ನೀಳ್ಗಥೆ

ಗಿಳಿಯು ಪಂಜರದೊಳಿಲ್ಲ

ಭಾಗ—ಐದು

ಟಿ. ಎಸ್. ಶ್ರವಣ ಕುಮಾರಿ

Breaking down breastfeeding- The New Indian Express

ಎರೆದುಕೊಂಡು ಮಲಗಿದ್ದ ಮಗು ಎದ್ದು ಅಳಲು ಶುರು ಮಾಡಿತು. ಅಡುಗೆ ಕೋಣೆಗೆ ಹೋಗಿ ಹಾಲನ್ನು ತೆಗೆದುಕೊಂಡು ಬಂದು ಮತ್ತೆ ಕೋಣೆ ಬಾಗಿಲು ಮುಚ್ಚಿ ಕುಡಿಸತೊಡಗಿದಳು. ತೇಗಿಸಿದ ಮೇಲೆ ಕೆಳಗೆ ಹಾಸಿ ಒಂದಷ್ಟು ಆಟಿಕೆಗಳನ್ನು ಹಾಕಿ ಮಗುವನ್ನು ಬಿಟ್ಟು ಅದು ಆಡುವುದನ್ನೇ ನೋಡುತ್ತಾ ಕುಳಿತವಳ ತಲೆ ಕಲ್ಲು ಹೊಡೆದ ಜೇನುಗೂಡಾಗಿತ್ತು. ʻಮಾವನವರು ಎಷ್ಟು ಚೆನ್ನಾಗಿ ನನ್ನ ಸುತ್ತ ಬಲೆಯನ್ನು ಹೆಣೆದು ಉಳಿದವರನ್ನು ತನ್ನ ಬಲೆಗೆ ಕೆಡವಿಕೊಂಡರಲ್ಲಾ ಎನ್ನಿಸಿತು. ʻನೀನು ಹೇಳುʼ ಅಂದ್ರಲ್ಲಾ, ನಾನು ನಿಜ ಹೇಳಿದ್ರೆ ಯಾರಾದ್ರೂ ನಂಬೋ ಮನಸ್ಥಿತೀಲಿ ಇದ್ರಾ. ಇಷ್ಟು ಜನರನ್ನ ಕರೆಸಿ ಈ ರೀತಿ ಅವಮಾನ ಮಾಡೋ ಬದ್ಲು ತನ್ನೊಬ್ಳನ್ನೇ ಕರೆದು ಹೇಳ್ಬಹುದಿತ್ತಲ್ವಾ. ಇಲ್ಲಾ… ಅವರ ಸಂಚೇ ಬೇರೆ. ಎಲ್ಲರೆದ್ರು ಈ ವಿಷ್ಯ ತೆಗೆದು ನನ್ನ ಕಟ್ಟಿಹಾಕ್ಬೇಕಿತ್ತು…. ಅವರನ್ಯಾಕೆ ಅನ್ಬೇಕು… ನಮ್ಮಪ್ಪ ಅಮ್ಮ…. ಹಾಗನ್ಕೊಳಕ್ಕೂ ಈಗ ಅಸಹ್ಯವಾಗ್ತಿದೆ… ದುಡ್ಡಿನ ಮುಂದೆ ಮಗಳ ಜೀವನಾನೂ ಅವ್ರಿಗೆ ಕನಿಷ್ಠವಾಯ್ತ… ಎಲ್ರೂ ಬಯಸ್ತಿರೋದೇನು… ನಾನು ತಲೆ ತಗ್ಗಿಸಿ ಅವರ ಹೇಳಿದ್ದಕ್ಕೆ ಹ್ಞೂಗುಟ್ಟಿ ಹೊಟ್ಟೇಲಿರೋ ಮೊಳಕೇನ ಚಿವುಟಿ ಜೀವಮಾನ ಪೂರ್ತಿ ಈ ಮನೆಯ ಸೆರೆಯಾಳಾಗಿ ಬಿದ್ದಿರ‍್ಬೇಕು… ಸದಾ ಅವರ ಕಣ್ಣಲ್ಲಿರೋ ಸಂಶಯದ ಪ್ರಶ್ನೆಗಳಿಗೆ ಉತ್ರ ಕೊಡ್ತಿರ‍್ಬೇಕು… ಇಲ್ಲ ಇದಕ್ಕಿಂತ ಹೊರಟ್ಹೋಗೋದೇ ವಾಸಿ…ʼ

ಶ್ರೀದರನಿಗೆ ಫೋನ್‌ ಮಾಡಿದಳು. “ಏನು ನಿರ್ಧಾರ ತೊಗೊಂಡ್ಯಪ್ಪಾ… ನಾನು ಕಾಯ್ತಿದೀನಿ” ಅಂದ. ಅಳುತ್ತಳುತ್ತಲೇ ಬೆಳಗಿನಿಂದ ನಡೆದ ವಿದ್ಯಮಾನವನ್ನು ಚುಟುಕಾಗಿ ಹೇಳಿದಳು. “ಮಗೂನ ಬಿಟ್ಟು ಹೋಗಲ್ಲ, ಕರ‍್ಕೊಂಡು ಹೋಗ್ತೀನಿ ಅನ್ನು. ಬೇಕಾದ್ರೆ ನಾನು ಬಂದು ಹೇಳ್ತೀನಿ, ಅದು ನನ್ನ ಮಗೂಂತ” ತಕ್ಷಣವೇ ನುಡಿದ. “ಅದು ಮಾವನಿಗೆ ಗೊತ್ತಿಲ್ವಾ. ತಮ್ಮ ಮಗಂದೇ ಅಂತ ಎಲ್ರೆದುರೂ ಸಾದಿಸ್ಕೊಂಡ್ಬಿಟ್ಟಿದಾರೆ. ನನ್ನನ್ನ ಋಣದಲ್ಲಿ ಕಟ್ಟಿಹಾಕಿದಾರೆ. ನಾನು ತಲೆಯೆತ್ತದ ಹಾಗೆ ಮಾಡ್ಬಿಟ್ಟಿದಾರೆ. ಈಗಿಡ್ತೀನಿ. ಮತ್ತೆ ಮೆಸೇಜ್‌ ಮಾಡ್ತೀನಿ” ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಆಡಿಕೊಳ್ಳುತ್ತಿದ್ದ ಮಗುವನ್ನು ನೋಡಿದಳು. ನನ್ನ ಪುಟ್ಟ ಜೀವ ಇದು. ಇದನ್ನ ಬಿಟ್ಟುಹೋಗೋಕೆ ನನ್ನಿಂದ ಸಾಧ್ಯಾನಾ… ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ಹುಚ್ಚು ಹಿಡಿದವಳಂತೆ ಮುದ್ದಾಡತೊಡಗಿದಳು. ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಒಂದನ್ನು ಉಳಿಸ್ಕೊಳಕ್ಕೆ ಇನ್ನೊಂದು ಜೀವಾನ ಕೊಲ್ಬೇಕಾ… ಮನಸ್ಸು ಗಟ್ಟಿ ಮಾಡ್ಕೊಂಡು ಹಾಗ್ಮಾಡಿದ್ರೂ ಮುಂದಿರೋ ಜೀವ್ನಾನೆಲ್ಲಾ ಹೀಗೆ ನೀರಸವಾಗಿ, ಸದಾ ಅವರ ಕಣ್ಗಾವಲಿನಲ್ಲೇ ಇರ‍್ಬೇಕು… ನನ್ನನ್ನ ಅನುಮಾನದಿಂದಲೇ ನೋಡೋವ್ರ ಮಧ್ಯೆ ಜೀವ್ನ ಕಳ್ಯೋದು ಹೇಗೆ…. ಒಂದು ಪ್ರೀತಿಯ, ಆಸೆಯ ನೋಟವಿಲ್ಲ… ಮುದಗೊಳಿಸುವ ಮಾತಿಲ್ಲ… ಗಾಣಕ್ಕೆ ಕಟ್ಟಿದ ಎತ್ತಿನ ಹಾಗೆ ಈ ಮನೆಯೊಳಗೇ ಸುತ್ತುತ್ತಿರಬೇಕು… ಎಲ್ಲ ಆಕಾಂಕ್ಷೆಗಳನ್ನೂ ಅದುಮಿ ಹೂತುಬಿಡಬೇಕು… ಮುಂದೆ ಯಾವತ್ತೋ ಈ ವಿಷಯ ಮತ್ತೆ ವಿಷದ ಹಾಗೆ ತನ್ನನ್ನ ಕೊಲ್ಲಲ್ಲ ಅಂತ ಏನು ಗ್ಯಾರಂಟಿ?! ಯಾವ ಪಾಪಕ್ಕೆ ನಾನು ಸುಖಕ್ಕೆ ಎರವಾಗ್ಬೇಕು?! ನನ್ನಿಂದ ಸಾಧ್ಯಾನಾ???…

ಶ್ರೀಧರ ಪದೇ ಪದೇ ಸಂದೇಶ ಕಳಿಸಿ ಕೇಳ್ತಾನೇ ಇದಾನೆ. ʻಏನು ನಿರ್ಧಾರ ತೆಗೆದುಕೊಂಡು ಬಿಡ್ತೀನೋʼ ಅನ್ನೋ ಆತಂಕ ಅವನಿಗೆ. ಒಂದು ಕಡೆ ಈ ಮಗು… ಇನ್ನೊಂದು ಕಡೆ ಹೊಟ್ಟೇಲಿರೋ ಜೀವ, ಶ್ರೀಧರ… ತಕ್ಕಡಿಯಲ್ಲಿ ಒಂದೊಂದು ಸಲ ಒಂದೊಂದು ಭಾರವಾಗ್ತಿದೆ. ಹಾಲಿನ ಗಡಿಯಾರ ಒಂದು ಗಂಟೆ ಹೊಡೆದ ಸದ್ದು ಕೇಳಿತು. ಅಡುಗೆಮನೆಯಲ್ಲಿ ಮಾತು… ಪಾತ್ರೆಗಳ ಸದ್ದು ಕೇಳ್ತಿದೆ. ಅವರಿಬ್ರೇ ಸೇರ‍್ಕೊಂಡು ಅಡುಗೆ ಮಾಡ್ತಿದಾರೇನೋ… ಅನ್ನವಾಗಿಲ್ದಿದ್ರೆ ರಾಗಿ ಸರಿಯನ್ನಾದ್ರೂ ಮಾಡ್ಕೊಂಡು ಬಂದು ತಿನ್ನಿಸ್ಬೇಕು ಎಂದುಕೊಳ್ಳುತ್ತಾ ಮಗುವನ್ನು ಕೆಳಗೆ ಬಿಟ್ಟು ಮುಖ ಒರಸಿಕೊಂಡು ಅಡುಗೆ ಮನೆಗೆ ಹೋದಳು. ಅಲ್ಲಿ ಲಲಿತಮ್ಮ ಕಣ್ಣೊರಸಿಕೊಳ್ಳುತ್ತಾ ಅಡುಗೆ ಮಾಡುತ್ತಿದ್ದರು. ಸುಂದರಮ್ಮ ಅಲ್ಲೇ ಕುರ್ಚಿಯನ್ನು ಹಾಕಿಕೊಂಡು ಕೂತು ಅವರ ಜೊತೆ ಮಾತನಾಡುತ್ತಿದ್ದರು. “ನೀವು ಅಷ್ಟೊಂದು ಬೇಜಾರು ಮಾಡ್ಕೋಬೇಡಿ. ಅಣ್ಣ ಏನು ಅವ್ಳನ್ನ ಹೊರಗೆ ಹಾಕ್ತೀನೀಂತ ಹೇಳಿಲ್ವಲ್ಲ… ಚೆನ್ನಾಗಿದ್ದವ್ಳ ತಲೇನ ಯಾರೋ ಕೆಡ್ಸಿದಾರೆ, ಇನ್ನೂ ಚಿಕ್ಕೋಳು, ಯಾರು ಏನೇನು ಮರಳು ಮಾತಾಡಿ ಅವಳ ಬುದ್ಧೀಗೆ ಮಂಕು ಎರಚಿದ್ರೋ… ಅವ್ಳ ಪುಣ್ಯ ಚೆನ್ನಾಗಿದೆ. ಇಷ್ಟರಲ್ಲೇ ಮುಗೀತಿದೆ…” ಇನ್ನೂ ಏನೇನು ಹೇಳ್ತಿದ್ರೋ.. ಅಷ್ಟರಲ್ಲಿ ಅವಳೇ ಬಂದಿದ್ದರಿಂದ ಮಾತು ತಟಕ್ಕನೆ ನಿಂತು ಹೋಯಿತು. ಇಬ್ಬರೂ ಅವಳೇನೋ ಹೇಳಲು ಬಂದಳೇನೋ ಅನ್ನುವಂತೆ ಅವಳ ಮುಖವನ್ನೇ ನೋಡತೊಡಗಿದರು. ಆದರೆ ಏನೂ ಮಾತಾಡದೆ ಒಲೆಯ ಕಡೆ ನಡೆದವಳು ಬಿಸಿ ಅನ್ನವನ್ನು ಒಂದು ಬಟ್ಟಲಲ್ಲಿ ಹಾಕಿ ಮಿದ್ದು ಬೆಂದಿದ್ದ ಬೇಳೆ, ಉಪ್ಪು, ತುಪ್ಪವನ್ನು ಹಾಕಿಕೊಂಡು ಸೀದಾ ಹೊರಟು ಹೋದಳು. ಹಿಂದೆಯೇ ಲಲಿತಮ್ಮನವರ ಮಾತು ಕೇಳಿತು “ನೋಡಿ ಎಷ್ಟು ದುರಹಂಕಾರ ಅವ್ಳಿಗೆ. ನೀವು ದೊಡ್ಡವ್ರು ಇಲ್ಲಿ ಕೂತಿದೀರ… ನಾನಿಲ್ಲೇ ಕಂಬದ ಹಾಗೆ ನಿಂತಿದೀನಿ… ಒಂದ್ಮಾತು ಬಂತಾ ಅವ್ಳ ಬಾಯಲ್ಲಿ… ನಾವು ಎದ್ರಿಗೇ ಇಲ್ಲಾ ಅನ್ನೋ ಹಾಗೆ ಹೋಗ್ತಾಳಲ್ಲಾ… ನಾನ್ಯಾಕಾರೂ ಹೆತ್ನೋ ಇಂತವ್ಳನ್ನ…

ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು. ಹಸಿವಾಗಿದ್ದ ಮಗು ಕೊಸರಾಡತೊಡಗಿದಾಗ ಅಪ್ಪುಗೆಯನ್ನು ಸಡಲಿಸಿ ಮತ್ತೆ ತಿನ್ನಿಸಲು ಶುರುಮಾಡಿದಳು. ಅಡುಗೆ ಮುಗಿಯಿತೇನೋ… ಕೆಳಗಡೆ ಊಟದ ಮನೆಯಲ್ಲಿ ತಟ್ಟೆಗಳನ್ನಿಡುವ ಸದ್ದು ಕೇಳಿಸಿತು. ಎಲ್ಲರೂ ಅಲ್ಲಿ ಸೇರುವ ಮುಂಚೆ ತಾನು ಹೋಗಿ ಮಗುವಿನ ಮೂತಿ ತೊಳೆಸಿಕೊಂಡು ಬಂದುಬಿಡಬೇಕು ಎಂದುಕೊಂಡು ಖಾಲಿಯಾದ ಬಟ್ಟಲನ್ನು ತೆಗೆದುಕೊಂಡು ಕೆಳಗೆ ಬಂದಳು. ಮಗುವಿನ ಮೂತಿ ತೊಳೆಸಿ, ಸೆರಗಿನಿಂದ ಒರಸಿ ರೂಮಿನಲ್ಲಿ ಬಿಟ್ಟು ತಿಂದಿದ್ದ ಬಟ್ಟಲನ್ನು ತೊಳೆಯಲು ಹೊರಗೆ ಬಂದಾಗ ಅಪ್ಪ, ಮಾವನವರು, ಶ್ರೀನಿವಾಸ, ಸುಂದರಮ್ಮ ಎಲ್ಲರೂ ಟೇಬಲ್ಲಿನ ಮುಂದೆ ಕುಳಿತಿದ್ದರು. ಲಲಿತಮ್ಮ ಬಡಿಸಲು ಮುಂದಾಗಿದ್ದರು. ಅವಳನ್ನು ನೋಡಿದವರೇ ವೆಂಕಟೇಶಯ್ಯನವರು “ಪದ್ಮಂಗೂ ಒಂದು ತಟ್ಟೆ ಇಡಿ. ಬೆಳಗ್ಗೆ ತಿಂಡೀನೂ ತಿನ್ನಲಿಲ್ವೇನೋ. ಅವ್ಳೂ ಊಟಕ್ಬರ‍್ಲಿ” ಎಂದರು. “ಅಣ್ಣಾ ನೀನು ಇಷ್ಟು ಪೂಸಿ ಪೂಸಿ ಮಾಡೇ ಅವ್ಳಿಗೆ ಇಂತಾ ದುರಹಂಕಾರ ಬಂದಿರೋದು. ಹೊಟ್ಟೆ ಕಾದ್ರೆ ತಾನೇ ಬಂದು ಊಟ ಮಾಡ್ತಾಳೆ, ನಿನ್ನುಪಚಾರ ಎಲ್ಲಾ ಏನೂ ಬೇಕಿಲ್ಲ. ಸುಮ್ನೆ ಊಟ ಮಾಡು” ಎನ್ನುತ್ತಾ ದಬಾಯಿಸಿದರು. “ಅಷ್ಟಲ್ದೇ..” ಎಂದು ರಮಣಮೂರ್ತಿಗಳೂ ಒಗ್ಗರಣೆ ಸೇರಿಸಿದರು. ಅಡುಗೆಮನೆಯ ಸಿಂಕಿನಲ್ಲಿ ಬಟ್ಟಲನ್ನು ತೊಳೆದಿಟ್ಟ ಪದ್ಮ ಯಾರನ್ನೂ ನೋಡದೆ ಸೀದಾ ರೂಮಿನ ಕಡೆ ನಡೆದಳು. “ನೋಡಿದ್ಯಾ ಅವ್ಳ ಕೊಬ್ಬು ಹೇಗಿದೆ. ನೀನು ಅಷ್ಟು ಅಕ್ಕರೆ ತೋರಿದ್ದಕ್ಕಾದ್ರೂ ʻನಾನು ಆಮೇಲೆ ಮಾಡ್ತೀನಿ ಮಾವʼ ಅಂತ ಹೇಳಿ ಹೋಗ್ಬೋದಾಗಿತ್ತಲ್ವಾ” ಸಿಡಿದರು ಸುಂದರಮ್ಮ.

********************************

4 thoughts on “

  1. ಇಷ್ಟಾದ ಮೇಲೆ ಹಿಂದು ಮುಂದು ಯಾಕೆ? ಪೂರ್ತಿ ಹೇಳಬಹುದು. ಮೊದಲಿನ ಮಗುವೂ ಶ್ರೀಧರನದೇ ಹೇಳಿ ಧೈರ್ಯ ಪ್ರಕಟಿಸಬೇಕು.

  2. ಅರ್ಥ ಕಾಮಗಳ ಸುತ್ತಲೇ ಸುತ್ತುವ ಈ ಬದುಕು ಎಷ್ಟು ಅನೂಹ್ಯ, ವಿಚಿತ್ರ. ಪದ್ಮಳ ಅಂತಿಮ ನಡೆ ಏನು … ನೋಡೋಣ ಕಾದು.

  3. ರಾಮನನ್ನೂ ಕರೆದುಕೊಂಡೇ ಅವಳು ಹೋಗುವುದು ಒಳಿತು.
    ಮುಂದೇನಾಗುವುದೋ!!
    ನಮ್ಮ ಕಣ್ಣೆದುರಲ್ಲೇ ನಡೆಯುತ್ತಿದೆಯೇನೋ ಅನಿಸುತ್ತಿದೆ.

  4. ನಿಜವಾಗಿ ನಡೆದ ಘಟನೆಯ ಬಗ್ಗೆ ಬರೆದದ್ದೇನೋ ಅನಿಸುತ್ತದೆ. ಕುತೂಹಲ ಕಾಡುತ್ತದೆ. ಅವಳು ಎಲ್ಲರಿಗೂ ನಿಜವನ್ನು ಹೇಳಿ ಮಗುವನ್ನೂ ಕರೆದುಕೊಂಡು ಹೋಗುವುದೇ ಸರಿಯೇನೋ ಅನಿಸುತ್ತದೆ

Leave a Reply

Back To Top