ಹೆದ್ದಾರಿಯ ಸೆರಗಿನ ಮೇಲೆ

ಕಾವ್ಯಯಾನ

ಹೆದ್ದಾರಿಯ ಸೆರಗಿನ ಮೇಲೆ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

ಶರೀರಕ್ಕೆ ಸುತ್ತಿದ
ಚರ್ಮ,ರಕ್ತಸಿಕ್ತ ಪೊರೆಗಳು
ಹೆದ್ದಾರಿ ಸೆರಗಿನ ಮೇಲೆ
ಈಜಾಡುತ್ತಿದ್ದವಂತೆ,
ತನ್ನ ಆತ್ಮ ಪಕ್ಷಿಗೆ ತಾನೇ-
ಪ್ರಾಣ ತುಂಬುತ್ತಾ,
ಮುಗಿಲಿಗೆ ದನಿ ತಗುಲುವಂತೆ ಕೂಗುತ್ತಿದ್ದಳಂತೆ

ಆಗಸದಲ್ಲಾರುಡುವ ಗರುಡ
ಬಳಬಳ ಕಣ್ಣೀರಾಕಿತ್ತಂತೆ
ಹಸಿದ ರಕ್ಕಸ ಟಾರು
ಬಕಬಕ ರಕ್ತ ನೆಕ್ಕುತ್ತಿತ್ತಂತೆ
ರವ್ವನೆ ಬೀಸುವ ಗಾಳಿ
ನಿದ್ದೆಯಲಿ ಮುಳುಗಿತ್ತಂತೆ

ನೆತ್ತಿ ಸುಡುವ ಹೊತ್ತಿನಲಿ
ಹೆದ್ದಾರಿ ಬೆಂಕಿಯ ಮೇಲೆ
ಬಾಣಂತಿ ಕನಸ ಕಂಗಳು
ವಿಷಾದದಲಿ ಮಿಡಿಯುತ್ತಿತ್ತಂತೆ
ಸಳಸಳ ಹರಿಯುವ ರಕ್ತದ-
ಕಣಕಣದಲ್ಲೂ ಉಸಿರಿತ್ತಂತೆ,
ಸಾವಿನ ಹಾಡನು ತಾನೇ
ಹಾಡುತ್ತಿದ್ದಳಂತೆ,

ನೂರಾರು ಗಾಡಿಗಳು
ಸೈಡಿಗೆ ಓಡುತ್ತಿದ್ದವಂತೆ,
ಲೋಗರ ಕಣ್ಣಿಗೆ,
ಕಣ್ಣೇ ಕನ್ನಡಿಯಂತೆ
ವೀಡಿಯೋ ಮಾಡುತ್ತಿದ್ದರಂತೆ,
ಗುಟುಕು ನೀರನು ಯಾರೂ ಹಾಕಲಿಲ್ಲವಂತೆ

ಅವರಿವರು ವರ್ತಮಾನಕ್ಕಂಜಿ
ಅಯ್ಯೋ ಪಾಪ ಎನ್ನುತ
ಬೆರಗಿನಲಿ ಮರುಗುತ್ತಿದ್ದರಂತೆ
ಅವಳ ಕೂಗಿನ ಏರಿಳಿತ
ಮೌನದ ಸಂಕೇತ
ನೋಡುತ್ತಿದ್ದರಂತೆ

“”ಎಲ್ಲಂತೆ….?
ನಿನಗಾರು ಹೇಳಿದವರು?”
“ಅಯ್ಯೋ… ನಮ್ಮನೆಯವರೆ
ವೀಡಿಯೋ ಮಾಡಿದರಂತೆ”


Leave a Reply

Back To Top