ಕಾವ್ಯಯಾನ

brown wooden swing surrounded with trees

ಗಝಲ್

Stone Artwork

ಸುಜಾತಾ ಲಕ್ಮನೆ

ಮುಚ್ಚು ಮರೆಯಿಲ್ಲದೆ ಎದೆಕದವ ತೆರೆಯೋಣ
ಅಚ್ಚು ಮೆಚ್ಚಿನಲಿ ಒಲವ ಬಂಡಿಯ ತಳ್ಳೋಣ

ಅರ್ಥವಾಗದ ಮಾತು ಅದೆಷ್ಟು ಆಡಿದರೇನು
ಅಕ್ಕಪಕ್ಕದಲಿ ಕೂತು ಒಳಧ್ವನಿಯ ಕೇಳೋಣ

ಬಾಳ ದಾರಿಯಲೆಲ್ಲ ಹೂವಿರಲಿ, ಮುಳ್ಳೇಯಿರಲಿ
ನೋವು ನಲಿವಿನ ಮಧ್ಯೆ ಮನ ಬಿಚ್ಚಿ ನಗೋಣ

ತೆರೆಮರೆಯಲಿ ಕುಣಿವ ಮುಖವಾಡ ಕಂಡೆಯಾ
ಒಳ ಹೊರಗುಗಳನೂ ವಂಚಿಸದೇ ಬಾಳೋಣ

ನಮ್ಮ ಭರಪೂರ ಕನಸುಗಳಿಗೆ ಕಡಿವಾಣವಿರಲಿ
ಸೋಲು ಗೆಲುವುಗಳಲಿ ಕೈ ಹಿಡಿದು ಸಾಗೋಣ

ಎನ್ನ ಕಣ್ಣಾಳದಲಿ ನೀ ಒಮ್ಮೆ ಧುಮುಕಬಾರದೇ
ಪರಿಪರಿಯ ಸುಖಕೆ ಮೈ ಮರೆತು ಸೋಲೋಣ

ಸಾಗಿ ತೇಲುವ ಮುಗಿಲು ಮಡುಗಟ್ಟಿ ನಿಂತೀತೆ
ಮೋಡಾಮೋಡಿಯಲಿ ದಿನ ನೂಕಿ ಬಿಡೋಣ

ಎಳೆದ ರಂಗೋಲಿ ಕೆಳಗೆ ಪವಾಡವೇ ನಡೆಯಲಿ
ಏರಿಳಿತದ ಬದುಕಲ್ಲಿ ಕೂಡಿ ನಾವು ಹಾಡೋಣ

ಅಂತರಾಳದ ಅಳಲಿಗೆಲ್ಲ ದನಿಯಾಗೋಣ ಬಾರೆ
“ಸುಜೂ” ನಾವು ಮುದ್ದಾಡಿ ಮೋಹದುಯ್ಯಾಲೆ ಜೀಕೋಣ


ಕಿರುಪರಿಚಯ:

ಸುಜಾತಾ ಲಕ್ಮನೆ, ಸ್ವಂತ ಊರು ಸಾಗರ. ವಾಸ ಬೆಂಗಳೂರು. ನನ್ನ ಹಲ-ಕೆಲವು ಕವನಗಳು ತುಷಾರ, ಕಸ್ತೂರಿ, ಮಯೂರ, ಕರ್ಮವೀರ , ಮಾಣಿಕ್ಯ, ಸಂಪದ ಸಾಲು, ಪಂಜು ಮುಂತಾದ ಮಾಸ/ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶೇಷಾಂಕಗಳಲ್ಲೂ ಪ್ರಕಟವಾಗಿವೆ. ಹಲವು ಪತ್ರಿಕೆಗಳಲ್ಲಿ ಗಜಲ್ ಗಳೂ ಪ್ರಕಟವಾಗಿವೆ.
ಹವ್ಯಾಸಿ ಕವಯಿತ್ರಿ. ಹಲವು ಕವನಗಳು ತೊಂಬತ್ತರ ದಶಕದಲ್ಲಿ ತುಷಾರದಲ್ಲಿ ಹಿರಿಯರ ಆಯ್ಕೆ ಕವನಗಳಾಗಿ ಸಹ ಪ್ರಕಟವಾಗಿವೆ.

Leave a Reply

Back To Top