ಕಾವ್ಯಯಾನ

ಖಾಲಿಯಾಗುವುದೆಂದರೆ…

ಎಸ್ ನಾಗಶ್ರೀ

Chair, Furniture, Lost Places

ಖಾಲಿಯಾಗುವುದೆಂದರೆ
ಇರುವುದೆಲ್ಲಾ ಹೊರಚೆಲ್ಲಿ
ಶುಭ್ರವಾಗುವುದಲ್ಲ
ಯಾರಿಗೋ ಕೊಟ್ಟು
ಸಿಗುವ ತೃಪ್ತಿಯಲ್ಲ
ಇಲ್ಲಿಂದ ಮತ್ತೆಲ್ಲಿಗೋ ಸುರಿದು
ಎಲ್ಲಿಂದಲೋ ಹೊತ್ತು ತರುವ
ಹೊಸದೊಂದು ಪೆಟ್ಟಿಗೆಯಲ್ಲ

ಹಕ್ಕಿ ಹಾರಿ ಉಳಿಸಿದ ಪಂಜರ
ಬೆಕ್ಕು ಉರುಳಿಸಿಟ್ಟ ಹಾಲುಗಡಿಗೆ
ಬೆರಳು ಚೀಪಿ ಬಳಿದು ನೆಕ್ಕಿದ ಎಂಜಲುತಟ್ಟೆ
ಅವನು ಉಳಿಸಿಟ್ಟು ಹೋದ ಕುಡಿಗೂಸು
ಬರಿಯ ಮಾತಲ್ಲಿ ಉಳಿದ ಪ್ರೇಮ
ಎದೆಯ ಕಡಲೊಳಗೆ ಅಡಗಿಹೋದ ಶೋಕದಲೆ
ಎಂದೋ ಬರುವ ದೂರತೀರ ನೌಕೆ
ಖಾಲಿಯಾಗುವುದೆಂದರೆ
ಇರುವುದೆಲ್ಲಾ ಕಳೆದಂತಲ್ಲ
ಎಲ್ಲವೂ ಇದ್ದೂ ಇರದಂತೆ
ಇರದದ್ದು ಎದೆಯೊತ್ತಿದಂತೆ
ಒಡಲೊಳಗೆ ಜ್ವಾಲೆಯುರಿದು
ಕೆಂಡವಾದಂತೆ ಕರುಳು
*********************

2 thoughts on “ಕಾವ್ಯಯಾನ

Leave a Reply

Back To Top