ರೇಖಾ ಭಟ್ ಅವರ ಕವಿತೆಗಳು
ತೆರೆದ ಬಾಗಿಲು
ರೆಕ್ಕೆ ಬಲಿತ ಬಿಳಿ ಪಾರಿವಾಳ
ಒಳಗೆ ಮುದುಡಿ ಕುಳಿತಿದೆ
ಹಾರಿ ಹೋಗಲಿ
ಕಿಟಕಿ ತೆರೆದೆ
ಹೊರಗೆ ಮುಳ್ಳಿನ ಬೇಲಿ
ಹಿಂದಿರುಗಿತು
ಆ ಬದಿಯ ಕಿಟಕಿ ತೆರೆದೆ
ಅಲ್ಲಿ ಉರಿಯುತಿದೆ ಬೆಂಕಿ
ಹಿಂದಿನಿಂದಾದರೂ ಹಾರಿ ಹೋಗಲಿ
ಹಿಂಬಾಗಿಲ ಅರ್ಧ ತೆರೆದೆ
ಅಯ್ಯೋ.. ಅಲ್ಲಿ ನೂಕುನುಗ್ಗಲು
ನಿತ್ಯ ನೋಡುತ್ತ ಕುಳಿತೆ
ಪಾರಿವಾಳದ ರೆಕ್ಕೆ
ಬಲಿಯುತ್ತಿದೆ
ಒಳಗೋಡೆಗಳ ಒತ್ತುತ್ತಿದೆ
ಮುಂಬಾಗಿಲು
ತೆಗೆಯಲಿ ಹೇಗೆ
ಅಗುಳಿ ಬಿಗುವಾಗಿದೆ
ಹಾರಲೇ ಬೇಕು
ಪಾರಿವಾಳ ತಾನೇ
ಹಾರಿ ಹೋದ ಮೇಲೆ
ಬಾಗಿಲಿಗೇಕೆ ಅಗುಳಿ
ಮುರಿದೆ
ತೆರೆಯಿತು ಬಾಗಿಲು
ಬಿಡಿಸಿತು ರೆಕ್ಕೆ
ಬಳಸಿತು ಬೆಳಕು
ಬಾಗಿಲಿಗೆ ಅಗುಳಿಯಿರದ
ಒಳಮನೆ ಖಾಲಿಯಾಗದು
ಎಲ್ಲಿಂದಲೊ ಹಾರಿಬಂದ
ಮರಿಹಕ್ಕಿ ಬೆಚ್ಚಗೆ
ನಿದ್ರಿಸುತಿದೆ ಕಾಣಿ
ಮತ್ತೆ ಅದೇ ದಾರಿ
ಅಲ್ಲಿ ಬೆಳಕಿನ ಬಿಲ್ಲೆಗಳು
ಉದುರುತ್ತಿದ್ದವು
ಕತ್ತಲ ಹಾದಿಯಲ್ಲಿ
ಬೀಳೇಳುತ್ತಾ ಓಡಿ ಓಡಿ
ಮೊಗೆಮೊಗೆದು
ಹಿಂದಿರುಗುವಾಗ ಎಲ್ಲರ
ಚೀಲ ಜೇಬುಗಳು ಹೊಳೆದವು
ದಾರಿ ಪೂರ್ತಿ ಬೆಳಕಾಯಿತು
ಎಲ್ಲರ ನಡಿಗೆ ಸಲೀಸು
ಚೀಲ ಮುಚ್ಚಿಟ್ಟರು
ಮನೆಯ ಪೆಟ್ಟಿಗೆಯೊಳಗೆ
ನಾನು ಹೆಕ್ಕಿದ ಬಿಲ್ಲೆ
ನನಗೆ ಮಾತ್ರ ಸ್ವಂತ
ಬೀಗ ಬಿತ್ತು ಬೆಳಕಿಗೆ
ಅವರೀಗ ಮತ್ತೆ ಕತ್ತಲು
ಹಾದಿಯಲ್ಲಿ ಸಾಗುತ್ತಿದ್ದಾರೆ
ಮತ್ತಷ್ಟು ಬೆಳಕಿನ ಬಿಲ್ಲೆಗಳ ಆಯಲೆಂದು
——————
ಕಾಯುವುದು
ಕಿಟಕಿಯ ಗಾಜಿನ ಮೇಲೆ
ಕುಳಿತ ಹಲ್ಲಿ
ಒಳಗಿದೆಯೊ ಹೊರಗಿದೆಯೊ
ಸ್ಪಷ್ಟವಾಗುತ್ತಿಲ್ಲ
ಅದು ಹೇಳುವ ಶಕುನ
ಯಾವುದಿರಬಹುದು
ಲೊಚಗೊಟ್ಟುವಿಕೆಯ ಅರ್ಥ
ಸುಲಭದಲ್ಲಿ ನಿಲುಕದು
ಸಮಯ ಸರಿಯುತ್ತಿದ್ದರೂ
ಸತ್ತಂತೆ ಸ್ತಬ್ಧವಾಗುವ
ಅದರ ತಪದ ಮರ್ಮ
ಯಾವ ಬೇಟೆಗಿರಬಹುದು
ಕುತೂಹಲದ ದೃಷ್ಟಿ
ಅಲ್ಲಿ ಊರಿಯೇ ಇದೆ
ಪೂರ್ಣಗಮನ
ಹೊತ್ತ ಇನ್ನೊಂದು
ಅದರತ್ತ ಹರಿದು ಬಂದು
ಹತ್ತಿರವಾಯಿತು ಜೋಡಿ
ಬೇಟೆಯಿಲ್ಲ ಹೂಟವಿಲ್ಲ
ಚೆಂದದ ಕೂಟ
ಹಲ್ಲಿಯ ಬೇಟೆಗಾರಿಕೆಗೆ ಕಾದು
ಕೂತ ಕುತೂಹಲದ ಕಂಗಳಿಗೆ
ಕಾಯುವುದು ಬೇಟೆಗೊಂದೇ ಅಲ್ಲ
ಪ್ರೀತಿಗೂ ಹೌದು
ಅರ್ಥವಾದ ಹೊತ್ತು
ನನ್ನವನ ಜೊತೆ
ಸಂಜೆ ಮಲ್ಲಿಗೆಯ ಕಂಪು
ಒಳಗೆ ಅಡಿಯಿಟ್ಟಿತ್ತು
************************