ಕವಿತೆ
ಅಸ್ಮಿತೆ
ಪ್ರೊ ರಾಜನಂದಾ ಘಾರ್ಗಿ
ಸೂರ್ಯನ ನಸು ಬಿಸಿಲಿಗೆ
ಅರಳುವ ನೈದಿಲೆಯಾಗಿದ್ದೆ
ಶ್ರಾವಣದ ಮಳೆಹನಿಗೆ
ಗರಿಗೆದರುವ ನವಿಲಾಗಿದ್ದೆ
ನಿನ್ನ ಕೊಳಲಿನ ದ್ವನಿಗೆ
ಓಡಿ ಬರುವ ರಾಧೆಯಾಗಿದ್ದೆ
ಭಾವನೆಗಳ ಜೋಕಾಲಿಯಲ್ಲಿ
ಜೀಕುತ್ತ ಆಗಸದತ್ತ ಎರಿದ್ದೆ
ನೆಲಕ್ಕಿಳಿದಾಗ ಕಂಡದ್ದು ವಾಸ್ತವ
ಖಾಲಿ ಜೋಳಿಗೆ ಹಿಡಿದು ನಿಂತಿದ್ದೆ
ಮಾನಸಿಕವಾಗಿ ನಿನ್ನ ಎದುರು
ಮಂಡಿಯೂರಿದ ಭಿಕ್ಷುಕಿಯಾಗಿದ್ದೆ
ಹರಿದ ಹೃದಯಕ್ಕೆ ತೇಪೆ ಹಾಕಲು
ಭರವಸೆಗಳ ದಾರ ಹುಡುಕುತ್ತಿದ್ದೆ
ವಾಸ್ತವಿಕತೆಯ ಅರಿವು ಗುರುವಾಗಿ
ಭ್ರಮೆಯ ಮಂಜು ಸರಿದು ಹೋಗಿ
ಭಾವಗಳೆಲ್ಲ ಬೆತ್ತಲಾದಾಗ
ಕಳೆದು ಹೋಗುತ್ತಿದ್ದ ಅಸ್ಮಿತೆಯನ್ನು
ಪುನಃ ಸ್ಥಾಪಿಸಿ ಆಳುವಂತಾದೆ
ನನ್ನತನವ ಸಂಭ್ರಮಿಸುವಂತಾದೆ
****************
Beautiful