ಪುಸ್ತಕ ಸಂಗಾತಿ
‘ಒಳಗೊಂದು ವಿಲಕ್ಷಣ ಮಿಶ್ರಣ’
ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ ಅಲ್ಲಿನ ಆಗುಹೋಗುಗಳಿಗೆ ಆತನೂ ಸಾಕ್ಷಿದಾರ. ಆದರೆ ಆತನೇನೂ ಮೂಕಸಾಕ್ಷಿಯಲ್ಲ. ಬದಲಿಗೆ ಆ ಆಗುಹೋಗುಗಳು ಮತ್ತು ತಲ್ಲಣಗಳಿಗೆ ತನ್ನ ಕಲಾಸೃಷ್ಟಿಯ ಅಭಿವ್ಯೆಕ್ತಿಯ ಮೂಲಕ ಬದುಕಿನ ಸರಿ ತಪ್ಪುಗಳನ್ನು ತೋರುವ ತಿಳಿಗನ್ನಡಿಯಾಗುತ್ತಾನೆ.
ನಮ್ಮ ನಡುವಿನ ಪ್ರತಿಭಾವಂತ ಕಥೆಗಾರ ಇಂದ್ರಕುಮಾರರ ಚೊಚ್ಚಲ ಕವನಸಂಕಲನ ‘ ಒಳಗೊಂದು ವಿಲಕ್ಷಣ ಮಿಶ್ರಣ’ ಆಧುನಿಕ ಯಾಂತ್ರಿಕ ಬದುಕಿನ ತಲ್ಲಣಗಳು, ಆಲೋಚನೆಗಳು, ಅಸಹನೀಯ ವಿಲಕ್ಷಣ ಅನುಭವಗಳನ್ನು ಓದುಗನ ಮುಂದಿಟ್ಟು ಆತನ ಆತ್ಮಸಾಕ್ಷಿಯನ್ನು ಕಲಕುವ ಒಂದು ದರ್ಪಣ ಕೃತಿ. ಕಥನಕಲೆಯಲ್ಲಿ ಪಳಗಿರುವ ಇಂದ್ರಕುಮಾರರ ಕೈ ಕಾವ್ಯಸೃಷ್ಟಿಯಲ್ಲೂ ಯಶಸ್ವಿಯಾಗಿರುವುದನ್ನು ಈ ಕೃತಿ ಸಾಕ್ಷೀಕರಿಸುತ್ತದೆ.
ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿನ ಬಹುತೇಕ ಕವಿತೆಗಳು ವಿಲಕ್ಷಣಗಳ ಮಿಶ್ರಣವೇ ಸರಿ. ಈ ಕವಿತೆಗಳಲ್ಲಿರುವುದು ಇಡೀ ಆಧುನಿಕ ಸಮಾಜ ಮತ್ತು ಬದುಕನ್ನೊಳಗೊಳ್ಳುವ, ‘ಇಂದಿನ ಬಣ್ಣಗೆಟ್ಟ ಬದುಕಿ’ನ, ‘ಕಣ್ಣಿದ್ದೂ ಕುರುಡಾದ ಜನ’ರ , ‘ಅಸ್ವಸ್ತ ಅಸ್ತಿತ್ವ’ಗಳ ವಿಚಿತ್ರ ಮಿಶ್ರಣದ ಚಿತ್ರಣ. ಕವಿ ಹೇಳುವಂತೆ ಇಂದಿನ ಬದುಕು ಭರವಸೆಯಿಲ್ಲದ್ದು.
“ ಬದುಕುವ ಭರವಸೆಗಳೆಲ್ಲ
. . . . ಮಾರ್ಡನ್ ಟಾಯ್ಲೆಟ್ಟಿನೊಳಗೆ
ಫ್ಲಷ್ ಆಗಿಹೋಗಿವೆ. ”
ಇಲ್ಲಿನ ಕಾವ್ಯದ ಕಟ್ಟಡ ಕಟ್ಟಿರುವುದು ‘ಕಲಕಿದ ದ್ರಾವ್ಯ’ದ ಕಣಗಳಿಂದ. ಇಲ್ಲಿನ ಬಹುತೇಕ ಕವಿತೆಗಳು ಅತ್ಯಂತ ಪರಿಣಾಮಕಾರಿಯಾದ ಪದ ಚಿತ್ರಣಗಳಾಗಿವೆ. ಈ ಕವಿತೆಗಳು ಓದಿದಂತೆ ‘ಮನಸ್ಸು ಸಿಡಿದು ಸಾವಿರ ಹೋಳಾದಂತೆನಿಸುವುದು’ ಸಹಜವೇ. ಏಕೆಂದರೆ ಜಗತ್ತಿನ ಅಸಹನೀಯ ‘ಗೋಳಾಕಾರದ ಗೋಳು’ಗಳೆಲ್ಲಾ ‘ಪ್ರಕ್ಷುಬ್ಧ ಅಲೆಗಳಂತೆ’ ಈ ಕವಿತೆಗಳ ರೂಪದಲ್ಲಿ ಬಂದು ಮನಸ್ಸಿಗೆ ಬಡಿದು ವಿಚಲಿಸಿಬಿಡುವುದಷ್ಟೇ ಅಲ್ಲದೆ ಮನಃಸಾಕ್ಷಿಯ ‘ಕಟಕಟೆಗೆ’ ಎಳೆತಂದು ‘ ಖಾಲಿತನದ ಭಾರ ಎದೆಗಳ ಮೇಲೆ’ ಆವರಿಸುವಂತೆ ಮಾಡುತ್ತವೆ.
ಈ ಕವಿತೆಗಳ ವಸ್ತು ಇಂದಿನ ಬದುಕಿನ ಜಂಜಾಟಕ್ಕೆ ಸಂಬಂಧಿಸಿದಂತೆ ‘ ಕಾಣಿಸದ್ದು ಕೇಳಿಸದ್ದು’ ಥರದ್ದಾಗಿವೆ. ಈ ಬದುಕನ್ನು ನಾವು ತೂಗುತ್ತಿರುವುದು ‘ಜಂಗು ತಕ್ಕಡಿಯಲ್ಲಿ’ ಎಂಬ ಅರಿವುಮೂಡಿ, ಈ ಬದುಕು ‘ಸಾಲದ ಬದುಕು’ ಎನಿಸಿ ಸಾಲದು ಈ ಬದುಕು ಎನಿಸುತ್ತದೆ. ಈ ‘ನೆಲದೊಡಲಿನ ಮಿಸುಕಾಟ’ದಲ್ಲಿ ನಾಚಿಕೆಯೆಲ್ಲವ ಬಿಟ್ಟು ಸಾಗುತ್ತಿರುವುದು ವಿಷಾದನೀಯ. ಜಗತ್ತು ಮಾನವೀಯತೆ ಕಳೆದುಕೊಂಡು ಕಣ್ಣಿದ್ದೂ ಕುರುಡರಾಗಿರುವುದು ಇಂದಿನ ದುರಂತವೇ ಸರಿ. ಈ ಚಿತ್ರಣ ನೋಡಿ;
“. . . .ಜಗತ್ತು ಆಪರೇಷನ್ ಥಿಯೇಟರ್‌ನ ಬಾಗಿಲಲ್ಲಿತ್ತು”
ಹೆಚ್ಚು ಕಡಿಮೆ ಸತ್ತಿರುವ ಜಗತ್ತಿಗೆ ‘ ಮಂಡಕ್ಕಿ ಚಿಲ್ಲರೆ ತೂರುವವರಿಲ್ಲ.’ ಎನಿಸುತ್ತದೆ. ಏಕೆಂದರೆ ;
“ಮಾನವೀಯತೆಯ ಕೋರ್ಸಿನಲ್ಲಿ
ಮರುಕದ ಕ್ಲಾಸ್ ಬಂಕ್ ಮಾಡಿದವರೆಲ್ಲಾ
ಹೆಣಕ್ಕೆ ಹೆಗಲು ಕೊಟ್ಟುದ್ದನ್ನು ಬಿಟ್ಟು
ತೂರಿದ ರೊಕ್ಕ ಆರಿಸಿಕೊಳ್ಳುವಲ್ಲಿ
ಮಗ್ನರಾಗಿರುವವರಲ್ಲ ! ”
ಮಾನವಸಹಜ ಪ್ರೀತಿ ಮಮತೆಗಳನ್ನೆಲ್ಲಾ ಗಾಳಿಗೆ ತೂರಿರುವ ಆಧುನಿಕ ಮನುಷ್ಯನ ಬದುಕಿನ ಹಲವಾರು ಸ್ತರಗಳ ಖಾಲಿತನದ ಅನಾವರಣ ಈ ಕವಿತೆಗಳಲ್ಲಿದೆ. ಮನುಷ್ಯ ಮಾನವೀಯತೆಯ ಒಳ-ಹೊರಗನ್ನು ಕಳೆದುಕೊಂಡು ‘ಗರ್ದಿಗಮ್ಮತ್ತಿನ ಓಡುವ ರೀಲು’ಗಳಾಗಿರುವುದು ವಿಪರ್ಯಾಸ.
“ ಕಿಡ್ನಿ ಕಣ್ಣು ರಕ್ತ ಮಾರಿಕೊಳ್ಳುವುದು
ಆಗಿನ್ನೂ ತಿಳಿದಿರಲಿಲ್ಲ.”
“ ಇಲ್ಲಿ ಎಲ್ಲವೂ ಮಾರಾಟಕ್ಕಿದೆ
ಸತ್ತ ಹೆಣ, ಅಂಡಾಣು, ವೀರ್ಯಾಣು.”
ಮನುಷ್ಯನ ದೇಹವಷ್ಟೇ ಅಲ್ಲ ಮನಸ್ಸೂ ಮಾರಾಟದ ವಸ್ತುವಾಗಿದೆ. ‘ಅನ್ನದ ಮೇಲೆಯೇ ಉಚ್ಚೆಹೊಯ್ಯುವ,’ ‘ಅಮ್ಮ ಎಂಬ ಹಚ್ಚೆಗೈಯಲ್ಲೇ ಅವಳಿಗೆ ತದುಕುವ’ ಅಮಾನವೀಯ ಆಧುನಿಕ ಬದುಕಿದು. ಈ ಆಧುನಿಕ ಚಕ್ರವ್ಯೂಹದಲಿ ಸಿಲುಕಿ ನರಳುತ್ತಿರುವವರೇ ಬಹುತೇಕ ಮಂದಿ. ಇದು ವ್ಯಾಪಾರಿ ಯುಗ, ಡಿಸ್ಕೌಂಟ್ ಜಗತ್ತು. ‘ನಿಯತ್ತಿನ ತಲೆ ಮೊಟಕಿರುವ’ ಇಲ್ಲಿ ‘ಏನುಸಿಕ್ಕರೂ ನಾಲಿಗೆ ಒಡ್ಡುವವರೇ’ ಹೆಚ್ಚು. ‘ಆಡುವ ಪಿಸುಮಾತುಗಳೇ ಕಿವಿಗೆ ಘೋರವಾಗಿ ಬಡಿಯುವ’ ಸಮಾಜದಲ್ಲಿ ಸಾಗುತ್ತಿರುವ ಈ ಬದುಕು ಅದೆಷ್ಟು ಅನರ್ಥಕಾರಿ!
“ ಸಿಟಿಯ ಸ್ಲಮ್ಮಿನಲ್ಲಿ ದೇವರಗುಡಿ
ಹುಡುಕುತ್ತಿದ್ದೆ
ದೇವರಿರಲಿಲ್ಲ ಯಾರೋ ಕದ್ದಿದ್ದರು.”
ಎನ್ನುವ ಕವಿಯ ಆತಂಕದ ಶೋಧ ಬರೀ ಕವಿಯದ್ದಷ್ಟೇ ಆಗದೆ ಸೂಕ್ಷ್ಮ ಮನಸ್ಥಿತಿಯ ಎಲ್ಲರದ್ದೂ ಆಗಿದೆ. ಕವಿಯ ಕಾಡುವ ಒಂಟಿತನ ವಿಕ್ಷಿಪ್ತತೆ ಎಲ್ಲವೂ ಓದುಗರಿಗೂ ಕಾಡುತ್ತವೆ. ‘ಸೆಕೆಂಡುಗಳು ಗಂಟೆ ವರುಷಗಳಾಗಿ’ ಸಾಗುವಂತೆ ಏಕತಾನತೆಯಿಂದ ಕೂಡಿರುವ ಈ ಬದುಕಿನಲ್ಲಿ ಮನುಷ್ಯ ಸಹಜ ಪ್ರೀತಿ ಮಮತೆ ವಿಶ್ವಾಸಗಳನ್ನೆಲ್ಲಾ ಮರೆತು ‘ಕಲ್ಲಾಗಿಲ್ಲ, ಬದಲಿಗೆ ಮೃಗವಾಗಿದ್ದಾನೆ’ ಹಾಗು ‘ಜೀವನ ಪ್ರೀತಿಯ ಕೀಲಿಕೈ ಕಳೆದುಕೊಂಡಿದ್ದಾನೆ’ ಎನ್ನುವ ಕವಿ ಈ ಯಂತ್ರಯುಗದ ಯಾಂತ್ರಿಕ ಬದುಕಿನ ಕರಾಳಮುಖದ ದರ್ಶನಮಾಡಿಸುತ್ತಾರೆ.
ಆಧುನಿಕ ಬದುಕಿನ ಸಾಂಸಾರಿಕ ಸಂಕಟಗಳು, ಪ್ರೇಮ-ಕಾಮ, ವಿವಾಹ-ವಿಚ್ಛೇದನಗಳು, ಒಂಟಿತನ, ಬಡತನ, ಬಗೆಬಗೆಯ ದೌರ್ಜನ್ಯಗಳ ಕುರಿತ ಅನೇಕ ಸಂಗತಿಗಳು ಈ ಕವಿತೆಗಳ ವಸ್ತು. ಇಂದಿನ ತಲ್ಲಣಗಳಿಗೆ ಕವಿ ಮನಸ್ಸು ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿ. ಕವಿ ಮನಸ್ಸೇ ಹಾಗಲ್ಲವೆ? ಆತ ತನ್ನ ಸುತ್ತಲಿನ ಆಗುಹೋಗುಗಳಿಗೆ ಸೂಕ್ಷ್ಮವಾಗಿ ಪರಿಣಾಮಕಾರಿಯಾಗಿ ಸಾಕ್ಷೀಭಾವದಿಂದ ಎದುರುಗೊಳ್ಳುತ್ತಾನೆ. ಇಲ್ಲಿನ ಕವಿತೆಗಳು ಯಾವುದೋ ಆದರ್ಶ ಜಗತ್ತೊಂದನ್ನು ನಮ್ಮ ಕಣ್ಣಮುಂದೆ ತಂದಿರಿಸುವುದಿಲ್ಲ, ಬದಲಿಗೆ ಮನುಷ್ಯ ಸಮಾಜದ ಒಳ-ಹೊರಗಿನ ಜೊಳ್ಳನ್ನು ತೂರಿ ತೂರಿ ಜರಡಿಹಿಡಿಯುತ್ತವೆ. ಇಲ್ಲಿ ಬಳಸಿರುವ ಕಾವ್ಯಭಾಷೆ ವಸಂತಕಾಲದ ಕೋಕಿಲ ನುಡಿಯಲ್ಲ. ಅದು ಖಡ್ಗದಂತೆ ಮೊನಚಾದುದು, ನೇರವಾಗಿ ಮನಸಿಗೆ ನಾಟುವಂತಹ ತೀಕ್ಷ್ಣತೆ, ಭಾವತೀವ್ರತೆ ಈ ಭಾಷೆಗಿದೆ. ಯಂತ್ರಯುಗದ ತಲ್ಲಣಗಳನ್ನು ಕಟ್ಟಿಕೊಡುವಾಗ ಆ ಯುಗದ ಭಾಷೆಯನ್ನೇ ಬಳಸುವುದು ಸರಿಯಾದುದೇ ಆಗಿದೆ. ಕವಿಯಂತೂ ಭಾಷೆಯನ್ನು ಸೂಕ್ತವಾಗಿ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಅದೆಷ್ಟೋ ಸಾಲುಗಳು ಮನದಲ್ಲುಳಿಯುವ ಅರ್ಥಪೂರ್ಣ ಸಾಲುಗಳಿವೆ ಇಲ್ಲಿನ ಕವಿತೆಗಳಲ್ಲಿ.
ಇಲ್ಲಿನ ‘ವಿಲಕ್ಷಣ ಮಿಶ್ರಣ’ ಕವಿಮನದೊಳಗಣ ಭಾವ ಲಹರಿಯೇನೋ ಎಂದು ಮೇಲ್ನೋಟಕ್ಕೆ ಒಮ್ಮೆಲೆ ಅನ್ನಿಸಿಬಿಡುವುದಾದರೂ, ಆಳವಾಗಿ ಅವಲೋಕಿಸಿದರೆ ಅದರ ವಸ್ತುವಿಷಯಗಳು ಹೊರ ಜಗತ್ತಿನಿಂದ ದೊರೆತ ಫಲಿತಗಳೇ ಆಗಿವೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿಯೇ ಇಲ್ಲಿನ ‘ಒಳಗು’ ಎಲ್ಲರದ್ದೂ ಆಗಿಬಿಡುತ್ತದೆ. ಈ ಕಾಡುವ ಕವಿತೆಗಳು ಓದುಗನ ಮನಸನ್ನು ಕಲಕುವ ‘ವಿಲಕ್ಷಣ ಮಿಶ್ರಣ’ವೇ ಸರಿ.
*******************************
ಬಿ. ಜಿ. ಜಗದೀಶ ಸಾಗರ್
ನಾನು ಓದಿರುವೆ ಈ ಕವನ ಸಂಕಲನವನ್ನು. ಒಳ್ಳೆಯ ಸಂಕಲನ.ಚೆನ್ನಾಗಿ ಕವಿತೆಗಳನ್ನು ವಿಶ್ಲೇಷಿಸಿ ರುವಿರಿ ಸಾರ್.ಇಬ್ಬರಿಗೂ ಅಭಿನಂದನೆಗಳು
ಧನ್ಯವಾದಗಳು ಮೇಡಂ.
ಇಂದ್ರಕುಮಾರರ ಕವಿತೆಗಳ ಸಾಲುಗಳನ್ನು ಅಷ್ಟೇ ಅದ್ಭುತವಾಗಿ ನಮ್ಮೀವರೆಗೂ ತಲುಪಿಸಿದ ಜಗದೀಶ್, ಇಬ್ಬರಿಗೂ ಅಭಿನಂದನೆಗಳು
ಧನ್ಯವಾದಗಳು.