ಕವಿತೆ
ಅವಳು ಮಲ್ಲಿಗೆ
ವೀಣಾ ರಮೇಶ್
ಮನ ಮುಗಿಲಲ್ಲೂ ಹಬ್ಬಿ
ನಿಂತ ಪ್ರಿಯಲತೆ
ಮುಗುದೆ ಮುನಿಸು ತಬ್ಬಿ
ನಗು ಮುಗುಳು ಮಿಂಚಿತೆ
ಅವಳು ನನ್ನ ಕವಿತೆ, ಗೀತೆ
ಮೋಹ ಗಂಧದ ಚಾರುಲತೆ
ಅಧರಗಳು ಅದುರಿ
ತನು ಕಂಪನದಲಿ ಮುದುರಿ
ಪ್ರತಿ ಮೂಲೆಯಲ್ಲೂ ಬಿತ್ತು
ಅವಳದ್ದೇ ಹಾಜರಿ
ಬಂದು ಹೋದ ವೈಖರಿ
ಮೈ ಮನಗಳು ಚುಂಬಿಸಿದಷ್ಟೇ ಭಾರ
ಆದರೆ
ಮಲ್ಲಿಗೆಯಷ್ಟೇ ಹಗುರ
ಮಲ್ಲಿಗೆ ತೂಕದವಳೇನೂ ಅಲ್ಲ
ಮಲ್ಲಿಗೆ ನಡಿಗೆಯವಳು
ಸದ್ದಿಲ್ಲದ ಹೆಜ್ಜೆಗಳು
ಮೃದು ಮಲ್ಲಿಗೆಯ ದಂಡೆ
ಮಧುರ ಭಾವ ಗಂಧ ಅವಳು
ಮುಟ್ಟಿದರೆ ಮುತ್ತುವಳು
ಮತ್ತೆ ಬಾಚಿ ಹಿಡಿದರೆ
ಎದೆಯ ತುಂಬಾ ಪರಿಮಳ
ಹರಡುವಳು
ಅವಳು ಮೆಲ್ಲಗೆ ಅರಳೋ
ಮಲ್ಲಿಗೆ
ನನಗಿಷ್ಟ ಬಂಗಾರಿ ನಗೆ ಮಲ್ಲಿಗೆ
**********