ಮಳೆಯೇ ನೀನೊಂದು ಅನಾಹತನಾದ
ಕಾಂತರಾಜು ಕನಕಪುರ
ದಿಗಂತದಂಚಿನಲಿ ಮೋಡಗೋಪುರವು ಮುಸುಕಿ
ನಡುಹಗಲು ಮಬ್ಬಾಗಿ, ಬೆಟ್ಟ, ಗುಡ್ಡ, ಬಯಲು, ಹೊಲ,
ಗದ್ದೆ, ತೋಟಗಳಲಿ ಆಗಸಕ್ಕೆ ಚಿಮ್ಮಿ ನಿಂತ
ಹುಣಸೆ-ಹೊಂಗೆ, ಮಾವು- ಬೇವು,
ತೆಂಗು-ಕಂಗುಗಳ ಮೈ ತಡವಿದ ಗಾಳಿಯೊಡಗೂಡಿ
ಕೋಲ್ಮಿಂಚಿನ ಬೆಳಕಿನಾರತಿ ಗುಡುಗಿನ ಗಾಯನದಲಿ
ತುಂತುರು ಹೆಜ್ಜೆ ನಿನಾದದೊಡನೆ ನಿನ್ನಾಗಮನ…!
ಮಣ್ಣಿಗೆ ರಂಗನೇರಿಸಿ ಹುದುಗಿದ್ದ ಗಂಧ ಹೊರಡಿಸಿ
ಬೆಟ್ಟಕೆ, ಬಯಲಿಗೆ, ಅಂಗಳಕೆ, ಮೈಚಾಚಿ ಮಲಗಿಹ ರಸ್ತೆಗೆ
ಭೇದವೆಣಿಸದೆ ನೀರು ಚಿಮುಕಿಸಿ, ಹಸುರಿನ ಚಿತ್ತಾರ ಬಿಡಿಸಿ
ಹೂವೆದೆಗೆ ಹನಿ ಮುತ್ತನಿಟ್ಟು, ಭೂ ಬೇಗೆಗೆ ತಂಪನೆರೆದು,
ಮಂದ್ರದಲಿ ಮಿಡಿವ ವೀಣೆಯಂದದಿ ಸುರಿವ ನೀನು
ಸುತ್ತಲೂ ಆವರಿಸಿದ ಬುದ್ಧ ಧ್ಯಾನ…!
ಕೆರೆ-ತೊರೆ, ಹಳ್ಳ-ಕೊಳ್ಳ, ಹೊಳೆ-ನದಿ
ಕೊಳಗಳೆಲ್ಲದರ ಮಡಿಲು ತುಂಬಿ ಹರಸಿ
ಝರಿ, ಜಲಪಾತಗಳ ಒಡಲು ತುಂಬಿ ಹಾರೈಸಿ
ಹರಿವ ಧಾರೆಯಲಿ ಸಪ್ತ ಭಾವಗಳನು ಸುಪ್ತವಾಗಿರಿಸಿ
ಬಗೆ ಬಗೆ ಬಣ್ಣದ ಭಾವಧಾರೆಯಾಗಿ ಸುರಿಯುವ,
ಭೋರ್ಗರೆದು ಘರ್ಜಿಸುವ ಮಳೆಯೇ
ನಿಜಕ್ಕೂ ನೀನೊಂದು ಸುಲಭಕ್ಕೆ ದಕ್ಕದ ಅನಾಹತನಾದ…!
**********************