ಕಾವ್ಯಯಾನ
ಪುರಾವೆ
ಮಮತಾ ಶಂಕರ್
ಪ್ರತಿಯೊಂದಕ್ಕೂ ಪುರಾವೆ ಬೇಡುವ
ಈ ಲೋಕದಲ್ಲಿ ನಾ ಬಂದು ಹೋಗಿದ್ದಕ್ಕೂ
ಪುರಾವೆ ಬೇಡವೆ…. ಎಂಬಂತೆ
ಮನೆಮನೆಗೂ ಪ್ರತಿ ಹೊಸಲಿಗೂ
ಒಳಕೋಣೆಗೂ ಇಣುಕಿಣುಕಿ
ಕುಣಿದಾಡಿ, ತಡಕಾಡಿ ….
ಎಲ್ಲವನ್ನೂ ಎದೆಗವಚಿ ಹೋಗಿದಕ್ಕ್ರೆ
ಪುರಾವೆಗಳ ಬಿಟ್ಟಿದ್ದಾಳೆ ಕೃಷ್ಣೆ, ಮಲಪ್ರಭೆಯರು…
ತೇಲಿ ತೂಗಾಡಿ ನಿಂತ ಕಾರು ಬೈಕುಗಳು,
ಊರು ತಲುಪಿಸದೆ ಸಂಬಂಧ ಕಡಿದ ರಸ್ತೆಗಳು
ಜೊತೆ ಸಾಗಲಾರೆವೆಂದು ದಾರಿ ಬೇರಾದ ರೈಲು ಹಳಿಗಳು
ಸಂಪರ್ಕ ಬಿಟ್ಟ ಸೆತುವೆಗಳು
ಗುರುತು ಸಿಗದ ಹೊಲ ಗದ್ದೆ ಮನೆಗಳು
ಮುರಿದುಬಿದ್ದ ಮಹಲುಗಳು
ಮುಚ್ಚದೇ ಬಿಟ್ಟ ಕಿಟಕಿಗಳು
ಮದುವೆಯೊಡವೆ ಬಟ್ಟೆಗಳ ಗಂಟುಗಳು
ನೀರಿಳಿದ ಮೇಲೆ ಕಾಲುಕಾಲಿಗೆ ಸಿಗುವ ತಮ್ಮದೇ
ಕಾಣೆಯಾದವರ ಸೆಟೆದ ಉಸಿರಿರದ
ದೇಹದ ವಿಚಿತ್ರ ಭಂಗಿಗಳು…..
ಬದುಕಿನೊಡನೆ ಬೆರೆತು ಹೋಗಿದ್ದ
ಕುರಿಕೋಳಿ ದನಕರುಗಳ ಹಿಂಡಿಂಡು ಹೆಣಗಳು
ಕಂದನೊಡಬಿಡದೆ ತೋಳಲ್ಲೇ ಅಪ್ಪಿ ಹಿಡಿದು
ಕೈಲಾಸ ಸೇರಿದ ತಾಯ್ಕರುಳ ಸಂಬಂಧಗಳು
ಸೂರಿನಡಿಯಲೆ ಸಿಲುಕಿ ಸೂರೇ ಶೂಲವಾಗಿ
ಹುದುಗಿ ಹೋದ ಆತ್ಮಗಳು…..
ಕೆಸರುಮಯ ನೋಟುಗಳು
ಕನೆಕ್ಷನ್ನೇ ಕಳಕೊಂಡು ತೇಲಾಡಿದ ಸ್ಟೌ ಗ್ಯಾಸು ಸಿಲಿಂಡರ್ ಗಳು….
ಒಂದೇ……. ಎರಡೇ…..
ಎಲ್ಲಾ ಎಲ್ಲವೂ ಸಾಕ್ಷಿಯಾಗಿವೆ ಅವಳು ಬಿಗಿದಪ್ಪಿದ್ದಕ್ಕೆ….
ನಿಟ್ಟುಸಿರನಿಡುವ ಆತ್ಮಗಳೇ
ಹೊರಟುಬಿಡಿ ಇಲ್ಲಿಂದ
ನೋಡಬೇಡಿ ಬದುಕುಳಿದವರ ಗೋಳು….
ಈ ನೀರಿಗೆ ಕೊಚ್ಚಿ ಹೋದವರೇ ಎಷ್ಟೋ ಮೇಲು….
ಬಿಟ್ಟುಬಿಡಿ ದಾರಿ ಹೀಗೆ
ಹುಡುಕಲೇ ಬೇಕಾಗಿದೆ ನವ ಪುರಾವೆಗಳ
ಮತ್ತೆ ನವ ಬದುಕಿಗೆ……
*********************
ಕೃಷ್ಣೆ ಮಲಪ್ರಭೆಯರ ಅಪ್ಪುಗೆಯ ಪುರಾವೆಗಳನ್ನು
ತುಂಬಾ ಮನೋಜ್ಞವಾಗಿ ಕವನದಲ್ಲಿ ಕಟ್ಟಿದ್ದಿರಿ ಮಮತಾ…
“ನಿಟ್ಟುಸಿರು ಬಿಡುವ ಆತ್ಮಗಳಿಗೆ ಹೋರಟುಬಿಡಿ ಇಲ್ಲಿಂದ
ಬದುಕಿದವರ ಗೋಳು ಕೇಳಬೇಡಿ…..”
ಮನಮುಟ್ಟುವ ಸಾಲುಗಳು…
ಧನ್ಯವಾದಗಳು ನಿರ್ಮಲಾ…..ಅವರೇ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ