ಕಾವ್ಯಯಾನ
ವಿದಾಯ
ಅಬ್ಳಿ,ಹೆಗಡೆ
ಎಂದೂ ಬಾರದ ಅಪರೂಪದ ಅತಿಥಿ
ದುಃಖ,ದುಗುಡ ತುಂಬಿದ ಮನೆಗೆ
‘ದಿಢೀರ್’ಬೇಟಿಯಿತ್ತು,
ಇರುವಲ್ಪ ಕಾಲದಲೆ ನೋವ ಮರೆಸಿ
ದುಗುಡ ದೂರಾಗಿಸಿ,ನಗೆಯ ಕಾರಂಜಿ
ಚಿಮ್ಮಿಸಿ ಬೆಂಗಾಡು ಮನೆ,ಮನಗಳಲ್ಲಿ
ಕಣ್ಣಂಚಿನಲಿ ನೀರ ಜಿನುಗಿಸಿ ಹೊಗುವ
ಮೊದಲು.ಅಂಗಳದ ತುದಿ ನಿಂತು
ತಿರುಗಿ ಮನೆಯವರೆಡೆಗೆ ಕೈ ಬೀಸಿ
ಮಾಯವಾದಂತೆ…!
ಯಾವಾಗಾದರೊಮ್ಮೆ ಭಣಗುಡುವ
ಒಣ ಮನಸ್ಸುಗಳಲ್ಲಿ ಸುಂದರ,ಸುಮಧುರ
ಭಾವಗಳಾಗಮಿಸಿ,ಅಕ್ಕರಗಳ
ಮೊಳೆಯಿಸಿ,ಗೀತೆಯಾಗಿಸಿ ಭಾವಗಳ,
ಕೊರಡ ಕೊನರಿಸಿ,ಹೂ,ಹಣ್ಣು ತುಂಬಿದ
ಸಮ್ರದ್ಧಗಿಡವಾಗಿಸಿ..ಒಳ ಹೊರಗ,
ಬೀಳ್ಕೊಡುಗೆಗೂ ಕಾಯದೇ
ವಿದಾಯ ಹೇಳುತ್ತವೆ ಕೆಲವೊಮ್ಮೆ
**********