ಕಾವ್ಯಯಾನ

selective focus photography of white flower

ಓ, ಅವನೇ..

ಪೂರ್ಣಿಮಾ ಸುರೇಶ್

ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ?
ಪ್ರಶ್ನೆಯಾಗದಿರು ಒಳಗಿನವಳೇ..
ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ
ಕಿರಿಕಿರಿ ಮಾಡದಿರು ಹೀಗೆಲ್ಲ
ಏನು-ಯಾಕೆಗಳನ್ನು ಎದುರಿಟ್ಟು !
ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ.
ಆದರೆ ಅವಳಿಗದು ರುಚಿಸದು.
ಮನಸ್ಸಿಗೆ ಪಾತಿ ಮಾಡಿದ್ದು,
ನೆಟ್ಟ ಗಿಡ ಕುಡಿಯೊಡೆದದ್ದು..
ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ.
ನನ್ನ ಅವಳ ಹಾದಿಗೆಳೆಯುತ್ತಾಳೆ
ಬಲವಂತವಾಗಿ.
“ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ.

Image result for photos of dundu mallige

ನಾನು ನನ್ನ ದಾರಿಯಲ್ಲಿ
ಅವನು ತನ್ನ ಗುರಿಯತ್ತ ನಡೆವಾಗ
ಒಂದೊಂದು ತಿರುವಿನಲ್ಲೂ ಕಾಡಕುಸುಮ…
-ಕೆಂಪಿನ ಕೇಪಳ, ಕಂಪಿನ ರೆಂಜೆ, ಬೇಲಿಯ ನೀಲಿಯ
ಪುಟ್ಟಪುಟ್ಟ ಹೂಗಳನಿಟ್ಟವನ ತುಟಿಗಳಲಿ ದುಂಡುಮಲ್ಲಿಗೆ !

ಹೀಗೆ ಅಚಾನಕ ಎದುರಾದ ಹೂಗಳು
ನನ್ನೊಳಗೆ ತಂತಾನೇ ಮಾಲೆಯಾದ ಸೋಜಿಗ
ಇಂದಿಗೂ ಬಿಡಿಸಲಾಗಿಲ್ಲ!

ಬೇಡ. ದೂರದಿರಿ.. ಅವನನ್ನು
ಅವನಿಗೇನುಗೊತ್ತು.. ಪ್ರೀತಿ ಬೆಳೆಯುವ ಕಲೆ?
ಗೊತ್ತಿದ್ದರೆ…
ಬಿಡಿಸುತ್ತಿರಲಿಲ್ಲವೇ ಮಲ್ಲಿಗೆಯಚೆಂಡನ್ನೇ!? ನನ್ನುದ್ದಕ್ಕೂ
ನಾ ಬಾಲ್ಯದಿಂದಲೂ ಆಸೆ ಪಟ್ಟ ಮಲ್ಲಿಗೆ.

ನಿನ್ನ ಮಲ್ಲಿಗೆಯವನು ಘಮ ತರಲಿ ಎಂದು ಅವನು
ನಿನ್ನ ರೆಂಜೆ, ಕೇಪಳಕೆ ದೇವಿ ಪ್ರಸನ್ನಳಾಗಲಿ
ಎಂದು ನಾನು ಹಾರೈಸಿಕೊಂಡಿದ್ದೆವು ಪರಸ್ಪರ!
ಅದೆಷ್ಟು ಕಾಲ ಬರಿನೆಲದಲ್ಲಿ ಯೋಗಿಯಂತೆ
ಸಾಹಿತ್ಯ, ಸಮಾಜ, ಗಂಡು ಹೆಣ್ಣು ಎಂದು
ಕಣ್ಣು ಕೂಡಿಸದೇ ನಿರ್ವಿಕಾರನಾಗಿ
ಮಾತಿನೆಳೆಗಳನ್ನು ಆತ ಬಿಡಿಸುತ್ತಿದ್ದರೆ… ಅಲ್ಲಲ್ಲಿ
ಅಲ್ಪವಿರಾಮ, ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆ ನಾನು.

ಅವನ ಸಂಭ್ರಮಕ್ಕೆ ನನ್ನ ಭಾವ,
ನನ್ನ ಪುಳಕಕ್ಕೆ ಅವನ ನಡೆ
ತಗಲಿಕೊಂಡಿದ್ದು ಗಮನಕ್ಕೆ ಬಂದಾಗ
ವಟವೃಕ್ಷ ಒಳಗೊಳಗೆ ಬೇರಿಳಿಸಿ
ಅದರ ಬಿಳಲು ಹಿಡಿದು ನಾನು ಜೋಕಾಲಿ ಆಡುತ್ತಿದ್ಧೆ.
ಬೆನ್ನ ಹಿಂದಿನ ಹಸ್ತ ಅವನದೇ ಇರಬೇಕು.
ಜೀಕುವ, ತೂಗುವ ಸಂಭ್ರಮ..
ಅವನ ಕಣ್ಣಿನೊಳಗೆ ನನ್ನ ಆತ್ಮದ ಪ್ರತಿಫಲನ.

ಓ ಇವನೇ..
ಜೋರಾಗಿ ಜೀಕಿ ಬಿಡು
ಹೊರಗೆ ಆಕಾಶಕ್ಕೆ. ಸ್ವರ್ಗದ ಬಾಗಿಲಿಗೆ.
ನಿನ್ನ ಸೆಳೆದು ನಾನು ಒಳಸೇರಿಬಿಡುವೆ.


ಕಿರು ಪರಿಚಯ:

ಪೂರ್ಣಿಮಾ ಸುರೇಶ್. ಉಡುಪಿ. ಕವಯತ್ರಿ ಹಾಗೂ ರಂಗನಟಿ. 3 ಕವನಸಂಕಲನಗಳು ಪ್ರಕಟಗೊಂಡಿವೆ. gss ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ದೊರಕಿವೆ. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ- ಕೊಂಕಣಿ ಪದಕೋಶ ಸಂಗ್ರಹವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿವೆ . ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ,ಆಕಾಶವಾಣಿ ಕಲಾವಿದೆ. ವೃತ್ತಿ ಬಸ್ ಉದ್ಯಮ. ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

Leave a Reply

Back To Top