ದಾರಿಹೋಕ
ವಿಜಯಶ್ರೀ ಹಾಲಾಡಿ
ಕಾಡುದಾರಿಯ ನಿಶ್ಶಬ್ದದಲ್ಲಿ
ಜೀರುಂಡೆ ಮರಕಪ್ಪೆಗಳ
ಮೆಲುದನಿಯಿರುತ್ತದೆ
ಗಳಿತ ಎಲೆಯೊಂದು ನೆಲವ
ಸ್ಪರ್ಶಿಸುವ ಆಲಾಪವಿರುತ್ತದೆ
ನರಿಯ ಕೂಗಿನ ಮೌನ
ಛಂದಸ್ಸುಗಳಿರುತ್ತವೆ..
ನಡುರಾತ್ರಿ ದಾರಿಸವೆಸುವ
ಪಥಿಕನಿಗೆ ಮರಗಳ
ಮುಗಿಯದ ಧ್ಯಾನ
ಗಿಡ ಬಳ್ಳಿ ಪೊದೆಗಳ
ಕತ್ತಲ ಸಂಭಾಷಣೆಗಳು
ಢಿಕ್ಕಿಹೊಡೆಯುತ್ತವೆ
ಆಡಿದಷ್ಟೂ ಮುಗಿಯದ
ಅವನ ಎತ್ತರದ ಮಾತುಗಳು
ಠೇಂಕಾರ ಹೂಂಕಾರಗಳು
ತರಹೇವಾರಿ ಬಯ್ಗುಳಗಳು
ಲಜ್ಜೆಗೆಟ್ಟು ಬೆಳೆಯುತ್ತಲೇ
ಕಾಡುಗಳ ಜೊತೆ ಮುಖಾಮುಖಿ
-ಯಾಗಿವೆ ಅನಾದಿಯಿಂದ
*********************
ಚಿತ್ರಕೃಪೆ-ವಿಜಯಶ್ರೀ