ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ
ಬಿದಲೋಟಿ ರಂಗನಾಥ್
ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ
ಹೆಣದ ಮೇಲಿನ ಕಾಸಿಗೆ
ನಾಲಿಗೆಯನ್ನೇಕೆ ಚಾಚಿದೆ ?
ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ
ನಿನ್ನ ಹೆಸರನ್ನೇಕೆ ಜೋಡಿಸುತ್ತಿ?
ನಿಷ್ಠೆ ಇಲ್ಲದ ಮನಸನು ಹೊತ್ತು
ಹೊಲಸು ಆಗಿ
ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ
ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ
ನಿನ್ನ ನಡೆ ಎಂದಿಗೂ ಗಾಳಿಗೋಪುರ
ಇದ್ದ ಸೀರೆಯನು ಉಡದೇ
ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು
ಮುಟ್ಟಲು ಹೋಗಿ
ಜಾರಿ ಹಾರಿದ ಸೀರೆಯ ಬದುಕು ಮುರಾಬಟ್ಟೆ !
ನಂಬಿಕೆಯ ಎದೆಯ ಮೇಲೆ ಬೈರಿಗೆ ತಿರುವಿ
ಹೋದ ಹೆಜ್ಜೆಯೇ
ನಿನಗೂ ಕಾದಿದೆ ಬೆಂಕಿ ಬವಣೆ
ಸುಖದ ಅಮಲಲಿ ತೇಲುವ ನೀನು
ಕಮರಿ ಹೋಗುವ ಕಾಲ ದೂರವಿಲ್ಲ.
ರೋಧಿಸುತ್ತಿರುವ ಮಣ್ಣಾದ ಮನಸಿನ ನೋವು
ನಿನಗೆ ತಟ್ಟದಿರುವುದೆ?
ಸುಳ್ಳಿನ ಪಾಯದ ಮೇಲೆ ಸತ್ಯದ ಗೋಪುರ
ನಿಲ್ಲುವುದು ಕಷ್ಟ.! ಎಂದಿಗೂ.
ನೀನಿಗ ಹಾರಾಡುವ ಹಕ್ಕಿಯಾಗಿರಬಹುದು
ಆದರೆ ನೀನು ಎಷ್ಟೇ ಉಜ್ಜಿ ತೊಳೆದರು
ನಿನ್ನ ಕೈಗೆ ಅಂಟಿದ ಪಾಪದ ಬಣ್ಣ ಎಂದೂ ಅಳಿಸದು !
ನೋವಿನಿಂದ ಹೋದ ಆ ಉಸಿರು
ನಿನ್ನ ಬೆನ್ನ ಮೇಲೆ ಬರೆದ ಅಳಿಸಲಾಗದ
ಮುಳ್ಳಿನ ಚಿತ್ರ
ಕರುಳು ಕುಡಿಗಳಿಗೆ ಕೊಟ್ಟ
ಅಪ್ಪನ ಉಸಿರಿಲ್ಲದ ಚಿತ್ರಪಟವನ್ನು
ನೋಡಿದ ಪ್ರತಿಸಾರಿಯು
ಅವು ಬಿಡುವ ನಿಟ್ಟುಸಿರು
ನಿನ್ನ ಸುಡುತ್ತಲೇ ಇರುತ್ತದೆ
ನೀನು ನರಳಿ ನರಳಿ
ಸಾವಿನ ಮನೆಯ ತಟ್ಟುವಾಗ
ನೀನು ಮಾಡಿದ ಮೋಸವನ್ನು ಉಂಡು
ನೊಂದು ಬೆಂದು ತೊರೆದಿದ್ದ ಆ ಉಸಿರಿಗೆ
ಬಹುಶಃ ರೆಕ್ಕೆ ಬಂದು ಮುಕ್ತಿಮಾರ್ಗದ ಕಡೆಗೆ
ಹಾರಬಹುದು !