ಕಾವ್ಯಯಾನ
ಪುನರ್ಮಿಲನ
ಶಂಕರಾನಂದ ಹೆಬ್ಬಾಳ
ವಾಂಛಲ್ಯ ತೊರೆದ
ಕಂಗಳಲ್ಲಿ ದೃಗುಜಲಧಾರೆ,
ಮನದಲ್ಲಿ ಭಾವೋದ್ವೇಗ
ತತ್ವಾರಗೊಂಡು
ಮುದುಡಿದ ಹೂವಾಗಿದೆ,
ದುರ್ದೆಶೆ ಆವರಿಸಿ
ಬಾಳು ಕೊನೆಯಿಲ್ಲದ
ಉದಧಿಯಲ್ಲಿ ತೇಲುವ
ಹಾಯಿದೋಣಿಯಾಗಿದೆ,
ಕೌಮುದಿಯಲ್ಲಿ ಕಾದು
ಕುಳಿತ ಚಕೋರದಂತಿದೆ
ನನ್ನ ಸ್ಥಿತಿ,
ಬರುವೆಯೆಂಬ ಹುಸಿ ಭರವಸೆ,
ಹೃದಯ ದೇಗುಲದಲ್ಲಿ,
ನಿನ್ನನ್ನೆ ಉಪಾಸಿಸುತಿರುವೆ…
ಒಮ್ಮೆ ಅವ್ಯಕ್ತಭಾವದ
ಅಭಾವ ವೈರಾಗ್ಯ
ಎದೆಯೊಳಗೆ
ಗೆಜ್ಜೆ ನಾದದ ಸದ್ದು,
ಶೃಂಗಾರವಿಯೋಗದ
ಚಡಪಡಿಕೆಯ ಮನ…
ಕಕ್ಕುಲತೆಗಾಗಿ
ಧರಣಿ ಸತ್ಯಾಗ್ರಹ
ಹೂಡಿ ಕುಳಿತಿದ್ದೇನೆ…
ಅಬುದದಲಿ ಹನಿ
ಕೆನೆಗಟ್ಟಿ ಒಡೆದು
ನೀರಾಗಿ ಹರಿಯುತಿದೆ
ಈ ಹೃದಯಕಡಲಿನಲಿ
ನಿನ್ನೊಲವು
ಒಂದಾಗಲು
ಅದೇ,
ನಮ್ಮೀರ್ವರ
ಪುನರ್ಮಿಲನ,
******************