಡ್ಲು ರಾಮದಾಸ ನಗರ ವ್ಯಾಪ್ತಿಯ ಕಾಂತಿಕೆರೆಯವರು. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ. ಮಾದ್ಯಮ ಕ್ಷೇತ್ರದಲ್ಲಿ ಮೊದಲ ನೋಟಕ್ಕೆ ಗುರುತಿಸಿಕೊಳ್ಳುವ ಹಂತಕ್ಕೆ ಈ ವಯಸ್ಸಿಗೆ ತಲುಪಿದ್ದು ವೃತ್ತಿ ನಿಷ್ಠೆ ಮತ್ತು ಅವರ ಬರವಣಿಗೆಯಲ್ಲಿನ ಅಚ್ಚುಕಟ್ಟುತನದಿಂದಲೇ ಇರಬೇಕು. ಅವರ ಬಹಳಷ್ಟು ಕ್ರೀಡಾ ಲೇಖನಗಳಲ್ಲಿನ ಪದ ಪೋಣಿಸುವಿಕೆ ಮತ್ತು ವಿಷಯದ ಇತಿ ಮಿತಿ ದಾಟದ ಚೌಕಟ್ಟುನ್ನು, ನುರಿತ ರಂಗಕಲಾವಿದನೊಬ್ಬ ವೇದಿಕೆಯ ದಶದಿಕ್ಕುಗಳಿಗೂ ತನ್ನ ಪಾತ್ರವನ್ನು ಹಬ್ಬಿಸಿ ಆವರಿಸಿಕೊಂಡು ಪ್ರೇಕ್ಷಕರ ನೋಟವನ್ನು ಸೆಳೆದಿಟ್ಟುಕೊಳ್ಳುವ ಕಲಾತ್ಮಕತೆ ಮತ್ತು ತನ್ಮಯತೆಗೆ ಓದುಗರು ಹೋಲಿಸಬಹುದು. ಅದೇ ಅಚ್ಚುಕಟ್ಟುತನ ಕಾವೇರಿ ತೀರದ ಪಯಣದಲ್ಲಿದೆ. ಮೊದಲ ಪುಟಗಳ ಓದೇ ಕೊನೆಯವರೆಗೆ ನಮ್ಮನ್ನು ಸೆಳೆದಿಟ್ಟುಕೊಳ್ಳುವಲ್ಲಿ ಸಫಲತೆ ತೋರಿದೆ.
ಭಾಷಾಂತರವೆಂದಾಗ ಕೇವಲ ಭಾಷೆಯ ಬದಲಾವಣೆ ಎಂಬುದು ಜನ ಸಾಮಾನ್ಯರ ತಿಳುವಳಿಕೆ. ಆದರೆ ಅನುವಾದಕನಿಗೆ ಅದಕ್ಕಿಂತ ದೊಡ್ಡ ಸವಾಲಾಗುವುದು ಮೂಲ ಆಶಯವನ್ನು ಇನ್ನೊಂದು ಭಾಷೆಯಲ್ಲಿ ಅತ್ಯಂತ ಸೊಗಸಾಗಿ ಅಭಿವ್ಯಕ್ತಿಗೊಳಿಸುವುದು. ಅನುವಾದದ ಸಾರ್ಥಕತೆ ಇರುವುದೇ ಇಲ್ಲಿ. ಅನುವಾದಕ್ಕೆ ಎರಡೂ ಭಾಷೆಯ ಜ್ಞಾನವಿದ್ದರೆ ಸಾಕು ಎಂಬ ನಿಲುವಿನಲ್ಲಿ ಬಹಳಷ್ಟು ಯುವ ಲೇಖಕರು ಏಕಾಏಕೀ ಈ ಕೆಲಸಕ್ಕೆ ಇಳಿದು ಮುಗ್ಗರಿಸುತ್ತಾರೆ. ಅನುವಾದ ಸೋತರೆ ಎರಡು ಹೊಡೆತ. ಅನುವಾದಕನ ಸೋಲು ಮೂಲ ಲೇಖಕನಿಗೆ ವಂಚನೆಯಾಗಿಬಿಡುತ್ತದೆ. ಉಳಿದ ಭಾಷೆಗಳಿಗೆ ಹೋಲಿಸಿದರೆ ಒಂದಿಷ್ಟು ಬಡಕಲು ಎನ್ನಬಹುದಾದ ಕನ್ನಡದ ಅನುವಾದ ಸಾಹಿತ್ಯದಲ್ಲಿ ಕಾಂತಿಕೆರೆಯವರು ಯಶಸ್ವಿಯಾಗುವುದಕ್ಕೆ ಎರಡೂ ಭಾಷೆಯ ಮೇಲಿನ ಅವರಿಗಿರುವ ಹಿಡಿತ ಒಂದು ಮೂಲಭೂತ ಅಂಶವಷ್ಟೇ. ಪೂರಕವಾದ ಅಂಶಗಳಲ್ಲಿ ಎದ್ದು ಕಾಣುವ ವಿಚಾರವೆಂದರೆ ಅವರಿಗಿರುವ ಕಾಸರಗೋಡಿನ ನಂಟು ಮತ್ತು ಅಧ್ಯಯನಶೀಲ ಇತಿಹಾಸಕಾರನ ನೋಟ. ಮೂಲ ಕೃತಿಯ ಪ್ರಸ್ತಾಪ ಮುಂಚಿತವಾಗಿ ಓದುಗನಿಗೆ ಮಾಡದೇ ಹೋದರೆ ಇದೊಂದು ಕನ್ನಡದ ಸ್ವತಂತ್ರ ಕೃತಿ ಎಂದು ಅಂದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಒಂದು ಅನುವಾದಕ್ಕೆ ಎಷ್ಟರ ಮಟ್ಟಿಗೆ ಉತ್ಕೃಷ್ಟ, ನಿಖರ ನ್ಯಾಯವನ್ನು ಒದಗಿಸಬಹುದು ಎಂಬುದಕ್ಕೆ ಈ ಕೃತಿ ಮಾದರಿಯಾಗಿ ನಿಲ್ಲುತ್ತದೆ.
ಒಂದು ನದಿಯ ಹುಟ್ಟಿನಿಂದ ಅದರ ಗಮ್ಯದ ಕಡೆಗಿನ ಸುದೀರ್ಘಯಾನದಲ್ಲಿ ಹರಿವಿನ ರಭಸಕ್ಕೆ ಅಪ್ಪಳಿಸಿದ ನೀರ, ದಡ ಹೀರಿ ಬೆಳೆದ ನಾಗರಿಕತೆಯ ಕಥನವನ್ನು ಕಟ್ಟುತ್ತಾ ಹೋಗುವ ಕೃತಿಯು ಪುರಾಣ, ಇತಿಹಾಸ, ಚರಿತ್ರೆ, ವಾಸ್ತವಗಳನ್ನು ಕರಾರುವಾಕ್ಕಾಗಿ ಚಿತ್ರಿಸುತ್ತಾ ಹೋಗುತ್ತದೆ. ಇದ್ದಕ್ಕಿದ್ದಂತೆ ಇತಿಹಾಸದ ಅಧ್ಯಯನದಲ್ಲಿ ಇದ್ದೇವೆ ಎಂದುಕೊಂಡರೆ ಸತಿಗಲ್ಲು ಮಾಸ್ತಿಕಲ್ಲುಗಳ ಕಥನಗಳು ಮನಸ್ಸನ್ನು ಆರ್ದ್ರ ಗೊಳಿಸುತ್ತವೆ. ಮತ್ತೆ ಪುರಾಣಗಳ ಕಡೆ ಹೋಗಿ ಮರಳಿ ನಾಗರಿಕತೆಯ ನಡೆಯ ಹೆಗ್ಗುರುತುಗಳಲ್ಲಿ ಯುದ್ದ, ಅಧಿಕಾರ, ಮತಾಂತರದ ದಾಖಲೆಗಳು ನಮ್ಮನ್ನೇ ಅಣಕಿಸುತ್ತವೆ. ಅದೇ ತೀರಗಳಲ್ಲಿ ದಿನ ನಿತ್ಯ ನಡೆದಾಡುವ, ಕಾವೇರಿಯ ನೀರಿಗಾಗಿ ಕಾವೇರಿದ ಮಾತುಗಳನ್ನು ಆಡುವವರಿಗಾಗಲೀ ಈ ಕಥನ ಅಪರಿಚಿತ. ಸುಮಾರು 765 ಕಿ.ಮಿ ಗಳಷ್ಟು ಉದ್ದವಿರುವ ಜೀವನದಿ ಕಾವೇರಿ ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಉಗಮವಾಗಿ ಮೈಸೂರು ಜಿಲ್ಲೆಯ ಮೂಲಕ ಸಾಗುತ್ತಾ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ಪಯಣದ ಹಾದಿಯ ಇಕ್ಕೆಲಗಳ ರೋಚಕ ಕಥನವನ್ನು ಅರಿತುಕೊಳ್ಳುವ ಅಗತ್ಯವಿದೆ. ಕೃತಿಕಾರ ಇತಿಹಾಸ, ಚರಿತ್ರೆಯ ತಿರುಚುವಿಕೆಯ ಬಗ್ಗೆ ನಾವು ತಿಳಿದಿರುವ ಸತ್ಯಗಳಿಂದ ಬಹಳಷ್ಟು ವ್ಯತಿರಿಕ್ತವಾದ ಮಾಹಿತಿಗಳನ್ನು ನೀಡುತ್ತಾ ಹೋಗುವಾಗ ಒಂದಿಷ್ಟು ಕಸಿವಿಸಿಯಾಗುವುದು ಹೌದು. ಆದರೆ, ಅನುವಾದಕ ಅಲ್ಲಿ ಅಸಹಾಯಕ ಎಂಬುದನ್ನು ಓದುಗ ಗಮನದಲ್ಲಿ ಇರಿಸಿಕೊಳ್ಳಲೇ ಬೇಕು.
ಕೃತಿಯ ವಿಷಯ ವಸ್ತುವಿನದ್ದೇ ಒಂದು ವೈಶಿಷ್ಟ್ಯತೆ. ಅನುವಾದಕನಿಗೆ ತನ್ನ ಮೇಲಿದ್ದ ಆತ್ಮ ವಿಶ್ವಾಸವೇ ಇಂಥಹಾ ಒಂದು ಭಿನ್ನ ಕೃತಿಯ ಅನುವಾದ ಕೆಲಸಕ್ಕೆ ಧೈರ್ಯ ಕೊಟ್ಟಿರಬೇಕು. ನದಿಯ ಹುಟ್ಟುಕಟ್ಟಿನ ಕಥೆಗಳಿಗೆ ಭಾರತವಂತೂ ಬಹಳ ಪ್ರಸಿದ್ಧ. ಅದೂ ಪೌರಾಣಿಕ ಕಥೆಗಳು ಹೆಜ್ಜೆಗೊಂದು, ಪುರಾಣಕ್ಕೊಂದು, ಆಧುನಿಕ ಸಾಹಿತ್ಯದಲ್ಲಿ ಅರೆಬೆಂದ ಅವರೆಕಾಳಿನ ಹಾಗೆ ಇನ್ನೊಂದು. ಪ್ರತೀ ನದಿಯ ದಡಗಳಲ್ಲಿ ಅರಳಿದ ನಾಗರಿಕತೆಯ ಕಥನಗಳಿಗೂ ಅಷ್ಟೇ ಸುಧೀರ್ಘ ಇತಿಹಾಸ. ಕಾವೇರಿ, ತುಂಗಭದ್ರ, ಕೃಷ್ಣಾ, ಶರಾವತಿ ,ಕಾಳಿ ನದೀ ಪರಿಸರದ ಕಥೆಗಳ ಜೊತೆ ಇತಿಹಾಸ, ಪುರಾಣ, ವೈಜ್ಞಾನಿಕ ಅಧ್ಯಯನದ ವಸ್ತು ವಿಷಯಗಳನ್ನು ಇರಿಸಿಕೊಂಡ ಹಲವು ಕೃತಿಗಳು ಬಿಡುಗಡೆಯನ್ನು ಕಂಡಿವೆ. ಆದರೆ ಈ ಕೃತಿಯಲ್ಲಿ ಭಿನ್ನ ಹರಿವುಗಳಿಲ್ಲದೆ ಕೃತಿಯ ವಿಷಯ, ವಸ್ತು ಹಗುರವಾಗಿ ಬಿಡುವುದಿಲ್ಲ. ವಿವರಗಳು ಒಂದೇ ಓಘದಲ್ಲಿ ಗಮ್ಯದ ಕಡೆಗೆ ಮುಂದುವರಿಯುತ್ತವೆ. ನದಿಯ ಉಗಮದಿಂದ ಕೊಡಗಿನ ಅರಸು ಮನೆತನದ ವಿಸ್ಮಯಗಳು, ದುರಂತ ಕಥನಗಳು, ಅರಮನೆ ಮಹಲುಗಳು ಜೋಡಿಕೊಂಡ ಆಳ್ವಿಕೆಯ ಏಳುಬೀಳುಗಳು. ಅದರ ಜೊತೆಗೆ ಧರ್ಮಗಳ ನಂಬಿಕೆಗಳ ಮೇಲಾಟಗಳು. ಓದುಗನಿಗೆ ಗಹನವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಯಶಸ್ವಿಯಾಗುವಲ್ಲಿ ಕೃತಿಯ ಸೃಜನಶೀಲ ಶೈಲಿಯೇ ಮುಖ್ಯ ಕಾರಣವಾಗಿ ಕಾಣುತ್ತದೆ. ಯಶಸ್ವೀ ಅನುವಾದದ ಬಹುಮುಖ್ಯ ಅರ್ಹತೆಯಾದ ಒಂದು ಭಾಷೆಯ ಪಠ್ಯವನ್ನು ಮತ್ತೊಂದು ಭಾಷೆಯ ಸ್ವತಂತ್ರ ಪಠ್ಯವಾಗಿಸುವ ಸೃಜನಶೀಲ ಕುಶಲತೆ ಇಲ್ಲಿ ಓದುವಿಕೆಗೆ ಸರಾಗ ಹರಿವನ್ನು ನೀಡುತ್ತದೆ. ಕವಿರಾಜಮಾರ್ಗದ ಕಾಲದಿಂದಲೂ ಗುರುತಿಸಲ್ಪಟ್ಟ ಮೌಲ್ಯಯುತ ಅನುವಾದ ಸಾಹಿತ್ಯ ಪ್ರಕಾರದ ಹಗುರತೆಯ ಬಗ್ಗೆ ಇತ್ತೀಚಿಗಿನ ದಿನಗಳಲ್ಲಿ ಇದ್ದ ಅಸಹನೆಯನ್ನು, ಕನ್ನಡದಲ್ಲಿ ಬರುವ ಅನುವಾದಗಳು ಕರ್ನಾಟಕದ ಎಲ್ಲಾ ಪ್ರದೇಶದ ಓದುಗರನ್ನು ಸಮಾನವಾಗಿ ತಲುಪುತ್ತಿಲ್ಲ ಎಂಬ ಕೊರತೆಯನ್ನು ಇಲ್ಲವಾಗಿಸಿ ವಿಕ್ರಂ ಅವರು ಸೀಮಾತೀತವಾಗಿ ಅನುವಾದಿಸಿದ ಈ ಕೃತಿ ಸಂಗ್ರಹಯೋಗ್ಯ ಪುಸ್ತಕಗಳ ಕಪಾಟಿನೊಳಗೆ ಅರ್ಹತೆಯೊಂದಿಗೆ ಅಧಿಕಾರಯುತವಾಗಿ ಸೇರಿಕೊಳ್ಳುತ್ತದೆ.
**************
ರಾಜಶ್ರೀ ಟಿ ರೈ ಪೆರ್ಲ