ಕವಿತೆ
ಕನ್ಯತ್ವಪೊರೆ ಕಳಿಚಿದಾಗ..
ಅಭಿಜ್ಞಾ ಪಿ ಎಮ್ ಗೌಡ
ಹೆಣ್ಣಿನ ಹದಿಹರೆಯದ ಹೊಸ್ತಿಲ
ಚೆಲುವಾಂಕುರದ
ನವಿರೇಳುತಿಹ ಪರಿಯದುವೆ
ನಿಗಿನಿಗಿ ಹೊಮ್ಮುವ
ನವಯೌವ್ವನದ ರಂಗಿನ
ಸಂಭ್ರಮವೇನೋ ಸುಂದರ.!
ಆಂತರ್ಯದ ನೋವಿನಾಳದ
ರಕ್ಕಸ ನಡೆಯದು
ಭೀಭತ್ಸದ ಆಗರ ಮಹಾ ಸಾಗರದಂತೆ..
ದುರವಸ್ಥೆಯ ಕಾರ್ಮೋಡದ
ಪೊರೆ ಆವರಿಸುತಲೆ ಕದ ತಟ್ಟಿ
ಪ್ರವೇಶಿಸಿದ ಕನ್ಯತ್ವ ಪೊರೆ
ಒಲವಿನರಮನೆಯಾಗದೆ
ದುಃಖದ ಸೆರೆಮನೆಯ ಅಳಲಿನ
ಮಹಾ ಕಣಿವೆಯಾಗಿದೆ…
ಋತುಚಕ್ರದ ಉಗುಳುತನಕೆ
ದಾವಣಿಯು ಕೆಂಪಾಗಿ
ರಂಗೇರಿದೆ ನೋವಿನಾಳ
ಸದ್ದಿಲ್ಲದೆ ತೊಟ್ಟಿಕ್ಕುತಿಹ ನೆತ್ತರಿನೊಳ್
ಬೊಬ್ಬಿಡುತಿಹ ಕಿಬ್ಬೊಟ್ಟೆ
ಸೋತು ಸೊರಗುತಿಹ ಮೈಮನ
ಪ್ರಕ್ಷುಬ್ಧತೆಯ ಒಡಲೊಳಗೆ
ಮುಗಿಲು ಮುಟ್ಟಿಹ ಆಕ್ರಂದನ.!
ಯೋನಿಯ ನಿರ್ದಯ ನಡೆಯಲಿ
ಹೆಣ್ಮನಗಳ ಮುಷ್ಕರದ
ಒಡ್ಡೋಲಗ ದುಃಖ ದುಮ್ಮಾನದ
ದಿಬ್ಬಣದ ಆಕ್ರಂದನದಲಿ
ನೋವಿನಾರ್ತನಾದದ
ಕಟ್ಟೆ ಹೊಡೆಯುತಿದೆ..
ಹೆಣ್ಣನ್ನು ವೈರುಧ್ಯಗಳ ಗಂಟಿನೊಳಗೆ
ಸಿಲುಕಿಸಿ ಮುಟ್ಟು ಮುಟ್ಟೆಂದು
ಹೌಹಾರಿ ಹೊರಗಟ್ಟಿ ದೂಡುವರು
ಕಾಡುತ ಮನೆ ಒಳ ಹೊರಗೆ….
ಮುಟ್ಟು ಮುಟ್ಟಬೇಡಿರೆನ್ನುವ ಮೂಢಾತ್ಮ
ಗೊಡ್ಡು ಸಂಪ್ರದಾಯಗಳಿಗೆ
ಜೋತುಬಿದ್ದ ಗಾಂಪರರ ಗುಂಪಲಿ…
ಆಚಾರ ವಿಚಾರದಿ ಮುಟ್ಟಿಗೆ
ಮುಟ್ಟುಗೋಲು ಹಾಕುತ
ಮುಟ್ಟಾದ ಮೂರುದಿನ ಹೊರಗಾಕಿ
ಅದರೊಳಗೂ ಸಂಪ್ರದಾಯದ
ಹಾರಾಟದ ತೂರಾಟ ದ್ವಿಗುಣದೊಳ್
ಮೂರು ರಾತ್ರಿ ಹೊರಗೆ ನರಕ ಸದೃಶ್ಯ…..
ಆಧುನಿಕತೆಯ ಸೋಗಲಿ ಗೊಡ್ಡು ಸಂಪ್ರದಾಯಗಳು ಜೆಡ್ಡಿಡಿದು ಕೂತಿವೆ.!
ನಿಂತ ನೀರೊಳ್ ಪಾಚಿಗಟ್ಟಿದಂತೆ
ನಿತ್ಯವು ಮಹಾಪ್ರಪಾತ ಅತಿರೇಕ
ಹೆಣ್ಣು ಋತುಮತಿಯಾಗಬೇಕಷ್ಟೆ
ಮುಟ್ಟಾದ ಹೆಣ್ಣಿಗೆ ರಕ್ಷಣೆ ಮಾತಿಲ್ಲ….
ಹೆಣ್ಣಿನ ಆ ದಿನದ ದೌರ್ಭಾಗ್ಯಕೆ
ಮೇಲಿಂದ ಹಾಕುವರು ಭಿಕ್ಷೆ
ಅಸ್ಪೃಶ್ಯ ನಡೆಯಂತೆ ನೀರು ತಿನಿಸು
ಬಟ್ಟೆ ಇತ್ಯಾದಿ ಬಿಸಿಲು ಗಾಳಿ
ಮಳೆ ಚಳಿ ಕತ್ತಲೆನ್ನದೆ
ದೇವರ ನೆನೆದು ಕಾಲಕಳೆಯುತ
ಹಲುಬುವ ಕ್ಷಣ ಅಬ್ಬಬ್ಬಾ
ನರಕಯಾತನೆಗೊಂದು ಹಬ್ಬ….
*******************
ವಾಸ್ತವಕ್ಕೆ ಹಿಡಿದ ಕನ್ನಡಿ. ಚಂದ
ಕಟ್ಟೆ ಒಡೆಯುತಿದೆ..ಆಗಬೇಕು.
ಹೊಡೆಯುತಿದೆ..ತಪ್ಪು.