ರಾಧೆಗೆ

ಕಥೆ

ರಾಧೆಗೆ

ಪ್ರೊ. ರಾಜನಂದಾ ಘಾರ್ಗಿ

[11:12 pm, 12/07/2021] GAARGI: ಆತ್ಮಿಯ ರಾಧೆ,

ಈ ಪತ್ರ ನೋಡಿ ಪರಿಚಯವಿಲ್ಲದೇ ಪತ್ರ ಬರೆಯುವ ನನ್ನ ಸಲಿಗೆಯ ಬಗ್ಗೆ ಆಶ್ಚರ್ಯವಾಗಿರಬಹುದು. ನಿನಗೆ ನಾನು ಗೊತ್ತಿಲ್ಲದಿದ್ದರೂ ನಿನ್ನ ಬಿಟ್ಟರೆ ನನ್ನ ಅಳಲು ತೊಡಿಕೊಳ್ಳಲು ಬೇರೆ ಯಾರಿಲ್ಲ ಎನಿಸುತ್ತಾ ಇದೆ. ನನ್ನನ್ನು ಅರ್ಥ ಮಾಡಿಕೊಳ್ಳ ಬಲ್ಲ ವ್ಯಕ್ತಿ ನೀನು ಮಾತ್ರ ಎನ್ನುವ ಭಾವನೆ ಮನದಲ್ಲಿ ಬೇರೂರಿ ಬಿಟ್ಟಿದೆ. ನನ್ನ ಸಮಸ್ಯೆಗಳಿಗೆ ಪರಿಹಾರವಿಲ್ಲದಿದ್ದರೂ, ನನಗೆ ಯಾರ ಸಹಾನೂಭೂತಿ ಬೇಡದಿದ್ದರೂ, ಅರ್ಥ ಮಾಡಿಕೊಳ್ಳುವವರು ಬೇಕು ಎನಿಸುತ್ತಾ ಇದೆ. ಅದಕ್ಕೆ ಪ್ರಯತ್ನ ಫಲವೇ ಈ ಪತ್ರ.

ನನ್ನನ್ನು ಅರ್ಥ ಮಾಡಿಕೊಳ್ಳಲು ನಿನಗೊಬ್ಬಳಿಗೇ ಸಾಧ್ಯ ಎನ್ನಲು ಕಾರಣವಿದೆ. ನನ್ನನ್ನು ನಿನ್ನಿಂದ ಬೇರೆ ಎಂದು ನಾನೆಂದೂ ಎಣಿಸಿಲ್ಲ. ನನ್ನ ವ್ಯಕ್ತಿತ್ವವನ್ನು ನಿನ್ನ ವ್ಯಕ್ತಿತ್ವದ ಸಾಚೆಯಲ್ಲಿ ಹಾಕಿ ಬೆಳೆಸಲು ಪ್ರಯತ್ನ ಪಟ್ಟಿದ್ದೇನೆ. ಯಾಕೆ ಹಾಗೆ ಮಾಡ್ತಾ ಇದ್ದೆನೆ ಎಂದು ಆರ್ಥವಾಗುವ ಮೊದಲೇ ಈ ಪ್ರಕ್ರಿಯೇ ಪ್ರಾರಂಭವಾಗಿ ಬಿಟ್ಟಿತು. ಮನಸ್ಸಿನ ಮೊಗ್ಗು ಅರಳಿ ಪ್ರೇಮದ ಸುವಾಸನೆ ಸೂಸೂವ ಮೊದಲೇ ನಿನ್ನ ವ್ಯಕ್ತಿತ್ವದ ಪ್ರತಿಬಿಂಬ ಮನದಲ್ಲಿ ಮೂಡಿ ಬಿಟ್ಟಿತ್ತು. ಯಾವ ಕೃಷ್ಣನೂ ಎದುರಾಗಿರಲಿಲ್ಲ, ಆದರೆ ನಾನು ರಾಧೆಯಾಗ ಬಯಸಿದ್ದೆ. ನಿನ್ನಂತೆ ಪ್ರೇಮ ಸಾಗರದಲ್ಲಿ ಮಿಂದು ನೆನೆಯ ಬಯಸಿದ್ದೆ. ಎಲ್ಲಕ್ಕಿಂತ ಮಿಗಿಲಾಗಿ ಸಮಾಜದ ಕಟ್ಟುಗಳನ್ನೆಲ್ಲ ಹರಿದು ಬೆಳೆಯ ಬಲ್ಲಂಥ ಉತ್ಕಟ ಪ್ರೇಮದ ಆಗಾಧತೆಯನ್ನು ಅನುಭವಿಸಲು ಬಯಸಿದ್ದೆ. ನನಗಿನ್ನೂ ನೆನಪಿದೆ. ಮೊಗ್ಗಾಗಿದ್ದವಳು ಇನ್ನೂ ಅರಳುತ್ತಾ ಇದ್ದೆ. ಶೋ ಕೇಸಗಳಲ್ಲಿದ್ದ ಗಂಧದ ರಾಧಾಕೃಷ್ಣರನ್ನು ಕುತೂಹಲದಿಂದ ನೋಡುತ್ತಾ ಇದ್ದೆ. ಕೃಷ್ಣನ ಭಾವಗಳತ್ತ ಯಾವತ್ತೂ ಗಮನ ಹರಿಯಲಿಲ್ಲ. ಆದರೆ ನಿನ್ನ ಮುಖದ ಭಾವಗಳನ್ನು ಓದಲು ಪ್ರಯತ್ನಿಸುತ್ತಾ ಇದ್ದೆ. ನಿನ್ನ ಕೈಯ ಬಳಸನ್ನು ಅನುಕರಿಸಿ ಅನುಭವಿಸಲು ಪ್ರಯತ್ನಿಸಿದೆ. ಆ ಪರವಶತೆಯನ್ನು ಅರಿಯಲು ಪ್ರಯತ್ನಿಸಿದೆ. ಆದರೆ ರಾಧೆಯಾಗಲು ಕೃಷ್ಣನ ಅವಶ್ಯಕತೆಯ ಅರಿವಿರಲಿಲ್ಲ. ಕೃಷ್ಣನಿಗಾಗಿ ಕಾಯಬೇಕಾಗಬಹುದೆಂದು ಗೊತ್ತಿರಲಿಲ್ಲ. ಗೊತ್ತಾದಾಗ ತಡವಾಗಿತ್ತು. ನಿನ್ನ ಅಂಶ ನನ್ನಲ್ಲಿ ಮೊಳಕೆಯೊಡೆದು ಬೆಳೆಯುತ್ತ ಮೈ ಮನಗಳೆನ್ನೆಲ್ಲಾ ಆವರಿಸಿಯಾಗಿತ್ತು. ಕೃಷ್ಣನಿಗಾಗಿ ಕಾಯಲೇ ಬೇಕಾಗಿತ್ತು. ಕೃಷ್ಣನಿಗಾಗಿ ಕಾಯುವವರಿಗೆ ಬೇರೆ ಪುರುಷರು ಬರಿಪುರುಷರಾಗಿ ಉಳಿದು ಬಿಡುತ್ತಾರೆ. ಇದನ್ನು ನಿನಗಿಂತ ಅರಿತವರಾರು? ನಾನು ಕಾಯುತ್ತಾ ಇದ್ದೆ. ಪುರುಷರಲ್ಲಿ ಕೃಷ್ಣನನ್ನು ಹುಡುಕುತ್ತಾ ಇದ್ದೆ. ಕೃಷ್ಣನನ್ನು ಮದುವೆ ಯಾಗುವುದು ಸಾಧ್ಯವಿಲ್ಲ ಎನಿಸಿತ್ತೊ ಅಥವಾ ಅಗತ್ಯವಿಲ್ಲವೆನಿಸಿತ್ತೊ ನೆನಪಿಲ್ಲ. ಆದರೆ ಮದುವೆಯ ಬಗ್ಗೆ ತೆಲೆ ಕೆಡಿಸಿಕೊಂಡಿರಲಿಲ್ಲ. ಅದೊಂದು ಸಂಪ್ರದಾಯ ಮಾತ್ರವಾಗಿತ್ತು. ಮದುವೆಯಾಗಬೇಕಿತ್ತು, ಆಯಿತು. ಪುರುಷ ಪತಿಯಾದ, ಸಂಗಾತಿಯಾದೆ, ಗೆಳೆಯನಾದ, ಮಕ್ಕಳ ತಂದೆಯಾದ ಆದರೆ ಅವನು ಕೃಷ್ಣನಾಗಿರಲಿಲ್ಲ. ನನಗೇನೂ ಆತಂಕವಿರಲಿಲ್ಲ, ಅವಸರವಿರಲಿಲ್ಲ. ರಾಧೆಗೆ ಕೃಷ್ಣ ಸಿಗಲೇಬೇಕು ಎಂಬ ಬರವಸೆ ಇತ್ತು. ನಿನಗೂ ಕೃಷ್ಣ ಸಿಕ್ಕದ್ದು ನಂತರವೇ ಅಲ್ಲವೇ ? ಕೃಷ್ಣನಿಗಾಗಿ ಮೈ ಎಲ್ಲಾ ಕಿವಿಯಾಗಿ, ಅವನ ಮುರುಳಿಯ ಧ್ವನಿಗಾಗಿ ಕಾಯುತ್ತಾ ಇದ್ದೆ. ಕೊನೆಗೂ ಕೇಳಿಸಿತ್ತು ಆ ದ್ವನಿ. ಮಂದವಾದ ಮುರಳಿಯ ಧ್ವನಿ ಕಿವಿ ಸೇರಿದಾಗ ರೋಮಾಂಚನ ಗೊಂಡಿದ್ದೆ.

      ನನ್ನ ಕಾಯುವಿಕೆ ಕೊನೆಗೊಂಡಿತ್ತು. ಹುಡುಕಾಟ ಫಲ ನೀಡಿತ್ತು. ಅದರೂ ತೊಳಲಾಟ, ಕೃಷ್ಣನನ್ನು ಗುರುತಿಸುವಲ್ಲಿ ಗೊಂದಲ, ನಿನಗರ್ಥವಾಗ ಬಹುದು ಈ ತುಮುಲ. ಜೀವನವಿಡಿ ಕಾಯ್ದ ಘಳಿಗೆ ಅದರೆ ಕೈ ನೀಡಿ ಆಯ್ದುಕೊಳ್ಳಲು ಆತಂಕ. ನನ್ನಲ್ಲಿ ಹೊಸದಾಗಿ ಬೆಳೆದಿದ್ದ ಗೃಹಿಣಿ ರಾಧೆಯ ಅಂಶವನ್ನು ಬಲವಾಗಿ  ಅವರಿಸಿಕೊಂಡಿದ್ದಳು. ಬಾಗಿಲು ಕಿಡಿಕಿಗಳನ್ನೆಲ್ಲ ಮುಚ್ಚಿಕೊಂಡಿದ್ದೆ. ಮುರಳಿಯ ಕರೆಯನ್ನು ಹೊರಗೆ ತಡೆಯಲು ಪ್ರಯತ್ನಿಸಿದ್ದೆ. ಆದರೆ ತೊರಿ ಬಳಿ ಬಂದ ಧ್ವನಿಯ ಸೆಳೆತವನ್ನು ತಡೆಯಲಾರದೇ ಬಾಗಿಲನ್ನು ಕಿತ್ತೊಗೆದು ಹೊರಗೊಡಿದ್ದೆ, ಮುರುಳಿಯ ಧ್ವನಿಯನ್ನು ಹಿಂಬಾಲಿಸಿದ್ದೆ. ನಿನಗರ್ಥವಾಗುತ್ತದೆ. ನೀನೂ ಹಾಗೆ ಒಡಿದ್ದು ಎಂದು ಕೇಳಿದ್ದೇನೆ. ಆತ್ಮ ಪರಮಾತ್ಮರ ಮಿಲನ ಎಂದು ಅರ್ಥೈಸಿದ್ದಾರೆ ಆ ಮಿಲನವನ್ನು ವೇದಾಂತಿಗಳು. ನನಗೆ ಕಾಲಚಕ್ರ ನಿಂತು ಹೋಗಿತ್ತು. ಅರಳುವಾಗ ನಿನ್ನ ಮುಖದಲ್ಲಿ ಗುರುತಿಸಿದ ಭಾವನೆಗಳನ್ನೆಲ್ಲ ಅನುಭವಿಸಿದೆ. ಅದೇ ಆರಾಧನೆ, ಅದೆ ಪರವಶತೆ, ಅದೆ ತನ್ಮಯತೆ. ಕಣ್ಣಲ್ಲಿ ಮನೆ ಮಾಡಿದ್ದ್ದ ಕನಸುಗಳು ನನಸಾಗಿದ್ದವು. ಜನ್ಮ ಸಾರ್ಥಕವಾಗಿತ್ತು. ನನ್ನ ಜಗತ್ತೆ ಬೇರೆಯಾಗಿತ್ತು. ಕೃಷ್ಣನ ಹೊರತಾಗಿ ಸುತ್ತ ಮುತ್ತಲಿನ ಆಗು ಹೋಗುಗಳಿಗೆ ಕಣ್ಣು ಕುರುಡಾಗಿ ಬಿಟ್ಟಿತ್ತು. ಕೃಷ್ಣನ ಮುರುಳಿಯ ಹೊರತಾಗಿ ಬೇರೆ ಧ್ವನಿಗಳಿಗೆ ಕಿವಿ ಕಿವುಡಾಗಿ ಬಿಟ್ಟಿತ್ತು. ಈ ಉತ್ಕಟತೆಯ ಅನುಭವಕ್ಕಾಗಿಯೇ ನಾನು ನೀನಾಗ ಬಯಸಿದ್ದೆ. ಜೀವನವಿಡಿ ಕಾಯುತ್ತಾ ಇದ್ದೆ. ಇದು ಯಾರಿಗೆ ಅರ್ಥವಾದೀತು? ಗಳಿಸುವುದು ಉಳಿಸುವದೇ ಜೀವನದ ಧ್ಯೆಯವಾಗಿರುವ ಸಮಾಜದ ಗುತ್ತಿಗೆದಾರರಿಗೆ ಹೇಳಿದರೆ ನನಗೆ ಹುಚ್ಚಿಯ ಪಟ್ಟ ಕಟ್ಟಲಿಕ್ಕಿಲ್ಲವೇ? ಜವಾಬ್ದಾರಿಯ ಬೇಡಿ ತೊಡಿಸಿ ಬಂಧಿಸಲಿಕ್ಕಿಲ್ಲವೇ? ಆದರೂ ನಿನ್ನಷ್ಟು ಧೈರ್ಯ ನನಗಿರಲಿಲ್ಲ. ಸಾಮಾಜಿಕ ಸಂಪ್ರದಾಯಸ್ಥ ಮೌಲ್ಯಗಳಲ್ಲಿ ಬಂದಿತಳಾದ ಗೃಹಿಣಿ ಮತ್ತು ಕೃಷ್ಣನ ರಾಧೆ ಈ ಎರಡೂ ಪಾತ್ರಗಳ ಬದುಕು ನಿನಗರ್ಥವಾಗಲಿಕ್ಕಿಲ್ಲ. ಯಾಕೆಂದರೆ ನೀನು ಯಾವತ್ತೂ ತೊರಿಕೆಯ ಜೀವನ ಜೀವಿಸಲಿಲ್ಲ. ನಿನ್ನನ್ನು ನೀನು ತೆರೆದಿಟ್ಟು ಬಿಟ್ಟೆ. ಕೃಷ್ಣನ ರಾಧೆಯಾಗಿ ಗುರುತಿಸಿಕೊಂಡು ಬಿಟ.್ಟ ಅದೇ ನನ್ನ ಅಳಲು. ಬಯಸಿದರೂ ನಾನು ಯಾವತ್ತೂ ಪೂರ್ಣವಾಗಿ ರಾಧೆಯಾಗಲು ಸಾಧ್ಯವಾಗಲಿಲ್ಲ.

ನಿಜವಾಗಿಯೂ ರಾಧೆಯಾಗ ಬಯಸಿದ ನನಗೆ ನಿನ್ನದೇ ಅನುಭವಗಳ ತಟ್ಟೆ ನನ್ನೆದುರು ಬರಬಹುದು ಎಂದು ಕೊಂಡಿರಲಿಲ್ಲ. ಪ್ರೀತಿಯ ಅಮೃತವನ್ನು ಉಣಸಿ, ತನ್ನಲ್ಲಿ ನಿನ್ನನ್ನು ಕರಗಿಸಿಕೊಂಡ ಕೃಷ್ಣ ಕರ್ತವ್ಯದ ಕರೆಗೆ ಒಗೊಟ್ಟು ಮಧುರೆಗೆ ಹೊರಟು ನಿಲ್ಲಲಿಲ್ಲವೇ? ಎಲ್ಲಾ ಕೃಷ್ಣರೂ ಹಾಗೇ ಇರಬಹುದು. ರೆಕ್ಕೆ ಕತ್ತಿರಿಸಿದ ಹಕ್ಕಿಯಂತೆ ಚಟಪಡಿಸಿರಬಹುದಲ್ಲವೇ ನೀನು.?  ಹೇಗೆ ಒಪ್ಪಿಸಿದ ನಿನ್ನನ್ನು ? ಅವನು ಮಾತಿನಲ್ಲಿ ಜಾಣ ಪ್ರೀತಿಯ ವ್ಯಾಖ್ಯೆಯನ್ನೆ ಬದಲಾಯಿಸಿರಬಹುದು. ಹೃದಯಗಳು ಒಂದಾಗಿರುವಾಗ ದೈಹಿಕ ಅಂತರ ಅಗಣ್ಯ ಎಂದು ಹೇಳಿರಬಹುದು. ತಾನು ದೂರ ಮಧುರೆಯಲ್ಲಿದ್ದರೂ ನಿನ್ನವನೇ, ತನ್ನ ಹೃದಯ ನಿನ್ನಲ್ಲೆ ಇರುತ್ತದೆ, ಎಂದಿರಬಹುದು. ಈ ಎಲ್ಲಾ ಮಾತುಗಳು ಪರಿಚಿತ ಎನಿಸುತ್ತಿವೆ. ಇಷ್ಟೇಲ್ಲ ಕೇಳಿ ರಾಧೆ ಕೃಷ್ಣನನ್ನು ತಡೆದರೆ ಚಿಕ್ಕವಳಾಗಿ ಬಿಡುತ್ತಾಳೆ. ಕಣ್ಣಿರು ಸುರಿಸಿದರೆ ಅಪ್ರಬುದ್ಧಳಾಗುತ್ತಾಳೆ. ಸಾಮಾನ್ಯ ಹೆಣ್ಣಾಗಿ ಬಿಡುತ್ತಾಳೆ. ಹಾಗಾದರೆ ಮತ್ತೇನು ಮಾಡಿದೆ ನೀನು? ಅವನ ರಥವನ್ನು ಹಿಂಬಾಲಿಸಲಿಲ್ಲವೇ? ದಣಿದು ಕಾಲಲ್ಲಿ ಬಲವೇಲ್ಲ ಇಳಿದು ಕೆಳಗೆ ಕುಸಿಯಲಿಲ್ಲವೆ? ನಾನೂ ಹಿಂಬಾಲಿಸಿದ್ದೆ.  ನಂತರ ಕುಸಿದು ಅವನೆದುರು ಹಿಡಿದಿಟ್ಟ ಕಣ್ಣಿರು ಕೋಡಿಯನ್ನು ಹರಿಸಿದ್ದೆ. ಆದರೆ ಕಣ್ಣಿರಿಗೆ ಕರಗುವವನು    ಸಾದಾರಣ ಪುರುಷ, ಕೃಷ್ಣನಲ್ಲ ಆತ ಹೊರಟು ಹೋಗಿದ್ದ. ದೂರವಿದ್ದು ಪ್ರೀತಿಸುವ ಆಶ್ವಾಸನೆಗಳ ಮಾಲೆಯನ್ನು ಕೊರಳಿಗೆ ತೊಡಿಸಿ ಹೋಗಿದ್ದ. ಆದರೆ ದೂರವಿದ್ದು ಪ್ರೀತಿಸುವ ಈ ಪರಿ ನನಗೆ ಯಾವತ್ತೂ ಅರ್ಥವಾಗಿಲ್ಲ. ಮೀರಾಳ ಆರಾಧನೆ ಪೂಜನೀಯ ಆದರೆ ನಾನೇಂದೂ ಮೀರಾ ಆಗಲು ಸಾಧ್ಯವಿಲ್ಲ ಯಾಕೆಂದರೆ ಮೀರಾ ಯಾವತ್ತೂ ಕೃಷ್ಣನ ಬಾಹುಗಳಲ್ಲಿ ಕರಗಲಿಲ್ಲ, ಅವನ ಸ್ಪರ್ಷದ ರೊಮಾಂಚನ ಅನುಭವಿಸಲಿಲ್ಲ. ಅವನ ಮುರುಳಿಯ ಧ್ವನಿಯನ್ನು ಕಿವಿಯಲ್ಲಿ ತುಂಬಿಕೊಳ್ಳಲಿಲ್ಲ. ಅದಕ್ಕೆ ಅವಳ ಆರಾಧನೆ ಅವಳಿಗೆ ಸುಲಭ, ನನಗಲ್ಲ. ಈ ಅನುಭವಗಳ ನಂತರವೂ ದೂರವಿದ್ದು ಪ್ರೀತಿಸುವ ಪರಿ ನಿನಗರ್ಥವಾಗಿರಬಹುದು. ಅದಕ್ಕೆ ಕೃಷ್ಣನ ನಿರ್ಗಮನದ ನಂತರ ನೀನು ಉಸಿರೆತ್ತಲಿಲ್ಲ. ಮೌನಿಯಾಗಿ ಬಿಟ್ಟೆ. ನಿನ್ನ ಮೌನವೇ ಅವನನ್ನು ಕಟ್ಟಿ ಹಾಕಿತೆ? ಅದಕ್ಕೆ ಹದಿನಾರು ಸಾವಿರ ಹೆಂಡಿರ ಪತಿಯಾದರೂ ಅವನು ರಾಧೆಯ ಕೃಷ್ಣನಾಗಿ ಉಳಿದು ಬಿಟ್ಟೆ. ತನ್ನ ಹೆಸರಿನ ಜೊತೆ ನಿನ್ನ ಹೆಸರನ್ನು ಜೊಡಿಸಿಕೊಂಡು ಬಿಟ್ಟೆ. ನೀನು ಅಸ್ತಿತ್ವವನ್ನೇ ಕಳೆದುಕೊಂಡು ಕತ್ತಲೆಯ ಜೀವನಕ್ಕೆ ಸರಿದು ಬಿಟ್ಟೆ. ಕೃಷ್ಣನ ನಿರ್ಗಮನದ ನಂತರ ಕರಗಿಬಿಟ್ಟೆ. ನಾನು ನಿನ್ನ ಹಾಗೆ ಮೌನಿಯಾಗಲೇ? ಕತ್ತಲೆಯಲ್ಲಿ ಕರಗಿ ಹೋಗಲೇ ? ಆದರೆ ಚಿರಾಡುತ್ತಿರುವ ಮೈ ಮನಗಳನ್ನೆನು ಮಾಡಲಿ ? ನಿನ್ನಲ್ಲೇ ನನ್ನನ್ನು ಹುಡುಕಿಕೊಂಡ ನಾನು ನಿನ್ನತ್ತರಕ್ಕೆ ಹೇಗೆ ಬೆಳಯಲಿ ? ದ್ವಾಪರ ಯುಗದ ಕೃಷ್ಣ ರಾಧೆಯವನಾಗಿ ಉಳಿದಂತೆ ನನ್ನ ಕೃಷ್ಣನನ್ನು ನನ್ನವನನ್ನಾಗಿ ಉಳಿಸಿಕೊಳ್ಳಲು ಸಾಧ್ಯವೆ ? ನನ್ನೆಲ್ಲ ಅಸ್ತಿತ್ವವನ್ನು ಕರಗಿಸಿಕೊಂಡು ಪ್ರೇಮಿಸಲು ಸಾದ್ಯವೇ ?

ಸಾಮಾಜಿಕ ಮೌಲ್ಯಗಳ ಪ್ರಖರತೆಯಲ್ಲಿ ಸಂವೇದನೆಗಳನ್ನು ಸುಟ್ಟುಕೊಂಡ ಸಂಬಾವಿತರ, ಪ್ರೇಮವೆಂಬ ಪದವನ್ನೇ ಮೈಲಿಗೆಯಾಗಿಸಿಕೊಂಡ ಮಡಿವಂತರ, ಸಂಪ್ರದಾಯಸ್ಥರ, ಈ ಸಮಾಜದಲ್ಲಿ ನೀನು ಅಘಾದವಾಗಿ ಬೆಳೆದು ನಿಂತೆ, ಆರಾಧಿಸಿಕೊಂಡೆ, ಪೂಜಿಸಿಕೊಂಡೆ, ಆದರೆ ನಿನ್ನಿಂದ ಪ್ರಭಾವಿತಳಾದ ನನಗೆ, ನಿನ್ನ ಅಂಶವನ್ನೆ ಬೆಳೆಸಿಕೊಂಡು ಕೃಷ್ಣನ ರಾಧೆಯಾಗಲು ಹಂಬಲಿಸುತ್ತಿರುವ ನನಗೆ, ಇಹದಲ್ಲಾಗಲಿ ಪರದಲ್ಲಾಗಲಿ ಸ್ವೀಕೃತಿಯಾದರೂ ಸಿಗಬಹುದೆ. ? ನನ್ನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನಿನ್ನ ಹತ್ತಿರವೂ ಸಿಗಬಹುದೆಂಬ ಭರವಸೆ ನನಗಿಲ.್ಲ ಆದರೆ ಹೃದಯದ ಈ ಕುದಿತದೊಂದಿಗೆ ಏಕಾಂಗಿಯಾಗಿರುವ ನನಗೆ ಈ ಒತ್ತಡವನ್ನು ಹಂಚಿಕೊಳ್ಳಬಲ್ಲ ಸಖಿ, ಸಂಗಾತಿ ನೀನಲ್ಲದೇ ಇನ್ನಾರಾಗಲು ಸಾಧ್ಯ ?

ಇಂತಿ ನಿನ್ನವಳೇ ಆದ

    ನಿನ್ನ ಸಖಿ

***********************************

2 thoughts on “ರಾಧೆಗೆ

Leave a Reply

Back To Top