ಗಜಲ್ ಜುಗಲ್ ಬಂದಿ-07

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-07

Watercolour, Watercolor, Paint, Ink

ದುರಿತಗಳು ಬೆನ್ನೇರಿ ಕೂತು ನಾಳೆಗಳು ಕಾಣೆಯಾಗಿವೆ
ಅಸಹಜ ಸಂಗತಿ ಬಂದೆರಗಿ ನಿರೀಕ್ಷೆಗಳು ಕಾಣೆಯಾಗಿವೆ

ಭಯವು ಸರಣಿಯಾಗಿ ಮೊಟ್ಟೆಯಿಡುತ್ತಲೇ ಸಾಗುತ್ತಿದೆ
ನೋವಿನ ಮರಿ ಬೆಳೆದು ನಲಿವಿನ ಸೆಲೆಗಳು ಕಾಣೆಯಾಗಿವೆ

ಆಸರೆಗಾಗಿ ಹಂಬಲಿಸಿ ಹೋಗಿ ಕೈ ಸೆರೆಯಾಗಬಾರದಲ್ಲವೇ
ಒಳಗುದಿಯ ಹಂಚಿಕೊಳ್ಳುವ ಹೂಮನಗಳು ಕಾಣೆಯಾಗಿವೆ

ಕ್ಷಮಿಸು ಎಂದವರು ಕ್ಷಮೆಯ ಕೈಗಳನ್ನೇ ಕಟ್ಟಿಹಾಕಿದ್ದಾರೆ
ಮಾತಿನ ತೂಕ ಹೊತ್ತು ಸಾಗುವ ನಡೆಗಳು ಕಾಣೆಯಾಗಿವೆ

ಅರ್ದ ಎಳೆದ ‘ರೇಖೆ’ಗಳು ಪ್ರಶ್ನಾರ್ಥಕ ಚಿಹ್ನೆಗಳಾಗಿ ನಿಂತಿವೆ
ಮನದಲ್ಲಿ ಪಡಿಮೂಡಿದ್ದ ಮುನ್ನೆಲೆಗಳು ಕಾಣೆಯಾಗಿವೆ

ರೇಖಾ ಭಟ್

****************

ದಾರಿಗಳು ತೆರೆದು ಕೊಂಡರೂ ಹೆಜ್ಜೆಯ ಚಲನೆಗಳು ಕಾಣೆಯಾಗಿವೆ.
ಸಹಜತೆಯಲ್ಲೂ ದುಗಡ,ಪ್ರೀತಿ ಮಾತುಗಳು ಕಾಣೆಯಾಗಿದೆ.

ಮುನಿದ ಭಾವಗಳ ನಗಿಸಿ ಅಪ್ಪಿದ್ದು ನಿನ್ನ ಮುದಗೊಳಿಸಲು
ನಿರ್ಲಿಪ್ತ ಮನಸಿಗೆ ಬೆಚ್ಚನೆಯ ಸ್ಪರ್ಶಗಳು ಕಾಣೆಯಾಗುವೆ

ಆಸೆಗಳಿಲ್ಲದ ಬದುಕು ಬಯಲಿಗೆ ತೆರೆದು ಕೊಳ್ಳುವುದೆಂತು
ಕನಸ ಗೂಡಿನ ಒಳಮನೆಯ ಆಪ್ತತೆಗಳು ಕಾಣೆಯಾಗಿವೆ

ಪ್ರೀತಿಸಿದ್ದಕ್ಕೆ ಪುರಾವೆಗಳ ಕೇಳುವುದು ವಿಹಿತವೇ ಹೇಳು,
ಪ್ರೇಮದ ಪಲ್ಲಕ್ಕಿಯಲ್ಲೀಗ ಕಲರವಗಳು ಕಾಣೆಯಾಗಿವೆ.

ಸಮರ್ಪಣೆಯ ಭಾವಬರದೇ ಜೀವದ ಸಮ್ಮಿಲನ ಹೇಗೆ “ಸ್ಮಿತ”
ಜೀವದೊಳಗೆ ಬೆರೆತ ಮಧುರ ಗಳಿಗೆಗಳು ಕಾಣೆಯಾಗಿವೆ.

ಸ್ಮಿತಾ ಭಟ್

*********************************

3 thoughts on “

  1. ರೇಖಾ ಅವರೆ ಗಜಲ್ ಜುಗಲ್ ಬಂದಿ ಸೊಗಸಾಗಿ ಮೂಡಿಬಂದಿವೆ

Leave a Reply

Back To Top