ಕವಿತೆ
ಚೆಂದದ ತಪ್ಪು
ಎದೆಯ ಹೊಕ್ಕು
ನಾಗರಾಜ್ ಹರಪನಹಳ್ಳಿ
ಅಲ್ಲಿರುವ ನೀನು
ಈ ಜೀವದ ಕಣ್ಣೊಳಗಿನ ಬೆಳಕಾದುದು ಹೇಗೆ ?
ಬಳಿ ಬಂದ ಬೆಕ್ಕು ತೊಡೆಯೇರಿ
ಅಧಿಕಾರದಿ ಪವಡಿಸುವ ಹಾಗೆ
ಪ್ರೀತಿ ಕಾರಣವಾಗಿ…
ಬೇಡ ಬೇಡ ಎಂದರೂ ನಿನ್ನನೆ
ಧ್ಯಾನಿಸುವ ಮನಸು
ಕುಹಕ ಜನರ ನಡುವೆಯೂ
ಅನುಭವಿಸಿದ ಅವಮಾನ
ಹತ್ತಿರದವರು ಮುಂದೆ ಚೆಂದವ ನಟಿಸಿ ;
ಹಿಂದೆ ವ್ಯಂಗ್ಯದ ಮುಖವಾಡಗಳ
ಕಂಡದ್ದಾಯಿತು
ಯಾಕೆ ಬೇಕಿತ್ತು ಈ ಬಡಜೀವಕೆ
ಪ್ರೀತಿಯ ಗತ್ತು ಗೈರತ್ತು
ಎಂದು ಕೊಂಡರೂ
ಚೆಂದದ ತಪ್ಪು ಎದೆ ಹೊಕ್ಕು ಕಾಡುವುದಾದರೂ ಹೇಗೆ?
ಪ್ರೀತಿಯೆಂದರೆ ಹಾಗೆ
ಕಾರಣವೇ ಇಲ್ಲದೆ
ಮಗು ಹಠವಿಡಿದಂತೆ…..
ಮಟ ಮಟ ಮಧ್ಯಾಹ್ನ
ನಟ್ಟ ನಡುರಾತ್ರಿಯಲಿ ನೆನಪಾದವಳು ;
ಎಂದೂ ದಕ್ಕದವಳು
ಹೀಗಿದ್ದೂ
ಕಾಡುವ ,ಕುದಿಯುವವರ ಕಿಚ್ಚಿಗೆ
ಗೆದ್ದೇ ತೀರಬೇಕೆಂಬ ಹಠ ಹುಟ್ಟುವುದಾದರೂ ಹೇಗೆ ?
ಅವುಡುಗಚ್ಚುತ್ತೇನೆ ಒಮ್ಮೊಮ್ಮೆ
ಯಾಕೆ ಹೀಗೆ !!??
ಜೋಡಿ ಗುಬ್ಬಚ್ಚಿ
ಹಾಡು ಹಗಲೇ
ಮನೆಯ ಬೆಟ್ಟೆ ಒಣಗಿಸುವ ಬಿದಿರು ಕೋಲ ಮೇಲೆ ಪ್ರೇಮಿಸಿ ಸಲ್ಲಾಪಿಸಿ ಕೆಣಕಿದವು
ಪ್ರೀತಿಯೆಂದರೆ ಹೀಗೆ …!!
ಇರುವೆ ಸಾಲು ತನ್ನ ಮೊಟ್ಟೆಯ
ಸುರಕ್ಷತೆಗೆ ಹೊತ್ತು ಸಾಗಿದಂತೆ
ಬಸವನ ಹುಳು ತನ್ನ ಅರಮನೆಯ ಹೊತ್ತು
ನಿಧಾನ ಚಲಿಸಿ ಚಲಿಸಿ ಠಾವು
ಹುಡುಕಿದಂತೆ
ಪ್ರೀತಿಯೆಂದರೆ ಹೀಗೆ
ನೀ ನಡೆವ ದಾರಿಯ ಪಕ್ಕ
ಹುಲ್ಲಿನ ದಳಗಳ ಮೇಲೆ ಇಬ್ಬನಿ ಕುಳಿತು ಕಣ್ಣ ಮಿಟುಕಿಸಿದಂತೆ
ಪ್ರೀತಿಯೆಂದರೆ ಹಾಗೆ
ಅಲ್ಲಿರುವ ನೀನು
ಇಲ್ಲಿರುವ ಜೀವಕೆ ಜೀವ
ಬೆಸುಗೆಯಾದಂತೆ
ಬೆಡಗಿಗೆ ಬೆಡಗು ಬಂದಂತೆ
*****************************
ಕವಿತೆಯಲ್ಲಿ ಕವಿಗೆ ನಾಯಕಿಯು ಕಣ್ಣೊಳಗಿನ ಬೆಳಕು,ಆದ್ರೂ ಆಕೆ ಎಂದೂ ಎಂದೆಂದಿಗೂ ದಕ್ಕಳು ಎಂಬ ಸುಪ್ತ ಚೇತನದ ಎಚ್ಚರಿಕೆಯ ನಡುವೆಯೂ ಆಕೆಯನ್ನು ದ್ಯಾನಿಸುವ ಮಂಗಮನ್ಸಿಗೆ ಕವಿಮನಸ್ಸು ಕೇಳುವ ಮಾತೊಂದೆ ಯಾಕೆ ಬೇಕು ಬಡ ಜೀವಕೆ ಪ್ರೀತಿಯ ಗತ್ತು. ಜೋಡಿಗುಬ್ಬಿಯ ಚೆಂದದ ಒಡನಾಟ ಕವಿಮನವನ್ನ ಕೆಣಕಿದರೂ ಆತ ಎಂದಿಗೂ ಆಕೆಯ ಮೇಲಿನ ವಾಂಚಲ್ಯಕ್ಕೆ ಕಪ್ಪು ಕಣ್ಣಿಟ್ಟವನಲ್ಲ ಬದಲಾಗಿ ತಾಯಿ ಇರುವೆಯ ಮಾತೃನೋಟ, ತಂದೆಯಂತ ಬಸವನ ಹುಳುವಿನ ಜವಾಬ್ದಾರಿ,ಜೊತೆಗೆ ಇದ್ದು ಇಲ್ಲದಂತೆ ಕರಗಿ ಹೋಗುವ ಇಬ್ಬನಿಯ ಸವಿನೋಟದಂತೆ ದೂರದ ಆಕೆಯ ಜೀವಂತಿಕೆಯೇ ತನ್ನ ಬದುಕಿನ ಬೆಡಗೆಂದು ಬಗೆದು ಬದುಕುವ ಬಾವ ಜೀವಿ… ಯಾಕೆಂದರೆ ಆತ ಕವಿ…… ಸರ್ ಚೆಂದದ ಕವಿತೆ
ಭುವನೇಶ್ವರಿ ಟೊಂಗಳೆ .
ಕನ್ನಡ ಉಪನ್ಯಾಸಕರು
ಬಾಗಲಕೋಟೆ.
ಥ್ಯಾಂಕ್ಸ. ಸಹೃದಯ ಓದು ಹಾಗೂ ವಿಮರ್ಶೆಗೆ..