ಗಜಲ್ ಜುಗಲ್ ಬಂದಿ-10
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-10
ಸ್ಮಿತಾ ಭಟ್
ಈಗೀಗ ನೀನು ಇಷ್ಟವಾಗುತ್ತಿಲ್ಲ ಹೇಗೆ ಹೇಳಲಿ/
ಒಳಗುದಿಯ ಸಹಿಸಲಾಗುತ್ತಿಲ್ಲ ಹೇಗೆ ಹೇಳಲಿ/
ಅದಲು ಬದಲು ಮಾಡಿಕೊಂಡ ಕನಸು ಹಾಗೇ ಇದೆ
ಕಣ್ಣೀಗ ಬೆಳಕಿನ ಮಾತನ್ನೂ ನಂಬುತ್ತಿಲ್ಲ ಹೇಗೆ ಹೇಳಲಿ/
ಕೊಡುವ ಭರವಸೆಗಳು ಮಾತ್ರ ಜೀವ ಉಳಿಸಬಲ್ಲವು
ಹುಸಿ ನೆನಪುಗಳ ಅಳಿಸಲಾಗುತ್ತಿಲ್ಲ ಹೇಗೆ ಹೇಳಲಿ/
ಒಂಟಿಯಾದಾಗಲೇ ತೆರೆದುಕೊಳ್ಳುವ ಹೋರಾಟದ ಹಾದಿ
ಬಿಂಬ ಕಾಣದ ಕನ್ನಡಿ ನೋಡಲಾಗುತ್ತಿಲ್ಲ ಹೇಗೆ ಹೇಳಲಿ/
ಚೂರು ಹಿತವಾಗಿ ಬಾ ಕಡಲೇ ಎದೆ ತೀರವ ತೋಯಿಸಲು
“ಸ್ಮಿತ”ವಿರದ ನೂರು ಕನಸಿನಲಿ ಹಿತವಿಲ್ಲ ಹೇಗೆ ಹೇಳಲಿ/
ರೇಖಾ ಭಟ್
ತೂಕವಿರದ ಮಾತುಗಳ ಒಪ್ಪಲಾಗುತ್ತಿಲ್ಲ ಹೇಗೆ ಹೇಳಲಿ
ಮೂಕವಾದ ಭಾವಗಳ ಅಪ್ಪಲಾಗುತ್ತಿಲ್ಲ ಹೇಗೆ ಹೇಳಲಿ
ಸಂಚಲನೆಯಿರದ ನಂಟು ಅದ್ಯಾವ ಚೆಲುವ ತಂದೀತು
ಅಲೆಗಳಿರದ ಕಡಲನು ಮೆಚ್ಚಲಾಗುತ್ತಿಲ್ಲ ಹೇಗೆ ಹೇಳಲಿ
ಬಿರಿದ ನೆಲದ ಮೇಲೆ ಪಾದ ಊರಲು ಧೈರ್ಯವೆಲ್ಲಿ ಈಗ
ಅಲೆವ ಮೋಡದ ಮಳೆಯ ನೆಚ್ಚಲಾಗುತ್ತಿಲ್ಲ ಹೇಗೆ ಹೇಳಲಿ
ಮಾಯಾ ಗಾಳಿ ಸೋಕಿ ಹೋದಂತೆ ತಾಕಬಾರದಿತ್ತು ನೀನು
ಹುಸಿನಗೆಯಲಿ ನೋವ ಮುಚ್ಚಲಾಗುತ್ತಿಲ್ಲ ಹೇಗೆ ಹೇಳಲಿ
“ರೇಖೆ” ಸರಳವಾಗಿಯೇ ಇರಲು ನೀನು ಸಹಕರಿಸಬೇಕಿತ್ತು
ಮನದೊಳಗಿನ ಗಂಟುಗಳ ಬಿಚ್ಚಲಾಗುತ್ತಿಲ್ಲ ಹೇಗೆ ಹೇಳಲಿ
******