ಕವಿತೆ
ಕಂಬಿಯ ಹಿಂದಿನ ಅಳಲು….
ಶಂಕರಾನಂದ ಹೆಬ್ಬಾಳ
ಒಳಗೊಳಗೆ ಕೊತಕೊತ
ಕುದಿಯುತ್ತಿದ್ದೇನೆ,
ನಿಸೂರ ಹೊರಪ್ರಪಂಚ,
ನೋಡಲಿಲ್ಲ ಕೊಂಚ
ಅಂಚಿರ ಮನದಿ
ಕುಳಿತಿದ್ದೇನೆ…!
ಮಾಡದ ತಪ್ಪಿಗೆ
ಫಾಶಿ ಅನುಭವಿಸುತ್ತ,
ಅನಾಥ ಪ್ರೇತದ ತೆರದಿ
ಉತ್ಕಟದ ಒಲುಮೆ ಭಾವ
ತೋರುವ ಮನವನ್ನು ಅರಸಿ….!
ಒಮ್ಮೆ ಕೇಳಿದೆ ಭಗವಂತನಲ್ಲಿ..
” ಏಕೆ ಈ ಪರಿ ಶಿಕ್ಷೆ
ಇದ್ಯಾವ ನ್ಯಾಯ..?
ಯಾವ ತಪ್ಪಿಗೆ…?
ಸರ್ವತ್ರನಾದ ನಿನಗಿದು
ತರವೆ”
ನನಗೋ ಸತ್ಯವನ್ನು
ಅರಸುವ ಇರಾದೆ,
ಭಗವಂತ ಮುಗುಳ್ನಕ್ಕ..!
“ನಿನ್ನ ಪೂರ್ವ ಜನ್ಮದ ಪ್ರಾರಬ್ದ
ಕರ್ಮ ಅನುಭವಿಸು” ಎಂದ,
ಸುಪ್ತ ಮನಸಿನಲ್ಲಿ
ತಪ್ತ ಹೃದಯದೊಳಗೆ
ಮ್ಲಾನ ವದನನಾಗಿ….!
ಬಿಡುಗಡೆಯಂಬುದಿಲ್ಲ
ಆಸೆಗಳು ಅಂಬರವೇರಿವೆ
ಜಗದ ಮೂಸೆಯಲ್ಲಿ
ಬೇಯುತ್ತಿರುವೆ…..!
ಒಮ್ಮೆ ಜಪಿಸಿ ಮತ್ತೊಮ್ಮೆ
ಶಪಿಸುತ್ತ,
ಜಡ ವಸ್ತುವಂತೆ ಬಿದ್ದಿದ್ದೇನೆ
ನಿನ್ನನ್ನು ಕೂಡುವ
ಮಹದಾಸೆಯಿಂದ…!
***************************