ಕಾವ್ಯಯಾನ
ನಿನ್ನದೆ
ಡಾ. ನಿರ್ಮಲಾ ಬಟ್ಟಲ
ಕುಸಿಯುತಲಿರುವ
ಬೆಟ್ಟವು ನಿನ್ನದೆ..!
ಆವರಿಸಿರುವ ಅನಂತ
ಬಯಲು ನಿನ್ನದೆ…!
ರಭಸದಿ ಉಕ್ಕಿ ಹರಿವ ನೀರು ನಿನ್ನದೇ…. !
ಸೂಂಯ್ಯು ಗುಡುವ ಗಾಳಿಯು ನಿನ್ನದೇ..!
ಸಕಲ ಜೀವ ಸಂಕುಲವೂ ನಿನ್ನದೇ..!
ಏಕೆ ಮುನಿಸು ಪ್ರಭುವೆ…. !!!
ನಿನ್ನಯ ಸೃಷ್ಟಿಯನು ನೀನೆ ಅಳಿಸುವದು ತರವೇ…. !!
ಈ ಥರ ಕೋಪ ಸರಿಯೇ…. !!
ನೀ ಕೊಟ್ಟ ಜೀವ
ನಾ ಕಟ್ಟಿದ ಬದುಕು
ತೀರದ ಆಸೆಗೆ ಬಲಿಯೇ…. !
ಕಾಡು ಕಾಡಿದೆ
ಕಾಡು ಪ್ರಾಣಿಗಳ ಪಂಜರಕೆ ದೂಡಿ
ಮನರಂಜನೆಯ ಪಡೆದೆ
ಊರು ಬೆಳೆಸಿದೇ.. !
ಕೆರೆಯ ಮುಳುಗಿಸಿದೆ
ಮನೆ ಅರಮನೆ ಕಟ್ಟಿಸಿ
ಆಡಂಬರ ಮೆರೆದೇ… !
ಜಲಾಶಯ ಕಟ್ಟಿಸಿ ಜಂಬವ ಪಟ್ಟೆ
ಬೆಟ್ಟ ಗುಡ್ಡಗಳನ್ನು
ಅಗೆದು ಬಗಿದೆ…. !!
ಅದಿರನು ಮಾರಿ ಸಿರಿವಂತನಾದೇ..!
ಅಧಿಕಾರದ ಆಸೆಗೆಬಿದ್ದು
ಮಾನವೀಯತೆ ಮರೆತೆ…!
ದಿನಗಳೇದಂತೆ ರಾಕ್ಷಸನಾದೇ…. !!
ತೀರದ ಆಸೆಗೆ
ಪಾಪದ ಹೊರೆಯಾ
ಅರಿತರು ಹೆಚ್ಚಿಸಿಕೊಂಡೆ…. !!
ಇದು ನಿನ್ನ ಶಾಪ ಕೋಪವಲ್ಲ…. !!
ನನ್ನ ಸ್ವಯಮ್ ಕೃತ ಅಪರಾಧ
ಮುಳುಗಿಸಿ ಬಿಡು ನನ್ನ ಮಾತ್ರ
ಬಿಟ್ಟು ಬಿಡು ಉಳಿದಜೀವ ಸಂಕುಲವ…. !!
ಮನುಕುಲದ ಪಾಪದ ಜಲದಲ್ಲಿ
ಮುಳುಗುತಿರುವ ಈ ಪೃಥ್ವಿಯನು
ಮೇಲೆತ್ತಲು ನೀನು ಮತ್ತೊಮ್ಮೆ
ವರಾಹ ಅವತಾರವೆತ್ತಿ
ರಕ್ಷಿಸು ಪ್ರಭುವೇ…. !
ನಿನ್ನ ಕ್ಷಮೆಗೆ ನಾನು ಅರ್ಹನಲ್ಲಾ
ನೀನು ಕರುಣೆ ತೋರಿದರೆ ಮಾತ್ರ…!
***********************