ಶೃಂಗಾರ ಸತ್ಯ !

ಕಾವ್ಯಯಾನ

ಶೃಂಗಾರ ಸತ್ಯ !

ಅಶ್ಫಾಕ್ ಪೀರಜಾದೆ.

ವಿರಹದ ಕುಲುಮೆಯಲಿ ಬೆಂದ ಪತಂಗ
ದೀಪದ ಬೆಳಕಬೆಂಕಿಗೆ ಆಹುತಿಯಾದಾಗ
ನಿಜದೊಲುಮೆ ಅರ್ಥವಾಗುವುದೆಲ್ಲ !

ಶರೀರ ಶೃಂಗಾರಗೊಳ್ಳುವುದೇ ಒಂದೊಮ್ಮೆ ಎಲ್ಲ
ಕಳಚಿ ಬೆತ್ತಲಾಗುವುದಕ್ಕೆ ಬಯಲಾಗುವುದಕ್ಕೆ
ಚಲನಶೀಲ ಜೀವ ಜಡ ಸ್ಥಾವರವಾಗುವುದಕ್ಕೆ

ಮೂಳೆ ಮಾಂಸದಿ ಬೆರೆತ ದೇಹದೊಳಗಿನ
ವಿವಿಧ ರಂಗ ಅಂಗಾಂಗಗಳ ಕ್ರೀಡಾಂಗಣ
ರಾಗದ್ವೇಷಗಳ ಭಾವ ಸಂಗಮ ಚರ್ಮಗೀತೆ

ಮಿಡಿಯೋ ಹೃದಯ ತುಡಿಯೋ ಕನಸಿನ
ಉನ್ಮಾದಲಿ ಲೊಚಗುಟ್ಟುವ ಹಲ್ಲಿ ಮನ
ಬೆಂಕಿ ಸಂಕಟ ವಾಸದ ಆಲಯ ಉದರ
ಈ ಎಲ್ಲವನ್ನು ನಿಗ್ರಹಿಸುವ ಅಂಕುಶಾತ್ಮ
ಜೀವ ಮೋಹ ಮಾಯೆಗೆ ಮಾರು
ಹೋಗುವ ವಿಹಂಗಮ ನೋಟ !

ಬಣ್ಣ ಕಪ್ಪೋ ಬಿಳಪೋ ಅಪ್ರಸ್ತುತ
ಚೆಂದದ ಪೋಷಾಕು, ಪ್ರಸಾಧನದ ಪ್ರಭಾವ
ಮೇಲೆಲ್ಲ ಮಿಂಚು‌ ಹೊಳಪು ಥಳಕು ಬಳಕು !
ಒಳಗೆಲ್ಲ ಕೊಳೆತ ನಾರುವ ಸೇಬೂ ಹಣ್ಣು
ಸುಳ್ಳಿನ ಬದುಕು ಶವವಾಗಿ ಮಲಗಿದಾಗ
ಹೆಣ ಸಿಂಗಾರ ಮಾಡುವುದೇ ಶೃಂಗಾರ ಸತ್ಯ !

********

Leave a Reply

Back To Top