ಮಳೆಗಾಲ

ಕಾವ್ಯಯಾನ

ಮಳೆಗಾಲ

ಗಣಪತಿ ಹೆಗಡೆ

Closed Up Photo of Green and Yellow Croton Plant

ಚಿಗಿತ ಮರಗಿಡಬಳ್ಳಿ
ಚೈತ್ರನಾಗಮದಿಂದ
ತೋರುವದು ಜನಜಗಕೆ ಬಹು ಸುಂದರ|
ಆದರೇನದು ಬೇರು
ಅರಸುತಿದೆ ಜೀವಜಲ
ಕಾಣದಾಗಿದೆ ಅದಕೆ ಜಲ ಹಂದರ||೧||

ಕಾದಿಹಳು ಭೂತಾಯಿ
ಬಿರಿದು ಕುಳಿತಿದೆ ಬಾಯಿ
ತಲೆಯಮೇಲಣ ಸೂರು ಬಿಸಿಯಾಗಸ|
ಕಾಣುವಿರಿ ನೀವಿನ್ನು
ಭಾಸ್ಕರನ ಕೆಂಗಣ್ಣು
ಜನರಬವಣೆಯ ಉಸಿರ ಬಿಸಿಯುಬ್ಬಸ||೨||

ಭೂತಳದ ನೀರಸೆಲೆ
ಆರಿಹೋಗಿದೆ ಇಂದು
ಪಶುಪಕ್ಷಿ ತರುಲತೆಯು ಮನುಜರೆಲ್ಲಾ|
ಕಾತರಿಸಿ ಬಯಸುತಿಹ
ಜೀವನವೆ ಬರಡಾಗಿ
ಕಾಣದಾಗಿದೆ ಸುಖದ ಬಯಕೆಯೆಲ್ಲಾ||೩||

ಚಾತಕ ಭಗೀರಥನು
ಊರ್ಧ್ವಮುಖ ತಪಗೆಯ್ದು
ದೇವನಾಥನ ಒಲಿಸಿ ವರಪಡೆದನು|
ದೇವಗಂಗೆಯ ಕಳಿಸಿ
ಸಕಲರಿಗೆ ನೀರುಣಿಸಿ
ಜೀವ ಕೋಟಿಯ ಪ್ರಾಣ ಉಳಿಸೆಂದನು||೪||

ಮೇಘಗಳ ಸರಮಾಲೆ
ಮುಸುಕಿದವು ನಭವನ್ನು
ದಿನಕರನ ಕರಮುರಿದು ಹಿಂಸರಿಯಿತು|
ಮೇಘವಾದ್ಯವ ಕೇಳಿ
ನವಿಲು ಗರಿಯನು ಬಿಚ್ಚಿ
ಥಕ ಥೈಯಿ ಕುಣಿಯುತಾ ಮಳೆಕರೆಯಿತು||೫||

ನೀರದನು ದೀಪವನು
ಹಚ್ಚಿ ಮಿಂಚನು ಹಂಚೆ
ನವಿಲನಾಟ್ಯವ ನೋಡಿ ಎಂತ ಚಂದ|
ನಭವೆಸೆದ ಜಲರಾಶಿ
ನಗದ ಶಿಖರಕೆ ಬಡಿಯೆ
ಹರನ ಜಡೆ ಬಡಿದ ಸುರನದಿಯ ಅಂದ||೬||

ಮಂದ ಮಾರುತನುಬ್ಬಿ
ಸುಳಿಸುಳಿದು ಸುಳಿ ಗಾಳಿ
ಬೀಸಿ ಮೇಘವ ಮೇಲೆ ಹಾರಿಸುತಿದೆ|
ಮೇಘ ಮಾಲೆಗಳೆಲ್ಲ
ಘರ್ಷಿಸುತ ಘರ್ಜಿಸುತ
ಮುಸಲಧಾರೆಯನಿಳೆಗೆ ಬೀಳಿಸುತಿದೆ||೭||

ಪುಟ್ಟ ಬಾಲಕರೆಲ್ಲ
ಬಟ್ಟ ಬಯಲನು ಸೇರಿ
ನೀರಾಟವಾಡುವರು ಛಳಿಯಬಿಟ್ಟು|
ಗುಡುಗು ಸಿಡಿಲನು ಕೂಡಿ
ಮಿಂಚು ಅಬ್ಬರಿಸುತಿರೆ
ಮನೆಯೊಳಗೆ ಓಡುವರು ಭಯವಪಟ್ಟು||೮||

ಮೋಡಗಳ ಘರ್ಜನೆಯ
ವಾದ್ಯ ಮೇಳವ ಕೇಳಿ
ಮದುಮಗನು ಸಾಗರನು ಕೊಬ್ಬಿ ಮೇಲೆ|
ತನ್ನ ದಡವನೆ ಏರಿ
ನದಿ ವಧುವ ಪಡೆಯುವರೆ
ತುಂಬಿದುತ್ಸಾಹವದು ಇಲ್ಲ ಎಲ್ಲೆ||೯||

ಗಿರಿ ಶಿಖರಗಳ ಹಾಯ್ದು
ಕಾಡು ಮೇಡನು ಸೀಳ್ದು
ಬಯಲು ಸೇರುವ ಹತ್ತಿರಾಶಿ ಚಂದ|
ಅಲ್ಲಲ್ಲಿ ನೀರಿಳಿಸಿ
ಹಳ್ಳ ಕೊಳ್ಳವ ತುಂಬಿ
ನದಿಯಾಗಿ ಹರಿಯುವದೆ ಬಹಳ ಅಂದ||೧೦|

ಬಿರುಗಾಳಿ ಜೊತೆಗೂಡಿ
ಮುಸಲಧಾರೆಯ ಕೋಡಿ
ಹರಿಯಲದು ಭೂದೇವಿಯೇ ತತ್ತರ|
ಬಾನ ಕವಿದಿದೆ ಘನವು
ಭುವಿಯೆಲ್ಲ ಕತ್ತಲೆಯು
ಸೂರ್ಯನಿಗೆ ಇಳೆಯಮೇಲಿದೆ ಮತ್ಸರ||೧೧||

ಕೆರೆ ಬಾವಿ ತುಂಬುವದು
ನೆಲ ಹಸಿರು ಕಾಣುವದು
ಬಸಿರು ತುಂಬಿದೆ ಭತ್ತ ಗದ್ದೆಯಲ್ಲಿ|
ತೆಂಗು ಕಂಗುಗಳೆಲ್ಲ
ತಲೆಯ ತೂಗುವವೆಲ್ಲ
ಮಳೆ ಸಹಿತ ಬಿರುಗಾಳಿ ಬೀಸಲಲ್ಲಿ||೧೨||

**********************

One thought on “ಮಳೆಗಾಲ

Leave a Reply

Back To Top