ಸಾನೆಟ್
ವೃತ್ತದಿಂದಾಚೆ…
ಗೋಪಾಲ ತ್ರಾಸಿ
ಜಗದಗಲ ಪಸರಿಸಿರುವ ಒಳಿತು ಕಾರುಣ್ಯ ಮಮಕಾರ
ಬ್ರಹ್ಮಾಂಡ ಅಪ್ಪಿರುವ ಅಹಂಕಾರ ದುರಾಸೆ ದುಷ್ಟತನಕೆ
ಕನ್ನಡಿ ತೋರಿ ಕಣ್ಣು ಮಿಟುಕಿಸುವ ಕ್ರೂರ ಕಣ ಕರೋನಾ
ಈ ಕ್ಷಣದ ವಾಸ್ತವ ಅಥವ ಇನ್ನೂ ಬದುಕಿರುವವರ ಬವಣೆ ಅನ್ನಿ.
ನಂಬಿಕೆಯ ಬನದ ಸುತ್ತ ಹೆಪ್ಪುಗಟ್ಟಿದ ಮೌಢ್ಯದ ಹುತ್ತ
ಮಂಕು ಕವಿದು ಮೂಲೆ ಸೇರಿದ ಮನುಜಕುಲ ಕೋಟಿ
ಶುಶ್ರೂಸೆಗೆ ಜೀವ ಪಣಕಿಟ್ಟ ದೈವ ಸಂಭೂತ ವೈಧ್ಯಲೋಕ
ಕಾಲದ ಭದ್ರ ಮುಷ್ಟಿಯೊಳಗೆ ಬಂಧಿ ಛಲ ಬಿಡದ ಬದುಕು
ಅವಿರತ ನವನವೋನ್ಮೇಷ ಉನ್ಮಾದ, ಕರುನಾಳು ಪ್ರಕೃತಿ ಜೀವಾತ್ಮ ನಾಶ
ಸುಖ ಸಮೃದ್ಧಿ ಉನ್ಮತ್ತ ವಿಕಸನ ,ವಿಕೃತ ವೀರ್ಯಾಣು ಸ್ಖಲನ
ಬಿಂದು ತ್ರಿಜ್ಯ ವೃತ್ತದಿಂದ ಸಿಡಿದು ಪರಿಭ್ರಮಣ ಕಕ್ಷೆಯಾಚೆ
ನಭೋಮಂಡಲದಲಿ ದಿಕ್ಕು ಪಾಲಾಗಿ ಬಿಕ್ಕಳಿಸುವ ಮುಗ್ಧ ಮಾನವತೆ
ತಾಳಿ, ಕ್ಷೀಣ ಉಸಿರಿರುವ ಮಾನವೀಯತೆಗೆ ಅಂತಿಮ ಸಂಸ್ಕಾರವಲ್ಲ
ಸಧ್ಯ, ಸರ್ವ ಜೀವಜಾತಿಗಳ ಜೊತೆ ಸಹಜ ಮನುಷ್ಯರಾಗೋಣ.
Very meaningful !