ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—32

ಆತ್ಮಾನುಸಂಧಾನ

ಕಾಯಕ ನಿಷ್ಠೆ ಕಲಿಸಿದ ಕಲ್ಬುರ್ಗಿ ಸರ್

Why Kalburgi Was Killed | The Indian Express

 ವಿಶ್ವವಿದ್ಯಾಲಯದ ತಂಗುದಾರರಾದಲ್ಲಿ ಒಬ್ಬನಿಂದ ನಾನು ನನ್ನ ಸೂಟ್‌ಕೇಸ್‌ನೊಂದಿಗೆ ಇಳಿದಾಗ ಸಂಜೆ ಐದರ ಸಮಯ. ಕಛೇರಿಯ ಸಮಯವೂ ಮುಗಿಯುತ್ತಿದ್ದಂತೆ ಸಿಟಿಯ ಕಡೆ ಪ್ರಯಾಣಿಸುವ ಪ್ರಯಾಣಿಕರು ಬಸ್ ಸ್ಟಾಫಿನತ್ತ ಧಾವಿಸಿ ಬರುತ್ತಿದ್ದರು.

                ಇದ್ದ ಬದ್ದ ವಸ್ತ್ರ,  ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ ನಿಂತು ನಾನು ಹೋಗಿ ಸೇರಿಕೊಳ್ಳಬೇಕಾದ ಮೊದಲ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯ “ಶಾಲ್ಮಲಾ ಹಾಸ್ಟೆಲ್” ಯಾವ ದಿಕ್ಕಿನಲ್ಲಿದೆ? ಎಂಬುದನ್ನು ಅಲ್ಲಿಯೇ ನಿಂತಿರುವ ವಿದ್ಯಾರ್ಥಿಗಳ್ಲಿ ಕೇಳಿ ತಿಳಿದುಕೊಂಡೆ.

                ಇನ್ನೇನು ಅತ್ತ ಹೊರಡ ಬೇಕೆಂದು ಸೂಟಕೇಸ್ ಎತ್ತಿಕೊಳ್ಳುತ್ತಿದ್ದಂತೆ ತುಂಬಿದ ವಸ್ತುಗಳ ಭಾರಕ್ಕೆ ಸೂಟ್‌ಕೇಸ್ ಮೇಲೇಳದೇ ವೀಕಾಗಿದ್ದ ಅದರ ಹ್ಯಾಂಡಲ್ ಕಟ್ಟಾಗಿ ಕೈಗೆ ಬಂತು. ಆಚೀಚೆ ನಿಂತವರು “ಅಯ್ಯೋ ಪಾಪ…” ಎಂಬಂತೆ ನನ್ನನ್ನು ಭಾಸವಾಗಿ ಹೆಣಭಾರದ ಸೂಟಕೇಸ್‌ನ್ನು ಹೆಗಲೇರಿಸಿ ಹೊರಡಲು ಅಣಿಯಾಗುತ್ತಿದ್ದಂತೆ ಸಣ್ಣಗೆ ಮಳೆ ಜಿನುಗಲು ಆರಂಭಿಸಿತು. ಮಳೆಯ ಅಬ್ಬರವೇನೂ ಅಷ್ಟಾಗಿ ಇರಲಿಲ್ಲ. ಕತ್ತಲಾಗುವ ಮುನ್ನ ಹಾಸ್ಟೆಲ್ ತಲುಪಿ ನನಗಾಗಿ ಮೀಸಲಿಟ್ಟ ಕೊಠಡಿಯ ಕೀ ಪಡೆದುಕೊಳ್ಳುವ ಅಗತ್ಯವೂ ಇದ್ದುದರಿಂದ ಹಾಸ್ಟೆಲ್ಲಿನ ಆಡಳಿತ ಕಛೇರಿಯ ಬಾಗಿಲು ಮುಚ್ಚುವ ಮುನ್ನ ಅಲ್ಲಿಗೆ ತಲುಪಬೇಕಾದ ಅಗತ್ಯವೂ ನನಗಿತ್ತು.

                ಸೂಟ್‌ಕೇಸ್‌ನ್ನು ಹೆಗಲ ಮೇಲಿಟ್ಟುಕೊಂಡು ಜಿನುಗುವ ಮಳೆಯಲ್ಲೇ ಶಾಲ್ಮಲಾ ಹಾಸ್ಟೆಲ್ಲಿನತ್ತ ನಡೆಯ ತೊಡಗಿದೆ.

                ವಿಶ್ವವಿದ್ಯಾಲಯ ಕ್ಯಾಂಪಸ್ಸಿನಿಂದ ದಕ್ಷಿಣಕ್ಕೆ ಅಂದಾಜು ಎರಡು ಮೂರು ಕಿಲೋಮೀಟರ್ ಅಂತರದಲ್ಲಿ ಸೋಮೇಶ್ವರ ಕೆರೆಯ ಈಚೆ ದಂಡೆಯಲ್ಲಿ ಶಾಲ್ಮಲಾ ಹಾಸ್ಟೆಲ್ಲು ಇರುವುದಾಗಿ ಕೇಳಿ ತಿಳಿದಿದ್ದೆ.

                ಬಟ್ಟೆ ಒದ್ದೆಯಾಗುವುದನ್ನು ಲೆಕ್ಕಿಸದೇ ಸ್ವಲ್ಪ ಅವಸರದಲ್ಲೇ ಹೆಜ್ಜೆ ಇಡುತ್ತಿದ್ದೆ. ಯಾರೋ ಹಿಂದಿನಿಂದ ಕರೆದಂತೆ ಕೇಳಿಸಿತು. ನಿಂತು ತಿರುಗಿ ನೋಡಿದೆ.

                ಸುಮಾರು ಮೂವತ್ತೊಂದು ನಲವತ್ತು ವರುಷ ಪ್ರಾಯದ ಗೃಹಸ್ಥರಂತೆ ಕಾಣುವ ಹಿರಿಯರೊಬ್ಬರು “ಬನ್ನಿ ಮಳೆಯಲ್ಲೇಕೆ ಹೊರಟಿದ್ದೀರಿ.?” ಎನ್ನುತ್ತಲೇ ನನ್ನನ್ನು ಸಮೀಪಿಸಿ ತಮ್ಮ ವಿಶಾಲವಾದ ಛತ್ರಿಯ ನೆರಳಿಗೆ ನನ್ನನ್ನು ಕರೆದುಕೊಂಡರು. ನನಗೆ ಮುಜುಗರವಾಯಿತಾದರೂ ಬೇರೆ ದಾರಿಯಿಲ್ಲದೆ ಅವರನ್ನು ಅನುಸರಿಸಿ ನಡೆಯತೊಡಗಿದೆ.

                “ಎಲ್ಲಿ ಹಾಸ್ಟೆಲ್ಲಿಗೇನು?” ಎಂಬ ಅವರ ಒಂದೇ ಒಂದು ಪ್ರಶ್ನೆಗೆ “ಹೌದುಸಾರ್” ಎಂದಷ್ಟೇ ಉತ್ತರಿಸಿ ಸುಮ್ಮನೇ ನಡೆಯತೊಡಗಿದೆ. ಮತ್ತೆ ಅವರೂ ಬೇರೆನೂ ಪ್ರಶ್ನಿಸಲಿಲ್ಲ, ನನಗೂ ಅದೇ ಬೇಕಾಗಿತ್ತು.

                ಹಾಸ್ಟೆಲ್ ಸಮೀಪಿಸಿದಾಗ ಹೊರಳು ದಾರಿಯಲ್ಲಿ ಅಧ್ಯಾಪಕರ ಕ್ವಾಟರ್ಸ್ ಇರುವ ಕಡೆ ಅವರು “ಓಕೆ…ಬರ‍್ತೇನೆ” ಎನ್ನುತ್ತ ಅತ್ತ ತಿರುಗಿದರು. ಅಷ್ಟು ಹೊತ್ತಿಗೆ ಮಳೆಯ ಜಿನುಗುವಿಕೆಯೂ ಕಡಿಮೆಯಾಗಿತ್ತು ಅವರಿಗೆ ಧನ್ಯವಾದ ಹೇಳಿ ಹಾಸ್ಟೆಲ್ಲಿನ ಇಳಿಜಾರು ರಸ್ತೆಯಲ್ಲಿ ನಾನು ಮುಂದೆ ಸಾಗಿದೆ.

                ಸುದೈವದಿಂದ ಹಾಸ್ಟೆಲ್ಲಿನ ಆಡಳಿತ ಕಛೇರಿಯೂ ತೆರೆದಿರುವುದರಿಂ ದನನ್ನ ಕೊಠಡಿಯ ಕೀಲಿ ಕೈ ಪಡೆದು ರೂಮು ಸೇರಿಕೊಳ್ಳಲು ಯಾವ ತೊಂದರೆಯೂ ಆಗಲಿಲ್ಲ.

                ಹಾಸ್ಟೆಲ್ಲಿನ ವಸತಿ ಮತ್ತು ಊಟದ ವ್ಯವಸ್ಥೆಯೆಲ್ಲವೂ ನಾನು ಊಹಿಸಿದುದಕ್ಕಿಂತ ಹತ್ತು ಪಟ್ಟು ಅಧಿಕ ಅನುಕೂಲಕರವಾಗಿತ್ತು. ಅದರ ಕುರಿತು ಬೇರೆ ಸಂದರ್ಭದಲ್ಲಿ ವಿವರವಾಗಿ ಪ್ರಸ್ತಾಪಿಸುವೆ.

                ಮರುದಿನ ಹನ್ನೊಂದು ಗಂಟೆಗೆ ನಮ್ಮ ತರಗತಿಗಳು ಆರಂಭವಾಗುತ್ತವೆಯಾದ್ದರಿಂದ ಮೊಟ್ಟ ಮೊದಲ ಪರೀಯಡ್ ತಪ್ಪಿಸಿಕೊಳ್ಳಬಾರದೆಂದು ಕೊಂಚ ಮೊದಲೇ ಹೊರಟು ಕನ್ನಡ ವಿಭಾಗವನ್ನು ತಲುಪಿದೆ. ಎಲ್ಲ ಹೊಸ ಮುಖಗಳು. ನಮ್ಮ ಕಾಲೇಜಿನಿಂದ ಪಿ.ಜಿ ಪಂಡಿತ್ ಎಂಬ ಸಹಪಾಠಿಯೊಬ್ಬ ಮಾತ್ರ ನನಗೆ ಪರಿಚಿತನಾಗಿದ್ದ. ಅವನಿಗೂ ನಾನೊಬ್ಬನೇ.

                ಸಹಜ ಮಾತು ಕತೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಎಂಬುದರ ಸುಳಿವು ಸಿಗುತ್ತಾ ಕಾರವಾರ, ಹೊನ್ನಾವರ, ಶಿರ್ಶಿ, ಕುಮಟಾ ಇತ್ಯಾದಿ ಊರುಗಳಿಂದ ಬಂದ ಜನರು ಒಂದು ಪಂಕ್ತಿಯಲ್ಲಿ ಸಹಜವಾಗಿಯೇ ಸೇರಿಕೊಂಡೆವು.

                ಎಲ್ಲರಿಗೂ ಕಾಲೇಜಿನ ತರಗತಿಯ ಪಾಠಗಳ ಅರಿವು ಇದೆ. ಆದರೆ ಇದು ಅದಕ್ಕಿಂತ ಮೇಲ್ದರ್ಜೆಯ ಸ್ನಾತಕೋತ್ತರ ಪದವಿಯ ತರಗತಿಯ ಕೊಠಡಿ. ಇಲ್ಲಿ ಉಪನ್ಯಾಸಗಳು, ಚರ್ಚೆ, ಪ್ರಶ್ನೋತ್ತರಗಳು… ಇತ್ಯಾದಿ ಎಲ್ಲವೂ ಇರುತ್ತವೆಯೆಂದೂ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನನ್ನು ತಾನು ತೊಡಗಿಸಿಕೊಳ್ಳದಿದ್ದರೆ ಪದವಿ ಪರೀಕ್ಷೆಯಲ್ಲಿ “ಕ್ಲಾಸು” ಪಡೆಯುವುದು ಕಷ್ಟವೆಂದೂ ಹಿರಿಯ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿ ತಿಳಿದುದರಿಂದ ಎಲ್ಲರಿಗೂ ಇಲ್ಲಿನ ಪಾಠ ಕ್ರಮದ ಕುರಿತು ಕುತೂಹಲವಿತ್ತು.

                ಗಂಟೆಯಾಗುತ್ತಿದ್ದಂತೆ ಒಂದೆರಡು ನಿಮಿಷಗಳೂ ಕಳೆಯದಂತೆ ಅಧ್ಯಾಪಕರೊಬ್ಬರು ನಮ್ಮ ಕೊಠಡಿಗೆ ಪ್ರವೇಶ ಮಾಡಿದರು. ಅಧ್ಯಾಪಕರ ಘನತೆಗೆ ತಕ್ಕುದಾಗಿ ಪುಲ್ ಸೂಟ್ ಧರಿಸಿ ತರಗತಿಗೆ ಬಂದ ಗಂಭೀರ ನಿಲುವಿನ ಅಧ್ಯಾಪಕರನ್ನು ನೋಡುತ್ತ ನಾವೆಲ್ಲ ಎದ್ದು ನಿಂತು ಗೌರವಿಸಿ ಮತ್ತೆ ಮೌನಕ್ಕೆ ಸಂದೆವು.

                ನಮ್ಮ ಅಧ್ಯಾಪಕರು ನಿಂತ ಉಪನ್ಯಾಸಕರ ವೇದಿಕೆಯ ಸರಿಯಾಗಿ ಎದುರಿನ ಗೋಡೆಯ ಮೇಲೆ ಹಿರಿಯ ವಿದ್ವಾಂಸರೊಬ್ಬರ ಭಾವಚಿತ್ರ ತೂಗು ಹಾಕಿದ್ದರು. ಅದರ ಕೆಳಗೆ ಪ್ರೊ. ಎಸ್.ಎಸ್.ಬಸವನಾಳ ಎಂದು ಬರೆದಿದ್ದರು. ನಮ್ಮ ಅಧ್ಯಾಪಕರು ವೇದಿಕೆ ಏರಿದ ಕ್ಷಣದಲ್ಲೇ ಕಣ್ಣುಮುಚ್ಚಿ ಎದೆಯ ಮೇಲೆ ಕೈ ಇಟ್ಟುಕೊಂಡು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದರು. ಬಳಿಕ ಕೊರಳಿಗೆ ಬಿಗಿದ ಟೈ ಅನ್ನು ಸಡಿಲಿಸಿಕೊಳ್ಳುತ್ತ ಪಾಠವನ್ನು ಆರಂಭಿಸಿದರು.

                ವಿಷಯ “ಛಂದಸ್ಸು”… ನಿರರ್ಗಳವಾಗಿ ವರ್ಷ ಋತುವಿನ ತುಂಬು ಪ್ರವಾದಂತೆ ಗುರುಗಳ ಪ್ರವಚನ ಧಾರೆ ಧಾರೆಯಾಗಿ ಪ್ರವಹಿಸುತ್ತಿತ್ತು. ನನ್ನ ತಲೆಗೆ ಯಾವುದೂ ಹೋಗದಂತೆ ನಾನು ಬೇರೊಂದು ಯೋಚನೆಯಲ್ಲಿಯೇ ಮಗ್ನನಾಗಿದ್ದೆ! ನಾನು ಇವರನ್ನು ಮೊದಲೊಮ್ಮೆ ನೋಡಿದ್ದೇನೆ. ಆದರೆ ಎಲ್ಲಿ? ಅವರ ಪಾಠದುದ್ದಕ್ಕೂ ಇದೇ ಯೋಚನೆಯಲ್ಲಿಯೇ ಸಮಯ ಕಳೆದ ನನಗೆ ಮುಕ್ಕಾಲು ಗಂಟೆಯ ಬಳಿಕ ಉತ್ತರ ದೊರಕಿತು!

                ನಿನ್ನೆ ಸಂಜೆ ಶಾಲ್ಮಲಾ ಹಾಸ್ಟೆಲಿನ ದಾರಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ನಡೆಯುತ್ತಿದ್ದ ನನ್ನನ್ನು ತಮ್ಮ ಕೊಡೆಯ ಆಶ್ರಯಕ್ಕೆ ಕರೆದು ನನ್ನೊಡನೆ ಹೆಜ್ಜೆ ಹಾಕಿದವರು ಇವರೇ ಎಂಬುದು ಅರಿವಾದಾಗ ನನಗೆ  ತೆಲುಗು ಅಧ್ಯಾಪಕರು ಹಾಸ್ಯಮಯ ಶೈಲಿಯಲ್ಲಿ ಪಾಠ ಮಾಡುವುದನ್ನೇ ಕೇಳುವುದೇ ಚಂದವೆನಿಸುತ್ತಿತ್ತು. ದುರ್ದೈವದಿಂದ ತೆಲುಗಿನ ಕಠಿಣ ಅಕ್ಷರಗಳಿಂದ ಕೂಡಿದ ಅವರ ಹೆಸರನ್ನು ನೆನಪಿಡುವುದೇ ನಮಗೆ ಕೊನೆಗೂ ಸಾಧ್ಯವಾಗಲಿಲ್ಲ.

                ಇಲ್ಲಿನ ಎರಡು ವರ್ಷಗಳ ವಿಶ್ವವಿದ್ಯಾಲಯದ ಓದಿನ ಸಂದರ್ಭದಲ್ಲಿ ಎಲ್ಲ ಅಧ್ಯಾಪಕರೂ ಒಂದಲ್ಲ ಒಂದು ವಿಧದಿಂದ ನಮ್ಮನ್ನು ಪ್ರಭಾವಿಸಿ ಖಂಡಿತವಾಗಿಯೂ ನಮ್ಮ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಆದರೆ ಎಲ್ಲರಿಗಿಂತ ಹೆಚ್ಚಿನ ಒಡನಾಟಕ್ಕೆ ನನ್ನ ಭಾಗ್ಯವೆಂಬಂತೆ ದೊರೆತವರು ಡಾ. ಎಂ.ಎಂ.ಕಲ್ಬುರ್ಗಿಯವರು.

                ಒಂದು ವಿಶಿಷ್ಟ ಸಂದರ್ಭದಲ್ಲಿ ಕಲ್ಬುರ್ಗಿಯವರ ಹತ್ತಿರದವನಾಗುವ ಅವಕಾಶ ನನಗೊದಗಿ ಬಂತು. ಮತ್ತು ಆಗ ಕಲ್ಬುರ್ಗಿಯವರಿಂದ ನಾನು ಕಾಯಕ ನಿಷ್ಠೆಯ ಮಹತ್ವ ಮತ್ತು ಅದರ ಪ್ರಯೋಜನದ ಅರ್ಥವೇನೆಂದು ಅರಿಯುವ ಅವಕಾಶ ದೊರೆಯಿತು. ಅದು ನನ್ನ ಬದುಕಿಗೆ ಮಹತ್ತರವಾದ ಅರಿವನ್ನು ಕರುಣಿಸಿತು ಎಂಬುದಕ್ಕಾಗಿ ನಾನು ಈಗಲೂ ಡಾ. ಕಲ್ಬುರ್ಗಿಯವರಿಗೆ ಋಣಿಯಾಗಿರುವೆ.

                ಕಾಯಕ ನಿಷ್ಠೆಯ ಪಾಠ ಮಾಡುವುದಕ್ಕಿಂತ ಹಾಗೆ ಬದುಕಿ ತೋರಿದ ಸಂದರ್ಭವನ್ನು ಮುಂದಿನ ಬರಹದಲ್ಲಿ ಪ್ರಸ್ತಾಪಿಸುವೆ


ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

One thought on “

  1. ಗುರೂಜಿ,

    ಧಾರವಾಡ ಸೇರಿ ಅಲ್ಲಿಂದ ಯುನಿವರ್ಸಿಟಿ ಹಾಸ್ಟೆಲ್ ಸೇರುವಲ್ಲಿ ನೀವು ಅನುಭವಿಸಿದ ಅನುಭವ ಅಯ್ಯೋ ಅನಿಸುತ್ತಿದೆ.

Leave a Reply

Back To Top