ಕಾವ್ಯಯಾನ

Purple Leaf

ಸ್ವಾತಿ ಮುತ್ತು

ಮಧು ವಸ್ತ್ರದ್

ಬಾಲ್ಯದಾ ದಿನಗಳಲ್ಲಿ
ತಾಯ್ತಂದೆ,ಅಣ್ಣಂದಿರ
ಬೆಚ್ಚಗಿನಾ ಗೂಡಿನಲ್ಲಿ
ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು
ವಾತ್ಸಲ್ಯದಮುತ್ತು

ಶಾಲೆಯಾ ದಿನಗಳಲ್ಲಿ
ವಿದ್ಯೆಯಾ ಕಲಿಯುವಲ್ಲಿ
ಗುರುಗಳಿಂದ ಸಿಕ್ಕಿದ್ದು
ಮಾರ್ಗದರ್ಶನದ
ನುಡಿ ಮುತ್ತು..

ಹರಯದಾ ಬನದಲ್ಲಿ
ಮುಂಜಾನೆಯ ಮಂಜಿನಲಿ
ಚಿಗುರೆಲೆಯ ಅಂಚಿನಲಿ
ನನ್ನ ನೋಡಿ ನಕ್ಕಿದ್ದು
ಇಬ್ಬನಿಯಮುತ್ತು

ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ
ಮೊದಲರಾತ್ರಿಯ ಗುಂಗಿನಲ್ಲಿ
ನಲ್ಲ ನನಗಿತ್ತಿದ್ದು
ಒಲವಿನ ಮುತ್ತು

ನವಮಾಸ ಮುಗಿಯುತಲಿ
ತಾಯ್ತನದ ಮೋಡಿಯಲಿ
ನನ್ನ ಮುದ್ದಿನ ಕರುಳಕುಡಿಗೆ
ಕಣ್ಮುಚ್ಚಿ ನಾನಿತ್ತಿದ್ದು
ಮಮತೆಯ ಮುತ್ತು

ತುಂಬುಪ್ರೀತಿಯ ಬಾಳಿನಲ್ಲಿ
ದಿವ್ಯಸಾರ್ಥಕತೆಯಲ್ಲಿ
ಕಷ್ಟಸುಖಗಳ ಮೂಸೆಯಲ್ಲಿ
ನಾನು ಗಳಿಸಿದ್ದು
ಅನುಭವದ ಮುತ್ತು

ಜೀವನದ ಹಾದಿಯಲ್ಲಿ
ಕರ್ತವ್ಯಗಳ ಭರದಲ್ಲಿ
ಅಡೆತಡೆಗಳು ಬಂದಾಗ
ನಲ್ಲನಿಂದ ಸಿಕ್ಕಿದ್ದು
ಭರವಸೆಯ ಮುತ್ತು

ಈ ಬಾಳಿನ ಹಾದಿಯಲ್ಲಿ
ನಲ್ಲನ ಒಲುಮೆಯಿದ್ದಲ್ಲಿ
ಸ್ವಾತಿಮಳೆ ಇಲ್ಲದೆಯೂ ನಾನಾಗಬಲ್ಲೆನು
ಸ್ವಾತಿ ಮುತ್ತು


Leave a Reply

Back To Top