ಸಾಧನಕೇರಿಯ ಸಂತೆಯಲ್ಲಿ
ನಾಲ್ಕುತಂತಿ
ಆರ್ ಜಿ ಹಳ್ಳಿ ನಾಗರಾಜ
ಅವರು ಬಂದರು ಇವರು ಹೋದರು
ಕಿಲಕಿಲ ನಗುತ್ತ ಕೈ ಕುಲುಕಿದರು
ಕೆನ್ನೆ ಸವರಿ ಪ್ರೀತಿಯಿಂದ ಅಪ್ಪಿದರು
ಪರಿಚಿತರು ಬೆರಗಿನಿಂದ ಬೆಚ್ಚಿದರು
ಅಸೂಯೆಯ ಕಣ್ಣುಗಳು ತೂಗಿ ತೊನೆದವು
ಅಪರಿಚಿತರು ಕುತೂಹದಿಂದ ಭೂಮಿ ಆಕಾಶ ಅಳೆದರು.
ಸಮುದ್ರದಂಥ ಸಂತೆ ಬಯಲು
ಮೊದಲ ದಿನ
ಎರಡನೇ ದಿನ
ಕೊನೆಯ ದಿನವೂ
ನಾವಿಬ್ಬರು ಭೇಟಿ ಆದೆವು.
ಜನ ನದಿಯಂತೆ ಹರಿಯುತ್ತಿದ್ದರು
ಮೈತುಂಬ ನೀಲಿ ಹೊದ್ದ
ಸಮುದ್ರದ ಅಲೆಗಳಲ್ಲಿ ತಲೆಗಳ ಲೆಕ್ಕವೇ ಇಲ್ಲ.
ಇಬ್ಬರಿಗೂ ಗಡಿಬಿಡಿ
ಮುಖಾಮುಖಿ ಕೃತಕ ನಗು
ಸೌಖ್ಯ ಕುಶಲತೆ… ಏನೋ ತಹತಹ!
ಮತ್ತೆ ಬದುಕಿನ ಏರಿಳಿತಗಳಿಗೆ
ಮಾತಿಗೆ ಸಲ್ಲಾಪಕ್ಕೆ ಸರಸಕ್ಕೆ
ತನ್ನವನ ಬಗ್ಗೆ ಅವಳಿಗೂ
ತನ್ನವಳ ಬಗ್ಗೆ ಅವನಿಗೂ ಹೇಳುವುದಿತ್ತು
ಹೊತ್ತು ಕಾಯುತ್ತಿರಲಿಲ್ಲ
ಅಲ್ಲಿ ಯಾರಿಗೂ ಸಮಯವೇ ಇರಲಿಲ್ಲ!
ನನ್ನ ಹೊಸ ಪುಸ್ತಕದ ಸಾಲುಗಳಲ್ಲಿ
ಅವಳೆಲ್ಲೋ ಅಡಗಿದ್ದಳು. ಎದುರು ಮತ್ತೆ
ಕಣ್ಣಲ್ಲೇ ತುಂಬಿಕೊಂಡು
ಪ್ರೀತಿಯಿಂದ ಸಹಿಯ ಮೊಹರು ಒತ್ತಿದೆ.
ಕೈಯೊಳಗಿನ ಮೊಬೈಲ್ ನಮ್ಮೊಳಗಿನ
ತವಕ ತಲ್ಲಣಗಳನ್ನೆಲ್ಲ
ಬಕಾಸುರನಂತೆ ಕಬಳಿಸಿತ್ತು.
ಪ್ರಿಯ ಮಾತುಗಳೆಲ್ಲ ಅಲ್ಲೆ ಉಳಿದವು
ಜನಜಂಗುಳಿಯಲ್ಲೂ
ನಾ ಖಾಲಿಖಾಲಿ ಅನ್ನಿಸಿತು.
ಸಾಧನಕೇರಿಯ ಒಲವ ಕವಿ
ಅಲ್ಲೆಲ್ಲೋ ಅವಿತು ನನ್ನ ಕೆಣಕಿದರು.
ನಾಕು ತಂತಿಯ ನಾದ ಹೃದಯ ಮೀಟಿತ್ತು.
ಅಜ್ಜನಿಗೆ ಕಿವಿಯಲ್ಲಿ ಉಸುರಿದೆ
ಬೊಚ್ಚು ಬಾಯಲ್ಲಿ ಹೊಟ್ಟೆತುಂಬಾ ನಕ್ಕರು.
ಶೂನ್ಯದಿಂದ
ಸೃಷ್ಟಿಯೆಡೆಗೆ ಸಾಗೊ ತಮ್ಮಾ ಅಂದರು!
ಬದುಕಿನ ಹಾದಿಗೆ ಬೆಳಕು ಮೂಡಿತು.
**********************************
ಜನಜಂಗುಳಿಯಲ್ಲೂ
ಖಾಲಿ ಖಾಲಿ ಅನಿಸಿತ್ತು
ಇಂತಹ ಅನುಭವಕ್ಕಾಗಿ ನಿಮ್ಮ ಕವನ ಓದಬೇಕು ಭೇಷ್
ಮೆಚ್ಚುಗೆಗೆ ತುಂಬಾ ಧನ್ಯವಾದ. ಇದೇ ಕವಿತೆಯ ತಲೆ ಬರಹದ ಹೆಸರಲ್ಲಿ ಕವನ ಸಂಕಲನ ಬರುತ್ತಿದೆ.
ಕವಿಮಿತ್ರ ಮಧುಸೂದನ್ ಅವರಿಗೆ ಧನ್ಯವಾದ.