ಕಥೆ
ಹೊಸ ಮಾಡಲ್
ಗುರುರಾಜ ಶಾಸ್ತ್ರಿ
ಅದು ಗಿರಿಜೆಯ ಮದುವೆ ಸಂಭ್ರಮ. ಮದುವೆಮನೆಯಲ್ಲಂತು ಎಲ್ಲರದೂ ಓಡಾಟವೋ ಓಡಾಟ. ಏನೋ ಬಹಳ ಕೆಲಸವಿದೆಯೆಂಬಂತೆ ಮುಖ್ಯ ಆವರಣದ ಆ ಕಡೆಯಿಂದ ಈಕಡೆಯವರೆಗೂ ಓಡಾಡುತ್ತಿರುವ ರೇಷ್ಮೆ ಸೀರೆ ಉಟ್ಟ ಮದುವೆಯಾಗದ ಹೆಣ್ಣುಮಕ್ಕಳು; ಮದುವೆಯಾಗಿದ್ದರೇನಂತೆ, ನಾವೂ ಇನ್ನೂ ಚಿಕ್ಕ ವಯಸ್ಸಿನವರೇ ಎಂದು ಭಾವಿಸುತ್ತಾ ಮದುವೆಯಾಗದ ಹುಡುಗಿಯರಿಗೆ ಸವಾಲೆಂಬಂತೆ ಓಡಾಡುತ್ತಿರುವ ಯುವ ಗೃಹಿಣಿಯರು; ಅಲ್ಲಲ್ಲಿ ಕಣ್ಣಾಡಿಸುತ್ತಾ ಅವಳು ನೋಡು ಪಾದರಸದಂತೆ, ಇವಳು ನೋಡು, ತಾನೇ ರೂಪವತಿಯೆಂಬ ಅಹಂಕಾರ, ಇನ್ನು ಅವಳು ಮೂಷಂಡಿ ತರಹ ಮೂಲೆಯಲ್ಲಿ ಕುಳಿತಿದ್ದಾಳೆ ಅಂತೆಲ್ಲಾ ಮಾತನಾಡುತ್ತಾ ಕಷ್ಟಪಟ್ಟು ಸಣ್ಣ ಕುರ್ಚಿಯ ಮೇಲೆ ತಮ್ಮ ದೇಹವನ್ನು ತುರುಕಿ ಕುಳಿತಿರುವ ಗತಕಾಲದ ಯುವ ಗೃಹಿಣಿಯರು.ಬಾಲ್ಕನಿಯಲ್ಲಿ ಗುಂಪಿನಲ್ಲಿ ಮಾತನಾಡುತ್ತಾ, ಹಾಗೆ ಹೀಗೆ ಕತ್ತು ತಿರುಗಿಸಿ ಅಲ್ಲಿ ಓಡಾಡುತ್ತಿರುವ ಹೆಣ್ಣುಮಕ್ಕಳನ್ನು ಆಗಾಗ ನೋಡುತ್ತಾ ನಿಂತಿರುವ ಹುಡುಗರು, ಅಪ್ಪಂದಿರು ಹಾಗೂ ತಾತಂದಿರು.
ಗಿರಿಜೆಯೂ ಎಷ್ಟೋ ಮದುವೆಗಳಲ್ಲಿ ಹೀಗೆ ಓಡಾಡಿದ್ದವಳೇ, ಆದರೆ ಇವತ್ತು ಅವಳಿಗೆ ನಿರ್ಬಂಧ. ಹಸೆಮಣೆಯಮೇಲೆ ಕುಳಿತಿರುವ ಗಿರಿಜೆ ತನ್ನ ಪಕ್ಕದ ಮನೆಯ ಗಿರೀಶನ ಕಡೆಯೇ ನೋಡುತ್ತಿದ್ದಾಳೆ. ತನ್ನ ಮನೆಯದೇ ಮದುವೆಯೇನೋ ಎಂಬಂತೆ ಗಿರೀಶ ಬಂದವರನ್ನೆಲ್ಲಾ ವಿಚಾರಿಸಿಕೊಳ್ಳುತ್ತಾ, ಕುರ್ಚಿಗಳನ್ನು ಸರಿಮಾಡುತ್ತಾ, ಗಿರಿಜೆಯ ಅಪ್ಪ ಜಯರಾಮ್ ಕರೆದಾಗ ಅಲ್ಲಿಗೆ ಓಡಿ ಬಂದು ಅವರು ಏನು ಕೇಳುತ್ತಾರೋ ಅದನ್ನೆಲ್ಲಾ ತಂದುಕೊಡುತ್ತಿದ್ದಾನೆ. ಜಯರಾಮ್ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಯ ಹಣದ ಚೀಲವನ್ನು ಗಿರೀಶನ ಕೈಗೆ ಕೊಟ್ಟು ಮದುವೆ ನಡೆಯುವಾಗ ಬೇಕಾದ ಚಿಲ್ಲರೆ ಖರ್ಚಿಗೆ ಅದನ್ನು ಬಳಸಬೇಕೆಂದು ಹೇಳಿದ್ದಾರೆ. ಇಬ್ಬರು ಹಿರಿಯ ಹೆಣ್ಣುಮಕ್ಕಳ ಮದುವೆ ಮುಗಿದಿದೆ, ಈ ದಿನ ಗಿರಿಜೆಯ ಮದುವೆ ಮುಗಿದರೆ ಜಯರಾಮ್‌ಗೆ ಒಂದು ದೊಡ್ಡ ಜವಾಬ್ದಾರಿ ಮುಗಿಸಿದ ನೆಮ್ಮದಿ.
ಗಿರಿಜೆಯ ಗಂಡನಾಗುತ್ತಿರುವವನು ಸುಂದರೇಶ. ಹೆಸರಿಗೆ ತಕ್ಕಂತೆ ಸುಂದರನಾಗಿದ್ದಾನೆ, ಎತ್ತರ ಘಾತ್ರದಲ್ಲಿ ಗಿರಿಜೆಗೆ ಹೇಳಿಮಾಡಿಸಿದ ಜೋಡಿ. ದೊಡ್ಡ ಸಾಫ್ಟವೇರ್ ಕಂಪನಿಯಲ್ಲಿ ಹೆಚ್ಚು ಸಂಭಾವನೆಯ ಉದ್ಯೋಗ. ಅಲ್ಲಿದ್ದ ಅವಿವಾಹಿತ ಹುಡುಗಿಯರ ಹಾಗೂ ಯುವ ಗೃಹಿಣಿಯರ ಕಣ್ಣು ಒಮ್ಮೆಯಾದರೂ ಸುಂದರೇಶನ ಕಡೆ ನೋಡಿ, ತಮಗೆ ಇಂತಹ ಸುಂದರ ದೊರಕಲಿಲ್ಲವಲ್ಲಾ ಎಂದು ಯೋಚಿಸಿದ್ದರೆ ಆಶ್ಚರ್ಯವೇನಿಲ್ಲ.
ಆದರೂ ಗಿರಿಜೆಯ ಕಣ್ಣು ಮಾತ್ರ ಆಗಿಂದಾಗ್ಗೆ ಗಿರೀಶನ ಕಡೆಗೆ ತಿರುಗುತ್ತಿದೆ. ಕಷ್ಟ ಪಟ್ಟು ಮತ್ತೆ ಆ ಕಣ್ಗಳನ್ನು ಸುಂದರೇಶನ ಕಡೆಗೆ ವಾಲಿಸುತ್ತದ್ದಾಳೆ. ಅಲ್ಲಿದ್ದ ಕೆಲವು ಯುವ ಹುಡುಗಿಯರು ಗಿರೀಶನನ್ನು ಸುತ್ತುವರಿದು ಏನೋ ಗೇಲಿಮಾಡುತ್ತಿದ್ದಾರೆ. ಒಮ್ಮೆಲೇ ಹಸೆಮಣೆಯಿಂದ ಎದ್ದು ಅಲ್ಲಿಗೆ ಹೋಗಿ ಆ ಗುಂಪನ್ನೆಲ್ಲಾ ಚದುರಿಸಿಬಿಡಬೇಕೆಂಬ ಬಯಕೆ ಗಿರಿಜೆಯದು, ಆದರೆ ಅದು ಮನಸ್ಸಿನಲ್ಲಿ ಮಾತ್ರ ಸಾದ್ಯವಷ್ಟೆ.
ಅಂತೂ ಮದುವೆ ಮುಗಿಯಿತು. ಗಿರೀಶನು ಮದುವೆಯ ಖರ್ಚಿಗಾಗಿ ಜಯರಾಮ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದ ಮತ್ತು ಸಾದ್ಯವಾದರೆ ಮಾತ್ರ ಅದನ್ನು ಹಿಂದಿರುಗಿಸಿ ಎಂದು ಹೇಳಿದ್ದ. ಬೀಗರ ಔತಣದ ದಿನ ಛತ್ರದಲ್ಲಿ ಮೂರು ಜನ ಮಕ್ಕಳು, ಮೂರು ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಜ್ಜಿ ತಾತ ಎಲ್ಲರೂ ಸಂಭ್ರಮದಿಂದಿದ್ದು ಕುಣಿದು ಕುಪ್ಪಳಿಸುತ್ತಿರುವಾಗ ನೋಡುಗರ ದೃಷ್ಟಿ ತಗುಲದೇ ಇದ್ದದ್ದೇ ಆಶ್ಚರ್ಯ. ಆದರೆ ಗಿರೀಶ ಮಾತ್ರ ಒಂದು ಮೂಲೆಯಲ್ಲಿ ಕುರ್ಚಿಯ ಮೇಲೆ ಕುಳಿತು ಏನೋ ಯೋಚನೆ ಮಾಡುತ್ತಾ ತನ್ನ ಹಳೆಯ ದಿನಗಳ ಕಡೆಗೆ ಮನಸ್ಸನ್ನು ವಾಲಿಸಿದ.
ಗಿರಿಜ ಮತ್ತು ಗಿರೀಶ ಚಿಕ್ಕ ವಯಸ್ಸಿನಿಂದ ಅಗ್ರಹಾರದಲ್ಲಿ ಒಟ್ಟಿಗೆ ಬೆಳೆದವರು. ಅಗ್ರಹಾರದಲ್ಲಿ ಇರುವಷ್ಟು ದಿನ ಒಳ್ಳೆಯ ಗೆಳೆತನವಿತ್ತಷ್ಟೆ. ಇಬ್ಬರಿಗೂ ವಯಸ್ಸಿನಲ್ಲಿ ಎರಡು ತಿಂಗಳು ವ್ಯತ್ಯಾಸ. ಓದಿದ್ದೆಲ್ಲಾ ಒಂದೇ ಶಾಲೆ ಒಂದೇ ತರಗತಿ. ಬುದ್ದಿವಂತರೂ ಕೂಡ. ೨ನೇ ಪಿ.ಯು.ಸಿ. ಮುಗಿದಮೇಲೆ ಇಬ್ಬರೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ಗೆ ಸೇರಿದರು. ಕಾಲೇಜ್ ಹಾಸ್ಟಲ್ಲಲ್ಲೇ ಇಬ್ಬರದೂ ನಾಲ್ಕು ವರ್ಷ ವಾಸ.ಅಗ್ರಹಾರದ ಶಿಸ್ತಿನ ಜೀವನದಿಂದ ಇಬ್ಬರಿಗೂ ಒಮ್ಮೆಲೇ ಸ್ವಾತಂತ್ರ್ಯ ದೊರಕಿತ್ತು. ಇಲ್ಲಿ ಅವರ ಗೆಳೆತನ ಹೆಚ್ಚು ಬಲಿಷ್ಠವಾಯಿತು. ಇವರು ಓಡಾಡದೇ ಇದ್ದ ಪಾರ್ಕುಗಳಿಲ್ಲ, ನೋಡದೇ ಇರುವ ಚಿತ್ರಮಂದಿರಗಳಿಲ್ಲ. ಕಾಲೇಜಿನಲ್ಲಿ ಇಬ್ಬರಿಗೂ ಗೆಳೆಯ, ಗೆಳತಿಯರಿದ್ದರೂ, ಯಾರಿಗೂ ತಿಳಿಯದಂತೆ ತಮ್ಮ ಪ್ರೇಮ ಪಯಣವನ್ನು ನಡೆಸಿದ್ದರು. ಏನೇ ಆದರೂ ಪರೀಕ್ಷೆಯ ಸಮಯಕ್ಕಂತೂ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದರು. ಇದನ್ನು ತಿಳಿಯುತ್ತಿದ್ದ ಇಬ್ಬರ ಮನೆಯವರೂ ಬೇರೆ ವಿಷಯಗಳ ಬಗ್ಗೆ ಅವರನ್ನು ಕೇಳಲೂ ಹೋಗಲೇ ಇಲ್ಲ. ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಮತ್ತೆ ಒಳ್ಳೆ ಅಂಕಗಳು ಬಂದಿದೆ ಎಂದರೆ ಅವರ ನಡತೆ ಚೆನ್ನಾಗಿಯೇ ಇರಬೇಕೆಂಬ ನಂಬಿಕೆ. ಕಾಲೇಜಿನ ಪ್ರಾಜೆಕ್ಟ್ ಟೂರ್‌ಗೆ ಮಡಿಕೇರಿಗೆ ಹೋದಾಗ ಸಹಪಾಠಿಗಳು ಮತ್ತು ಅಧ್ಯಾಪಕರ ಮುಂದೆ ಇವರಷ್ಟು ಶಿಸ್ತಿನ ಸಿಪಾಯಿಗಳು ಇನ್ಯಾರು ಇಲ್ಲವೇ ಇಲ್ಲ ಎಂಬಂತಿದ್ದರು. ಪ್ರಾಜೆಕ್ಟ್ ಟೂರ್ ಮುಗಿದ ಮೇಲೆ, ಇಬ್ಬರೂ ಮೈಸೂರಿಗೆ ನೇರವಾಗಿ ಹೋಗುವುದಾಗಿ ಹೇಳಿ ಗೆಳೆಯರ ಮುಂದೆಯೇ ಮೈಸೂರಿನ ಬಸ್ಸು ಹತ್ತಿದ್ದರು. ಹತ್ತು ನಿಮಿಷದ ನಂತರ ಬಸ್ಸಿನಿಂದ ಇಳಿದು ಮಡಿಕೇರಿಗೆ ವಾಪಸ್ ಬಂದಿದ್ದರು. ಇವರು ಊರಿಗೆ ಹೋಗಿದ್ದು ಎರಡು ದಿನದ ನಂತರ. ಗೋವಾ, ಚೆನ್ನೈನಲ್ಲೂ ಇವರು ಸಾಕಷ್ಟು ರೆಸಾರ್ಟಗಳಲ್ಲಿ ಅತಿಥಿಗಳಾಗಿದ್ದರು.
ಇಂಜಿನಿಯರಿಂಗ್ ಮುಗಿದು ಇಬ್ಬರಿಗೂ ಒಳ್ಳೆಯ ಕೆಲಸ ಸಿಕ್ಕಿತು. ಒಂದು ಸಂಜೆ ಕಾಫೀಡೇ ಯಲ್ಲಿ ಕುಳಿತು ಮುಂದಿನ ಜೀವನ ಹೇಗೆ ಎಂದು ಇಬ್ಬರೂ ಯೋಚಿಸುತ್ತಿದ್ದಾಗ, ಗಿರಿಜೆ “ನೋಡು ಗಿರೀಶ್, ಮದುವೆ ಎಂದರೆ ಒಂದು ಕುತೂಹಲವಿರಬೇಕು, ಅಂತಹ ಕುತೂಹಲಗಳು ನಮ್ಮಿಬ್ಬರಲ್ಲಿ ಇನ್ನೇನು ಉಳಿದಿಲ್ಲ. ನನಗೂ ಬದಲಾವಣೆ ಬೇಕು, ನಾನು ಬೇರೆ ಯಾರನ್ನಾದರೂ ಮದುವೆ ಮಾಡಿಕೊಳ್ಳೂತ್ತೇನೆ” ಎಂದಳು. ತನ್ನ ಮನಸ್ಸಿನಲ್ಲಿ ಇದ್ದದ್ದನ್ನೇ ಗಿರಿಜೆಯು ಹೇಳಿದ್ದು ಕೇಳಿ ಗಿರೀಶನು ಸಮ್ಮತಿಸಿದ. “ಆದರೆ ಇಂಜಿನಿಯರಿಂಗ್‌ನ ನಾಲ್ಕು ವರ್ಷ ನಾವು ಸಂಪೂರ್ಣವಾಗಿ ಮರೆಯಬೇಕು. ನಮ್ಮಿಬ್ಬರ ಜೀವನದಲ್ಲಿ ಇದು ಎಂದಿಗೂ ತೊಂದರೆ ಕೊಡಕೂಡದು” ಎಂದು ಗಿರೀಶ ಹೇಳಿದಾಗ, “ನಾನು ಕಷ್ಟ ಪಟ್ಟು ಓದಿದ್ದು ಬಿಟ್ಟುನನಗೆ ಬೇರೇನೂ ನೆನಪಿಲ್ಲ, ಬೇರೇನಾದರೂ ನಡೆಯಿತೇ ನಮ್ಮಿಬ್ಬರ ಮಧ್ಯೇ” ಎಂದಳು ಗಿರಿಜ. ಇಬ್ಬರೂ ನಗುತ್ತಾ ಕೈ ಕುಲುಕುತ್ತಾ ಕಾಫೀಡೇ ಇಂದ ಹೊರಗೆ ನಡೆದರು. ಈಗಿನ ಕಾಲದ ಪೀಳಿಗೆಯೇ ಹಾಗಲ್ಲವೇ, ಮದುವೆಗೆ ಮುಂಚೆ ನೀನು ಹೇಗಿದ್ದೇ ನನಗದು ಬೇಡ, ಮದುವೆಯ ನಂತರ ನನ್ನೊಂದಿಗೆ ನಿಯತ್ತಿನಿಂದಿರಲು ಸಾದ್ಯವೇ ಎಂದಷ್ಟೇ ಅವರು ಕೇಳುವುದು.
ಜಯರಾಮ್ ಬಂದು “ಏನಯ್ಯಾ ಗಿರೀಶ, ತಿಂಡಿಗೆ ಮಸಾಲೆ ದೋಸೆ ಹಾಕಿಸಿದ್ದೇ ತಪ್ಪಾಯ್ತು ನೋಡು, ನಾವೆಲ್ಲಾ ಅಷ್ಟೋಂದು ಕಿರುಚುತ್ತಾ ಕುಣಿಯುತ್ತಿದ್ದೇವೆ, ನೀನು ನೋಡಿದರೆ ನಿದ್ದೆ ಮಾಡುತ್ತಿದ್ದೀಯಲ್ಲಾ” ಎಂದಾಗ ಗಿರೀಶ ಮದುವೆ ಮನೆಯ ವಾತಾವರಣಕ್ಕೆ ವಾಪಸ್ ಬಂದ.
ಮದುವೆ ಮುಗಿದ ಒಂದು ವಾರ ನವ ವಧುವರರು ಹೆಣ್ಣಿನ ಮನೆಯಲ್ಲೇ ಇದ್ದು ಚಪ್ಪರದ ಪೂಜೆ ಮುಗಿಸಿ ಆಮೇಲೆ ಎಲ್ಲಿಗಾದರು ಹೋಗಬಹುದು ಎಂಬುದು ಹಿರಿಯರ ಆದೇಶ. ಸುಂದರೇಶ ಮತ್ತು ಗಿರೀಶನಿಗೂ ಒಳ್ಳೆಯ ಸ್ನೇಹವಾಯಿತು. ಸುಂದರೇಶ ಸಾಧುಪ್ರಾಣಿ ಎಂದು ಗಿರೀಶನಿಗೆ ಈ ಸ್ನೇಹದಿಂದ ತಿಳಿಯಿತು. ಆದರೂ ಅವನನ್ನು ನೋಡಿದಾಗಲೆಲ್ಲಾ ಗಿರೀಶನಿಗೆ ಮನದಲ್ಲಿ ತಾನು ತಪ್ಪಿತಸ್ಥ ಎಂಬ ಭಾವನೆ ಹೆಚ್ಚಾಗುತ್ತಿತ್ತು.ʼಇಂತಹ ಒಳ್ಳೆಯ ವ್ಯಕ್ತಿಗೆ ನಾನು ಮೊಸ ಮಾಡಿದೆನೇ?ʼ ಎಂಬ ಪ್ರಶ್ನೆ ಸದಾ ಗಿರೀಶನಿಗೆ ತಲೆಯಲ್ಲಿ ಕೊರೆಯುತ್ತಿತ್ತು. ಒಂದು ಸಂಜೆ ತನ್ನ ಈ-ಮೈಲಿನಲ್ಲಿದ್ದ ಹಳೆಯ ಛಾಟ್‌ಗಳನ್ನೆಲ್ಲಾ ನೋಡುತ್ತಿದ್ದ.ಇವನು ಮತ್ತು ಗಿರಿಜೆ ಕಾಲೇಜಿನಲ್ಲಿದ್ದಾಗ ಮಾಡಿದ್ದ ಚಾಟ್ ಸಂಭಾಷಣೆಗಳೆಲ್ಲಾ ಅವನ ಕಣ್ಣಿಗೆ ಕಾಣಿಸಿತು. ಒಮ್ಮೆ ಭಯವಾಗಲು ಪ್ರಾರಂಭವಾಯಿತು. ಸಾಮಾನ್ಯವಾಗಿ ಗಂಡ ಹೆಂಡತಿ ಈಮೈಲ್ ಐಡಿ ಮತ್ತು ಪಾಸ್‌ವರ್ಡ್ ಹಂಚಿಕೊಳ್ಳುತ್ತಾರೆ ಅಥವಾ ಒಬ್ಬರ ಮೊಬೈಲ್ ಇನ್ನೊಬ್ಬರು ಬಳಸುತ್ತಾರೆ. ಹಾಗೇನಾದರು ಆಗಿ ಈ ಚಾಟ್‌ಗಳೆಲ್ಲಾ ಸುಂದರೇಶನೂ ನೋಡಬಹುದು ಅನಿಸಿತು ಗಿರೀಶನಿಗೆ. ಹಾಗೇನಾದರೂ ಆದರೆ ಅಗ್ರಹಾರದಲ್ಲಿರುವ ಇಬ್ಬರ ಮನೆಯ ಮರ್ಯಾದೆಯೂ ಹರಾಜಾಗುವುದರಲ್ಲಿ ಅನುಮಾನವಿರಲಿಲ್ಲ. ಸುಂದರೇಶ ಇದನ್ನು ಹೇಗೆ ತನ್ನ ಮನಸ್ಸಿಗೆ ತೆಗೆದುಕೊಳ್ಳುತ್ತಾನೆ. ಅವನು ಕೋಪಗೊಂಡರೆ ಗಿರಿಜೆಯ ಕಥಯೇನು ಎಂಬೆಲ್ಲಾ ಯೋಚನೆಗಳು ಗಿರೀಶನಿಗೆ ತಲೆಯಲ್ಲಿ ತುಂಬಿಕೊಂಡಿತು.
ತನ್ನ ರೂಮಿನ ಕಿಟಕಿಯಿಂದ ಪಕ್ಕದಮನೆ ಕಡೆ ನೋಡಿದ. ಗಿರಿಜೆ ಒಂದು ಕೈಯಲ್ಲಿ ಮೊಬೈಲ್ ಇಟ್ಟುಕೊಂಡು ಇನ್ನೊಂದು ಕೈಯಲ್ಲಿ ಒಗೆದ ಬಟ್ಟೆಗಳನ್ನು ತಂತಿಯ ಮೇಲೆ ಹರವುತ್ತಿದ್ದಳು. ಗಿರೀಶನ ಅಮ್ಮ ಲಲಿತಮ್ಮ ಗಿರಿಜೆಯ ಅಮ್ಮ ಶಾರದಮ್ಮರೊಂದಿಗೆ ಮಹಡಿಯ ಮೇಲೆ ಮಾತನಾಡುತ್ತಿದ್ದರು. ಗಿರಿಜೆಗೆ ಮೊಬೈಲ್ ಕರೆ ಮಾಡಿದ. “ನಾವು ಮಾಡಿದ ಕೆಲವು ಚಾಟ್‌ಗಳನ್ನು ಇಂದು ನನ್ನ ಈಮೈಲಿನಲ್ಲಿ ನೋಡಿದೆ ಇದರ ಬಗ್ಗೆ ನಿನ್ನೊಂದಿಗೆ ಮಾತನಾಡಬೇಕು, ಸಂಜೆ ಐದು ಗಂಟೆಗೆ ಒಣಗಿದ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಮಹಡಿಯ ಮೇಲೆ ಒಬ್ಬಳೇ ಬಾ, ನಾನು ಬರುತ್ತೇನೆ” ಎಂದ.
“ಅಲ್ಲ ಇದರ ಬಗ್ಗೆ ಇವನು ಈಗೇಕೆ ಮಾತನಾಡಬೇಕು, ಈ ಹುಡುಗರನ್ನು ನಂಬುವುದು ತುಂಬಾ ಕಷ್ಟ, ಈಕ್ಷಣದಲ್ಲಿ ಇದ್ದಹಾಗೆ ಇನ್ನೈದು ನಿಮಿಷಕ್ಕಿರಲ್ಲ. ಸುಮ್ಮನೆ ಚಾಟ್ ಡಿಲೀಟ್ ಮಾಡಿ ಬಿಸಾಕಿದ್ರೆ ಆಯ್ತಪ್ಪ, ಅದು ಬಿಟ್ಟು ಅದರ ಬಗ್ಗೆ ನನ್ನ ಹತ್ತಿರ ಏನು ಮಾತಾಡ್ಬೇಕು ಇವನು. ಇವನು ಕರೆದಾಗ ಎಲ್ಲಂದರಲ್ಲಿ ಬರೋಕ್ಕೆ ನಾನೇನು ಮುಂಚಿನ ಗಿರಿಜ ಅಲ್ಲ. ಹಾಳಗಿ ಹೋಗ್ಲಿ, ಸಂಜೆ ಭೇಟಿಯಾದ್ರೆ ಎಲ್ಲಾ ಗೊತ್ತಾಗುತ್ತಲ್ಲ” ಅಂದುಕೊಂಡಳು. ಅದೇಕೋ ಅವಳಿಗೆ ಊಟವೂ ಸೇರಲಿಲ್ಲ. ಗಿರೀಶನ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಒಂದು ಭಯವೂ ಶುರುವಾಗಿತ್ತು ಗಿರಿಜೆಗೆ.
ಸಂಜೆ ಐದು ಗಂಟೆಗೆ ಬಟ್ಟೆ ತರಲು ಮಹಡಿಯಮೇಲೆ ಹೋದಳು.ಗಿರೀಶನೂ ಮಹಡಿಯಮೇಲಿದ್ದ. ಅಗ್ರಹಾರದ ಮನೆಗಳೆಲ್ಲಾ ಅಷ್ಟೇ. ಎಲ್ಲರ ಮನೆಗಳು ಒಂದಕ್ಕೊಂದು ಅಂಟಿಸೇ ಕಟ್ಟಿರುತ್ತಾರೆ. “ಹೇಗಿದ್ದೀಯಾ, ಸುಂದರೇಶ ಎನಂತಾರೆ, ಅಡ್ಜಸ್ಟ್ ಆದ್ರಾ ನಿನಗೆ” ಅಂತ ಮಾತು ಆರಂಭಿಸಿದ ಗಿರೀಶ. “ಸುಮ್ಮನೆ ಏನೇನೋ ವಿಷಯ ಬೇಡ, ಚಾಟ್ ಬಗ್ಗೆ ಅದೇನೋ ಹೇಳಬೇಕು ಅಂದೆಯಲ್ಲ,ಅದನ್ನು ಹೇಳು ಮೊದಲು” ಎಂದಳು ಗಿರಿಜ. “ಸುಂದರೇಶನ ಮುಗ್ಧ ಮುಖ ನೋಡುತ್ತಿದ್ದರೆ, ನಾನು ಅವನಿಗೆ ಮೋಸ ಮಾಡಿದೆನೇನೋ ಎಂದು ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ” ಎಂದ. “ನನಗೇನೂ ಹಾಗನ್ನಿಸುತ್ತಿಲ್ಲ. ಪಾಸ್ಟ್ ಈಸ್ ಪಾಸ್ಟ್, ಹಳೆಯದೆಲ್ಲಾ ಮರೆಯಬೇಕಷ್ಟೇ” ಎಂದಳು ಗಿರಿಜೆ.”ನಮ್ಮ ಕಾಲೇಜು ದಿನಗಳಲ್ಲಿ ನಾವು ಮಾಡಿದ್ದ ಎಲ್ಲಾ ಚಾಟ್‌ಗಳು ನನ್ನ ಈಮೈಲಿನಲ್ಲಿತ್ತು, ಅದನ್ನೆಲ್ಲಾ ಇವತ್ತು ಬೆಳಿಗ್ಗೆ ಡಿಲೀಟ್ ಮಾಡಿದೆ” ಎಂದ ಗಿರೀಶ. “ಮತ್ತೆ ಇನ್ನೇನು ಹೇಳೋದಕ್ಕೆ ನನ್ನ ಕರೆದೆʼ ಎಂದಳು ಕೋಪದಿಂದ ಗಿರಿಜೆ. “ಆ ಚಾಟ್‌ಗಳು ನಿನ್ನ ಈಮೈಲಿನಲ್ಲೂ ಇರುತ್ತೆ. ನೀನು ಎಲ್ಲಾ ಚಾಟ್ ಡಿಲೀಟ್ ಮಾಡಿಬಿಡು, ಕಣ್ತಪ್ಪಿ ಇದೆಲ್ಲಾ ಸುಂದರೇಶ ನೋಡಿದರೆ ಕಷ್ಟ ಆಗುತ್ತೆ” ಎಂದ ಗಿರೀಶ. ಗಿರಿಜೆ ಜೋರಾಗಿ ನಗುತ್ತಾ “ಅದೇ ನೋಡು ಹುಡುಗರು ಮತ್ತು ಹುಡುಗಿಯರಿಗೆ ಇರುವ ವ್ಯತ್ಯಾಸ. ನೀನು ಚಾಟ್ ಡಿಲೀಟ್ ಮಾಡಿದೆ, ನಾನು ಆ ಈಮೈಲ್ ಐಡಿನೇ ಡಿಲೀಟ್ ಮಾಡಿ ಎರಡು ತಿಂಗಳಾಯಿತು” ಎಂದಳು. ಇವಳ ಜೋರಾದ ನಗು, ಕೆಳಗೆ ಮನೆಯಲ್ಲಿದ್ದ ಗಿರಿಜೆಯ ಅಮ್ಮ ಶಾರದಮ್ಮಳಿಗೂ, ಗಂಡ ಸುಂದರೇಶನಿಗೂ ಕೇಳಿಸಿತು. ಇಬ್ಬರೂ ಮೇಲೆ ಬಂದರು. ಗಿರಿಜೆ ಸ್ವಲ್ಪ ಗಾಭರಿಯಾದಳು. ತಕ್ಷಣ ಗಿರೀಶ, “ನೋಡಿ ಆಂಟಿ, ಹೊಸದಾಗಿ ಮದುವೆಯಾಗಿದ್ದೀರಿ, ನಾಳೆ ನಮ್ಮ ಮನೆಗೆ ಊಟಕ್ಕೆ ಇಬ್ಬರೂ ಬನ್ನಿ ಅಂದರೆ, ನೀನೂ ಮದುವೆ ಮಾಡಿಕೋ, ನಿನ್ನ ಹೆಂಡತಿ ಕೈಲಿ ಅಡುಗೆ ಮಾಡಿಸಿ ಹಾಕು ಆಗ ಬರ್ತೀವಿ, ನಿಮ್ಮಮ್ಮನಿಗೆ ಯಾಕೆ ತೊಂದರೆ ಕೊಡ್ತೀಯಾ ಅಂತಾಳೆʼ ಎಂದ ಗಿರೀಶ.
“ನೀನು ಮಾಡಿದ್ದು ಸರಿಯಲ್ಲ ಗಿರಿಜಾ, ಅವರು ಪ್ರೀತಿಯಿಂದ ಕರೆದಾಗ ನಾವು ಹೋಗಬೇಕು ತಾನೆ” ಎಂದ ಸುಂದರೇಶ. “ಅಲ್ಲ ಅಮ್ಮ, ಇವನೇ ಅಡುಗೆ ಮಾಡ್ತಾನಾ ಕೇಳು, ಆಂಟಿಗೆ ನಾವು ಯಾಕೆ ತೊಂದರೆ ಕೊಡಬೇಕು” ಎಂದಳು ಅಮ್ಮನ ಕಡೆ ನೋಡುತ್ತಾ ಗಿರಿಜೆ. “ನೋಡಿ ಆಂಟಿ ಮತ್ತೆ ಅವಳದು ಕೊಂಕು ಮಾತು” ಎಂದ ಗಿರೀಶ. ಶಾರದಮ್ಮ ಇಬ್ಬರಿಗೂ ಸುಮ್ಮನಿರಲು ಹೇಳಿ, “ನೀವು ಹಿಂದಿನ ಹಾಗೆ ಚಿಕ್ಕ ಮಕ್ಕಳಲ್ಲ, ಹೀಗೆ ಮಹಡಿಯ ಮೇಲೆ ಬರೋದು, ಹೋಗೋ ಬಾರೋ ಅಂತೆಲ್ಲಾ ಮಾತನಾಡೋದು ಪ್ರಪಂಚಕ್ಕೆ ಸರಿ ಕಾಣೋಲ್ಲ. ನೀವಿಬ್ಬರೂ ಬದಲಾಗಬೇಕು.ಅಲ್ಲ, ಸುಂದರೇಶನಿಗೆ ನೀವು ಹೀಗಿರೋದು ನೋಡುದ್ರೇ ಏನನ್ನಿಸಿಬಹುದು ಅಂತಾ ಯೋಚಿಸಿದ್ದೀರಾ” ಎಂದಳು ಸುಂದರೇಶನ ಕಡೆ ನೋಡುತ್ತಾ ಶಾರದಮ್ಮ.
“ಅಮ್ಮ, ಇಬ್ಬರೂ ಚಿಕ್ಕ ವಯಸ್ಸಿನಿಂದ ಹೀಗೇ ಬೆಳೆದಿದ್ದಾರೆ, ನನಗಂತೂ ಅವರು ಹೀಗಿರುವುದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ”ಎಂದ ಸುಂದರೇಶ. “ನಿನ್ನದು ವಿಶಾಲ ಹೃದಯ, ಪ್ರಪಂಚದ ಕಣ್ಣು ಹಾಗಿರೋಲ್ಲ ಕಣಪ್ಪ,ಇವರು ಅರ್ಥ ಮಾಡಿಕೋಬೇಕು ಅಷ್ಟೆ” ಎಂದಳು ಶಾರದಮ್ಮ.
“ಈ ವಿಷಯ ಇಲ್ಲಿಗೆ ಬಿಟ್ಟು ಬಿಡೋಣ, ನಾಳೆ ನಿಮ್ಮ ಮನೆಗೆ ಊಟಕ್ಕೆ ಬರಬೇಕಲ್ಲವೇ, ಬರುತ್ತೇವೆ. ಹನ್ನೊಂದು ಗಂಟೆಗೇ ಬರುತ್ತೇವೆ, ನಾವಿಬ್ಬರೂ ಮಾತನಾಡುತ್ತಾ ಇರೋಣ, ಗಿರಿಜೆ ನಿಮ್ಮಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಾಳೆ” ಎಂದ ಸುಂದರೇಶ. “ಸರಿ ಗಿರೀಶ್ ಅವರೇ, ನಾವು ನಾಳೆ ನಿಮ್ಮ ಮನೆಗೆ ಬರುತ್ತೇವೆ” ಎಂದಳು ಗಿರಿಜ. ಹಾಗೇ ಆಗಲಿ ಗಿರಿಜಾ ಅವರೇ, ನೀವು ಒಪ್ಪಿದ್ದು ತುಂಬಾ ಸಂತೋಷವಾಯಿತು” ಎಂದ ಗಿರೀಶ.ಶಾರದಮ್ಮ ಇಬ್ಬರನ್ನೂ ಒಮ್ಮೆ ಕೋಪದಿಂದ ನೋಡಿ, ಮೆಟ್ಟಲಿಳಿಯುತ್ತಾ ಕೆಳಗೆ ನಡೆದಳು. ಗಿರಿಜ ಸುಂದರೇಶನ ಕೈ ಹಿಡಿದು ಅಮ್ಮನ ಹಿಂದೆ ನಡೆದಳು.
ಸುಂದರೇಶನ ಸಾಧು ಮನಸ್ಸಿನ ಮಾತುಗಳು ಗಿರೀಶನಿಗೆ ಹೆಚ್ಚು ತೊಂದರೆ ಕೊಡಲಾರಂಭಿಸಿತು. ಮತ್ತದೇ ಯೋಚನೆ, ʼಛೇ, ಎಂಥಾ ಒಳ್ಳೆಯ ಹುಡುಗನಿಗೆ ನಾನು ಮೋಸ ಮಾಡಿದೆನೆಲ್ಲಾʼ ಎಂಬ ಪ್ರಶ್ನೆ ಮನಸ್ಸಿನಲ್ಲಿ ಪುನರಾವರ್ತನೆಯಾಗುತ್ತಿತ್ತು. ಕಳೆದ ಮೂರುದಿನಗಳಿಂದ ಮನಸ್ಸಿನ ಈ ತೊಳಲಾಟದಲ್ಲಿ ಗಿರೀಶ ನಿದ್ದೆಯೇ ಮಾಡಿರಲಿಲ್ಲ. ಆದರೂ ಗಿರಿಜೆ ತನ್ನ ಈಮೈಲ್ ಐಡಿ ಡಿಲೀಟ್ ಮಾಡಿದ್ದು ಕೇಳಿ ಸ್ವಲ್ಪ ನಿರಾಳವಾಗಿತ್ತು ಮನಸ್ಸು.
ಮಾರನೇ ದಿನ, ಸುಂದರೇಶ ಮತ್ತು ಗಿರಿಜ ಗಿರೀಶನ ಮನೆಗೆ ಬಂದರು. ಗಿರಿಜೆ ನೇರವಾಗಿ ಅಡುಗೆ ಮನೆಗೆ ಹೋದಳು, ಲಲಿತಮ್ಮಾಗೆ ಅಡುಗೆಗೆ ಸಹಾಯ ಮಾಡಲು. ಗಿರೀಶ ಮತ್ತು ಸುಂದರೇಶ ಮಾತನಾಡುತ್ತಾ ಕುಳಿತರು. “ನಿಮ್ಮದು ಬಲೇನೋ ಕಾರ್ ಅಲ್ವಾ, ಹೇಗಿದೆ, ಯಾವಾಗ ಖರೀದಿಸಿದ್ದು” ಎಂದ ಸುಂದರೇಶ. “ಖರೀದಿಸಿ ಆರು ತಿಂಗಳಾಯಿತು, ಕಾರ್ ಓಡಿಸ್ತಾ ಇದರೆ ಒಳ್ಳೇ ಮಜಾ ಬರುತ್ತೆ, ಜೊತೆಗೆ ಮೈಲೇಜ್ ಕೂಡಾ ಚೆನ್ನಾಗಿಯೇ ಇದೆ” ಎಂದ ಗಿರೀಶ. “ಹಾಗಾದರೆ ನಾನೂ ಇದನ್ನೇ ಕೊಳ್ಳುತ್ತೇನೆ” ಎಂದ ಸುಂದರೇಶ. ಆಗ ಗಿರೀಶ, “ಈಗ ಇದೇ ಮಾಡೆಲ್ ಟೊಯೋಟೋ ಅವರು ಗ್ಲಾನ್ಸಾ ಅನ್ನೋ ಹೆಸರಲ್ಲಿ ಮಾರುತ್ತಿದ್ದಾರೆ, ಅದನ್ನು ಖರೀದಿಸಿ, ಟೊಯೋಟೋ ಸರ್ವೀಸ್ ತುಂಬಾ ಚೆನ್ನಾಗಿದೆ” ಎಂದ. “ಇಲ್ಲ ನೀವು ಉಪಯೋಗಿಸಿ ಚೆನ್ನಾಗಿದೆ ಎಂದರೆಲ್ಲ, ನಾನು ಇದನ್ನೇ ಖರೀದಿಸುತ್ತೇನೆ” ಎಂದ ಸುಂದರೇಶ. ʼನಮ್ಮ ಅಗ್ರಹಾರದ ಹಳೆಯ ಫೋಟೋಗಳನ್ನ ಕಂಪ್ಯೂಟರ್‌ನಲ್ಲಿ ಹಾಕಿದ್ದೇನೆ, ನೋಡುತ್ತೀರಾ” ಎಂದು ಕೇಳಿದ ಗಿರೀಶ. “ಹಳೆಯ ಫೋಟೋಗಳನ್ನ ನೋಡೋದು ಅಂದರೆ ನನಗೂ ಖುಷೀನೇ, ಬನ್ನಿ ನೋಡೋಣ” ಎಂದ ಸುಂದರೇಶ. ಹಾಗೇ ಫೋಟೋಗಳನ್ನು ನೋಡುತ್ತಿರುವಾಗ, ಗಿರಿಜೆ ಹನ್ನೆರಡು ವರ್ಷದವಳಿದ್ದಾಗ ಫ್ರಾಕ್ ಹಾಕಿಕೊಂಡು ನಿಂತಿರುವ ಒಂದು ಫೋಟೋ ಕಾಣಿಸಿತು, ತಕ್ಷಣ ಸುಂದರೇಶ“ಈ ಫೋಟೋ ನನ್ನ ಮೊಬೈಲ್‌ಗೆ ಕಳಿಸುತ್ತೀರಾ, ಇದನ್ನು ಪ್ರಿಂಟ್ ಹಾಕಿಸಿ ಗಿರಿಜೆಗೆ ಸರಪ್ರೈಸ್ ಕೊಡ್ತೀನಿ” ಎಂದ. ಇದರಲ್ಲಿ ಸರ್‌ಪ್ರೈಸ್ ಏನಿದೆ ಎಂದು ಗಿರೀಶನಿಗೆ ಅರ್ಥವಾಗಲಿಲ್ಲ. “ಮೊಬೈಲಿಗೆ ಯಾಕೆ, ನನ್ನ ಹತ್ತಿರವೇ ಪ್ರಿಂಟರ್ ಇದೆ, ಪ್ರಿಂಟ್‌ಔಟೇ ಕೊಡ್ತೀನಿ ಬಿಡಿ” ಎಂದು ಹೇಳಿ ಗಿರೀಶ ಕಲರ್ ಪ್ರಿಂಟ್ ತೆಗೆದು ಸುಂದರೇಶನಿಗೆ ಕೊಟ್ಟ. “ಓ, ಇದು ಯಾವ ಪ್ರಿಂಟರ್, ಇಷ್ಟು ಚೆನ್ನಾಗಿ ಫೋಟೋ ಬಂದಿದೆ” ಎಂದು ಕೇಳಿದ ಸುಂದರೇಶ. “ಒಂದು ವರ್ಷ ಆಯ್ತು ತೊಗೊಂಡು, ಇದು ಹೆಚ್.ಪಿ 410 ಪ್ರಿಂಟರ್” ಎಂದ ಗಿರೀಶ. ನಾನು ಈ ಪ್ರಿಂಟರ್ ಮಾಡಲ್ ಒಂದು ಫೋಟೋ ತೆಗೆದುಕೊಳ್ಳುತ್ತೇನೆ, ನಾನೂ ಒಂದು ಪ್ರಿಂಟರ್ ಖರೀದಿಸಬೇಕು” ಎಂದ ಸುಂದರೇಶ. “ಇದು ಈಗ ಹಳೇ ಮಾಡಲ್, ಹೊಸ ಮಾಡಲ್ ವೈಫೈ ಜೊತೆ ಇನ್ನೂ ಹೆಚ್ಚು ಸೌಲಭ್ಯಗಳೊಂದಿಗೆ ಬರುತ್ತೆ” ಎಂದ ಗಿರೀಶ. “ಬೇಡ, ನೀವು ಉಪಯೋಗಿಸುತ್ತಿದ್ದೀರಿ ಎಂದರೆ ಇದು ಚೆನ್ನಾಗಿಯೇ ಇರಬೇಕು” ಎಂದು ಹೇಳಿ ಪ್ರಿಂಟರ್ ಫೋಟೋ ಮೊಬೈಲಿನಲ್ಲಿ ಕ್ಲಿಕ್ಕಿಸಿದ ಸುಂದರೇಶ. ಅದೇ ಸಮಯಕ್ಕೆ ಗಿರಿಜೆ ಅಡುಗೆಮನೆಯಿಂದ ಇಬ್ಬರಿಗೂ ಕಾಫಿ ತಂದಳು. ಮೊಬೈಲಿನಲ್ಲಿ ಫೋಟೋ ತೆಗೆಯುತ್ತಿರುವುದನ್ನು ನೋಡಿ, ಅದ್ಯಾಕೆ ಅದನ್ನು ಫೋಟೋ ತೆಗೆದುಕೊಳ್ತಿದ್ದೀರಾ ಎಂದಳು. ಅಲ್ಲೇ ಇದ್ದ ಆಗತಾನೆ ಪ್ರಿಂಟೌಟ್ ತೆಗೆದಿದ್ದ ಗಿರಿಜೆಯ ಚಿಕ್ಕ ವಯಸ್ಸಿನ ಫೋಟೋವನ್ನು ಗಿರೀಶ ಟೇಬಲ್ ಡ್ರಾಯರ್‌ನಲ್ಲಿ ಹಾಕಿದ. ಇದನ್ನುಗಮನಿಸಿದ ಸುಂದರೇಶ “ಥ್ಯಾಂಕ್ಸ್” ಎಂದ, ಕಾಫಿ ತಂದುಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾನೆ ಅಂದುಕೊಂಡಳು ಗಿರಿಜೆ.
“ನೋಡು ಗಿರಿಜಾ, ಸಂಜೆ ನಾವೂ ಬಲೇನೋ ಕಾರ್ ಬುಕ್ ಮಾಡೋಣ, ಹಾಗೇ ಆನಲೈನಿನಲ್ಲಿ ಈ ಪ್ರಿಂಟರ್ ಖರೀದಿಸಬೇಕು” ಎಂದ ಸುಂದರೇಶ. “ಹೊಸ ಮಾಡಲ್ ಬಂದಿದೆ, ಅದನ್ನು ಖರೀದಿಸಿ ಎಂದು ನಾನುಸಲಹೆ ಕೊಟ್ಟೆ” ಎಂದ ಗಿರೀಶ. “ನಿನಗೆ ಗೊತ್ತಿದೆಯಲ್ಲ ಗಿರಿಜ, ನಾನು ಮಾರ್ಕೆಟ್‌ನಲ್ಲಿ ಯಾವುದೇ ಹೊಸ ಮಾಡಲ್ ಬಂದರೆ ನೇರ ಖರೀದಿಸುವ ರಿಸ್ಕ್ ತಗೋಳೋಲ್ಲ. ಯಾರಾದರು ಅದನ್ನು ಖರೀದಿಸಿ ಉಪಯೋಗಿಸಿದ್ದರೆ ಅವರನ್ನು ವಿಚಾರಿಸಿ ನಂತರ ಅದೇ ಮಾಡಲ್ ಕೊಳ್ಳುತ್ತೇನೆ” ಎಂದ ಸುಂದರೇಶ. ಸುಂದರೇಶನಿಗೆ ಫೋನ್ ಬಂತು, “ಒಂದು ನಿಮಿಷ” ಅಂತ ಹೇಳಿ ಫೋನಿನಲ್ಲಿ ಮಾತನಾಡುತ್ತಾ ಮುಂಬಾಗಿಲಿನತ್ತ ನಡೆದ. ಗಿರೀಶ ಗಿರಿಜೆಯ ಕಡೆ ನೋಡಿ ನಕ್ಕ. ಈಗ ಸಮಾಧಾನವಾಯಿತೇ, ಪಾಪ ಅವರು ಯಾರಾದರೂ ಉಪಯೋಗಿಸಿರುವ ಮಾಡಲ್ ಮಾತ್ರ ಖರೀದಿಸೋದು ಎಂದು ಹೇಳಿ ನಗುತ್ತಾ ಅಡುಗೆ ಮನೆ ಕಡೆ ನಡೆದಳು ಗಿರಿಜ.
ಎಲ್ಲಾ ಊಟ ಮಾಡಿ ಹೋದ ಮೇಲೆ, ಗಿರೀಶ ನೆಮ್ಮದಿಯಿಂದ ನಿದ್ದೆ ಮಾಡಿದ, ಮನಸ್ಸಿನಲ್ಲಿ ಯಾವುದೇ ಗೊಂದಲವಿರಲಿಲ್ಲ.
******************