ಕವಿತೆ
ಶಾಲಿನಿ ಕೆಮ್ಮಣ್ಣು


ಪ್ರಕೃತಿ ನಾ ನಿನಗೆ ಶರಣಾಗತಿ
ಕಿಟಕಿಯಿಂದ ನೋಡಿದೆ ನಾ ನಿನ್ನ ದೇಹ ಕೃತಿ
ನಳ ನಳಿಸುವ ನಿನ್ನ ಸುಂದರ ಪ್ರಸ್ತುತಿ
ಬಾನಂಚಿನಲ್ಲಿ ಓಕುಳಿ ಚೆಲ್ಲಿ ಮಿಂದ ಅರುಣ
ಮೇಲೇಳುತ್ತಾನೆ ರವಿ ಹೊಮ್ಮುತ ಹೊಂಗಿರಣ
ರಂಗಿನ ಚಿತ್ತಾರ ಬರೆದ ನಭದಲಿ ಬಾನು
ಬೆಳಕನು ಮಾಸಲು ಮರೆಯಲಿ ಓಡಾಡುವ ಮುಗಿಲು
ಮುಂಜಾನೆ ಮಂಜು ನಾಚಿ ಹನಿಯಾಗಿ ತೇಲಿ
ಬಿದ್ದು ಎಲೆಗಳ ಮೇಲಿಂದ ಮೆಲ್ಲನೆ ಜಾರಿ
ತಣ್ಣಗೆ ಹುಲ್ಲಿನ ಹಾಸಿನ ಮೇಲೆ
ಪೋಣಿಸಿತು ಮುತ್ತಿನ ರಂಗೋಲೆ
ಚಿಲಿಪಿಲಿ ಕಲರವ ಹೊತ್ತು ಸಾಗಿವೆ ಹಕ್ಕಿಗಳ ಸಾಲು
ನಾಟ್ಯಲೋಕದಲ್ಲಿ ವಿಹರಿಸುವ ಸಸ್ಯ ಸಂಕುಲದ ತೇರು
ಸುಂಯ್ ಎಂದು ಕಚಗುಳಿ ಇಟ್ಟು ಸೋಕುವಾಗ ತಂಗಾಳಿ
ಸ್ಪರ್ಶ ಸುಖಕ್ಕೆ ಮೈ ತೆರೆದು ಕುಣಿವ ಎಲೆಗಳ ನರ್ತ್ಯಾವಳಿ
ಹಸಿರಾಗಿ ಉಸಿರಾಗಿ ಮುದ ನೀಡುವ ನಿನ್ನ ಬೆಡಗು
ಅದೆಷ್ಟು ಮನಮೋಹನ ನಯನ ಮನೋಹರ ಸೊಬಗು
ಭಾವಲೋಕದಲ್ಲಿ ತೇಲಿಸುವ ನಿನ್ನ ಸೌಂದರ್ಯ
ಜೀವನದ ಬಣ್ಣಗಳ ತೆರೆದಿಡುವ ನಿನ್ನ ಔದಾರ್ಯ
ಪ್ರೇಮ ತ್ಯಾಗ ಸಹಬಾಳ್ವೆಯ ಶಿಖರ
ಮಾದರಿಯಾಗಬಾರದೆ ಜನ ಜೀವನಕ್ಕೆ ನಿನ್ನ ಪ್ರಕಾರ
ನಿನ್ನ ಮಡಿಲ ರಕ್ಷೆಯಲ್ಲಿ ಸುಖ ಆಲಿಂಗನದ ಬಿಸಿಯಲ್ಲಿ
ಮೈಮರೆತು ಬಿಡುವ ಆಸೆ ನೀಗಿಸು ನನ್ನೆಲ್ಲ ವಾಂಛೆ
ಒಂದೊಮ್ಮೆ ನಿನ್ನ ತಂಪಲ್ಲಿ ಹೊತ್ತು ಕಂಗೊಳಿಸು
ನನ್ನ ಜೀವನ ಪಾವನವಾಗಿಸಿ ಹರಸು.
**********************
ಪ್ರಕೃತಿಯೊಂದಿಗಿನ ಪ್ರೇಮ ️️️ ಚೆಂದದ ಕವಿತೆ
ಹಸಿರ ಸೊಗಡಿನ ನವಿರಾದ ಕವನ