ಗಝಲ್
ಎ.ಹೇಮಗಂಗಾ
ಲೋಕದಾ ನಿಯಮಗಳ ಗಾಳಿಗೆ ತೂರಿ ಬಂದುಬಿಡು ನೀ ಮೆಲ್ಲನೆ
ಹೂವೊಳು ಗಂಧ ಬೆರೆತಂತೆ ನನ್ನೊಳು ಸೇರಿಬಿಡು ನೀ ಮೆಲ್ಲನೆ
ಟೀಕೆಗಳ ಕತ್ತಿ ಇರಿತಕೆ ನಲುಗಿ ಇದ್ದೂ ಇಲ್ಲದಂತಾಗಿದೆ ಜೀವ
ನಲುಮೆ ತೋರಿ ಎದೆಗಪ್ಪಿ ನೋವ ಮರೆಸಿಬಿಡು ನೀ ಮೆಲ್ಲನೆ
ನಿನ್ನದೇ ಕನವರಿಕೆಯಲಿ ಮುಳುಗಿ ನಿದಿರೆ ದೂರವಾಗಿದೆ ನನಗೆ
ದುಃಖದಿ ಕಂಗಳು ಬಾತುಹೋಗಿರೆ ಸವರಿಬಿಡು ನೀ ಮೆಲ್ಲನೆ
ಅದೆಷ್ಟು ಹೇಳಲಾಗದ ಮಾತುಗಳಿದ್ದವು ನನ್ನ ನಿನ್ನ ನಡುವೆ !
ನಗುವನ್ನೇ ಮರೆತ ಅಧರಗಳ ಒಮ್ಮೆ ಚುಂಬಿಸಿಬಿಡು ನೀ ಮೆಲ್ಲನೆ
ಗುಡಿಸಲಾದರೂ ಸರಿ, ನಿನ್ನೊಡನೆ ಬಾಳುವಾಸೆ ಇದೆ ಈಗಲೂ
ಕಣ್ರೆಪ್ಪೆಯೊಳು ಅವಿತಿಹ ಕನಸ ನನಸು ಮಾಡಿಬಿಡು ನೀ ಮೆಲ್ಲನೆ
ನಂಜು ಮುಳ್ಳಾದ ಪ್ರೀತಿಯೇಕೋ ನನ್ನ ಬಲಿಪಡೆಯುತಿದೆ ಹೀಗೆ?
ದೇಹ ನಿರ್ಜೀವಗೊಳ್ಳುವ ಮುನ್ನ ನನ್ನವನಾಗಿಬಿಡು ನೀ ಮೆಲ್ಲನೆ
ದೀಕ್ಷೆ ತೊಟ್ಟಿಹೆ ನಾ ನೀನಿಲ್ಲಿಗೆ ಬರದೆ ಪ್ರಾಣ ತೊರೆಯೆನೆಂದು
‘ಹೇಮ’ಳ ಅಂತಿಮ ವಿದಾಯಕೆ ಮಡಿಲ ನೀಡಿಬಿಡು ನೀ ಮೆಲ್ಲನೆ
ಇವರು ‘ಸಿರಿಗನ್ನಡ ವೇದಿಕೆ’ ಮೈಸೂರಿನ ಜಿಲ್ಲಾಧ್ಯಕ್ಷೆ……ರಾಜ್ಯ ಸಮಿತಿಯ ಉಪಾಧ್ಯಕ್ಷೆ…………..’ ಹೇಮಗಂಗಾ ಕಾವ್ಯ ಬಳಗ’ದ ಅಧ್ಯಕ್ಷೆ ಯಾಗಿ ನೂರಾರು ಕವಿಗಳನ್ನು ಬೆಳಕಿಗೆ ತಂದಿದ್ದಾರೆ . ಅನೇಕ ಸಂಘ , ಸಂಸ್ಥೆಗಳ ಪೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ…
ಉತ್ತಮ ವಾಗ್ಮಿಯೂ, ಕವಯಿತ್ರಿಯೂ ಆಗಿರುವ ಹೇಮಗಂಗಾ ಇಲ್ಲಿಯವರೆಗೆ ಎರಡು ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ…..’ಮುಕ್ತ ವಚನಾಮೃತ’ …..ನೂರು ವಚನಗಳ ಸಂಗ್ರಹ ಮತ್ತು ‘ ಹೃದಯಗಾನ’ ….ಭಾವಗೀತೆಗಳ ಸಂಕಲನ . ಕನ್ನಡ ಗಜ಼ಲ್ ಗಳ ಸಂಕಲನವೊಂದು ಪ್ರಕಟಣೆಯ ಹಂತದಲ್ಲಿದೆ