ಅಪರೂಪದ ಗೆಳೆತನ

ಕವಿತೆ

ಅಪರೂಪದ ಗೆಳೆತನ

ಶಾಲಿನಿ ಕೆಮ್ಮಣ್ಣು

person holding gold ring in dark room

ನನ್ನೊಲುಮೆಯ ಗೆಳೆಯ
ನಿನ್ನ ನೆನಪಲಿ ಸರಿಯುತಿದೆ ಸಮಯ
ನಿನ್ನಿಂದ ಶುರುವಾದರೆ ದಿನಕ್ಕೆ ಶುಭಾರಂಭವು
ಆನಂದ,ನೆಮ್ಮದಿ,ಉತ್ಸಾಹ, ಹರುಷವು

ನೀ ನನ್ನೊಡನೆ ನಗಲು ಆ ದಿನ ನನಗೆ ಸುದಿನ
ನೀ ನುಡಿದರೆ ಸೌಮ್ಯದ ಸಾಂತ್ವಾನ
ನೀ ಖುಷಿಪಡಲು ಅದೇ ಹರಿದಿನ
ನೀ ಮುನಿದರೆ ದಿಗಿಲು, ಮನದಲ್ಲಿ ತಲ್ಲಣ

ಮಗುವಿನಂತಹ ಮುಕ್ತ ಪ್ರೀತಿ
ಸಹೋದರನ ಅಕ್ಕರೆಯ ಕಾಳಜಿ
ತಾಯಿಯ ಮಮಕಾರ ಮಮತೆಯ ಆಗರ
ದೇವರ ನಿಷ್ಕಲ್ಮಶ ವಾತ್ಸಲ್ಯ
ಈ ಎಲ್ಲವೂ ನಾ ನಿನ್ನಲ್ಲಿ ಕಂಡಿರುವೆ ಗೆಳೆಯ

ನಮ್ಮ ಈ ಗೆಳೆತನ ಒಂದು ವಿಸ್ಮಯ
ದಶಕಗಳ ಆಚೆಗಿನ ಸಹಪಾಠಿಗಳ ಪರಿಚಯ
ಅದೃಷ್ಟವೋ, ವಿಧಿಲಿಖಿತವೋ, ಯಾವ ಜನ್ಮದ ಋಣಾನುಬಂಧವೋ
ಅರ್ಧ ಮುಗಿದಿರುವ ಪಯಣದಲ್ಲಿ
ನಿರೀಕ್ಷೆಯೇ ಇಲ್ಲದೆ ಜೊತೆಯಾದೆ, ಮಿತ್ರನಾಗಿ ಬಂಧುವಾಗಿ
ಹೃದಯಕ್ಕೆ ಬಹು ಮೆಚ್ಚುಗೆಯಾಗಿ, ಮನಸ್ಸಿಗೆ ಹಿತವಾಗಿ
ಸ್ನೇಹಕ್ಕೆ ಬಂಧನವಿಲ್ಲ, ಮೇರೆ ಇಲ್ಲ, ಪಾರವಿಲ್ಲ
ಎಂಬುದನ್ನು ಖಚಿತಪಡಿಸಿದೆ

ಕೊನೆತನಕ ಜೊತೆ ಇರುವ ಭರವಸೆಯ ನೀನಿತ್ತೆ
ವಿಶ್ವಾಸ ಉಳಿಸಿಕೊಳ್ಳುವ ಆತ್ಮವಿಶ್ವಾಸ ನನ್ನಲ್ಲಿದೆ
ಬೆಸೆದೆ ನೀನು ನನ್ನೊಡನೆ ಅಪರೂಪದ ಹೊಸ ಬಂಧ
ಒಂದೊಮ್ಮೆ ಅನಿಸುವುದು ಬರಬಾರದಿತ್ತೆ ನೀನು ಆರಂಭದಿಂದ

ದೇಹ, ದೇಶ, ನೆಲೆಗಳ ಅಂತರಗಳಿಗೆ ಮೀರಿದ
ನೋಟ, ಮಿಲನ, ಸಂಬಂಧಗಳಿಗೆ ಸೀಮಿತವಲ್ಲದ
ಭಾವನೆಗೆ ಮಿಡಿಯುವ ಔದಾರ್ಯವೊಂದೇ ಸಾಕು; ಮಧುರ ಗೆಳೆತನವ ಸಾಬೀತುಪಡಿಸು ಅಷ್ಟೇ ಸಾಕು

************************

One thought on “ಅಪರೂಪದ ಗೆಳೆತನ

  1. Beautiful. A wonderful relationship in admirable words, superb. Richness of relation in perfect rich words, beautiful language. Loved it. Thank you for the gift to mother tongue.

Leave a Reply

Back To Top