ನಮ್ಮ ಕವಿ

ಬಿದಲೋಟಿ ರಂಗನಾಥ್

ಕವಿ -ವಿಮರ್ಶಕ ಬಿದಲೋಟಿ ರಂಗನಾಥ್ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯವರು.ತಂದೆ ಮರಿರಂಗಯ್ಯ ತಾಯಿ ಸಿದ್ದಗಂಗಮ್ಮ ಅವರ ಮೊದಲನೇ ಮಗನಾಗಿ ೧೫-೭-೧೯೮೦ ರಂದು ಸ್ವಗ್ರಾಮದಲ್ಲಿ ಜನಿಸಿದ ಅವರಿಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕು ಕಡಿದಾಗುತ್ತಲೇ ಹೋಯಿತು.ಅವರ ಕಿತ್ತು ತಿನ್ನುವ ಬಡತನ, ಸೋರುವ ಸೂರು ,ಜಾತಿಗೆ ನಲುಗಿದ ಮನಸು,ಅಮ್ಮಳನ್ನು ಆವರಿಸಿದ ಅಸ್ತಮ ಬಿ ರಂ ಅವರನ್ನು ಇನ್ನಿಲ್ಲದಂತೆ ನಲುಗುವಂತೆ ಮಾಡಿ ,ಕೆಂಡ ಹಾಸಿದ ಹಾದಿಯ ಮೇಲೆ ನಡೆಯುವಂತೆ ಮಾಡಿತ್ತು. ಬೆಳಗಿ ಜಾವಕ್ಕೆ ಎದ್ದು ಕಸಮುಸರೆ ಮಾಡಿ ದನದ ಕೊಠಕಿಗೆ ಸೊಪ್ಪು ತಂದಾಕಿ ಇರುವ ಸೊಪ್ಪೊ ಸೆದೆಯೋ ಕಾಳು ಕಡ್ಡಿಯೋ ತಿಂದು ,ಸುಮಾರು ಎರಡು ಮೈಲಿ ಇರುವ ಹೊಳವನಹಳ್ಳಿಗೆ ನಡೆದು ಹೋಗಿ ಶಿಕ್ಷಣ ಪಡೆವ ಅನಿವಾರ್ಯತೆ ಇತ್ತು.ಅಂತಹ ದಿನಗಳನ್ನು ಶಿಕ್ಷಣ ಪಡೆದರು. ಯಾವುದಕ್ಕೂ ಎದೆಗುಂದದೆ ನಡೆದರೂ ಕೂಡ.ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅಪ್ಪನಿಗೆ ಮಗನನ್ನು ಓದಿಸಿ ಸಮಾಜಕ್ಕೆ ಒಬ್ಬ ಚಿಕಿತ್ಸಕನನ್ನಾಗಿ ಮಾಡಬೇಕೆಂಬ ಹಂಬಲೂ ಹೆಚ್ಚಿತ್ತು. ಜೊತೆಗೆ ಕವಿಯ ಛಲವೂ ಸೇರಿ ಒಂದು ಸ್ಥಾನಕ್ಕೆ ಬಂದು ನಿಂತರು.
.ಬಹುಶಃ ಇವರು ನಲುಗಿದ ಬದುಕು ಕತ್ತಲೆಯ ಕಡಿದಾದ ದಾರಿಯೇ ಇವರು ಕವಿತೆ ಬರೆಯಲು ಪ್ರೇರೆಪಿಸಿರಬೇಕು.ಅವರೊಗೆ ಅಧಮ್ಯ ಕವಿಯೊಬ್ಬ ಜನ್ಮತಾಳಿ, ಯುವ ತಲೆಮಾರಿನ ಸೃಜನಶೀಲ ಕವಿಯೆಂದೇ ಗುರುತಿಸಿಕೊಳ್ಳಲು ಅವರ ಕಾವ್ಯ ಶೈಲಿ ಕಾರಣವಾಗಿರಬಹುದು.ಅವರು ಕಟ್ಟುವ ಕವಿತೆಗಳಲ್ಲಿ ಪ್ರತಿಮೆ, ರೂಪಕ ಶಶಕ್ತವಾಗಿ ಕವಿತೆಯನ್ನು ಆವರಿಸಿರುತ್ತವೆ .ಅವರ ಕವಿತೆಗಳ ಪ್ರವೇಶ ಕಠಿಣವಾದರು ಓದುಗನನ್ನು ಆವರಿಸುವಲ್ಲಿ ಸೋತಿಲ್ಲ ಎಂಬುದು ವಿಶೇಷ.
ಅವರು ಇದುವರಿಗೆ “ಮಣ್ಣಿಗೆ ಬಿದ್ದ ಹೂಗಳು ” ಬದುಕು ಸೂಜಿ ಮತ್ತು ನೂಲು ” ಎಂಬ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.ತಾಲ್ಲೋಕು ಕನ್ನಡ ರಾಜ್ಯೋತ್ಸವ,ಸಂಕ್ರಮಣ ಪುರಸ್ಕಾರ,೨೦೧೫ ರಲ್ಲಿ ತುಮಕೂರು ಜಿಲ್ಲಾ ಕವಿಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ನಾಡಿ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂವಾದ ,ಹೊಸತು,ಓ ಮನಸ್ಸೆ ,ಹಾಯ್ ಬೆಂಗಳೂರು ,ಕರ್ಮವೀರ,ಸಂಯುಕ್ತ ಕರ್ನಾಟ ಅಂತರ್ಜಾಲ ಪತ್ರಿಕೆಗಳಾದ,ಅವಧಿ ,ಸಂಗಾತಿ,ಪಂಜು ,ಪಂಜು ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.

ಶ್ರೀಯುತರು ಮಧುಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತ,ಇಬ್ಬರು ಮಕ್ಕಳು ಮಡದಿಯೊಂದಿಗೆ ಮಧುಗಿರಿಯಲ್ಲಿ ವಾಸವಾಗಿದ್ದಾರೆ.

ಇವರ ಕೆಲ ಕವಿತೆಗಳು ನಿಮ್ಮ ಓದಿಗಾಗಿ

ನನ್ನೊಳಗಿನ ಬೆಳಕು

Image result for village woman working in raagi field

ದೀಪದ ಬೆಳಕಲ್ಲಿ
ನೆಂದ ಸೌದೆಗಳನ್ನು ಒಲೆಗೆ ತುರುಕಿ
ಹೊಗೆಯಲ್ಲಿ ಕೆಂಪಾದ ಕಣ್ಣುಗಳ ಉಜ್ಜಿಕೊಳ್ಳುತ
ಅವ್ವ ಸುಡುತ್ತಿದ್ದ ರಾಗಿ ರೊಟ್ಟಿ
ನನ್ನೊಳಗಿನ ಬೆಳಕು

ಗರಿ ತೂತುಗಳಲ್ಲಿ ತೊಟ ತೊಟ ತೊಟ್ಟಿಕ್ಕುವ
ಮಳೆ ಹನಿಗಳಿಗೆ ತಪ್ಪಿಸಿಕೊಳ್ಳುತ್ತ
ಗೂಡರಿಸಿ ಕೂತು ಒಲೆಯ ಬಾಯಿ ಕೈಯೊಡ್ಡಿ ಬಿಸಿಯಾಗುತ್ತಿದ್ದ ನೆನಪು.

ಹೊಲದಲಿ ಕುಪ್ಪೆಮಾಡಿದ ರಾಗಿಕಡ್ಡಿಗಳಲಿ
ಅಪ್ಪನಿಟ್ಟ ಜೀವ
ಮಂಕರಿಯಲಿ ಹೊತ್ತ ಗೊಬ್ಬರಕೆ
ಮೊಳೆತ ಬದುಕಿನ ಪೈರು
ಕಣದಲಿ ಅರಳಿದ ಜೀವಂತ ಬದುಕು
ಜೇಡಕಟ್ಟಿದ ಬಲೆಯ ಸ್ಪೂರ್ತಿಯಲಿ
ಅವ್ವಳ ಎಚ್ಚರದ ನಡಿಗೆ..

ಅಪ್ಪನುಡಿದ ಹಗ್ಗ ಮಿಣಿಗಳೇ
ಕಲಿತ ಎರಡಕ್ಷರಕೆ ದಾರಿ
ಅಮ್ಮನ ಗೂರಲಲ್ಲೇ ಕರಗಿದ ರಾತ್ರಿಗಳು
ಇಂಕಿಲ್ಲದ ಲೇಖನಿಯ ಹಿಡಿದು
ಹಾಳೆ ಮೇಲೆ ಬೀಳದ ಅಕ್ಷರಗಳು
ಬಡತನದ ಬಡಬಾಗ್ನಿಯು ಬಾಯಾರಿ
ಮರಗಟ್ಟಿದ ಜೋಡಿ ಮುರುಕು ಬಟ್ಟೆಗಳು

ಬಣ್ಣವಿಲ್ಲದ ಬದುಕಲ್ಲಿ
ಒಂಟಿನಿಂತ ಕವೆಗೆ
ಜೋಳಿಗೆ ನೇತಾಕುವ ಕೈಗಳು
ಎರಗಿದ ತೂಕವ ಹೆಗಲ ಮೇಲೆ ಹೊತ್ತೇ ನಡೆದಳು
ನನ್ನೊಳಗಿನ ತೂಕದ ನೋವಿಗೆ ಮರುಗಿದಳು

ಬೆವರಲ್ಲೇ ಬೆಂದು
ಜೋಪಡಿಗೆ ನೇತಾಕಿದ ಲಾಟೀನು ಬೆಳಕಲ್ಲಿ
ನನ್ನವ್ವಳ ನಾಡಿ ಮಿಡಿತ
ಅಪ್ಪನ ಕನಸುಗಳಿಗೆ ಬಣ್ಣದ ಲೇಪನ

ಗವಾಕ್ಷಿಯ ಬೆಳಕಲ್ಲೇ
ಕೋಣೆಯ ಕಣ್ಣುಗಳು ಬೆತ್ತಲಾಗಿ
ಹಸಿವಿನ ಮೊಗದ ಕನ್ನಡಿ ಬಯಲಾಗಿದ್ದು
ನೋವಿನ ನೆತ್ತರು ಬಿಸಿಯಾಗಿದ್ದು

ಸೀಳುಕ್ಕೆಯಲಿ ನೆಂದು
ಗಿಡಗೆಂಟೆಗಳ ನಡುವೆ ಉಸಿರಾಡಿ
ಜೋಪಡಿ ಕಿಂಡಿಗಳ ಬೆಳಕಿನ ಜೊತೆ ಆಡಿ
ಬಯಲ ಬದುಕಲಿ ಬರಿದಾಗಿ
ನೆಲದ ನಿಟ್ಟುಸಿರಿಗೆ ದನಿಯಾದವಳು

ಕಗ್ಗತ್ತಲ ರಾತ್ರಿಯ ನಡಿಗೆಗೆ ಲೆಕ್ಕವಿಲ್ಲ
ಗದ್ದೆಬಯಲಗುಂಟ ಹರಿವ ನೋಟ
ಪೆಡೆಗೆ ಹರಿವ ನೀರಿನ ಶಬ್ಧ ಸಂಗೀತ
ಅಪ್ಪನ ನಿತ್ಯದ ಕರ್ಣಫಲಾಮೃತ.

ಸಾಲು ಸಾಲಿನಲು ನಡೆದು
ಹೊತಾರೆ ಬೈಗು ನಡು ಮಧ್ಯಾಹ್ನ
ಕನಸುಗಳನು ಹೂ ಕಟ್ಟುವಂತೆ ಕಟ್ಟುತ್ತಲೇ
ಅಂಗೈಯೊಳಗೆ ನಕ್ಷತ್ರ ಪುಂಜ ಕಂಡ ಅಪ್ಪನು
ನಡೆವ ದಾರಿಯುದ್ದಕ್ಕೂ ಅವ್ವಳ ಹೆಗಲು

ಮಾಗಿಯು ಬಾಗಿ ಹುಲುಸು ಸಾಗಿ
ಅವ್ವ ನಿಂತ ನಿಲುವಿನಲೇ ನಿಂತು
ರೋಣು ಹೊಡೆವಾಗಿನ ಚೈತನ್ಯ ಚಿಲುಮೆಯಲಿ
ವರ್ಷದ ಸಂತಸವ ಕಣದಲಿ ಗುಡ್ಡೆ ಮಾಡಿ
ಚೀಲ ತುಂಬಿ
ಉಗಾದಿಗೆ
ಅವ್ವಳ ಹೊಸ ಸೀರೆಯ ನೆರಿಗೆಗಳಲ್ಲಿ
ಕನಸುಗಳು ಆಡಿ
ಅಪ್ಪನ ಮನದಂಗಳದಲ್ಲಿ ಶುಕ್ರ ಗ್ರಹ
ಮಣ್ಣ ಒಸಲಿಗೆ ಅರಿಶಿನ ಕುಂಕುಮ
ಅಂಕು ಡೊಂಕಿನ ಸಗಣಿ ಕದರಿನ ಹಟ್ಟಿಯ ಮೇಲೆ
ಅವ್ವ ಕಟ್ಟಿ ಹಾಕಿದ
ನಗುವ ಪುಡಿ ರಂಗೋಲಿಯ ಗೆರೆಗಳು

ಉರಿವ ಒಲೆಯಲಿ
ಹಸಿವಿನ ಸಂಕಟವ ಸುಟ್ಟು
ಉರಿಯುತ್ತಿದ್ದಳು ಅವ್ವ
ಒಳಗೂ ಹೊಲಮಾಳದೊಳಗು
ಅವ್ವಳಿಗೆ ಬದುಕೆಂದರೆ
ಬೆವರಿ ಬಾಯಾರಿದ ಕಡಲ ಕಿನಾರಿಯ ನೆಲ
ತುಂತುರು ಹನಿಯೊಡನೆ ಮಿಲನಗೊಂಡು
ತ್ಯಾವಿಸಿ ಮೊಳಕೆ ಇಣುಕಲು ಬಿರಿವ ತಾವು
ಬಿರಿದ ನೆಲದ ಬಿಕ್ಕಳಿಕೆ.

ಇಟ್ಟ ದಾರಿಯ ಮೇಲಿನ ಹೆಜ್ಜೆಯ ಗುರುತು
ತೆವಳುತ ಶಿಖರ ಸೇರುವ ಬಯಕೆ
ಗುಡಿಸಲಲಿ ತೂಗುಹಾಕಿದ ತಂತಿಕೊಂಕಿಗೆ ಸಿಕ್ಕಿಸಿದ
ವಿದ್ಯುತ್ ಬಿಲ್ಲಿನ ಹಸಿದ ಹೊಟ್ಟೆಯಲಿ ಬಿಚ್ಚಿಕೊಂಡ ಬದುಕಿನ ಸೀಳು ಹಾದಿ
ಬೆಣಚಿ ಕಲ್ಲನ್ನು ಒಂದಕ್ಕೊಂದು ತಾಕಿಸಿ
ಪೆಕರನಂತೆ ಕಣ್ಣಗಲಿಸುವ
ಕದರು ನೆಲಕ್ಕೆ ಕೈ ಊರಿದ ಕಣ್ಣ ಕನಸು
ಗಂಟಿನ ಬಟ್ಟೆ ಬಿಚ್ಚಿ
ಒಂದೊಂದಾಗಿ ನುಸುಳುವ ಕನಸುಗಳನು
ಕೊಡವಿ ಕುಶಲೋಪರಿ ವಿಚಾರಿಸಿ
ಮತ್ತೆ ಬಂಧಿಸಿ
ಮೌನದ ದಾರಿಯಲಿ ನಿಂತ ಕವಿತೆಯೆಂದರೆ
ಅದು ನನ್ನವ್ವ.!


ಎದೆಯೊಳಗಿನ ಚಿತ್ರ

Running Vehicles on Road

ನೀನು ನನ್ನ ಎದೆಯನು ಆವರಿಸಿದ ದಿನದಿಂದಲು
ನೆಲದಲಿ ಹುದುಗಿದ ಚೂಪು ಕಲ್ಲು- ಮುಳ್ಳುಗಳನು ತುಳಿಯದೆ ಹೆಜ್ಜೆವೂರಿದೆ

ದಿನದ ಬೆಳಗು ಕಣ್ಣು ತೆರೆದು
ಎದೆಯಿಂದ ಹೊರ ತೆಗೆದು
ಮುದ್ದಾಡಿ ಮುತ್ತಿಟ್ಟು
ಮೂಗು ಮುಖ ಕಣ್ಣು ಸುಳಿ ಸುದ್ದಗಳು ತೀಡಿ
ಮತ್ತೆ ಎದೆಯೊಳಗೇ ಅವಿತಿಟ್ಟು
ಧ್ಯಾನಿಸುವ ಖುಷಿಯಲಿ
ನನ್ನಾತ್ಮದ ಬೆಳಕಿನ ಚಲನೆ

ಕಣ್ಣಬೆಳಕಿನ ಹಾದಿಯುದ್ದಕ್ಕೂ
ಶಿಲ್ಪವಾಗೆ ಉಳಿದ ನೀನು
ಮಾಸದ ನೆರಳ ಚಿತ್ರ

ಅದೊಂದು
ಧೂಳು ಧೂಳು ಸಂಜೆ
ಸುತ್ತುತಲಿದ್ದೆ ಆ ನೆರಳನು ಬಳಸಿ
ಒಳಗೆ ಸಣ್ಣ ನೋವು
ನೀರು ಗುಟುಕಿಸಿದೆ
ಹೋಗಲಿಲ್ಲ ನೋವು
ಎದೆಯೊಳಗಿನ ನಿನ್ನ ಚಿತ್ರ
ಹೊರ ತೆಗೆದು ಮುಟ್ಟಿ ನೋಡಿದೆ
ಯಾರೋ ಅದರ ಎದೆಗೂಡಿಗೆ
ಗುಂಡು ತಾಕಿಸಿದ್ದರು
ಅಲ್ಲಿದ್ದಷ್ಟೂ ನನಗೂ ನೋವೆ

ಧ್ಯಾನಿಸಿದೆ..

ಎದೆಗೂಡಿನ ಕಣಿವೆ ಮುಚ್ಚಿತು
ನೀನು ಚಿಟ್ಟೆಯಾಗಿ
ಹೊಡೆದವನ ಗುಂಡಿಗೆಯ ಮೇಲೆ ಕೂತು ಜೀಕಿದೆ

ನಾನು ನಡೆದೆ…
ಹೃದಯ ಭಾರವೆನಿಸಲಿಲ್ಲ
ನನ್ನ ನೆರಳ ಮೇಲೆ
ನಡೆದಷ್ಟೂ ಹಾದಿ ತೆರೆದುಕೊಳ್ಳುತ್ತಲೇ ಇತ್ತು.


Leave a Reply

Back To Top