ಎಂ. ಆರ್. ಅನಸೂಯರವರ ಕವಿತೆಗಳು
ದೇವರ ಲೀಲೆ
ಹಸುಗೂಸಿನ ಮುಗುಳ್ನಗೆ
ಕಂಡಾಗ
ಪರವಶನಾಗಬಹುದು ದೇವರು
ಹಸಿದ ಕಂದಮ್ಮನ ಹೊಟ್ಟೆ
ತಣಿದಾಗ
ತೃಪ್ತಿ ಪಡಬಹುದು ದೇವ
ಹಾಲಿನಂಥ ಮಲ್ಲಿಗೆ ಮೊಗ್ಗು
ಬಿರಿದಾಗ
ಮನ ಸೋಲಬಹುದು ದೇವರು
ಹಸಿರುಟ್ಟ ಮಲೆಗಳ ತಂಬೆಲರು
ಸುಳಿದಾಡಿದಾಗ
ನಿದ್ರಿಸಬಹುದು ದೇವರು
ಜಲಧಾರೆಗಳು ಬಿಳಿ ಮುತ್ತುಗಳ
ಚೆಲ್ಲಾಡುವಾಗ
ಹೆಕ್ಕಲು ಬರಬಹುದು ದೇವರು
ಹೊನಲಲ್ಲಿ ಸ್ಪಟಿಕದಂಥ ಜಲ
ಹರಿವಾಗ
ನೀರಾಟವಾಡಬಹುದು ದೇವರು
ಕಾರ್ಮೋಡಗಳಲಿ ಮಿಂಚು
ಕೋರೈಸಿದಾಗ
ಕಣ್ಬಿಡಬಹುದು ದೇವರು
ವೈಶಾಖದ ಮಳೆಗೆ ಇಳೆ ಘಮ
ಹರಡಿದಾಗ
ಇಷ್ಟ ಪಡಬಹುದು ದೇವರು
ಎಲ್ಲೆಡೆ ಅರಿವಿನ ಬೆಳಕು
ಬೀರಿದಾಗ
ಖುಷಿ ಪಡಬಹುದು ದೇವರು
ಮರೀಚಿಕೆ
ಓಡುತ್ತಿದ್ದೇನೆ
ಚಾಚಿ ಕೈ ಮುಂದೆ
ಪ್ರೀತಿಯ ಗಗನ ಕುಸುಮದ ಹಿಂದೆ
ಮರೀಚಿಕೆಯ ಬೆನ್ನತ್ತಿದ
ಹಂಬಲಕೆ ದಣಿವೇ ಇಲ್ಲ !
ಕಿತ್ತಷ್ಟು ಚಿಗುರುವ ಕಳೆ
ಪ್ರೀತಿಯ ಸಮೃದ್ಧ ಬೆಳೆಯ
ನಿರೀಕ್ಷೆಯಲ್ಲಿ ರೈತನ ಖುಷಿಯಿತ್ತು
ಬೆವರಿನ ಬೆಲೆಯ ಕುಸಿತವೇ
ನಿಲುಕದ ಪ್ರೀತಿಯಲ್ಲಿ ಕಾಣುತ್ತಿತ್ತು
ಒಲವಿನ ಒರತೆ ಉಕ್ಕುವ ಹಂಬಲದ
ಭರವಸೆಯಲಿ ಬದುಕಿನ ಗಮನವಿತ್ತು
ಆಳಕ್ಕಿಳಿದು ಮರೆಯಾದ ಅಂತರ್ಜಲ
ಬಿಸಿಲ್ಗುದುರೆಯಾದ ಪ್ರೀತಿಯ ಬಲ
ಮಾಗಿಯ ಎಳೆ ಬಿಸಿಲ ಹಿತವಿದೆ
ಮಧುರ ಪ್ರೇಮದ ಪ್ರತೀಕ್ಷೆಯಲಿ
ಶಿಶಿರ ಋತುವಿನ ಬೋಳು ಮರ
ಮರೀಚಿಕೆಯಾದ ಸಾಪೇಕ್ಷ ಸಾನುರಾಗ
ಬೀಳ್ಕೊಡಬೇಕಿತ್ತು
ಬೀಳ್ಕೊಡ ಬೇಕಿತ್ತು
ಅಂತಿಮವಾಗಿ
ಘನತೆಯಿಂದ ಕಂಡು
ಗೌರವದ ಬಾಷ್ಪಾಂಜಲಿಯೊಡನೆ
ವಿಧಿ ವಶವಾದವರನ್ನು
ಬೀಳ್ಕೊಡಬೇಕಿತ್ತು
ನೆನೆದು ನಮ್ಮೊಡನಿದ್ದ ಕ್ಷಣಗಳ
ಅಗಲಿದವರ ಆಪ್ತರೊಡನೆ
ಕೋರುತ್ತಾ ಚಿರಶಾಂತಿಯ
ಚಿರನಿದ್ರಗೆ ಜಾರಿದವರನ್ನು
ಸಾವಿನ ಭಯದ ಕೂಪಕೆ
ದೂಕಿರುವ ಅಗೋಚರ
ಸೂತ್ರಧಾರಿ ವೈರಾಣುವಿನ ಮಳೆ
ಸೂತ್ರದ ಬೊಂಬೆಯಾದ ಜಗತ್ತು!
ಪರಮಾಣುವಿಗೂ ಮೀರಿದ ತಾಕತ್ತು
ಕೈಕಟ್ಟಿದ
ಬಾಯಿ ಮುಚ್ಚಿದ
ಕ್ಷೀಣ ಉಸಿರಾಟದ
ಸೂತಕದ ಮನೆಯಾದ ಊರಿನಲ್ಲಿ
ಸಾವು ಸಹಾ ಅನಾಥವೇ !
ಬೀಳ್ಕೊಡಬೆಕಿತ್ತು
ಗುಣಗಾನದ ಚರಮಗೀತೆಯೊಂದಿಗೆ
ಶೂನ್ಯ ನೀರವ ಮೌನದಿ
ಹೊಸಿಲೊಳಗೇ ನಿಂದು
ಅಸ್ಪೃಶ್ಯರನ್ನಾಗಿಸಿ
ಕಳಿಸಿದೆವು ಸುಡುಗಾಡಿಗೆ
ಕೊರೊನಾ ಕಪಿಮುಷ್ಟಿಯಲಿ
ಕಾಲನ ಕರೆಗೆ ಓಗೊಟ್ಟು
ಪರದೇಶಿ ಸಾವಿಗೆ ಬಲಿಗೀಡಾದವರನ್ನು.
ಪ್ರೀತಿಯೂ – ದ್ವೇಷವೂ
ಪ್ರೀತಿ ಬದುಕಿನ ತವನಿಧಿ
ದ್ವೇಷ ಬದುಕಿನ ಕ್ಷಯ ವ್ಯಾಧಿ
ಪ್ರೀತಿಯಿಂದ ಬದುಕು ವಿಕಸಿತ
ಹಿಗ್ಗುವ ಬದುಕಿನ ಆಡಂಬೊಲ
ದ್ವೇಷದಿಂದ ಬದುಕು ಸಂಕುಚಿತ
ಸಹನೀಯವಾಗದ ಬದುಕು ಸೀಮಿತ
ಪ್ರೀತಿಯ ಆಚ್ಛಾದನದಿ ಬದುಕಿನ ಹೂರಣ
ಸುಲಭ ಸಾಧ್ಯವಾಯ್ತು ಬದುಕಿನ ಸಂಕೀರ್ಣ
ದ್ವೇಷದ ಬಾಳಲಿ ವ್ಯರ್ಥ ಕಾಲಹರಣ
ನಮ್ಮದಾಗದ ನಮ್ಮ ಬದುಕು ಅಪೂರ್ಣ
ಪ್ರೀತಿ ಸವಿ ಜಿನುಗುವ ಜೇನು ಗೂಡು
ಬದುಕು ಝೇಂಕರಿಸಲಿ ಪ್ರೀತಿಯ ಹಾಡು
ದ್ವೇಷ ಧಗೆಯಾವರಿಸಿದ ಇಟ್ಟಿಗೆ ಗೂಡು
ನಾವಿಲ್ಲದ ನಮ್ಮದೇ ಬದುಕಿನ ಮಾಡು
ಪ್ರೀತಿ ಬದುಕಿಗೆ ಸೊಗವೀವ ಇಂದ್ರಚಾಪ
ಭಿನ್ನತೆಯ ಬದುಕಲಿರಲಿ ಪ್ರೀತಿಯ ಲೇಪ
ದ್ವೇಷ ಬದುಕಿಗೆ ಆರದ ಕಿಚ್ಚಿನ ಬೇಗುದಿ
ನಾವೇ ಅಟ್ಟಿದ ನಮ್ಮ ಬದುಕಿನ ನೆಮ್ಮದಿ
ಪ್ರೀತಿ ಹೃದಯಗಳ ಬೆಸೆವ ಸೇತುವೆ
ಹೂವೆತ್ತಿದಂತಾಗುವ ಕಷ್ಟಗಳ ಗೊಡವೆ
ದ್ವೇಷ ಮನದ ಬಿರುಕಗಲಿಸುವ ಕಂದಕ
ಬಿದ್ದ ಮನಸಾಗುವುದು ಕೂಪ ಮಂಡೂಕ
ಪ್ರೀತಿ ಬದುಕಿನ ಚೇತನ
ದ್ವೇಷ ಬದುಕಿನ ನಿಪತನ
ಅವನು ಪಿಸುಗುಟ್ಟಿದ
ಅಲ್ಲೊಬ್ಬ ಹೇಳಿದ
ಅವರ ಹಿರಿಯರು
ಎದೆಯಲ್ಲಿ ಅಕ್ಷರ ಬಿತ್ತಿದವರು
ಇಲ್ಲೊಬ್ಬ ಘೋಷಿಸಿದ
ಅವರ ಪೂರ್ವಜರು
ಊರಿಗೆ ಹೆಸರು ತಂದವರು
ಮತ್ತೊಬ್ಬ ಕೂಗಿದ
ಅವರ ಹಿಂದಿನ ತಲೆಮಾರು
ಊರನ್ನಾಳಿದ ಪಾಳೇಗಾರರು
ಮಗದೊಬ್ಬ ನುಡಿದ
ಅವರ ಘನ ವಂಶಜರು
ಊರಿಗೆ ವಣಿಕ ಶ್ರೇಷ್ಟರು
ಅವನು ಪಿಸುಗುಟ್ಟಿದ
ಅವರ ತಾತ ಮುತ್ತಾತಂದಿರು
ಊರಾಚೆಯೆ ಬಾಳಿದವರು
ನೀವು ಮುಟ್ಟಬಾರದವರು
ಊರವರ ಮಲ ಎತ್ತಿದವರು
ಹರಿಯ ದರ್ಶನ ಸಿಗದ ಹರಿಜನರು
***************
ಸೊಗಸಾಗಿವೆ