ಕವಿತೆ
ಇಬ್ಬನಿಯ ಹನಿಗಳು
ನಾಗರಾಜ್ ಹರಪನಹಳ್ಳಿ
-1-
ಇರುಳಲ್ಲಿ ಕನಸು
ಕಟ್ಟುವ ಮನಸು
ಪಕ್ಕದಲ್ಲಿ ಅಣಕಿಸುವ ಬೆಕ್ಕು
ಕೇವಲ ಶಬ್ದಧ್ಯಾನ ಸ್ವಪ್ನದಲಿ
ಬೆಳಗಾಗುತ್ತಲೆ
ಮುಸಿ ಮುಸಿ ನಗುವ ಗುಬ್ಬಚ್ಚಿಗಳು
-2-
ಮೌನವೆಂಬ ಆಗಸವ
ಅಪ್ಪಿದ್ದ ಮೋಡ ಕವುಚಿ ಬಿತ್ತು
ವಿರಹಿ ಭೂಮಿ
ಕಚಗುಳಿಯಲಿ ಒದ್ದೆಯಾಯಿತು
-3-
ರಸ್ತೆಯಲಿ ನಡೆದಳು
ಪಕ್ಕದ ಗಿಡಬಳ್ಳಿಗಳು
ಕಣ್ಣುಮಿಟುಕಿಸದೆ ನಿಂತವು
ಬೆಳಕಿಗೆ
ಯಾಕೋ ನಾಚಿಕೆ
-4-
ಯಾಕೋ ಈಚೆಗೆ
ಹಗಲಿಗೆ ಬೇಸರ
ಇರುಳಿಗೆ ಆಕಳಿಕೆ
ನೀನಿಲ್ಲದ ಹಗಲಿರುಳು
ಬೆತ್ತಲು ಆಕಾಶದಲಿ
ಸೂರ್ಯ ಒಬ್ಬಂಟಿ
…….
ಚಂದದ ಹನಿಗಳು
ಥ್ಯಾಂಕ್ಯೂ ಚೈತ್ರಾ