ದಾರಾವಾಹಿ

ಆವರ್ತನ

ಅದ್ಯಾಯ-24

Bantwal:'Treasure hunters' dig anthill; devotees set up a Naga-katte |  coastaldigest.com - The Trusted News Portal of India

ಕೊಟ್ರೇಶ ತನ್ನ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡು ಭೂತ ಮೆಟ್ಟಿದವಂತೆ ಆಡಲಾರಂಭಿಸಿದ್ದನ್ನು ಕಂಡ ಅವನ ಜೊತೆಗಾರರು ಕೂಡಲೇ ಅವನನ್ನು ಹಿಡಿದು ಅಲ್ಲೇ ಮರವೊಂದರ ಬುಡದಲ್ಲಿ ಕುಳ್ಳಿರಿಸಿ ಸಮಾಧಾನ ಮಾಡತೊಡಗಿದರು. ಆದರೆ ಅವನು ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಅದು ಸಾಧ್ಯವಾಗದೆ ಗಳಗಳನೇ ಅಳಲು ಶುರುಮಾಡಿದ. ಅತ್ತ ಪುರಂದರಯ್ಯ, ಶಂಕರ ಮತ್ತು ರಫೀಕ್ ಅಲ್ಲಿನ ವಿಲಕ್ಷಣ ದೃಶ್ಯವನ್ನು ನೋಡಿ ಮರಗಟ್ಟಿ ಹೋಗಿದ್ದರು. ಅಲ್ಲಿ ನಡೆದುದೇನೆಂದರೆ ತುಂಬು ಗರ್ಭಿಣಿ ನಾಗರಹಾವೊಂದು ಹಲವು ದಿನಗಳ ಹಿಂದಷ್ಟೇ ನಾಗಬನದ ಶಿಲೆಕಲ್ಲುಗಳ ಆವರಣದ ದೊಡ್ಡ ಬಿರುಕೊಂದರ ಬಿಲವನ್ನು ಆಯ್ದುಕೊಂಡು ಮೊಟ್ಟೆಗಳನ್ನಿಡಲು ತಯಾರಿ ನಡೆಸುತ್ತಿತ್ತು. ಆದರೆ ಅದರ ದುರಾದೃಷ್ಟಕ್ಕೆ ತಾನಿನ್ನು ಕೆಲವೇ ಕ್ಷಣದಲ್ಲಿ ಸತ್ತು ಚಿಂದಿಯಾಗಲಿದ್ದೇನೆ ಎಂಬ ಸಂಗತಿ ಅದಕ್ಕೆ ತಿಳಿಯಲು ಸಾಧ್ಯವಿರಲಿಲ್ಲ. ಹಾಗಾಗಿ ಅದು ಕೊಟ್ರೇಶನ ಯಂತ್ರದ ವೀರಾವೇಶದ ಹೊಡೆತಕ್ಕೆ ಸಿಲುಕಿ ತನ್ನ ಹೊಟ್ಟೆಯನ್ನೂ, ಗರ್ಭಚೀಲವನ್ನೂ ಸೀಳಿಸಿಕೊಂಡು ಹತ್ತಾರು ಭ್ರೂಣ ಮತ್ತು ರಕ್ತಮಾಂಸವನ್ನು ಹೊರಗೆ ಚೆಲ್ಲಿಕೊಂಡು ಜೆಸಿಬಿಯಂತ್ರದ ಹಲ್ಲುಗಳು ಗೋರಿದ ಕಲ್ಲುಮಣ್ಣಿನ ರಾಶಿಯೊಂದಿಗೆ ಬೆರೆತು ಹೊರಗೆಸೆಯಲ್ಪಟ್ಟು ಅರೆ ಜೀವವಾಗಿ ಹೊರಳಾಡುತ್ತಿತ್ತು.

   ಹಾವಿನ ರಕ್ತ ಮತ್ತು ಮಾಂಸದ ವಾಸನೆಯನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದ ಕೊಂಬರ್‍ಚೇಳುಗಳು, ಕಟ್ಟಿರುವೆಗಳು ಮತ್ತು ಕ್ರಿಮಿಕೀಟಗಳೆಲ್ಲ ರಸದೌತಣದ ಆಸೆಯಿಂದ ಧಾವಿಸಿ ಬಂದು ಹಾವನ್ನೂ ಅದರ ಭ್ರೂಣಗಳನ್ನೂ ರಪ್ಪನೆ ಮುತ್ತಿಕೊಂಡವು. ಇನ್ನೇನು ಒಂದೆರಡು ನಿಮಿಷದಲ್ಲಿ ಕೊನೆಯುಸಿರೆಳೆಯಲಿದ್ದ ಹಾವು ತನ್ನ ಕರುಳ ಕುಡಿಗಳನ್ನು ಮುತ್ತಿಕೊಂಡ ಜೀವಜಂತುಗಳನ್ನು ಹೊಡೆದೋಡಿಸಲು ಅಂಥ ದೀನಸ್ಥಿತಿಯಲ್ಲೂ ಬಾಲವನ್ನು ಕಷ್ಟಪಟ್ಟು ಬೀಸುತ್ತಿತ್ತು. ಆದರೆ ರಾಶಿರಾಶಿ ಇರುವೆಗಳ ದಂಡು ಹಾವಿನ ಪ್ರಯತ್ನವನ್ನು ಕ್ಷಣದಲ್ಲಿ ನಿಷ್ಕ್ರಿಯೆಗೊಳಿಸಿ ಹಾವನ್ನೂ ಮುತ್ತಿಕೊಂಡಾಗ ಅದು ನಿಧಾನವಾಗಿ ತಟಸ್ಥವಾಯಿತು. ಆದರೆ ಶಂಕರ ಮತ್ತವನ ಸಂಗಡಿಗರು ಆ ಹಾವಿನ ಕರುಣಾಜನಕ ಸ್ಥಿತಿಯನ್ನು ಕಂಡು, ‘ಅಯ್ಯೋ ದೇವರೇ! ತಮ್ಮಿಂದ ಒಂದು ಮುಗ್ಧ ಜೀವಿಯ ಹತ್ಯೆಯಾಗಿಬಿಟ್ಟಿತಲ್ಲ!’ ಎಂಬ ದುಃಖ, ಪಶ್ಚಾತ್ತಾಪದಿಂದ ಕೊರಗುತ್ತ ನಿಸ್ತೇಜರಾದುದಲ್ಲ. ಬದಲಿಗೆ ಈಶ್ವರಪುರದ ಬಹುತೇಕ ನಾಗಭಕ್ತರಂತೆ ಅವರನ್ನೂ ನಾಗದೋಷದ ಅವ್ಯಕ್ತ ಭೀತಿಯೊಂದು ಬಲವಾಗಿ ಕಾಡಿದ್ದರಿಂದಲೇ ಆ ದೃಶ್ಯವನ್ನು ಕಂಡ ಅವರಿಗೆ ದಿಕ್ಕು ತೋಚದಂತಾಗಿದ್ದುದು! ಶಂಕರ ಉಳಿದವರೆಲ್ಲರಿಗಿಂತಲೂ ದುಪ್ಪಟ್ಟು ಭೀತಿಗೊಳಗಾಗಿದ್ದ. ಅವನ ಕೈಕಾಲುಗಳು ತಣ್ಣಗೆ ಕಂಪಿಸುತ್ತಿದ್ದವು. ಅತ್ತ ಪುರಂದರಯ್ಯ ಕುಸಿದು ಕುಳಿತಿದ್ದರು. ಇತ್ತ ರಫೀಕನಿಗೂ ಏನೂ ತೋಚದಾಗಿತ್ತು. ಕಾರಣ, ಅವನ ಧರ್ಮ ಗ್ರಂಥದಲ್ಲಿ ನಾಗರಹಾವು ದೇವರು ಎಂದು ಹೇಳಿಲ್ಲವಾದರೂ ಕೆಲವೊಮ್ಮೆ ‘ಜಿನ್’ ಎಂಬ ದೇವತಾಶಕ್ತಿಗಳೂ ನಾಗರಹಾವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ! ಎಂಬುದು ಅವರ ಸಮುದಾಯದ ಹಲವರ ನಂಬಿಕೆಯಾಗಿತ್ತು. ಆದ್ದರಿಂದ ಅವನು ಕೂಡಾ, ‘ಈ ಹಾವು  ಅದೇ ಶಕ್ತಿಯಾಗಿರಬಹುದಾ?’ ಎಂಬ ಭಯಾತಂಕಕ್ಕೆ ಬಿದ್ದು ಕ್ಷೋಭೆಗೊಂಡಿದ್ದ. ಆದರೂ ಅವನೇ ಮೊದಲು ಚೇತರಿಸಿಕೊಂಡವನು ಸುಂದರಯ್ಯನನ್ನೂ ಶಂಕರನನ್ನೂ ಸಮಾಧಾನಿಸಿ ಗುರೂಜಿಯವರಿಗೆ ಕರೆ ಮಾಡಲು ಸೂಚಿಸಿದ. ಆಗ ಶಂಕರ ಸ್ವಲ್ಪ ಸ್ಥಿಮಿತಕ್ಕೆ ಬಂದು ಗುರೂಜಿಗೆ ಕರೆ ಮಾಡಿದ.

   ಶಂಕರನಿಂದ ವಿಷಯ ತಿಳಿದ ಏಕನಾಥರು ಒಮ್ಮೆಲೇ ಅವಕ್ಕಾಗಿ, ‘ಅಯ್ಯಯ್ಯೋ, ಕೃಷ್ಣಾ..!’ ಎಂದು ಸಣ್ಣದಾಗಿ ಚೀರಿದರು. ತಮ್ಮ ವಿಶೇಷ ಯುಕ್ತಿಯೊಂದು ಮೊದಲ ಹಂತದಲ್ಲೇ ಕೈಕೊಟ್ಟಿದ್ದನ್ನು ನೆನೆದವರು ಶಂಕರನಿಗೆ ತಕ್ಷಣ ಏನುತ್ತರಿಸಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾದರು. ಆದರೆ ತಾವು ಶಂಕರನೊಡನೆ ಫೋನಿನಲ್ಲಿದ್ದೇವೆ ಎಂಬರಿವು ಬಂದು ತಮ್ಮನ್ನು ಸಂಭಾಳಿಸಿಕೊಂಡವರು, ‘ಏನಿದು ಶಂಕರಾ, ನಾವು ಇಷ್ಟೆಲ್ಲ ಪೂಜಾವಿಧಿಗಳನ್ನು ನೆರವೇರಿಸಿದ ಮೇಲೂ ಅಂಥದ್ದೊಂದು ಕ್ರೂರ ವಿಘ್ನ ನಡೆದುಬಿಟ್ಟಿತಾ…! ಆ ದರಿದ್ರದ ಹಾವು ಅಲ್ಲಿಗೇಕೆ ಬಂದು ಸಾಯಲು ಕುಳಿತಿತ್ತು ಮಾರಾಯಾ…? ಆ ಪ್ರದೇಶದ ಸರ್ಪ ಸಂತತಿಗಳನ್ನೆಲ್ಲ ವಕ್ಕಲೆಬ್ಬಿಸುವಂಥ ವಿಶೇಷ ಪೂಜೆಯೊಂದನ್ನೂ ನಾವು ಮಾಡಿದ್ದೇವಲ್ಲಾ! ಆದರೂ ಆ ಹಾವು ಅಲ್ಲಿಂದ ತೊಲಗಲಿಲ್ಲವೆಂದರೆ ಅದರ ಆಯಸ್ಸು ಮುಗಿದಿತ್ತೆಂದೇ ಅರ್ಥವಲ್ಲವಾ?’ ಎಂದು ವಿಷಾದದಿಂದ ಅಂದರು. ಬಳಿಕ, ‘ಆಯ್ತು. ಆಯ್ತು ಹೋಗಲಿ ಬಿಡು. ಇನ್ನೇನು ಮಾಡಲಿಕ್ಕಾಗುತ್ತದೆ…?’ ಎಂದರು ಜಿಗುಪ್ಸೆಯಿಂದ. ಆದರೆ ಶಂಕರ ಮೊದಲೇ ರೋಗದ ಕೋಳಿಯಂತೆ ಕೂರುತ್ತಿದ್ದವನು ಗುರೂಜಿಯ ಮಾತನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ. ಏಕನಾಥರು ಮತ್ತೆ ಮಾತಾಡಿದರು. ‘ಅಲ್ಲ ಮಾರಾಯಾ, ಅಲ್ಲಿ ಇನ್ನೊಂದು ವಿಷಯವೂ ನಡೆದಿರಬಹುದು. ಏನೆಂದರೆ ನಿನ್ನ ಜೆಸಿಬಿ ಕೆಲಸಗಾರರು ನಾವು ಬನವನ್ನು ತೆರವುಗೊಳಿಸಲು ಸೂಚಿಸಿದ ವಿಶೇಷ ಗಳಿಗೆಯೊಂದನ್ನು ಮೀರಿಯೇ ಕೆಲಸ ಆರಂಭಿಸಿರಬೇಕು. ಬಹುಶಃ ಹಾಗಾಗಿಯೇ ಅನಾಹುತವಾಗಿಬಿಟ್ಟಿದೆ. ಆದರೂ ಈಗ ಇದಕ್ಕೆಲ್ಲ ಯಾರನ್ನೂ ಹೊಣೆ ಮಾಡುವಂತಿಲ್ಲ ಬಿಡು. ಅದೆಲ್ಲಾ ವಿಧಿ ನಿಯಮ ಮತ್ತು ಈಗ ನಡೆದಿರುವ ಅನಾಹುತಕ್ಕೆ ಪರಿಹಾರವೂ ಇದೆ. ಹಾಗಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ಆ ಹಾವನ್ನೂ ಅದರ ಮೊಟ್ಟೆಗಳನ್ನೂ ಒಟ್ಟುಗೂಡಿಸಿ ಮನೆಗೆ ತಂದುಬಿಡು. ಎಲ್ಲವನ್ನೂ ಒಟ್ಟಿಗೆ ದಹನ ಮಾಡಿ ಸಂಸ್ಕಾರವನ್ನೂ ಮಾಡಿಬಿಟ್ಟರಾಯ್ತು. ಬಹುಶಃ ಇದು ಕೂಡಾ ಆ ನಾಗನದೇ ಇಚ್ಛೆಯಿರಬೇಕು!’ ಎಂದು ಹೇಳಿ ಫೋನು ಇಡುವುದರಲ್ಲಿದ್ದರು. ಆದರೆ ಅವರಿಗೆ ತಟ್ಟನೆ ಮತ್ತೊಂದು ವಿಷಯವೂ ಹೊಳೆಯಿತು. ಆದ್ದರಿಂದ ಭಯಗೊಂಡವರು, ‘ಹೇ, ಹೇ, ಶಂಕರಾ ಇಲ್ಲಿ ಕೇಳು ಮಾರಾಯಾ… ಆ ಹಾವು ಸಂಪೂರ್ಣ ಸತ್ತ ಮೇಲೆಯೇ ತೆಗೆದು ಕೊಂಡು ಬಾ! ಯಾಕೆಂದರೆ ಇಲ್ಲಿಗೆ ತಂದ ನಂತರ ಅದು ಸಾಯುವುದನ್ನು ಕಾಯುತ್ತ ಕೂರಲು ನಮಗೆ ಸಮಯವಿಲ್ಲ!’ ಎಂದು ಅವಸರವಸರವಾಗಿ ಹೇಳಿ ಫೋನಿಟ್ಟರು.

   ಇಷ್ಟಾದ ಮೇಲೆ ಏಕನಾಥರನ್ನೂ ಹೊಸ ಭಯ ಮತ್ತು ವಿಚಿತ್ರ ಗೊಂದಲವೊಂದು ಕಾಡಲಾರಂಭಿಸಿತು. ‘ಛೇ, ಛೇ! ಎಂಥ ಅಪಶಕುನವೊಂದು ನಡೆದು ಹೋಯಿತು! ಈಗಷ್ಟೇ ನಾಗನು ತಮ್ಮ ಜೀವನಕ್ಕೊಂದು ದಾರಿ ಕರುಣಿಸಿದ್ದಾನೆ ಎಂದುಕೊಳ್ಳುಷ್ಟರಲ್ಲಿ ಅವನ ಸಂತತಿಯೇ ನಾಶವಾಗುವ ಅಪಚಾರವಾಯಿತೆಂದರೆ ಇದಕ್ಕೆ ಯಾರು ಹೊಣೆ? ತಾವೋ ಅಥವಾ ಶಂಕರನೋ…?’ ಎಂದು ಯೋಚಿಸಿ ದ್ವಂದ್ವಕ್ಕೆ ಬಿದ್ದರು. ಆಗ ‘ಹೇ ಅವಿವೇಕಿಗಳಾ… ಈ ಅನಾಹುತಕ್ಕೆ ನೀವಿಬ್ಬರೂ ಕಾರಣೀಕರ್ತರೋ…?’ ಎಂದು ಅವರ ಒಳ ಮನಸ್ಸು ಚೀರಿದಂತಾಯಿತು. ಆದರೆ ಅದಕ್ಕೆ ಪ್ರತಿಯಾಗಿ ಅವರ ವ್ಯವಹಾರಿಕ ಮನಸ್ಸು, ‘ನಾ, ನಾನು ಕಾರಣನಾ…, ಅದು ಹೇಗೆ…? ಯಾವನ ಜಾಗದಲ್ಲಿ ಅದು ನಡೆಯಿತೋ ಅವನೇ ಜವಾಬ್ದಾನಲ್ಲವಾ…? ನಾನೇನು ಅವನಲ್ಲಿಗೆ, ದೇಹಿ…! ಅಂತ ಹೋಗಿದ್ದೆನೋ? ಅವನು ಆ ಜಾಗವನ್ನು ತನ್ನ ಲಾಭಕ್ಕಾಗಿ ಕೊಂಡ. ಅದರ ಊರ್ಜಿತಕ್ಕಾಗಿ ನನ್ನ ಬಳಿಗೆ ಬಂದ. ನನಗೂ ಎಲ್ಲರಂತೆ ಸುಖದ ಜೀವನ ಬೇಕಿತ್ತು. ಅದಕ್ಕೊಂದು ವೃತ್ತಿಯ ಅಗತ್ಯವಿತ್ತು. ಆದ್ದರಿಂದ ನಾನೂ ನನ್ನ ದೈವದೇವರುಗಳಿಗೆ ಸರಿಯಾಗಿಯೇ ಅವನಿಗೆ ಸಹಕರಿಸಿದೆ. ಅಷ್ಟು ಮಾಡಿದ್ದರಲ್ಲಿ ನನ್ನ ತಪ್ಪೇನು ಬಂತು?’ ಎಂದು ಸೆಟೆದು ಹೇಳಿತು.

‘ಅರೇರೇ…ನಿನ್ನ ತಪ್ಪು ಏನು ಅಂತ ನನ್ನ ಹತ್ತಿರ ಕೇಳುತ್ತಿರುವೆಯಾ…? ಅಂದರೆ ನಿನಗೆ ಅದು ಅರ್ಥವಾಗಲಿಲ್ಲ ಅಲ್ಲವಾ…? ಸರಿ ಬಿಡು. ನನ್ನ ಹತ್ತಿರವೂ ಅದಕ್ಕೆ ಉತ್ತರವಿಲ್ಲ. ನೀನು ನನ್ನಲ್ಲಿ ಏನು ಬಿತ್ತುತ್ತಿಯೋ ಅದನ್ನೇ ನಾನು ಬೆಳೆದು ಕೊಡುವವನು ಅಷ್ಟೆ!’ ಎಂದು ಅವರ ಒಳಮನಸ್ಸು ಕಡ್ಡಿ ಮುರಿದಂತೆ ಹೇಳಿತು. ಆದರೂ ಸೋಲೊಪ್ಪಿಕೊಳ್ಳದ ವ್ಯವಹಾರಿಕ ಮನಸ್ಸು, ‘ಹೌದಾ…? ಸರಿ, ಆಯ್ತು. ಹಾಗಾದರೆ ಇನ್ನು ಮುಂದೆ ನನ್ನ ಯಾವ ಕೆಲಸದಲ್ಲೂ ನೀನು ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲ! ಬರೇ ಧೂರ್ತರೂ ಮೋಸಗಾರರೂ ತುಂಬಿರುವಂಥ ಈ ಸಮಾಜದಲ್ಲಿ ಹೇಗೆ ಬಾಳಬೇಕೆಂಬುದು ನಿನಗಿಂತ ಚೆನ್ನಾಗಿ ನನಗೆ ಗೊತ್ತಿದೆ. ಹಾಗಾಗಿ ನಿನ್ನ ಮಾರ್ಗದರ್ಶನ ನನಗಿನ್ನು ಯಾವತ್ತಿಗೂ ಬೇಕಿಲ್ಲ. ತೊಲಗು ಇಲ್ಲಿಂದ!’ ಎಂದು ಗುಡುಗಿತು. ಅಲ್ಲಿಗೆ ಅವರ ಒಳ ಮನಸ್ಸು ತಣ್ಣಗಾಯಿತು. ಆಗ ಏಕನಾಥರು ಸ್ವಲ್ಪ ಹತೋಟಿಗೆ ಬಂದು ಮತ್ತೆ ಯೋಚಿಸಿದರು, ನಮ್ಮಿಂದಲೋ ಅಥವಾ ಶಂಕರನಿಂದಲೋ ಒಟ್ಟಾರೆ ತಪ್ಪು ನಡೆದಾಯಿತು. ಇನ್ನು ಚಿಂತಿಸಿ ಫಲವಿಲ್ಲ. ಸತ್ತ ನಾಗಿಣಿಗೂ ಅವಳ ಸಂತತಿಗೂ ಸದ್ಗತಿ ದೊರೆಯಲೆಂಬ ಆಶಯದಿಂದ ಅವಳನ್ನೂ ಅವಳ ಮೊಟ್ಟೆಗಳನ್ನೂ ಶಿಲೆಕಲ್ಲಿನ ಮೇಲೆ ಭಕ್ತಿಪ್ರಧಾನವಾಗಿ ಕೆತ್ತಿಸಿ, ಆ ಬನ ಜೀರ್ಣೋದ್ಧಾರಗೊಳ್ಳುವ ಸಮಯದಲ್ಲಿ ಅಲ್ಲಿಯೇ ಸ್ಥಾಪಿಸಿ ಪೂಜಿಸುವುದು ನಮ್ಮಿಬ್ಬರ ತಪ್ಪಿಗೂ ಪ್ರಾಯಶ್ಚಿತ್ತವಾಗುತ್ತದೆ!’ ಎಂದು ನಿರ್ಧರಿಸಿ ಗೆಲುವಾದರು.

   ಅತ್ತ ಆ ನತದೃಷ್ಟ ಹಾವು ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿ ಕೊನೆಯುಸಿರೆಳೆಯಿತು. ಆದರೆ ಹಾವು ಸತ್ತಿದೆಯೋ ಇಲ್ಲವೋ ಎಂದು ಶಂಕರನಿಗೆ ತಿಳಿಯಲಿಲ್ಲ. ಅಲ್ಲದೇ ಹಾವಿನ ಹೃದಯ ಬಡಿತ ಪರೀಕ್ಷಿಸಿ ತಿಳಿಸುವ ಉರಗತಜ್ಞರೂ ಆಹೊತ್ತು ಅಲ್ಲಿ ಯಾರೂ ಅವನಿಗೆ ಸಿಗಲಿಲ್ಲ. ಹಾಗಾಗಿ ಅವನೂ ಪುರಂದರಯ್ಯನೂ ಸೇರಿ ವಿಪರೀತ ಭಯದಿಂದ ಒದ್ದಾಡುತ್ತಲೇ ಹಾವಿನ ಕಳೇಬರವನ್ನು ಮೂರು ನಾಲ್ಕು ಬಾರಿ ಕೋಲಿನಿಂದ ಎತ್ತಿ, ಎಗರಿಸಿ, ಅಡಿಮೇಲು ಮಾಡಿ ಮತ್ತು ಹಲವಾರು ಸಲ ಅದನ್ನು ತಿವಿತಿವಿದು ಅಲ್ಲಾಡಿಸಿ ನೋಡಿದರು. ಅವರ ಈ ಎಲ್ಲ ಪ್ರಯತ್ನದಲ್ಲಿ ಕೊನೆಗೂ ‘ಹಾವು ಸತ್ತಿದೆ’ ಎಂಬುದು ಖಚಿತವಾಯಿತು. ಆದ್ದರಿಂದ ಹಾವಿನ ಶವವನ್ನೂ ಅದರ ಮೊಟ್ಟೆಗಳನ್ನೂ ಒಟ್ಟುಗೂಡಿಸಿ ರಟ್ಟಿನ ಪೆಟ್ಟಿಗೆಯೊಂದರಲ್ಲಿ ತುಂಬಿಸಿದ ಶಂಕರ ಕೂಡಲೇ ಏಕನಾಥರ ಮನೆಗೆ ತೆಗೆದುಕೊಂಡು ಹೋದ.

  ಇತ್ತ ತಲೆಕೆರೆದುಕೊಂಡು ಅಳುತ್ತ, ಉಗುರು ಕಚ್ಚುತ್ತ ಚಡಪಡಿಸುತ್ತಿದ್ದ ಕೊಟ್ರೇಶನ ಸ್ಥಿತಿ ಚಿಂತಾಜನಕವಾಗಿತ್ತು. ಅವನನ್ನು ನೋಡಿದ ಪುರಂದರಯ್ಯನಿಗೆ ತೀವ್ರ ಕಳವಳವಾಯಿತು. ಇವನು ತನ್ನ ಹುಚ್ಚಿನ ಬರದಲ್ಲಿ ಎಲ್ಲಾದರೂ ಆತ್ಮಹತ್ಯೆ ಅದೂ ಇದೂ ಅಂತ ಮಾಡಿಕೊಂಡರೆ ತಮ್ಮ ಕೊರಳಿಗೇ ಬಂದೀತು ಎಂದು ಅವರಿಗನ್ನಿಸಿದ್ದರಿಂದ ಕೂಡಲೇ ಅವನ ಜೊತೆಗಾರರ ಸಹಾಯದಿಂದ ಕರೆದೊಯ್ದು ಅವನ ಮನೆಗೆ ಬಿಟ್ಟರು ಮತ್ತು ಅವನ ಮುದಿ ತಂದೆ ತಾಯಿಗಳ ಕೈಯಲ್ಲಿ ಎರಡು ಸಾವಿರ ರೂಪಾಯಿಗಳನ್ನೂ ಇಟ್ಟು, ‘ಮಗನ ಹುಚ್ಚಿಗೆ ಮದ್ದು ಮಾಡಿಸಿ!’ ಎಂದು ಹೇಳಿ ತಮ್ಮ ಜವಾಬ್ದಾರಿಯಿಂದ ಕಳಚಿಕೊಂಡವರು ಅಲ್ಲಿಂದ ಸೀದಾ ಗುರೂಜಿಯವರ ಮನೆಗೆ ಹೋಗಿ ಶಂಕರನೊಂದಿಗೆ ಸರ್ಪ ಸಂಸ್ಕಾರ ಕ್ರಿಯೆಯಲ್ಲೂ ಭಾಗಿಯಾದರು. ಈ ಘಟನೆಯಿಂದಾಗಿ ಬನ ತೆರವಿನ ಕೆಲಸವು ಮತ್ತೆ ಸ್ಥಗಿತಗೊಂಡಿತು.

   ರಕ್ತಸಿಕ್ತವಾಗಿದ್ದ ಹಾವಿನ ಕಳೆಬರವನ್ನು ಕಂಡ ಏಕನಾಥರಿಗೆ ವಾಕರಿಕೆ ಬಂದಂತಾಗಿ, ಯಬ್ಬಾ… ದೇವರೇ…! ಎಂದು ಮುಖ ಸಿಂಡರಿಸುತ್ತ ಕೋಲೊಂದರಿಂದ ಅದನ್ನು ಸ್ವಲ್ಪ ದೂರ ತಳ್ಳಿ ಅದರ ಮೊಟ್ಟೆಗಳನ್ನು ಎಣಿಸಿದರು. ಬರೋಬ್ಬರಿ ಇಪ್ಪತ್ತೆರಡು ಬಲಿತ ಭ್ರೂಣಗಳಿದ್ದವು. ಶಂಕರ ಮತ್ತು ಪುರಂದರಯ್ಯ ಗುರೂಜಿಯ ಕೆಲಸವನ್ನು ಭಯ ಮತ್ತು ಅಸಹ್ಯದಿಂದ ನೋಡುತ್ತಿದ್ದರು. ಅಷ್ಟರಲ್ಲಿ ಏಕನಾಥರು, ‘ನೋಡು ಶಂಕರ, ಹೆಣ್ಣುಹಾವನ್ನು ಸೇರಿಸಿ ಒಟ್ಟು ಇಪ್ಪತ್ತ ಮೂರು ನಾಗಸಂತತಿಗೆ ದಹನಾದಿ ಸಂಸ್ಕಾರಕ್ರಿಯೆಯನ್ನು ಮಾಡಬೇಕು ಮಾರಾಯಾ ನಾವು!’ ಎಂದು ಅವನಿಗೆ ತಿಳಿಸುತ್ತ ತಾವೂ ಬರೆದಿಟ್ಟುಕೊಂಡವರು, ‘ಈ ಸಮಸ್ಯೆಗೆ ನೀವಿಬ್ಬರೂ ತಲೆಕೆಡಿಸಿಕೊಳ್ಳಬಾರದು. ಯಾಕೆಂದರೆ ಇದರ ಪ್ರಾಯಶ್ಚಿತ್ತದ ಸಲುವಾಗಿ ನಿಮ್ಮ ಕೈಯಿಂದಲೇ ಆ ಬನದಲ್ಲಿ ಹೊಸ ಕಲ್ಲುಗಳನ್ನು ಸ್ಥಾಪಿಸಿ ಈ ನಾಗಿಣಿಗೂ ಅವಳ ಸಂತಾನಕ್ಕೂ ವಿಶೇಷ ಪೂಜೆ ಸಲ್ಲುವಂತೆ ಮಾಡುತ್ತೇವೆ!’ ಎಂದು ಹೆಮ್ಮೆಯಿಂದ ಹೇಳಿದರು. ಆಗ ಶಂಕರನೂ, ಪುರಂದರಯ್ಯನೂ ತುಸು ಗೆಲುವಾದರು. ನಂತರ ಹಾವು ಮತ್ತು ಮೊಟ್ಟೆಗಳನ್ನು ದಹಿಸುವ ಶಾಸ್ತ್ರೋಕ್ತ ವಿಧಿಗೆ ಚಾಲನೆ ನೀಡಿದ ಏಕನಾಥರು ಮೃತ ಸರ್ಪ ಕುಟುಂಬವನ್ನು ದೇಸಿ ದನದ ತುಪ್ಪದಿಂದಲೇ ಸುಟ್ಟು ಅವುಗಳ ಆತ್ಮಗಳಿಗೆ ಚಿರಶಾಂತಿ ಕೋರಿದರು.

   ಈ ಘಟನೆ ನಡೆದ ಮೂರು ದಿನಗಳ ನಂತರ ಗುರೂಜಿ ಬನ ತೆರವುಗೊಳಿಸಲು ಮತ್ತೊಂದು ಶುಭಗಳಿಗೆಯನ್ನು ಗೊತ್ತುಪಡಿಸಿದರು. ಆದರೆ ಜೆಸಿಬಿ ಚಲಾಯಿಸಲು ಕೊಟ್ರೇಶನಂಥ ಚಾಲಕರು ದೊರಕದೆ ಆ ಗಳಿಗೆಯೂ ವ್ಯರ್ಥವಾಯಿತು. ಕೊನೆಗೆ ರಫೀಕನೇ ತನ್ನ ಪರಿಚಯದ ತರುಣನೊಬ್ಬನನ್ನು ದುಪ್ಪಟ್ಟು ಸಂಬಳದ ಆಸೆ ತೋರಿಸಿ ಕರೆದು ತಂದ. ಹಾಗಾಗಿ ಗುರೂಜಿ ಅವನಿಗಾಗಿಯೇ ಮಗದೊಂದು ಗಳಿಗೆಯನ್ನು ಸೂಚಿಸಿ ಕೆಲಸಕ್ಕೆ ಚಾಲನೆಯಿತ್ತರು. ಬನದ ಸುಮಾರು ಹತ್ತು ಸೆಂಟ್ಸಿನಷ್ಟು ಜಾಗದೊಳಗಿನ ದೈತ್ಯ ರೆಂಜೆಮರವೊಂದನ್ನು ನಾಗನಿಗೆ ಪ್ರಿಯವೆಂಬ ನಂಬಿಕೆಯನ್ನು ಯಾರೋ ಪ್ರಾಚೀನ ಪುಣ್ಯಾತ್ಮರು ಸೃಷ್ಟಿಸಿದ್ದರಿಂದಲೋ ಏನೋ ಆ ಮರವೊಂದನ್ನುಳಿಸಿಕೊಂಡು ಇತರ ಗಿಡಮರ ಬಳ್ಳಿಗಳನ್ನೆಲ್ಲ ಪುರಂದರಯ್ಯನ ಯಂತ್ರಗಳು ಹರಿದು ಮುರಿದು ಕಿತ್ತೊಗೆದು ಸಮತಟ್ಟುಗೊಳಿಸಿಬಿಟ್ಟವು. ಆ ಕೆಲಸವು ಸಾಂಗವಾಗಿ ನೆರವೇರುತ್ತಲೇ ಏಕನಾಥರು ತಮ್ಮಿಬ್ಬರು ಸಹಾಯಕರೊಂದಿಗೆ ಮತ್ತೆ ಬಂದು ಬನ ಜೀರ್ಣೋದ್ಧಾರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಅದು ಮುಗಿಯುತ್ತಲೇ ಆ ಪ್ರದೇಶದ ಉಳಿದ ಕಾಡುಗುಡ್ಡಗಳನ್ನೂ ಸಮತಟ್ಟುಗೊಳಿಸುವ ಕೆಲಸ ಶುರುವಾಯಿತು. ಇನ್ನೂರು, ಮುನ್ನೂರು ವರ್ಷಗಳಷ್ಟು ಪುರಾತನವಾದ ನೂರಾರು ವೃಕ್ಷಗಳನ್ನು ಕೆಲವೇ ದಿನಗಳೊಳಗೆ ಕಡಿದುರುಳಿಸಲಾಯಿತು. ಆಗಲೂ ಪುರಂದರಯ್ಯನ ಕಾಡು ಜನರ ದಂಡೇ ಬಂದು ನೆಲೆಸಿದ್ದು, ಅಲ್ಲಿನ ಕಾಡುಪ್ರಾಣಿಗಳನ್ನೂ ಧರೆಗಪ್ಪಳಿಸುತ್ತಿದ್ದ ಪ್ರಾಣಿಪಕ್ಷಿಗಳನ್ನೂ ನಾಮುಂದು ತಾಮುಂದು ಎಂಬಂತೆ ಬಾಚಿ, ಹೆಕ್ಕಿ, ಬಡಿದು ಕೊಂದು ಹೊತ್ತೊಯ್ದು ತಿಂದು ತೇಗಿದರು.

    ಹೀಗಾಗಿ ಆ ಪ್ರದೇಶವು ಒಂದು ತಿಂಗಳೊಳಗೆ ಬಿರುಬಿಸಿಲಿನ ಬಟ್ಟಾಬಯಲಾಗಿ ಮಾರ್ಪಟ್ಟಿತು. ಬನದ ಸುತ್ತಲೂ ಎತ್ತರದ ಕಾಂಕ್ರೀಟ್ ಗೋಡೆಯನ್ನು ಕಟ್ಟಲಾಯಿತು. ಮುಂದಿನ ತಿಂಗಳಲ್ಲಿ ಜುಮಾದಿ, ಪಂಜುರ್ಲಿ, ಮೈಸಂದಾಯ ಮತ್ತು ಲೆಕ್ಕೆಸಿರಿ ದೈವಗಳಿಗೆ ಚಿಕ್ಕ ಚಿಕ್ಕ ಸಿಮೆಂಟಿನ ಗುಂಡಗಳನ್ನೂ, ನಾಗ-ಬೆರ್ಮರಿಗೆ ದೊಡ್ಡ ಮಂದಿರವನ್ನೂ ಕಟ್ಟಲಾಯಿತು. ಇಷ್ಟಾಗುತ್ತಲೇ ಜೀರ್ಣೋದ್ಧಾರ ವಿಧಿಗೂ ಚಾಲನೆ ದೊರೆಯಿತು. ಏಕನಾಥರು ಆ ಮೂರು ಹಗಲು ಮೂರು ರಾತ್ರಿಗಳ ಕಾಲ ಆ ಸ್ಥಳದ ದೈವಶಕ್ತಿಗಳಿಗೆ ನಡೆಸಲಿದ್ದ ಪೂಜಾ ಕೈಂಕರ್ಯಗಳಿಗೆ ದಿನಗಳನ್ನು ಗೊತ್ತುಪಡಿಸಿ ಬಹಳ ವಿಜೃಂಭಣೆಯಿಂದ ನಡೆಸಲು ಇಚ್ಛಿಸಿದರು. ಶಂಕರನನ್ನು ಕರೆದು ಕುಳ್ಳಿರಿಸಿಕೊಂಡು ಆ ಕುರಿತು ಚರ್ಚಿಸುತ್ತ, ‘ನೋಡು ಶಂಕರ, ನಿನ್ನಿಂದ ಸಾಧ್ಯವಾಗುವುದಾದರೆ ಈ ಕಾರ್ಯಕ್ರಮವನ್ನು ಸ್ವಲ್ಪ ದೊಡ್ಡಮಟ್ಟದಲ್ಲಿ ನಡೆಸುವ ಮನಸ್ಸು ಮಾಡು. ಯಾಕೆಂದರೆ ಮುಂದೆ ಆ ಜಾಗದಲ್ಲಿ ನಿನ್ನಿಂದ ನಿರ್ಮಾಣವಾಗಲಿರುವ ಮನೆ ಕಟ್ಟಡಗಳ ವ್ಯಾಪಾರಕ್ಕೂ ಈ ಶುಭಕಾರ್ಯವು ವಿಶೇಷ ರೀತಿಯಲ್ಲಿ ಸಹಾಯವಾಗಲಿದೆ!’ ಎಂದು ಕಿವಿಮಾತು ಹೇಳಿ ಅವನನ್ನು ಸಜ್ಜುಗೊಳಿಸಿದರು. ಅದಕ್ಕವನೂ ಮರು ಮಾತಾಡದೆ ಒಪ್ಪಿಗೆ ಸೂಚಿಸಿ ಕಾರ್ಯಪ್ರವೃತ್ತನಾದ.

   ಜೀರ್ಣೋದ್ಧಾರದ ದಿನವೂ ಆಗಮಿಸಿತು. ಬಾಕುಡಬೈಲಿನಿಂದ ಸುಮಾರು ಆರು ಕಿಲೋಮೀಟರ್ ದೂರದ ಈಶ್ವರಪುರದವರೆಗೂ ಪೇಟೆ, ಪೇಟೆಗಳಲ್ಲಿ ನಾಗಬನ ಜೀಣೋದ್ಧಾರದ ಪೂಜಾ ವಿವರಗಳನ್ನೂ ಮತ್ತು ಅದನ್ನು ಹಮ್ಮಿಕೊಂಡ ಶಂಕರನ ನಿಂತ ನಿಲುವಿನ, ಭವ್ಯವಾದ ಭಾವಚಿತ್ರವನ್ನೂ ಹಾಗೂ ಪೂಜಾ ಕೈಂಕರ್ಯವನ್ನು ನಡೆಸಿಕೊಡಲಿದ್ದ ಏಕನಾಥ ಗುರೂಜಿಯವರ ಛಾಯಾಚಿತ್ರವನ್ನೂ ಛಾಪಿಸಿದ ನೂರಾರು ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರುಗಳು ಎಲ್ಲೆಂದರಲ್ಲಿ ರಾರಾಜಿಸುತ್ತ ಶಂಕರನ ಕಾರ್ಯಕ್ಕೆ ವಿಶೇಷ ಮೆರುಗು ನೀಡಿದವು. ಅವುಗಳಲ್ಲಿ ಕೆಲವು ದೊಡ್ಡ ದೊಡ್ಡ ಬ್ಯಾನರ್‍ಗಳು ಶಂಕರನ ಕಣ್ಣುತಪ್ಪಿಸಿ ವಿಜಯಪುರದ ಬಡ ಕಾರ್ಮಿಕ ಮಂದಿಯ ಗುಡಿಸಲ ಮಾಡುಗಳಿಗೂ ಬೆಚ್ಚಗಿನ ಹೊದಿಕೆಯಾಗಿ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಂಡವು. ಆವತ್ತು ತನ್ನ ಹುಟ್ಟೂರ ಮತ್ತು ಪರವೂರ ಬಂಧು ಬಳಗಕ್ಕೂ ನಾಡಿನ ಸರ್ವ ಭಕ್ತಾದಿಗಳ ದೃಷ್ಟಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಲಿದ್ದ ಶಂಕರನು ತನ್ನನ್ನೂ ಮತ್ತು ಹೆಂಡತಿ, ಮಗನನ್ನೂ ಸಿಂಗರಿಸಲು ಈಶ್ವರಪುರದ ಖ್ಯಾತ ಬ್ಯುಟೀಷಿಯನ್‍ಗಳನ್ನು ಮನೆಗೆ ಕರೆಯಿಸಿಕೊಂಡ. ಅವರು ಮೂರು ದಿನಗಳ ಕಾಲ ಹೊತ್ತು ಮೂಡುವ ಮುನ್ನವೇ ಬಂದು ಶಂಕರ ಮತ್ತು ವಿನೋದಾಳ ಮುಖ ಮೂತಿಗಳಿಗೆ ವಿವಿಧ ಬಣ್ಣದ ಕ್ರೀಮು ಮತ್ತು ಮುಲಾಮುಗಳನ್ನು ಹಚ್ಚುತ್ತ ಶಂಕರನ ಎಣ್ಣೆಗಪ್ಪಿನ ಮೋರೆಯನ್ನು ಬೆಳ್ಳಗೆ ಮಾಡಿ ವಿನೋದಾಳ ಕಂದು ಮುಖವನ್ನು ತೆಳು ಗುಲಾಬಿ ಬಣ್ಣಕ್ಕೆ ತಿರುಗಿಸಿ ಫಳಫಳನೇ ಮಿಂಚುವಂತೆ ಮಾಡಲು ಕೆಲವಾರು ಗಂಟೆಗಳ ಕಾಲ ಶ್ರಮಿಸುತ್ತಿದ್ದರು. ಆದರೆ ಶಂಕರನ ಮಗ ಹದಿನಾಲ್ಕರ ಅಭಿಷೇಕ್‍ನನ್ನು ಹಿಡಿದು ಮೇಕಪ್ಪಿಗೆ ಕೂರಿಸುವುದು ಮಾತ್ರ ಅವರಿಗೆ ದೊಡ್ಡ ಸಾಹಸವಾಗುತ್ತಿತ್ತು. ಕಾರಣ ಮಹಾ ಒರಟನೂ, ಧನ ಪಿಶಾಚಿಯೂ ಆಗಿದ್ದ ಅಪ್ಪನಿಂದಲೂ ಮತ್ತು ಪ್ರೀತಿ, ಮಮತೆಯನ್ನೇ ತೋರಿಸದೆ ನೀರಸವಾಗಿ ಬೆಳೆಸುತ್ತಿದ್ದ ಅಮ್ಮನಿಂದಲೂ ಆ ಹುಡುಗ ಬಾಲ್ಯದಿಂದಲೇ ರೋಸಿಹೋಗಿದ್ದ. ಹಾಗಾಗಿ ಅವನು ಯಾವಾಗಲೂ ಅವರಿಂದ ದೂರವಿರಲೇ ಇಷ್ಟಪಡುತ್ತಿದ್ದ. ಅದಕ್ಕಾಗಿ ಒಂದೋ ಶಾಲೆಯಲ್ಲಿ ಸಮಯ ಕಳೆಯುತ್ತಿದ್ದ ಅಥವಾ ತಮ್ಮ ಮೂರಂತಸ್ತಿನ ಬಂಗಲೆಯ ತಾರಸಿಯ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ ಗೇಮ್ ಆಡುವುದಲ್ಲಿ ಮಗ್ನನಾಗಿರುತ್ತಿದ್ದ. ಆದ್ದರಿಂದ ಬ್ಯುಟೀಷಿಯನ್‍ಗಳಿಗೆ ಅವನನ್ನು ಹುಡುಕಿ ಅವನಿಗೊಪ್ಪುವ ಬಟ್ಟೆಬರೆಗಳನ್ನು ತೊಡಿಸಿ ಸಜ್ಜುಗೊಳಿಸುವುದರಲ್ಲಿ ಸುಸ್ತಾಗಿಬಿಡುತ್ತಿತ್ತು. ಆದರೂ ಅವರು ನಗುನಗುತ್ತ ಆ ಕೆಲಸವನ್ನು ಮಾಡುತ್ತಿದ್ದರು. ಏಕೆಂದರೆ ಕೊನೆಯಲ್ಲಿ ಮೂರುದಿನದ ಸಂಭಾವನೆಗೆ ಇಪ್ಪತ್ತು ಪರ್ಸೆಂಟ್ ಹೆಚ್ಚಿಗೆ ಸೇರಿಸಿಯೇ ಬಿಲ್ಲು ಕೊಡಲು ಅವರು ಯೋಚಿಸಿದ್ದರು.

   ಜೀರ್ಣೋದ್ಧಾರದ ಮೂರು ದಿನಗಳ ಕಾರ್ಯಕ್ರಮದಲ್ಲಿ ಶಂಕರ ದಿನಕ್ಕೊಂದು ದುಬಾರಿ ಬೆಲೆಯ ರೇಷ್ಮೆ ಪಂಚೆಯನ್ನುಟ್ಟು ಅದಕ್ಕೊಪ್ಪುವ ಅಂಗಿ ಮತ್ತು ಜರತಾರಿ ಶಾಲು ಹೆಗಲಿಗೇರಿಸಿಕೊಂಡು ಮೈತುಂಬ ಬಂಗಾರ ಹೇರಿಕೊಂಡು ಮಹತ್ಕಾರ್ಯ ಸಾಧಿಸಿದಂಥ ಹೆಮ್ಮೆ ಮತ್ತು ಉತ್ಸಾಹದಿಂದ ಓಡಾಡಿದ. ಆ ವಿಷಯದಲ್ಲಿ ವಿನೋದಾಳೂ ಗಂಡನಿಗಿಂತ ಕಡಿಮೆಯಿರಲಿಲ್ಲ. ಅವಳು ಎಲ್ಲರೊಂದಿಗೆ ಲವಲವಿಕೆಯಿಂದ ಬೆರೆಯುತ್ತ ಆತ್ಮೀಯರನ್ನು ಆದರದಿಂದ ಮಾತಾಡಿಸುತ್ತ ಇದ್ದಳು. ಆದರೆ ಗಂಡನ ಮೇಲೆ ಎಂದೋ ಮನಸ್ಸು ಮುರಿದಿದ್ದರಿಂದ ಆ ಮೂರುದಿನಗಳಲ್ಲಿ ಅವನೊಂದಿಗೆ ಸುಮಾರು ಬಾರಿ ಜಗಳವಾಡಿ ಅವನ ನೆಮ್ಮದಿಯನ್ನು ಕೆಡಿಸುತ್ತಿದ್ದಳು. ಆದರೂ ತಮ್ಮೊಳಗಿನ ಮನಸ್ತಾಪವನ್ನು ಹೊರಗೆ ತೋರಿಸಿಕೊಳ್ಳದೆ ನಗುನಗುತ್ತ ಓಡಾಡಿದಳು.

   ಅತ್ತ ಪುರಂದರಯ್ಯನೂ ಅವರ ಹೆಂಡತಿ ಮಕ್ಕಳೂ ಶಂಕರನ ಕುಟುಂಬದಂತೆಯೇ ಕಲಾತ್ಮಕವಾಗಿ ಅಲಂಕರಿಸಿಕೊಂಡು ಬಂದಿದ್ದವರು ಒಂದು ಗಳಿಗೆಯೂ ಪುರುಸೋತ್ತಿಲ್ಲದಂತೆ ದೈವ ದೇವರ ಸೇವೆ ಮತ್ತು ಅತಿಥಿ ಅಭ್ಯಾಗತರ ಆತಿಥ್ಯದಲ್ಲಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದರೂ ಈ ಕಾರ್ಯಕ್ರಮದಲ್ಲಿ ಒಂದು ವಿಶೇಷ ಆಕರ್ಷಣೆ ಎಂದರೆ ರಫೀಕ್‍ನ ಕುಟುಂಬವೂ ಮೂರು ದಿನಗಳ ಕಾಲ ಎಲ್ಲರೊಡನೆ ಬೆರೆತು ಓಡಾಡಿಕೊಂಡಿದ್ದುದು ಮತ್ತು ಏಕನಾಥರ ಸೂಚನೆಯಂತೆ ಅವನೂ ತನ್ನ ಕುಟುಂಬ ಹಾಗೂ ವ್ಯವಹಾರದ ಸಲುವಾಗಿ ವಿಶೇಷ ನಾಗಪೂಜೆಯೊಂದನ್ನು ಮಾಡಿಸಿ ಕೃತಾರ್ಥನಾದುದು. ಆವತ್ತು ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಗುಂಪುಗುಂಪಾಗಿ ಬರುತ್ತಿದ್ದ ಸಾವಿರಾರು ಭಕ್ತಾಧಿಗಳಿಗೂ ಬನ ನಿರ್ಮಾಣದಲ್ಲಿ ಶ್ರಮಿಸಿದ ಅನೇಕ ತಂಡಗಳ ಬಂಧು ಬಾಂಧವರಿಗೂ ಮೂರು ದಿನಗಳ ಕಾಲ ಹಗಲು ರಾತ್ರಿ ಮೃಷ್ಟಾನ್ನ ಭೋಜನದ ‘ಅನ್ನ ಸಂತರ್ಪಣಾ ಸೇವೆ’ಯೂ ಅದ್ಧೂರಿಯಿಂದ ನಡೆದು ಜೀರ್ಣೋದ್ಧಾರ ಕಾರ್ಯವು ಸರ್ವ ರೀತಿಯಿಂದಲೂ ಸಂಪನ್ನವಾಯಿತು.

ಆದರೆ ಶಂಕರ ಮತ್ತು ಏಕನಾಥರಿಗೆ ಕೊನೆಯಲ್ಲಿ ಸಣ್ಣ ಬೇಸರವನ್ನು ತರಿಸಿದ ಸಂಗತಿಯೇನೆಂದರೆ, ಊರಿಗೆ ಹೇಳಿಕೆ ನೀಡುವ ವಿಷಯದಲ್ಲಿ ಅವರಿಬ್ಬರ ಲೆಕ್ಕಾಚಾರವೂ ಸ್ವಲ್ಪ ಏರುಪೇರಾದ ಕಾರಣ ಮರುದಿನ ಸುಮಾರು ಐನೂರು ಜನಕ್ಕೂ ಮಿಕ್ಕ ಭೋಜನವು ಉಳಿದುಬಿಟ್ಟಿದ್ದುದು! ಆದ್ದರಿಂದ ಅಷ್ಟೊಂದು ಆಹಾರ ಪದಾರ್ಥವನ್ನು ಏನು ಮಾಡುವುದು? ಎಂದು ಜೀರ್ಣೋದ್ಧಾರ ಸಮಿತಿಯ ಪ್ರಮುಖರೆಲ್ಲ ಕುಳಿತು ಚರ್ಚಿಸಿದರು. ಕೊನೆಯಲ್ಲಿ, ‘ಆ ಖಾದ್ಯವನ್ನು ಅನಾಥಾಶ್ರಮ, ಬಾಲಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಕೊಡುವುದು ಉತ್ತಮ ಸೇವೆ!’ ಎಂದು ಎಲ್ಲರೂ ಒಮ್ಮತದಿಂದ ಅನುಮೋದಿಸಿದರು. ಶಂಕರ ಕೂಡಲೇ ಅಂಥ ಕೆಲವು ಸಂಸ್ಥೆಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ನಿಮಗೆ ಎಷ್ಟು ಬೇಕೋ ಅಷ್ಟು ಊಟವನ್ನು ಬಂದು ಯಥೇಚ್ಛವಾಗಿ ಕೊಂಡು ಹೋಗಬಹುದು ಎಂದು ಗತ್ತಿನಿಂದ ಸೂಚಿಸಿದ. ಆದರೆ ಬಹಳ ದೂರದೂರದ ಆ ಬಡ ಸಂಸ್ಥೆಗಳು ಪಾಪ ಸ್ವಂತ ವಾಹನವನ್ನು ಹೊಂದಿರದ ಕಾರಣ, ‘ದಯವಿಟ್ಟು ತಾವುಗಳೇ ದೊಡ್ಡ ಮನಸ್ಸು ಮಾಡಿ ಆಹಾರವನ್ನು ತಂದೊಪ್ಪಿಸಿದರೆ ಬಹಳ ಉಪಕಾರವಾಗುತ್ತದೆ!’ ಎಂದು ಮನವಿ ಮಾಡಿಕೊಂಡವು. ಆದರೆ ಅಷ್ಟು ಕೇಳಿದ ಶಂಕರನೂ, ಏಕನಾಥರೂ ತಟ್ಟನೆ ಘರಂ ಆಗಿಬಿಟ್ಟರು.

   ತಿನ್ನಲು ಗತಿಯಿಲ್ಲದವರಿಗೆ ಪುಕ್ಕಟೆಯಾಗಿ ಊಟ ಒದಗಿಸಲು ನಾವೆಲ್ಲರೂ ಮನಸ್ಸು ಮಾಡಿರುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಅದನ್ನೆಲ್ಲ ಅವರ ಕಾಲ ಬುಡಕ್ಕೇ ಹೊತ್ತುಕೊಂಡು ಹೋಗಿ ಕೊಡಬೇಕೆಂದರೆ ಅರ್ಥವೇನು…? ಅಂದರೆ ನಾಗದೇವರ ಪ್ರಸಾದ ಅಷ್ಟೊಂದು ಅಗ್ಗವಾಗಿಬಿಟ್ಟಿತಾ ಇವರಿಗೆ?  ಎಷ್ಟೊಂದು ಅಹಂಕಾರ!’ ಎಂದು ಶಂಕರ ಕೆಟ್ಟ ಕೋಪ ತೋರಿಸಿದ. ಆಗ ಏಕನಾಥರೂ ಅವನನ್ನು ಸಮರ್ಥಿಸಿಕೊಂಡವರು, ‘ನೋಡು ಶಂಕರ, ಅವರಿಗೆ ನಿಜವಾಗಿಯೂ ಹಸಿವಿದ್ದರೆ ಅಥವಾ ಆಹಾರದ ಅಗತ್ಯವಿದ್ದರೆ ಅವರೇ ಬಂದು ಕೊಂಡುಹೋಗುತ್ತಿದ್ದರು. ಹಾಗಾಗಿ ನಾವು ಅಷ್ಟೆಲ್ಲ ಉದಾರತೆ ತೋರಿಸುವ ಅಗತ್ಯವಿಲ್ಲ. ಅದು ಈ ಪವಿತ್ರಕ್ಷೇತ್ರದ ನಾಗನ ಪ್ರಸಾದ. ಆದ್ದರಿಂದ ಅವನ ಸನ್ನಿಧಿಯಲ್ಲಿಯೇ ಅದು ಮಣ್ಣಾಗಲಿ. ಆ ಆಹಾರವು ಕೆಡುವುದಕ್ಕಿಂತ ಮೊದಲು ಅದಕ್ಕೊಂದು ವ್ಯವಸ್ಥೆ ಮಾಡಿಸು!’ ಎಂದು ಸೂಚಿಸಿದರು. ಏಕನಾಥರ ಮಾತನ್ನು ಶಂಕರ ಕೂಡಲೇ ಅರ್ಥೈಸಿಕೊಂಡವನು ತಕ್ಷಣ ಪುರಂದರಯ್ಯನ ಜೆಸಿಬಿಯೊಂದನ್ನು ತರಿಸಿ ನಾಗಭವನದ ಸ್ವಲ್ಪದೂರದಲ್ಲಿ ಬಾವಿಯಂಥ ಹೊಂಡವೊಂದನ್ನು ತೋಡಸಿದ. ಬಳಿಕ ಗುರೂಜಿಯವರ ವಿಶೇಷ ಮಂತ್ರೋಚ್ಛಾರಣೆಯೊಂದಿಗೆ ಅಷ್ಟೂ ಆಹಾರ ಪದಾರ್ಥಗಳನ್ನು ಆ ಹೊಂಡಕ್ಕೆ ಸುರಿದು ಮಣ್ಣು ಮುಚ್ಚುವ ಮೂಲಕ ದೊಡ್ಡ ಸಮಸ್ಯೆಯೊಂದನ್ನು ಸಾಂಗವಾಗಿ ಬಗೆಹರಿಸಲಾಯಿತು.

   ಆ ಮೂರು ದಿನಗಳಲ್ಲಿ ಶಂಕರನ ಆಡಂಬರವನ್ನು ಸಾಮಾನ್ಯರು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಬಹುಶಃ ಅವನು ಜೀವಮಾನದಲ್ಲೇ ಅಷ್ಟೊಂದು ಸಾರ್ಥಕ್ಯಭಾವವನ್ನು ಅನುಭವಿಸಿರಲಿಕ್ಕಿಲ್ಲ. ಅಂಥ ಅಹಂಕಾರ ಮತ್ತು ಆನಂದದಿಂದ ಬೀಗುತ್ತ ಓಡಾಡುತ್ತಿದ್ದ. ತಾನು ಆವರೆಗೆ ಮಾಡಿದ ಪಾಪಕೃತ್ಯಗಳೆಲ್ಲವೂ ಈ ಒಂದೇ ಒಂದು ಧಾರ್ಮಿಕ ಕಾರ್ಯದಿಂದ ಪೂರ್ತಿ ತೊಳೆದು ಹೋಗಿ ಜೀವನವು ಪಾವನವಾದಂಥ ಧನ್ಯತೆಯನ್ನನುಭವಿಸಿದ. ಅತ್ತ ಏಕನಾಥರೂ ತಮ್ಮ ಸ್ವತಂತ್ರ ಜೀವನದ ಮೊದಲ ಹೆಜ್ಜೆಯನ್ನು ಈ ಕಾರ್ಯದ ಮೂಲಕ ಯಶಸ್ವಿಯಾಗಿ ಪೂರೈಸಿದರು. ಹುಟ್ಟಿದಂದಿನಿಂದ ಕುಚೇಲನ ಒಣ ಅವಲಕ್ಕಿಯಂತೆ ಅವರನ್ನು ಬೆನ್ನಟ್ಟಿ ಬಂದಿದ್ದ ಬಡತನವು  ಬಹಳ ಬೇಗನೇ ಕಳೆದು ಜೀವನಕ್ಕೊಂದು ಭದ್ರತೆ ಮೂಡಲು ಆರಂಭವಾಗಿತ್ತು. ಅಂಥ ಭಾವವು ಅವರಲ್ಲಿ ತಮ್ಮ ಬದುಕಿನ ಬಗ್ಗೆ ಬಲವಾದ ವಿಶ್ವಾಸವನ್ನು ಮೂಡಿಸಿತು. ಶಂಕರನ ಜಾಗದ ನಟ್ಟನಡುವೆ ಅವರು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ನಾಗ ಮತ್ತು ಪರಿವಾರ ದೈವಗಳ ಮುಂದಿನ ಪೂಜಾ ಕೈಂಕರ್ಯಗಳ ಜವಾಬ್ದಾರಿ ಹಾಗೂ ಆ ಕ್ಷೇತ್ರದ ಸಂಪೂರ್ಣ ಹಕ್ಕು ಅವರ ಪಾಲಿಗೇ ಒದಗಿ ಬಂದಿತ್ತು. ಆದ್ದರಿಂದ ಇನ್ನು ಮುಂದೆಯೂ ತಮ್ಮ ವ್ಯವಹಾರವು ಅಭಿವೃದ್ಧಿ ಹೊಂದುವ ಖಚಿತ ಸೂಚನೆ ಇದೇ ಜೀರ್ಣೋದ್ಧಾರದಿಂದ ಅವರಿಗೆ ದೊರಕಿತ್ತು. ಹಾಗಾಗಿ ಈವರೆಗೆ ತಾವು ನಡೆದು ಬಂದ ದುರ್ಗಮ ದಾರಿಯಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಒಂದೊಂದಾಗಿ ನೆನೆದವರ ಕಣ್ಣಾಲಿಗಳು ತೇವಗೊಂಡವು. ಜೊತೆಗೆ ಬಹಳ ಹಿಂದೆಯೇ ಅವರೊಳಗೆ ರೂಪುಗೊಂಡಿದ್ದ ಪ್ರಬಲವಾದ ಮಹತ್ವಾಕಾಂಕ್ಷೆಯೊಂದು ಈಗ ಕಾರ್ಯರೂಪಕ್ಕಿಳಿಯಲು ಹವಣಿಸತೊಡಗಿತು.

   ‘ಜಗತ್ತಿನ ಜೀವಕೋಟಿಯ ಕಲ್ಯಾಣಕ್ಕಾಗಿ ದೈವಶಕ್ತಿಯು ನಾನಾ ರೂಪಗಳಲ್ಲಿ ಆಗಾಗ ಪ್ರಕಟಗೊಳ್ಳುವಂತೆ ಕಲಿಯುಗದಲ್ಲಿ ಅದು ಶೀತರಕ್ತ ದೇಹಿಯಾಗಿಯೂ ಅವತರಿಸಿದೆ! ಎಂದು ನಂಬಲಾಗಿರುವ ನಾಗಶಕ್ತಿಗೆ ವರ್ಷಕ್ಕೊಂದು ಬಾರಿ ಎಪ್ರಿಲ್ ತಿಂಗಳ ಸುಡುಬೇಸಿಗೆಯಲ್ಲಿ ತಂಪನೆರೆದು ಪೂಜಿಸುವುದರಲ್ಲಿ ಮಾನವಕುಲಕ್ಕೂ ಮತ್ತು ಮೇಲಾಗಿ ನಾಗಸಂತತಿಗೂ ಶ್ರೇಯಸ್ಸಿದೆ! ಎಂಬ ನಿಸರ್ಗದತ್ತ ಜ್ಞಾನವನ್ನು ಹೊಂದಿದ್ದ ನಮ್ಮ ಪ್ರಾಚೀನರು, ಅಂಥ ನಾಗನಿಗೆ ಬೇಸಿಗೆಯಲ್ಲಿಯೇ ತಣು ತಂಬಿಲ ಸೇವೆಯನ್ನು ನೀಡಬೇಕು! ಎಂದು ಆರಂಭಿಸಿದ ಅರ್ಥಪೂರ್ಣ ಪದ್ಧತಿಗೆ ಏಕನಾಥರು, ಶಂಕರನ ನಾಗಬನ ಜೀರ್ಣೋದ್ಧಾರದಂದೇ ಮಂಗಳ ಹಾಡಿದರು ಹಾಗೂ ಶಂಕರನ ಬನದಲ್ಲಿ ಪ್ರತಿ ತಿಂಗಳ ಪಂಚಮಿಗೂ ನಾಗಪೂಜೆ ಮತ್ತು ನಾಗನಿಗೆ ಸಂಬಂಧಿಸಿದ ಇನ್ನಿತರ ಹತ್ತು ಹಲವು ಹೊಸ ಹೊಸ ವಿಧಿಯಾಚರಣೆಗಳನ್ನೂ ಜಾರಿಗೆ ತಂದರು. ಆ ಪುಣ್ಯಕ್ಷೇತ್ರದ ದೈವಭೂತಗಳಿಗೂ ಕಾಲಕಾಲಕ್ಕೆ ತಪ್ಪದೆ ಕೋಲ, ನೇಮಾದಿಗಳನ್ನು ಕಟ್ಟುನಿಟ್ಟಾಗಿ ನೀಡುತ್ತ ಬಹಳ ಬೇಗನೇ ಆ ಕ್ಷೇತ್ರವು ‘ಕಾರ್ನಿಕದ ನಾಗ, ದೈವಸ್ಥಾನ!’ ಎಂದು ಊರಿಗೂರೇ ಕೊಂಡಾಡುವಂತೆ ಮಾಡುವ ಜವಾಬ್ದಾರಿಯೂ ತಮ್ಮ ಮೇಲಿದೆ ಎಂದೂ ಅವರು ಭಾವಿಸಿದರು. ಆದರೆ ಅವರೊಳಗೆ ಸುಪ್ತವಾಗಿ ಕಾಡುತ್ತಿದ್ದ ಕೊರಗು ಮಾತ್ರ ಇನ್ನೂ ಪೂರ್ತಿವಾಗಿ ಮರೆಯಾಗಲಿಲ್ಲ. ಆದ್ದರಿಂದ ತಾವು ಇದೊಂದೇ ನಾಗಬನವನ್ನು ನಂಬಿಕೊಂಡಿರಲು ಸಾಧ್ಯವೇ…? ಶಂಕರನಂಥ ಗುಳ್ಳೆನರಿಯನ್ನು ಯಾವತ್ತಿಗೂ ನಂಬುವಂತಿಲ್ಲ. ಇಂದಲ್ಲ ನಾಳೆ ಅವನು ಯಾವುದೇ ಕಾರಣಕ್ಕೂ ತಮ್ಮ ಮೇಲೆ ಮುನಿಸಿಕೊಳ್ಳಬಹುದು. ಆಗ…? ಈ ಬನದ ಅಧಿಕಾರವನ್ನು ಅವನು ಮತ್ತ್ಯಾರಿಗೋ ವಹಿಸಿಕೊಡಲೂ ಹಿಂಜರಿಯುವವನಲ್ಲ! ಹಾಗೆಲ್ಲಾದರೂ ಆದರೆ ಮುಂದೆ ತಮ್ಮ ಸಂಸಾರದ ಗತಿಯೇನು? ಓ, ದೇವರೇ…! ನಾವು ನಡುನೀರಿನಲ್ಲಿ ಮುಳುಗಿದಂತೆಯೇ ಸರಿ! ಇಲ್ಲ, ಇಲ್ಲ. ಹಾಗಾಗಲುಬಿಡಬಾರದು. ಆದಷ್ಟು ಬೇಗ ಇನ್ನೊಂದು ನಾಲ್ಕೈದು ಕ್ಷೇತ್ರಗಳನ್ನಾದರೂ ತಾವು ಸೃಷ್ಟಿಸಿಕೊಳ್ಳಬೇಕು. ಹಾಗಾದರೆ ಮಾತ್ರ ತಮ್ಮ ಜೀವನಕ್ಕೊಂದು ಭದ್ರ ನೆಲೆ ಸಿಕ್ಕಂತಾಗುವುದು. ನೋಡುವ, ಇಷ್ಟು ಮಾಡಿದ ಆ ದೈವಶಕ್ತಿಗಳು ಇನ್ನು ಮುಂದಕ್ಕೂ ತಮ್ಮ ಕೈಬಿಡಲಾರವು- ಎಂದು ಯೋಚಿಸುತ್ತ ಸಮಾಧಾನಗೊಳ್ಳುತ್ತಿದ್ದರು.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ಕೆಲವೊಂದು ನಂಬಿಕೆಗಳು ಮನಸ್ಸಿನಲ್ಲಿ ಯಾವ ರೀತಿ ಭಯವನ್ನು ಸೃಷ್ಟಿಸುತ್ತವೆ. ಅದರ ಸದುಪಯೋಗವನ್ನು ಪಡೆಯುವ ವರ್ಗ ಅದನ್ನೇ ಹೇಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ ಎಂಬುದು ಈ ಅಧ್ಯಾಯದಲ್ಲಿ ತುಂಬ ಚೆನ್ನಾಗಿ ಮೂಡಿ ಬಂದು ವಾಸ್ತವದ ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಕಾದಂಬರಿಕಾರರಿಗೆ ಅಭಿನಂದನೆಗಳು

  2. ಅದ್ಬುತ ಸರ್… ಮೊದಲೆರಡು ಸಾಲುಗಳನ್ನು ಮುಗಿಸುವಾಗ ನಾಗಿನಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಕಣ್ಣಿಂದ ಕಂಬನಿ ನನಗರಿವಿಲ್ಲದೆ ಜಾರಿ ಬಂತು.

Leave a Reply

Back To Top