ಕವಿತೆ
ವ್ಯಾಪಾರ
ಕಾಂತರಾಜು ಕನಕಪುರ
ಗಿಜಿಗುಡುವ ರಸ್ತೆಯ ಬದಿಯಲಿ
ಮುಖವಾಡಗಳ ಅಂಗಡಿಯು
ಬಗೆ ಬಗೆ ಗುಣದ ಬಣ್ಣದ ಮುಖವಾಡಗಳು
ಬನ್ನಿರಿ ಕೊಳ್ಳಿರಿ ಕರೆಯುತಲಿರುವ ವರ್ತಕನು
ಅಯ್ಯಾ…,ಅಣ್ಣಾ…,
ಅಕ್ಕಾ…., ಅಮ್ಮಾ… ಬನ್ನಿರಿ ಕೊಳ್ಳಿರಿ
ಅವರಿಗೂ-ಇವರಿಗೂ, ನಿಮಗೂ-ನಮಗೂ
ಎಲ್ಲರಿಗೊಪ್ಪುವ ಎಲ್ಲರೂ ಒಪ್ಪುವ
ಬಗೆ ಬಗೆ ಗುಣದ ಗಣಿಯಾಗಿರುವ
ಬಗೆ ಬಗೆ ಬಣ್ಣದ ಮುಖವಾಡ
ಶುಂಠರಾದರೆ ಇಲ್ಲಿದೆ ಬನ್ನಿ
ಪಂಡಿತೋತ್ತಮರ ಮುಖವಾಡ
ದ್ವೇಷದ ದಳ್ಳುರಿಯವರೇ ಧರಿಸಿರಿ
ನೀವು ಒಲುಮೆಯ ಮುಖವಾಡ
ಅನೃತ ಪುತ್ರರೇ ಚಿಂತಿಸಬೇಡಿರಿ
ಇಲ್ಲಿದೆ ನಿಮಗೆ ನನ್ನಿಯ ಮುಖವಾಡ
ಅನೈತಿಕತೆಯ ದೈತ್ಯರೇ ನಿಮಗಿದೋ
ಆಸ್ತಿಕತೆಯ ಅದ್ಭುತ ಮುಖವಾಡ
ತುಳಿಯುವವರಾದರೆ ಧರಿಸಿದರಾಯಿತು
ಅನುನಯ ಅನುಕಂಪದ ಮುಖವಾಡ
ಮೋಸಗಾರರೇ ಮರೆಯದೆ ಧರಿಸಿರಿ
ಪ್ರಾಮಾಣಿಕತೆಯ ಮುಖವಾಡ
ಪರಮಸ್ವಾರ್ಥಿಯು ಕೊಳ್ಳಲೇಬೇಕು
ತ್ಯಾಗಮೂರ್ತಿಯ ಮುಖವಾಡ
ವಿಘ್ನ ಸಂತೋಷಿಯು ಮೆರಸಲೇಬೇಕು
ಪರೋಪಕಾರಿಯ ಮುಖವಾಡ
ವ್ಯಾಘ್ರದ ಮನದವ ಧರಿಸಿಬೇಕು
ಬುದ್ಧನ ಮುಖವಾಡ
ಲಂಪಟರಾದರೆ ಮರೆಯದೆ ಕೊಳ್ಳಿರಿ
ಸಾತ್ವಿಕ ಮುಖವಾಡ
ಮುಖವನು ಮರೆಸುವ ಮುಖವಾಡ
ಮನವನೂ ಮರೆಸುವ ಮುಖವಾಡ
ತನ್ನದಲ್ಲದ್ದನ್ನು ಮೆರೆಸುವ ಮುಖವಾಡ
ಬದುಕುವ ಬಯಕೆ ಇರುವವರೆಲ್ಲರಿಗೂ
ಬೇಕಿದೆ ಬಗೆ ಬಗೆಯ ಮುಖವಾಡ
ಬೇಗನೆ ಬನ್ನಿರಿ ಬೇಗನೆ ಕೊಳ್ಳಿರಿ
ಬೇಕು- ಬೇಕಾದ ಮುಖವಾಡ
ಬಣ್ಣಗೆಟ್ಟರೆ ಸವಕಲಾದರೆ ಇರಲಿ
ಕೊಳ್ಳಿರಿ ಚೀಲದ ತುಂಬಾ ಮುಖವಾಡ
ನಿಮ್ಮ ನಿಜದ ಮುಖವು ಯಾರಿಗೆ ಬೇಕಿದೆ
ನಿಮಗೆ ಬೇಡದೆ ಹೋದರೂ ಧರಿಸಲು ಬೇಕಿದೆ, ಧರಿಸಿರಬೇಕಿದೆ ಬಗೆ ಬಗೆಯ ಮುಖವಾಡ
**************
♂️✍
Nice